Sunday, April 28, 2013

ಎಂಟನೆ ಪ್ರಬಲ ರಾಷ್ಟ್ರ ಭಾರತ;ಮೊದಲ ಸ್ಥಾನದಲ್ಲಿ ಅಮೆರಿಕ, ನಂತರ ಚೀನಾ



ಹೊಸದಿಲ್ಲಿ, : ವಿಶ್ವದ ಅತ್ಯಂತ ಪ್ರಬಲ 10 ದೇಶಗಳ ಪೈಕಿ ಭಾರತವೂ ಒಂದಾಗಿದೆ. ನುರಿತ ರಕ್ಷಣಾ ಪರಿಣತರು ಮತ್ತು ವಿದ್ವಾಂಸರ ತಂಡವೊಂದು ನಡೆಸಿದ “ರಾಷ್ಟ್ರೀಯ ಸಾಮರ್ಥ್ಯ” ಅಧ್ಯಯನದಲ್ಲಿ ಭಾರತ ವಿಶ್ವದ ಅತ್ಯಂತ ಪ್ರಬಲ 27 ದೇಶಗಳ ಪಟ್ಟಿಯಲ್ಲಿ ಎಂಟನೆ ಸ್ಥಾನವನ್ನು ಗಳಿಸಿದೆ.ಹೊಸದಿಲ್ಲಿಯ ‘ಫೌಂಡೇಶನ್ ಫಾರ್ ನ್ಯಾಶನಲ್ ಸೆಕ್ಯುರಿಟಿ ರಿಸರ್ಚ್ (ಎಫ್‌ಎಸ್‌ಎನ್‌ಆರ್)’ ವಿಶ್ವದ ದೇಶಗಳ “ರಾಷ್ಟ್ರೀಯ ಸಾಮರ್ಥ್ಯ”ದ ಬಗ್ಗೆ ಅಧ್ಯಯನ ನಡೆಸಿತ್ತು. ಇದಕ್ಕಾಗಿ ಇಂಧನ ಭದ್ರತೆ, ಜನಸಂಖ್ಯೆ, ತಾಂತ್ರಿಕ ಸಾಮರ್ಥ್ಯ ಮುಂತಾದ ವಿವಿಧ ಸೂಚ್ಯಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ರಕ್ಷಣೆಯಲ್ಲಿ ಸ್ವಾವಲಂಬನೆ, ಬಹುಪಕ್ಷೀಯ ಸಂಸ್ಥೆಗಳ ಸದಸ್ಯತ್ವ, ಜಾಗತಿಕ ನೀತಿ ರೂಪಣೆಯಲ್ಲಿ ಪಾತ್ರ ಮುಂತಾದ ವಿಷಯಗಳನ್ನು ಅಧ್ಯಯನದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. “ವಿದೇಶ ವ್ಯವಹಾರಗಳ ಸಾಮರ್ಥ್ಯ”ವೂ ಸಾಮರ್ಥ್ಯ ಪರಿಗಣನೆಯಲ್ಲಿ ಪ್ರಧಾನ ಅಂಶವಾಗಿತ್ತು.
ಪಟ್ಟಿಯ ಮೊದಲ ಸ್ಥಾನದಲ್ಲಿ ಅಮೆರಿಕ ಇದೆ. ಆಸಕ್ತಿದಾಯಕ ವಿಷಯವೆಂದರೆ, ಎರಡನೆ ಸ್ಥಾನದಲ್ಲಿ ಬರುವ ಚೀನಾದ ‘ವಿದೇಶ ವ್ಯವಹಾರಗಳ ಸಾಮರ್ಥ್ಯ’ ಭಾರತದ ಜೊತೆ ತುಲನೆ ಮಾಡುವಂತಿದೆ. ಆದರೆ, ಒಟ್ಟು ಸಾಮರ್ಥ್ಯದಲ್ಲಿ ಭಾರತ ಚೀನಾಕ್ಕಿಂತ ಭಾರೀ ಅಂತರದಿಂದ ಹಿಂದಿದೆ.“ದೇಶಗಳನ್ನು ಅತ್ಯಂತ ಶಕ್ತಿಶಾಲಿ ಎಂಬುದಾಗಿ ಪರಿಗಣಿಸಲು ಗಣನೆಗೆ ತೆಗೆದುಕೊಳ್ಳಬೇಕಾದ ಮಾನದಂಡಗಳ ಬಗ್ಗೆ ಪರಿಣತರ ತಂಡ ನಿರ್ಧರಿಸಿತು.
