Monday, April 22, 2013

ನೈತಿಕ ಗೆರೆಗಳನ್ನು ಗೌರವಿಸೋಣಮತ್ತೆ ಅತ್ಯಾಚಾರ ದಿಲ್ಲಿಯಲ್ಲಿ ಸುದ್ದಿಯಾಗುತ್ತಿದೆ. ಈ ಬಾರಿ ಒಂದು ಪುಟ್ಟ ಮಗುವಿನ ಮೇಲೆ ಬರ್ಬರವಾಗಿ ಅತ್ಯಾಚಾರ ನಡೆದಿದೆ. ಇದು ಮನುಷ್ಯರು ವಾಸಿಸುವ ಜಗತ್ತು ಹೌದೋ, ಅಲ್ಲವೋ ಎಂದು ಅನುಮಾನ ಪಡುವಷ್ಟು ಭೀಕರವಾಗಿದೆ. ಆ ಕೃತ್ಯ ಎಸಗಿದವನಂತೂ ಮನುಷ್ಯನಾಗಿರಲಿಕ್ಕೆ ಸಾಧ್ಯವಿಲ್ಲ. ಒಬ್ಬ ವಿಕೃತ ಮಾನಸಿಕ ರೋಗಿ ಆತ. ಮೃಗವೆಂದರೆ ಅವುಗಳೂ ತಲೆತಗ್ಗಿಸಬೇಕು. ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ. ನಗರಗಳಲ್ಲಿ ಈ ಅತ್ಯಾಚಾರ ಸಾಮಾನ್ಯವಾಗಿದೆ. ಬೀದಿ ಬದಿಯಲ್ಲಿ ಮಲಗುವ ಮಕ್ಕಳ ಮೇಲೆ, ಜೋಪಡವಾಸಿ ಮಕ್ಕಳ ಮೇಲೆ ನಡೆಯುವ ಅದೆಷ್ಟು ಬರ್ಬರ ಅತ್ಯಾಚಾರಗಳು ನಾಗರಿಕ ಸಮಾಜದಲ್ಲಿ ಬೆಳಕಿಗೆ ಬರದೇ ಅಲ್ಲಲ್ಲೇ ನಂದಿ ಹೋಗಿದೆ. ಕೆಲವೊಮ್ಮೆ ಬೆಳಕಿಗೆ ಬಂದರೂ ಅದನ್ನು ಗಂಭೀರವಾಗಿ ತೆಗೆದುಕೊಂಡದ್ದು ಕಡಿಮೆ. ಆದರೆ ಈ ಬಾರಿ ಮಗುವಿನ ಮೇಲಿನ ಅತ್ಯಾಚಾರ ದಿಲ್ಲಿಯ ಜನರ ಮನುಷ್ಯತ್ವವನ್ನು ತಟ್ಟಿ ಎಬ್ಬಿಸಿದೆ. ವ್ಯಾಪಕ ಪ್ರತಿಭಟನೆ ಕೇಳಿ ಬರುತ್ತಿದೆ.
ಈ ಪ್ರತಿಭಟನೆಯ ಹಿಂದೆ ರಾಜಕೀಯ ಇರಬಹುದು, ರಾಜಕಾರಣಿಗಳಿರ ಬಹುದು, ಯುಪಿಎ ಸರಕಾರದ ಮೇಲಿನ ಬೇರೆ ಬೇರೆ ಅಸಮಾಧಾನ ಕಾರಣವಿರಬಹುದು. ಆದರೆ ಈ ಕೃತ್ಯದ ವಿರುದ್ಧ ಇಂತಹದೊಂದು ಪ್ರತಿಭಟನೆ ಹುಟ್ಟುವ ಅಗತ್ಯವಂತೂ ಇದ್ದೇ ಇತ್ತು. ಈ  ಕೃತ್ಯ ಮತ್ತು ತದನಂತರದ ಪ್ರತಿಭಟನೆಯು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನೇ ಕಳವಳಕ್ಕೀಡು ಮಾಡಿದೆ.
