Saturday, April 27, 2013

ಅಲ್ಲಿ ಚಿಟ್ ಫಂಡ್ ಹಗರಣ;ಇಲ್ಲಿ ಚೀಟಿ ದಂಧೆ30 ಸಾವಿರ ಕೋಟಿ ರೂಪಾಯಿ ವೊತ್ತದ ಶಾರದಾ ಚಿಟ್ ಫಂಡ್ ಹಗರಣ ಪಶ್ಚಿಮಬಂಗಾಳದಲ್ಲಿ ಅಲ್ಲೋಲಕಲ್ಲೋಲವನ್ನೇ ಉಂಟುಮಾಡಿದೆ. ಈ ಹಗರಣದಲ್ಲಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂರ ಪತ್ನಿ ನಳಿನಿಯವರ ಹೆಸರು ಕೇಳಿಬಂದಿದೆ. ತೃಣಮೂಲ ಕಾಂಗ್ರೆಸ್‌ನ ಇಬ್ಬರು ಸಂಸದರು ಕೂಡ ಈ ಹಗರಣದಲ್ಲಿ ಸಿಲುಕಿರುವ ಆರೋಪವಿದೆ. ಅಂತಲೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚಿಟ್ ಫಂಡ್‌ನಲ್ಲಿ ಠೇವಣಿ ಇಟ್ಟವರಿಗೆ “ಕಳೆದು ಹೋದುದಕ್ಕೆ ಚಿಂತಿಸಿ ಫಲವಿಲ್ಲ. ಪ್ರತಿಭಟಿಸಿದರೆ ಹಣ ವಾಪಸ್ ಬರುವುದಿಲ್ಲ. ಸರಕಾರ ನೀಡುವ ಪರಿಹಾರ ಪಡೆದುಕೊಂಡು ಸುಮ್ಮನಿರಿ” ಎಂದು ಹೇಳಿ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಹಗರಣದ ಸಂತ್ರಸ್ತರಿಗಾಗಿ ಮಮತಾ ಬ್ಯಾನರ್ಜಿ ೫೦೦ ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಸಿಗರೇಟ್ ಮೇಲೆ ಶೇಕಡಾ 10ರಷ್ಟು ತೆರಿಗೆ ವಿಧಿಸಿ ಬಂದ ಹಣವನ್ನು ಪರಿಹಾರ ರೂಪದಲ್ಲಿ ನೀಡಲು ಉದ್ದೇಶಿಸಿದ್ದಾರೆ. ಹೀಗಾಗಿ ‘ಧೂಮಪಾನಿಗಳು ಹೆಚ್ಚು ಧೂಮಪಾನ ಮಾಡಿ’ ಎಂದು ಅಮೂಲ್ಯ ಸಲಹೆ ನೀಡಿದ್ದಾರೆ.
ಕರ್ನಾಟಕದ ವಿನಿವಿಂಕ್ ಶಾಸ್ತ್ರಿ ವಂಚನೆಯನ್ನು ಹೋಲುವ ಈ ಹಗರಣದಲ್ಲಿ ನಕಲಿ ಮೊಬೈಲ್ ತಯಾರಿ ಸ್ಥಾವರ ತೋರಿಸಿ ಶೇಕಡಾ ಪ್ರತಿಶತ 30ರಷ್ಟು ಬಡ್ಡಿಯ ಆಮಿಷ ಒಡ್ಡಿ ಹೂಡಿಕೆದಾರರಿಂದ 30ಸಾವಿರ ಕೋಟಿ ರೂಪಾಯಿಗಳನ್ನು ಲಪಟಾಯಿಸಿದ ಶಾರದಾ ಚಿಟ್ ಫಂಡ್ ಮುಖ್ಯಸ್ಥ ಸುದಿಪ್ತಾ ಸೇನ್ ಈ ಕಂಪೆನಿಗೆ ಬೀಗ ಹಾಕಿ ನಾಪತ್ತೆಯಾಗಿದ್ದಾನೆ. ಪಶ್ಚಿಮಬಂಗಾಲದಲ್ಲಿ ಚಿಟ್‌ಫಂಡ್ ಹಗರಣ ಬಯಲಿಗೆ ಬರುತ್ತಿರುವಾಗಲೇ ಕರ್ನಾಟಕದ ಬಿಜೆಪಿ ನಾಯಕರ ಚೀಟಿ ವ್ಯವಹಾರಗಳು ಮತ್ತೆ ಬಯಲಾಗಿದೆ.
