Monday, April 22, 2013

ಕುಂಜತ್ತೂರಿನಲ್ಲಿ ಕೋಮು ಗಲಭೆಗೆ ಹುನ್ನಾರ: ಕುಂಜತ್ತೂರು ಉದ್ರಿಕ್ತ:ಬೈಕ್ ಗೆ ಕಿಚ್ಚು,ಬಿಗಿ ಪೊಲೀಸ್ ಬಂದೋಬಸ್ತ್



ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ: ಕುಂಜತ್ತೂರಿನಲ್ಲಿ ಕೆಲವೊಂದು ಸಂಘಟನೆಗಳು ಕೋಮು ಗಲಭೆಗೆ ನಡೆಸಲು ಹುನ್ನಾರ ನಡೆಸುತ್ತಿರುವುದನ್ನು ಮನಗಂಡ ಪೊಲೀಸರು ಕುಂಜತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕುಂಜತ್ತೂರು ಮಂಜೇಶ್ವರ ಉಪ್ಪಳ ಪ್ರದೇಶಗಳಲ್ಲಿ ಧಾರ್ಮಿಕ ಪ್ರವಚನ, ಊರೂಸ್,ಜಾತ್ರೆಗೆ ಸಂಭಂಧಿಸಿ ಕಟ್ಟಲಾದ ತೋರಣ,ಮೊದಲಾದ ರೀತಿಯ ಕಾರ್ಯಕ್ರಮಗಳ ಬಗ್ಗೆ  ಹಾಕಲಾಗಿರುವ ಬ್ಯಾನರ್ ಹಾಗು ತೋರಣಗಳನ್ನು ಹರಿಯುವುದು, ಪ್ಲೆಕ್ಸ್ ಬೋರ್ಡ್ ಗಳಿಗೆ ಸೆಗಣಿ ಎರಚುವುದು ಮೊದಲಾದ ರೀತಿಯ ಸಮಾಜ ಘಾತಕ ಕೃತ್ಯಗಳನ್ನು ನಡೆಸುತ್ತಿರುವುದು ಕಂಡು ಬರುತಿದ್ದು ಇದು ಇಲ್ಲಿಯ ಊರಿನವರೀಗೂ ಅದೇ ರೀತಿ ಪೊಲೀಸ್ ಇಲಾಖೆಗೆಗೂ ತಲೆ ನೋವಾಗಿ ಪರಿಣಮಿಸಿತ್ತು.ಕಳೆದ ರಾತ್ರಿ ಕೂಡಾ ಕಿಡಿಗೇಡಿಗಳು ಕುಂಜತ್ತೂರಿನ ಹೋಟೆಲ್ ಹಾಗು ಬೇಕರಿಯ ಪ್ಲೆಕ್ಸ್ ಬೋರ್ಡ್ ಗಳನ್ನು ನಾಶಗೊಳಿಸಿದ್ದಾರೆ.ಸಂಪೂರ್ಣವಾಗಿ ಮತ ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ಕುಂಜತ್ತೂರಿನ ಜನತೆಯನ್ನು ತಮ್ಮೊಳಗೆ ಗಲಭೆ ಮಾಡುವಂತೆ ಪ್ರೇರೇಪಿಸಲು ಮಾಡುವ ಕೃತ್ಯದ ಒಂದು ಬಾಗವಾಗಿರುವುದಾಗಿ ತಿಳಿದು ಬಂದಿದೆ. ಕೃತ್ಯದ ಹಿಂದೆ ಒಂದು ಸಂಘಟನೆಯ ಕೈವಾಡವಿರುವುದಾಗಿ ಊರಿನವರು ಆರೋಪಿಸಿದ್ದು ಇದಕ್ಕೆ ಜನಪ್ರತಿನಿಧಿಯೊಬ್ಬ ನೇತೃತ್ವ ನೀಡುವುದಾಗಿ ಊರಿನವರು ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.ರಾತ್ರಿ ೧೨ ಗಂಟೆಯ ನಂತ್ರ ಬೈಕ್ ನಲ್ಲಿ ಆಗಮಿಸುತ್ತಿರುವ ಮೂವರು ವ್ಯಕ್ತಿಗಳು ಕೃತ್ಯವನ್ನು ನಡೆಸುತ್ತಿರುವುದನ್ನು ಕಂಡಿರುವುದಾಗಿ ಪ್ರತ್ಯಕ್ಷದರ್ಶಿಯಾದ  ಕುಂಜತ್ತೂರು ನಿವಾಸಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಹಿಂದೂ ಮುಸ್ಲಿಂ ಬಾವೈಕ್ಯವಿರುವ ಕುಂಜತ್ತೂರಿನಲ್ಲಿ ಕೋಮು ಗಲಭೆಯನ್ನು ಸೃಷ್ಟಿಸಿ ಬಾವೈಕ್ಯವನ್ನು ನಾಶಗೊಳಿಸಲು ಪ್ರಯತ್ನ ನಡೆಸುತ್ತಿರುವ ಸಮಾಜ ಘಾತಕ ಶಕ್ತಿಗಳನ್ನು ಗುರುತಿಸಿ ಪೊಲೀಸರು ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಒತ್ತಡ ಹೇರಲಾಗಿದೆ.
ಕಾಸರಗೋಡು ಎಸ್.ಪಿ.ಯವರ ನೇತೃತ್ವದಲಿರುವ ಶ್ಯಾಡೋ ಪೊಲೀಸ್, ರಹಸ್ಯ ತನಿಖಾ ದಳ,ಕುಂಜತ್ತೂರಿನಲ್ಲಿ ತನಿಖೆ ಆರಂಭಿಸಿದ್ದಾರೆ. ಪ್ರದೇಶದಲ್ಲಿ ಇದೀಗ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.ಮತ ಸೌಹಾರ್ದವನ್ನು ಕಾಪಾಡಲು ಕುಂಜತ್ತೂರು ಮಾಸ್ಕೋ ಹಾಲ್ ನಲ್ಲಿ ಶಾಂತಿ ಸಭೆಯನ್ನು ಕೂಡಾ ಕರೆಯಲಾಗಿದೆ. ರಾತ್ರಿ ವೇಳೆ ಉದ್ರಿಕ್ತ ಗುಂಪೊಂದು ಕುಂಜತ್ತೂರಿನಲ್ಲಿ ಬೈಕೊಂದಕ್ಕೆ ಕಿಚ್ಚಿಟ್ಟು ನಾಶಗೊಳಿಸಿದೆ. ಅದೇ ರೀತಿ ಮಾಸ್ಕೋ ಹಾಲ್ ಹಿಂಬಾಗದಲ್ಲಿ ಗಲಭೆ ಎಬ್ಬಿಸಲು  ಹುನ್ನಾರ ನಡೆಸುತಿದ್ದ ಸುಮಾರು ೫೦ ಮಂದಿಯನ್ನು ಪೊಲೀಸರು ಕುಂಜತ್ತೂರಿನಿಂದ ಬಂಧಿಸಿರುವುದಾಗಿ ತಿಳಿದು ಬಂದಿದೆ. ಇದೀಗ ಕುಂಜತ್ತೂರು ಉದ್ರಿಕ್ತವಾಗಿದ್ದು ಪೊಲೀಸರ ಸರ್ಪಗಾವಲು ನಡೆಯುತ್ತಿದೆ.


No comments:

Post a Comment