ಸಾಧಾರಣವಾಗಿ ಯಾವುದೋ ಮನೆಯೊಳಗೆ, ಎಲ್ಲೋ ಜೋಪಡಿಯೊಳಗೆ, ಇನ್ಯಾವುದೋ ಬೀದಿ ಬದಿಯಲ್ಲಿ ಮಕ್ಕಳು ಅಥವಾ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದರೆ ಅದನ್ನು ತಡೆಯುವುದು ಸದ್ಯದ ಸಂದರ್ಭದಲ್ಲಿ ನಮ್ಮ ಸರಕಾರಕ್ಕೆ ಸಾಧ್ಯವಿಲ್ಲ. ಯಾವ ಯಾವ ಮನೆಯಲ್ಲಿ ವಿಕೃತ ಕಾಮಿಗಳಿದ್ದಾರೆ, ಅವರು ಯಾವಾಗ ತಮ್ಮ ಕೋರೆಹಲ್ಲುಗಳನ್ನು ಚಾಚುತ್ತಾರೆ ಎಂಬಿತ್ಯಾದಿಗಳನ್ನು ಯಾವುದೇ ಪೊಲೀಸರು ಅಥವಾ ಯಾವುದೇ ಸರಕಾರ ಊಹಿಸುವುದಕ್ಕೆ ಸಾಧ್ಯವಿಲ್ಲ. ಘಟನೆ ಸಂಭವಿಸಿ ಬಿಡುತ್ತದೆ. 
ಇದೀಗ ವಿಕೃತಕಾಮಿಯನ್ನು ಬಂಧಿಸಲಾಗಿದೆ. ನಾಳೆ ಅವನಿಗೆ ಮರಣದಂಡನೆ ಶಿಕ್ಷೆಯೂ ಆಗಬಹುದು. ಆದರೆ ಇಲ್ಲಿ ನಾವು ಪೊಲೀಸ್ ವ್ಯವಸ್ಥೆಯ ಮೇಲೆ ಯಾಕೆ ಅಕ್ರೋಶಗೊಳ್ಳಬೇಕೆಂದರೆ, ಆ ಘಟನೆ ನಡೆದ ಬಳಿಕದ ಅದರ ಪ್ರತಿಕ್ರಿಯೆಗಾಗಿ. ತನ್ನ ಮಗುವಿನ ಮೇಲಾದ ಅನ್ಯಾಯದ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೋದಾಗ ಅವರು ನಿಷ್ಕರುಣೆಯಿಂದ ವರ್ತಿಸಿದರು. ಅದನ್ನು ಮುಚ್ಚಿ ಹಾಕಲು ಯತ್ನಿಸಿದರು. ಪೊಲೀಸರ ಈ ಕೃತ್ಯಕ್ಕೂ, ವಿಕೃತನೊಬ್ಬ ಮಗುವಿನ ಮೇಲೆ ನಡೆಸಿದ ಬರ್ಬರ ಕೃತ್ಯಕ್ಕೂ ಯಾವ ವ್ಯತ್ಯಾಸವೂ ಇಲ್ಲ.
ಆರೋಪಿಯ ಮೇಲೆ ಆಕ್ರೋಶಗೊಳ್ಳಲು ಅವರು ಪೊಲೀಸರಾಗಿಯೇ ಇರಬೇಕಾಗಿರಲಿಲ್ಲ. ಕೇವಲ ಮನುಷ್ಯರಾಗಿದ್ದರೂ ಆ ಮಗುವಿನ ತಾಯಿಯ ನೋವಿಗೆ ಸ್ಪಂದಿಸುತ್ತಿದ್ದರು. ಆದರೆ ತಾವು ಮನುಷ್ಯರೂ ಅಲ್ಲ ಎನ್ನುವುದನ್ನು ಆ ಪೊಲೀಸರು ಸಾಬೀತು ಪಡಿಸಿದರು.ಮನೋಜ್‌ಕುಮಾರ್‌ನಂತಹ ವಿಕೃತರು ಹುಟ್ಟುವುದಕ್ಕೆ ಇಂತಹ ಪೊಲೀಸರೇ ಪರೋಕ್ಷ ಕಾರಣರು. ಹಿಂದೆ ನಡೆದ ಯಾವುದಾದರೂ ಪ್ರಕರಣದಲ್ಲಿ ಪೊಲೀಸರು ಗಂಭೀರ ಕ್ರಮ ತೆಗೆದುಕೊಂಡಿದ್ದರೂ, ವಿಕೃತರು ತಮ್ಮ ನಿಜ ಮುಖವನ್ನು ಬಯಲುಗೊಳಿಸಲು ಭಯ ಪಡುತ್ತಾರೆ.