ಬಿಜೆಪಿ ಮಾಜಿ ಸಂಸದ ಹಾಗೂ ಕೆಜೆಪಿ ಉಪಾಧ್ಯಕ್ಷ ವಿಜಯ ಸಂಕೇಶ್ವರ್ ಗುರುವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯ ಹಿರಿಯ ನಾಯಕ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ಗೃಹ ಸಚಿವ ಆರ್. ಅಶೋಕ್‌ರಿಗೆ ಕೈ ಚೀಟಿಯೊಂದನ್ನು ಕಳುಹಿಸಿ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ೫ ಕೋಟಿ ರೂಪಾಯಿ ಉಳಿಕೆ ಹಣವನ್ನು ನೀಡುವಂತೆ ಕೇಳಿಕೊಂಡಿದ್ದರು. ಸಂಕೇಶ್ವರ್ ಈ ಚೀಟಿಯ ದಾಖಲೆಯನ್ನು ಪತ್ರಕರ್ತರಿಗೆ ತೋರಿಸಿದ್ದಾರೆ. ಈ ಚೀಟಿ ವ್ಯವಹಾರದ ಮರ್ಮ ಏನು? ಬಾಕಿ ಹಣ 5 ಕೋಟಿ ಎಂದಾದರೆ ವೊದಲು ಕೊಟ್ಟ ಹಣ ಎಷ್ಟು? ಯಾವ ಕಾರಣಕ್ಕೆ ನೀಡಲಾಯಿತು?
ಇವೆಲ್ಲಾ ಸಾರ್ವಜನಿಕರಿಗೆ ಗೊತ್ತಾಗಬೇಕಾಗಿದೆ ಎಂದು ಸಂಕೇಶ್ವರ್ ಆಗ್ರಹಿಸಿದ್ದಾರೆ. 30,000 ರೂಪಾಯಿಗಿಂತ ಹೆಚ್ಚು ಹಣವನ್ನು ನಗದು ರೂಪದಲ್ಲಿ ಪಡೆದರೆ ಅದು ಆದಾಯ ತೆರಿಗೆ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಈ ಪ್ರಕರಣದಲ್ಲಿ ಸರಕಾರದ ಚುಕ್ಕಾಣಿ ಹಿಡಿದವರಿಂದಲೇ ಅಪರಾಧ ನಡೆದಿದೆ ಎಂದು ಸಂಕೇಶ್ವರ್ ಆರೋಪಿಸಿದ್ದಾರೆ.ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಇಲ್ಲವೇ ಜೆಡಿಎಸ್ ನಾಯಕರು ಇಂತಹ ಆರೋಪ ಮಾಡಿದ್ದರೆ ಯಾರಿಗೂ ಅಚ್ಚರಿಯಾಗುತ್ತಿರಲಿಲ್ಲ.
ಆದರೆ ಇತ್ತೀಚಿನವರೆಗೆ ಬಿಜೆಪಿಯಲ್ಲೇ ಇದ್ದು, ಸಂಘಪರಿವಾರದ ಆಪ್ತವಲಯಕ್ಕೆ ಸೇರಿದ ಉದ್ಯಮಿ ವಿಜಯ್ ಸಂಕೇಶ್ವರ್ ಮಾಡಿರುವ ಆರೋಪ ಇದಾಗಿರುವುದರಿಂದ ಗಂಭೀರವಾಗಿಯೇ ಪರಿಗಣಿಸಬೇಕಾಗಿದೆ. ಸಂಕೇಶ್ವರ್ ಇಷ್ಟಕ್ಕೇ ಸುಮ್ಮನೆ ಕುಳಿತಿಲ್ಲ. ಆರೆಸ್ಸೆಸ್ ಮೂಲದ ಬಿಜೆಪಿ ನಾಯಕರ ವಿರುದ್ಧವೂ ಇನ್ನೂ ಕೆಲವು ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಹಿಂದಿನ ಅಧ್ಯಕ್ಷ ನಿತಿನ್ ಗಡ್ಕರಿಯವರ ಮೇಲೆ 30ಕ್ಕೂ ಹೆಚ್ಚು ಬೋಗಸ್ ಕಂಪೆನಿಗಳನ್ನು ಸ್ಥಾಪನೆ ಮಾಡಿದ ಆರೋಪಗಳಿಲ್ಲವೇ?
