Friday, April 19, 2013

ಕೊಡ್ನಾನಿಗೆ ಮರಣದಂಡನೆ:ಹಾಗಾದರೆ ನರೇಂದ್ರ ಮೋದಿಗೆ?ಏಪ್ರಿಲ್ -19-2013

ಗುಜರಾತ್ ಹತ್ಯಾಕಾಂಡದ ವಿಕಟ ಸನ್ನಿವೇಶ ಇದು. ಯಾವ ಸರಕಾರ ಒಂದು ಹತ್ಯಾಕಾಂಡದ ಪ್ರಾಯೋಜಕತ್ವವನ್ನು ವಹಿಸಿಕೊಂಡಿತೋ ಅದೇ, ಸರಕಾರ ಪ್ರಮುಖ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವುದನ್ನು ಅಂಗೀಕರಿಸಿದೆ. 2002ರ ಗುಜರಾತ್ ಗಲಭೆಯ ವೇಳೆ ನಡೆದ ನರೋಡಾ ಪಾಟಿಯಾ ಹತ್ಯಾಕಾಂಡಕ್ಕೆ ಸಂಬಂಧಿಸಿ ರಾಜ್ಯದ ಮಾಜಿ ಸಚಿವೆ ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿ ಸಹಿತ ಇತರ ಒಂಬತ್ತು ಮಂದಿಗೆ ಮರಣದಂಡನೆ ಶಿಕ್ಷೆ ನೀಡಬೇಕೆಂಬ ಸಿಟ್ ಬೇಡಿಕೆಗೆ ಗುಜರಾತ್ ಸರಕಾರ ಅಂಗೀಕಾರ ನೀಡಿದೆ. ಗುಜರಾತ್ ಹತ್ಯಾಕಾಂಡದ ಆರೋಪಿಗಳ ಬೆನ್ನಿಗೆ ಕೊನೆಯವರೆಗೂ ನಿಂತಿದ್ದ ನರೇಂದ್ರ ಮೋದಿ, ತನ್ನ ಮೂಗಿಗೆ ನೀರು ಬರಲಿದೆಯೆನ್ನುವ ಹೊತ್ತಿನಲ್ಲಿ ಸಿಟ್ ಬೇಡಿಕೆಗೆ ಅಸ್ತು ಎಂದಿದ್ದಾರೆ. ಇಂತಹದೊಂದು ನಿರ್ಣಯವನ್ನು ತೆಗೆದುಕೊಳ್ಳಲು ಗುಜರಾತ್ ಸರಕಾರ ಸುಮಾರು 7 ತಿಂಗಳು ತೆಗೆದುಕೊಂಡಿದೆ. ನಿಜಕ್ಕೂ ಈ ಅಂಗೀಕಾರ ಪ್ರಾಮಾಣಿಕತೆಯಿಂದ ಕೂಡಿದ್ದೇ ಆಗಿದ್ದಿದ್ದರೆ ಇಷ್ಟು ಸಮಯ ತೆಗೆದುಕೊಳ್ಳುವ ಅಗತ್ಯವೇ ಇರಲಿಲ್ಲ. ಇದೊಂದು ಅಪ್ಪಟ ರಾಜಕೀಯ ನಿರ್ಧಾರ ಎನ್ನುವುದು ಯಾರೂ ಊಹಿಸಬಹುದಾಗಿದೆ.
ಕಳೆದ ಎರಡು ತಿಂಗಳಿನಿಂದ ಬಿಜೆಪಿಯೊಳಗೆ ಪ್ರಧಾನಿ ಅಭ್ಯರ್ಥಿಗಾಗಿ ತಿಕ್ಕಾಟ ನಡೆಯುತ್ತಿದೆ. ಒಂದೆಡೆ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತವಾಗಲು ಶತಾಯಗತಾಯ ಹೋರಾಡುತ್ತಿದ್ದಾರೆ. ಬಿಜೆಪಿಯ ಒಂದು ಗುಂಪು ಅವರನ್ನು ಪ್ರಧಾನ ಮಂತ್ರಿಯಾಗಿ ನೋಡಲು ಹಾತೊರೆಯುತ್ತಿದೆ. ಬಿಜೆಪಿಯೊಳಗಿನ ಹಿರಿಯರ ಗುಂಪು ಮೋದಿಯನ್ನು ಅಷ್ಟೇ ತೀವ್ರವಾಗಿ ವಿರೋಧಿಸುತ್ತಿದೆ. ಅದರ ನೇತೃತ್ವವನ್ನು ಸ್ವತಃ ಎಲ್. ಕೆ. ಅಡ್ವಾಣಿಯವರೇ ವಹಿಸಿಕೊಂಡಿದ್ದಾರೆ.