ಆದರೆ ಪೊಲೀಸರ ಬೇಜವಾಬ್ದಾರಿ ಇಂದು ವಿಕೃತರಿಗೆ, ಅತ್ಯಾಚಾರಿಗಳಿಗೆ ಪರೋಕ್ಷ ಕುಮ್ಮಕ್ಕು ನೀಡುವಂತಿದೆ. ಆದುದರಿಂದಲೇ ಮೊತ್ತ ಮೊದಲು ಶಿಕ್ಷೆಯಾಗಬೇಕಾದುದು ಪೊಲೀಸರಿಗೆ. ಠಾಣೆಗೆ ಕಾಲಿಟ್ಟ ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕು ಎನ್ನುವುದನ್ನು ಮೊದಲು ಪೊಲೀಸರು ಕಲಿಯಬೇಕು. ಆ ಬಳಿಕವಷ್ಟೇ ಅವರಿಂದ ಸಮಾಜ ನ್ಯಾಯವನ್ನು ನಿರೀಕ್ಷಿಸಬಹುದಾಗಿದೆ. ಘಟನೆಯನ್ನು ಪ್ರತಿಭಟಿಸಿದ ಮಹಿಳೆಯೋರ್ವಳ ಮೇಲೆ ಪೊಲೀಸರು ಬರ್ಬರ ದಾಳಿ ನಡೆಸಿರುವುದೂ ಟಿವಿ ವಾಹಿನಿಗಳಲ್ಲಿ ಚಿತ್ರೀಕರಣಗೊಂಡಿದೆ. 
ಆ ಪೊಲೀಸನಿಗೆ ಏನು ಶಿಕ್ಷೆಯಾಗಿದೆ? ಹೆಚ್ಚೆಂದರೆ ಒಂದು ಅಮಾನತು. ಒಂದೇ ತಿಂಗಳಲ್ಲಿ ಅವನು ಮತ್ತೆ ಕೆಲಸಕ್ಕೆ ಹಾಜರಾಗುತ್ತಾನೆ. ಹೀಗಾದಲ್ಲಿ, ದುಷ್ಕರ್ಮಿಗಳಿಗೆ ಕಾನೂನಿಗೆ ಯಾಕೆ ಹೆದರಬೇಕು? ದುಷ್ಕರ್ಮಿಗಳೇ ಕಾನೂನಿನ ಮುಖವಾಡ ಹಾಕಿ ಪೊಲೀಸ್ ಠಾಣೆಯಲ್ಲಿ ಕುಳಿತಿರುವಾಗ ಸಂತ್ರಸ್ತರು ಅವರಿಂದ ನ್ಯಾಯವನ್ನು ನಿರೀಕ್ಷಿಸುವುದಾದರೂ ಹೇಗೆ?
ಉಳಿದಂತೆ, ನಾವು ಯಾರ ವಿರುದ್ಧ ಪ್ರತಿಭಟಿಸಬೇಕು? ಪೊಲೀಸ್ ಅಧಿಕಾರಿಯನ್ನು ಹೊರತುಪಡಿಸಿದರೆ, ಇದಕ್ಕೆ ಇನ್ನಾರು ಹೊಣೆ? ಇಂದು ತರುಣರನ್ನು ಭೋಗ ವಿಲಾಸಕ್ಕೆ ತಳ್ಳುವ, ಡ್ರಗ್ಸ್ ಇತ್ಯಾದಿ ವ್ಯಸನಗಳಿಗೆ ನೂಕುವ ವ್ಯವಸ್ಥೆಯ ವಿರುದ್ಧ ನಾವು ಪ್ರತಿಭಟಿಸಬೇಕು. ಆದರೆ ಆ ವ್ಯವಸ್ಥೆಯೊಂದಿಗೆ ನಾವು ತಿಳಿದೋ ತಿಳಿಯದೆಯೋ ಶಾಮೀಲಾಗಿದ್ದೇವೆ. ಇಂದು ಬಾಲಿವುಡ್‌ನಲ್ಲಿ ಹೊರಬರುತ್ತಿರುವ ಚಿತ್ರಗಳನ್ನು ನೋಡಿ. ಮಹೇಶ್ ಭಟ್‌ರಂತಹ ಚಿಂತಕರೇ ನಿರ್ದೇಶಿಸಿದ, ನಿರ್ಮಿಸಿದ ಚಿತ್ರಗಳ ಕಥಾವಸ್ತು ವಿಕೃತ ಮನುಷ್ಯರದು.