ಅಡ್ವಾಣಿ ಆಪ್ತ ಅನಂತ್ ಕುಮಾರ್ ಮೇಲೆ 14 ಸಾವಿರ ಕೋಟಿ ರೂ. ವೊತ್ತದ ಹುಡ್ಕೋ ಹಗರಣದ ಆರೋಪಗಳಿಲ್ಲವೆ? ಎಂದು ಪ್ರಶ್ನಿಸಿರುವ ಸಂಕೇಶ್ವರ್ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಬಿಜೆಪಿ ತನ್ನ ಅಭ್ಯರ್ಥಿಯನ್ನು ಯಾಕೆ ಹಾಕಿಲ್ಲ ಎಂದು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಸ್ಥಿತಿಯಲ್ಲಿ ಬಿಜೆಪಿ ನಾಯಕರು ಇಲ್ಲ.ಎಲ್.ಕೆ. ಅಡ್ವಾಣಿ ವಿರುದ್ಧ ಧನಂಜಯ ಕುಮಾರ್ ಮಾಡಿದ ಆರೋಪದ ಬೆನ್ನಲ್ಲೇ ವಿಜಯ್ ಸಂಕೇಶ್ವರ್ ಈ ಗಂಭೀರ ಆರೋಪ ಮಾಡಿದ್ದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
ಯಡಿಯೂರಪ್ಪ ಸೇರಿದಂತೆ ಕೆಜೆಪಿ ನಾಯಕರ ವಿರುದ್ಧ ಯಾವುದೇ ಪ್ರತಿಕ್ರಿಯೆ ನೀಡದಂತೆ ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಕೆಜೆಪಿ ನಾಯಕರು ಬಿಜೆಪಿ ನಾಯಕರ ಮೇಲೆ ಆರೋಪಗಳ ಸುರಿಮಳೆ ಮಾಡುತ್ತಿರುವುದನ್ನು ಸುಲಭವಾಗಿ ತಳ್ಳಿಹಾಕಲಾಗುವುದಿಲ್ಲ. ಈ ಆರೋಪಗಳಲ್ಲಿ ಸತ್ಯಾಂಶ ಇಲ್ಲದಿದ್ದರೆ ಬಿಜೆಪಿ ನಾಯಕರು ಸುಮ್ಮನೆ ಇರುತ್ತಿರಲಿಲ್ಲ. ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ಮತ್ತು ಕೆಜೆಪಿ ನಾಯಕರು ಜೊತೆ ಸೇರಿಯೇ ಕರ್ನಾಟಕವನ್ನು ದೋಚಿದ್ದಾರೆ. ಒಬ್ಬರ ದೌರ್ಬಲ್ಯ ಇನ್ನೊಬ್ಬರಿಗೆ ಗೊತ್ತಿದೆ.
ಅಂತಲೇ ಬಿಜೆಪಿ ನಾಯಕರು ಬಾಯಿ ಮುಚ್ಚಿ ಕುಳಿತಿದ್ದಾರೆ. ಅನಂತ್‌ಕುಮಾರ್‌ರ ಹುಡ್ಕೊ ಹಗರಣ, ನೀರಾ ರಾಡಿಯಾ ಜೊತೆಗಿನ ಅವರ ಸಂಬಂಧ, ನಿತಿನ್ ಗಡ್ಕರಿಯ ಬೋಗಸ್ ವ್ಯವಹಾರ, ದಿಲ್ಲಿಯ ಬಿಜೆಪಿ ನಾಯಕರು ಕರ್ನಾಟಕಕ್ಕೆ ಬಂದು ಸೂಟ್‌ಕೇಸ್‌ನಲ್ಲಿ ಹಣ ತುಂಬಿಸಿ ಕೊಂಡು ಹೋಗುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸ್ಥಿತಿಯಲ್ಲಿ ಸಂಘಪರಿವಾರ ಇಲ್ಲ. ಯಡಿಯೂರಪ್ಪನವರನ್ನು ಹೊರಹಾಕಿದಷ್ಟು ಸುಲಭವಾಗಿ ನಿತಿನ್ ಗಡ್ಕರಿ ಮತ್ತು ಅನಂತ್‌ಕುಮಾರ್‌ರನ್ನು ಹೊರಗೆ ಹಾಕುವ ಸ್ಥಿತಿಯಲ್ಲಿ ಆರೆಸ್ಸೆಸ್ ಇಲ್ಲ.
ನೈತಿಕ ಪ್ರಶ್ನೆಯನ್ನು ಇಟ್ಟುಕೊಂಡು ಉಚ್ಚಾಟಿಸುತ್ತಾ ಹೋದರೆ ಬಿಜೆಪಿಯಲ್ಲಿ ಯಾರೂ ಉಳಿಯುವುದಿಲ್ಲ. ಅಂತಲೇ ಬಿಜೆಪಿ ನಾಯಕರು ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ. ಬರಲಿರುವ ದಿನಗಳಲ್ಲಿ ಇಂತಹ ಅನೇಕ ಹಗರಣಗಳು ಬಯಲಿಗೆ ಬಂದರೆ ಅಚ್ಚರಿ ಪಡಬೇಕಾಗಿಲ್ಲ. ಪ್ರಸಕ್ತ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ, ಹಗರಣಗಳಿಗೆ ಸಂಬಂಧಿಸಿದಂತೆ ಯಾರ ಮೇಲೆ ಯಾರೂ ಆರೋಪಗಳನ್ನು ಮಾಡುವ ಸ್ಥಿತಿಯಲ್ಲಿಲ್ಲ. ಎಲ್ಲರೂ ಹೊಲಸನ್ನು ಮೈಗೆ ಮೆತ್ತಿಕೊಂಡು ನಿಂತಿದ್ದಾರೆ.

No comments:

Post a Comment