ಅಭಿವೃದ್ಧಿಯ ಗಾಳಿಪಟವನ್ನು ಏರಿ ಪ್ರಧಾನಿಯಾಗುವೆನೆಂಬ ಕನಸು ಕಾಣುತ್ತಿರುವ ನರೇಂದ್ರ ಮೋದಿಗೆ ಅತಿ ದೊಡ್ಡ ಅಡ್ಡಿಯೆಂದರೆ ಗುಜರಾತ್ ಹತ್ಯಾಕಾಂಡ. ವಿಶ್ವಾದ್ಯಂತ ಈ ಕಾರಣಕ್ಕಾಗಿಯೇ ಕಪ್ಪು ಪಟ್ಟಿಯಲ್ಲಿರುವ ನರೇಂದ್ರ ಮೋದಿಗೆ, ಗುಜರಾತ್ ಹತ್ಯಾಕಾಂಡ ಚರ್ಮದಂತೆ ಅಂಟಿಕೊಂಡಿದೆ. ಅದನ್ನು ಕಿತ್ತು ಹಾಕಿ, ಜಾತ್ಯತೀತ, ಅಭಿವೃದ್ಧಿ ಪರ ನಾಯಕನ ವೇಷ ಹಾಕುವ ಅವರ ಪ್ರಯತ್ನವೆಲ್ಲವೂ ಒಂದರ ನಂತರ ಒಂದರಂತೆ ವಿಫಲಗೊಳ್ಳುತ್ತಿದೆ.
ಜೆಡಿಯು ಕೂಡ, ಗುಜರಾತ್ ಹತ್ಯಾಕಾಂಡ ವನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಬಾರದು ಎಂದು ಸೂಚನೆ ನೀಡಿದೆ. ಈ ಮೂಲಕ ಎನ್‌ಡಿಎ ನಡುವೆ ಬಿಕ್ಕಟ್ಟು ಕಾಣಿಸಿಕೊಂಡಿದೆ. ಯಶವಂತ ಸಿನ್ಹಾ ಸೇರಿದಂತೆ ಹಿರಿಯ ನಾಯಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಅಡ್ವಾಣಿ ಯವರೇ ಪ್ರಧಾನಿಯಾಗಬೇಕು’ ಎಂದಿದ್ದಾರೆ. ಇಂತಹ ಹೊತ್ತಿನಲ್ಲಿ, ಸಿಟ್‌ತಂಡದ ಬೇಡಿಕೆ ಮೋದಿಯ ಮುಂದೆ ಬಂದು ನಿಂತಿತ್ತು.
ನರೇಂದ್ರ ಮೋದಿಯೆಂಬ ಪ್ರಧಾನಿ ಅಭ್ಯರ್ಥಿಯನ್ನು ಅಣಕಿಸುವಂತೆ ಸಿಟ್ ಬೇಡಿಕೆ,  ಕಳೆದ ಏಳು ತಿಂಗಳಿಂದ ಗುಜರಾತ್ ಸರಕಾರದ ಫೈಲಿನಲ್ಲಿ ಕೊಳೆಯುತ್ತಿತ್ತು. ಸಿಟ್‌ನ ಬೇಡಿಕೆಗೆ ಅಂಗೀಕಾರ ನೀಡದೇ ಇದ್ದರೆ, ಪರೋಕ್ಷವಾಗಿ ಕೊಡ್ನಾನಿ, ಬಾಬುಬಜರಂಗಿ ಮೊದಲಾದವರನ್ನು ಸಮರ್ಥಿಸಿದಂತಾಗುತ್ತದೆ.ಹಾಗೆ ಸಮರ್ಥಿಸುವುದೆಂದರೆ, ಗುಜರಾತ್ ಹತ್ಯಾ ಕಾಂಡವನ್ನೇ ಸಮರ್ಥಿಸಿದಂತೆ. ಒಂದು ವೇಳೆ ಈ ಬೇಡಿಕೆಗೆ ಅಂಗೀಕಾರ ನೀಡದೇ ಇದ್ದಿದ್ದರೆ,  ಮೋದಿಯ ನಿಲುವು ಮತ್ತೆ ಚರ್ಚೆಗೊಳಗಾಗುತ್ತಿತ್ತು.