ಅವುಗಳೆಂದರೆ: ಜನಸಂಖ್ಯೆ 5ಕೋಟಿಗಿಂತ ಹೆಚ್ಚಿರಬೇಕು, ಜಿಡಿಪಿ 50,000 ಕೋಟಿ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿರಬೇಕು ಹಾಗೂ ರಕ್ಷಣಾ ವೆಚ್ಚ 500 ಕೋಟಿ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿರಬೇಕು” ಎಂದು ಅಧ್ಯಯನದ ಬಗ್ಗೆ ವಿವರಗಳನ್ನು ನೀಡಿದ ಪ್ರೊ. ಸತೀಶ್‌ಕುಮಾರ್ ಹೇಳಿದರು.ಅಮೆರಿಕ ವಿಶ್ವದ ಅತ್ಯಂತ ಪ್ರಬಲ ರಾಷ್ಟ್ರವಾಗಿದೆ. ಅದು ತನ್ನ ಸಮೀಪದ ಪ್ರತಿಸ್ಪರ್ಧಿ ಚೀನಾದಿಂದ ತುಂಬಾ ಅಂತರದಿಂದ ಮುಂದಿದೆ.
“ಇಂಧನ ಭದ್ರತೆ, ತಾಂತ್ರಿಕ ಸಾಮರ್ಥ್ಯ ಮತ್ತು ವಿದೇಶ ವ್ಯವಹಾರಗಳ ಸಾಮರ್ಥ್ಯದಂಥ ವಿಷಯಗಳಲ್ಲಿ ಚೀನಾ ಅಮೆರಿಕದಿಂದ ತುಂಬಾ ಹಿಂದಿದೆ. ಆರ್ಥಿಕ ಮತ್ತು ಸೇನಾ ಕ್ಷೇತ್ರದಲ್ಲಿಯೂ ಚೀನಾದ ಸಾಮರ್ಥ್ಯವು ಅಮೆರಿಕಕ್ಕಿಂತ ತುಂಬಾ ಕೆಳಗಿದೆ.ಹಾಗಾಗಿ, ಸದ್ಯೋಭವಿಷ್ಯದಲ್ಲಿ ಚೀನಾ ಅಮೆರಿಕದ ಹಿರಿಮೆಗೆ ಸವಾಲೊಡ್ಡುವುದು ಎಂಬ ಅಭಿಪ್ರಾಯವನ್ನು ಎಚ್ಚರಿಕೆಯಿಂದ ಪರಿಗಣಿಸಬೇಕಾಗಿದೆ” ಎಂದು ಅಧ್ಯಯನ ಹೇಳುತ್ತದೆ.
ಅಧ್ಯಯನದ ಪ್ರಕಾರ, ಭಾರತದ ಆರ್ಥಿಕ ಸಾಮರ್ಥ್ಯ 8ನೆ ಹಾಗೂ ಸೇನಾ ಸಾಮರ್ಥ್ಯ 7ನೆ ಸ್ಥಾನದಲ್ಲಿದೆ ಎಂದು ಅಧ್ಯಯನ ಹೇಳುತ್ತದೆ. ತಾಂತ್ರಿಕ ಸಾಮರ್ಥ್ಯದಲ್ಲಿ ಅದು ತೀರಾ ಕೆಳಗೆ ಅಂದರೆ 17ನೆ ಸ್ಥಾನದಲ್ಲಿದೆ. ಅದೇ ವೇಳೆ ಇಂಧನ ಸಾಮರ್ಥ್ಯದಲ್ಲಿ ಇನ್ನೂ ಕೆಳಗೆ ಅಂದರೆ 20ನೆ ಸ್ಥಾನದಲ್ಲಿದೆ.ವಿದೇಶಿ ನೀತಿ ಪರಿಣತರ ಬಲಿಷ್ಠ ತಂಡವೆ ಇದೆ ಎಂದು ಹೇಳಿಕೊಂಡ ಹೊರತಾಗಿಯೂ, ವಿದೇಶ ವ್ಯವಹಾಗಳ ಸಾಮರ್ಥ್ಯದಲ್ಲಿ ಭಾರತ 11ನೆ ಸ್ಥಾನದಲ್ಲಿದೆ.
ಸೇನಾ ಸಲಕರಣೆಗಳು, ಇಂಧನ ಸಾಮರ್ಥ್ಯ, ಸೈಬರ್ ಮತ್ತು ಬಾಹ್ಯಾಕಾಶ ಭದ್ರತೆ ಮುಂತಾದ ವಿಷಯಗಳಲ್ಲಿ ಭಾರತ ತೀರಾ ಕೆಳಗಿದೆ.ಜನಸಂಖ್ಯೆ ಸಾಮರ್ಥ್ಯದಲ್ಲಿ ಭಾರತ ಅತ್ಯಧಿಕ ಅಂಕಗಳನ್ನು ಗಳಿಸಿಕೊಂಡಿದೆ. ‘ಮಾನವಶಕ್ತಿ’ ಸೂಚ್ಯಂಕದಲ್ಲಿ ಚೀನಾ ಭಾರತಕ್ಕಿಂತ ತುಂಬಾ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದೆ. ಅದು 100ರಲ್ಲಿ 87.5 ಅಂಕಗಳನ್ನು ಪಡೆದುಕೊಂಡಿದೆ.

No comments:

Post a Comment