ವಿಕೃತ ಕಾಮಿಗಳು, ವಿಕೃತ ಅಪರಾಧಿಗಳನ್ನು ವೈಭಕರಿಸಿ, ಅದನ್ನು ರಂಜನೆಯ ರೂಪದಲ್ಲಿ ಸಿನಿಮಾ ಹರಡುತ್ತಿದೆ. ನಾವೆಲ್ಲರೂ ಅವುಗಳನ್ನು ಮನರಂಜನೆಯೆಂದು ಸ್ವೀಕರಿಸಿದ್ದೇವೆ. ಇಂಟರ್‌ನೆಟ್ ಹೆಸರಿನಲ್ಲಿ, ಮನೆಮನೆಗಳು ಬ್ಲೂಫಿಲ್ಮ್ ಅಡ್ಡೆಗಳಾಗಿವೆ. ಪುಟಾಣಿ ಮಕ್ಕಳಿಗೆ ಸುಲಭದಲ್ಲಿ ಅಶ್ಲೀಲ ಚಿತ್ರಗಳು ಎಟಕುತ್ತಿವೆ. ಇನ್ನೂ 15 ವರ್ಷ ದಾಟದ ಮಕ್ಕಳು ಅದಾಗಲೇ ಇಂಟರ್‌ನೆಟ್‌ನಲ್ಲಿ ಎಲ್ಲವನ್ನೂ ನೋಡಿ ಮುಗಿಸಿ ಬಿಟ್ಟಿರುತ್ತವೆ. ಇಂತಹ ಮಕ್ಕಳಿಂದ ಸಮಾಜ ಏನನ್ನು ನಿರೀಕ್ಷಿಸಬೇಕು?
ಇದಕ್ಕೆ ಹೊಣೆ ಯಾರು? ಪ್ರತಿಭಟನೆಗೆಂದು ಬೀದಿಗಿಳಿದವರ ಮನೆಗಳಲ್ಲೇ ಒಬ್ಬ ವಿಕೃತ ಸಿದ್ಧನಾಗಿರಬಹುದು. ಕ್ಯಾಂಡೆಲ್ ಹೊತ್ತಿಸುವುದು, ರಸ್ತೆಯಲ್ಲಿ ಬೊಬ್ಬಿಡುವುದರಿಂದ ಇದಕ್ಕೆ ಪರಿಹಾರವಿಲ್ಲ. ಭಾರತ ಪಾಶ್ಚಿಮಾತ್ಯರ ಆಧುನಿಕತೆಗೆ ಮಾನಸಿಕವಾಗಿ ಇನ್ನೂ ಸಿದ್ಧವಾಗಿಲ್ಲ. ಇಲ್ಲಿ ನೈತಿಕತೆ-ಅನೈತಿಕತೆ ಎನ್ನುವುದರ ನಡುವೆ ಸ್ಪಷ್ಟ ಗೆರೆಯಿದೆ. ಅವುಗಳನ್ನು ನಾವು ಅನಿವಾರ್ಯವಾಗಿ ಗೌರವಿಸಲೇಬೇಕು. ಅದೊಂದೇ ಮುಂದಿನ ದಿನಗಳಲ್ಲಿ ನಮ್ಮ ಸಮಾಜವನ್ನು ಕಾಪಾಡಬಹುದು. 
ಮಕ್ಕಳಲ್ಲಿ ಒಳ್ಳೆಯ ಅಭಿರುಚಿಗಳನ್ನು ಬೆಳೆಸುವುದು, ಹಾಗೆಯೇ ಸಮಾಜದ ಕುರಿತಂತೆ ಅವರಲ್ಲಿ ಅರಿವು ಮೂಡಿಸುವುದು ಇತ್ಯಾದಿಗಳ ಮೂಲಕವೂ ನಾವು ಆರೋಗ್ಯಪೂರ್ಣ ಸಮಾಜವನ್ನು ಸೃಷ್ಟಿಸಬಹುದು. ಒಟ್ಟಿನಲ್ಲಿ, ಕೃತ್ಯಗಳು ನಡೆದಾಗೊಮ್ಮೆ ಭಾವೋದ್ವೇಗಗೊಳ್ಳುವ ಬದಲು ಪೊಲೀಸರು, ಸರಕಾರ, ಸಮಾಜ ಜೊತೆಗೂಡಿ ಇದನ್ನು ತಡೆಯುವಲ್ಲಿ ಗಂಭೀರ ಹೆಜ್ಜೆಯಿಡಬೇಕಾಗಿದೆ.

No comments:

Post a Comment