ಈ ಚರ್ಚೆ ಪ್ರಧಾನಿ ಅಭ್ಯರ್ಥಿಯಾಗುವುದನ್ನು ತಪ್ಪಿಸುವುದಕ್ಕೆ ಧಾರಾಳ ಸಾಕಿತ್ತು. ಮೋದಿಯ ವಿರುದ್ಧ ತಂತ್ರ ಹೆಣೆಯುತ್ತಿರುವ ನಾಯಕರಿಗೆ ಇನ್ನೊಂದು ಅಸ್ತ್ರ ಸಿಕ್ಕಿದಂತಾಗುತ್ತಿತ್ತು. ಹಾಗೆಯೇ ಅಂಗೀಕಾರ ನೀಡುವುದು ಕೂಡ ಅಷ್ಟು ಸುಲಭವಲ್ಲ. ಯಾಕೆಂದರೆ, ಮಾಯಾ ಕೊಡ್ನಾನಿ ಹತ್ಯಾಕಾಂಡದ ಸಂದರ್ಭದಲ್ಲಿ ಮೋದಿ ಸರಕಾರದಲ್ಲಿದ್ದರು. ಬಾಬುಬಜರಂಗಿ ಕೂಡ ಮೋದಿ ಸರಕಾರದ ಭಾಗವೇ ಆಗಿದ್ದರು. ಹೀಗಿರುವಾಗ, ಮಾಯಾ ಕೊಡ್ನಾನಿಗೆ ಮರಣ ದಂಡನೆ ನೀಡುವುದೆಂದರೆ, ಪರೋಕ್ಷವಾಗಿ ತನ್ನ ಸರಕಾರದ ತಪ್ಪನ್ನು ಒಪ್ಪಿಕೊಂಡಂತೆಯೇ ಸರಿ. ನಿಜಕ್ಕೂ ಮೋದಿಯ ಪಾಲಿಗೆ ಇದು ಉಭಯ ಸಂಕಟ.
ಆದರೆ ಎಲ್ಲಕ್ಕಿಂತಲೂ ಮುಖ್ಯ ವಾದುದು ಅಧಿಕಾರ. ಪ್ರಧಾನಿ ಅಭ್ಯರ್ಥಿ ಯಾಗುವ ಒಂದೇ ಒಂದು ದೃಷ್ಟಿಯಿಂದ ಮೋದಿ, ಸಿಟ್ ಬೇಡಿಕೆಗೆ ಸಮ್ಮತಿಯನ್ನು ನೀಡಿದ್ದಾರೆ. ಈ ಮೂಲಕ, ಗುಜರಾತ್ ಹತ್ಯಾಕಾಂಡದ ಮೂಲಕ ತನ್ನನ್ನು ‘ರಾಷ್ಟ್ರದ ನಾಯಕ’ನಾಗಿಸಿದವರನ್ನು ಅರ್ಧದಲ್ಲೇ ಕೈ ಬಿಟ್ಟಿದ್ದಾರೆ.ನರೇಂದ್ರ ಮೋದಿ ಸರಕಾರ ಸಮ್ಮತಿ ನೀಡಿದಾಕ್ಷಣ ಕೊಡ್ನಾನಿಗೆ ಮರಣದಂಡನೆ ಯಾಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಹಾಗೆಯೇ ಈ ನಿರ್ಣಯದಿಂದ ಮೋದಿ ಕ್ಲೀನ್ ಚಿಟ್ ಪಡೆದರು ಎನ್ನುವುದು ಕೂಡ ಅಷ್ಟೇ ಹಾಸ್ಯಾಸ್ಪದ. ಯಾಕೆಂದರೆ, ನರೇಂದ್ರ ಮೋದಿಗೆ ಗುಜರಾತ್ ಹತ್ಯಾಕಾಂಡದ ಕುರಿತಂತೆ ಒಂದಿಷ್ಟು ವಿಷಾದವಿದ್ದಿದ್ದರೂ, ಅವರು ಅಮಿತ್ ಶಾರನ್ನು ದೂರವಿರಿಸುತ್ತಿದ್ದರು. ತನ್ನ ಆಪ್ತನೂ, ಹತ್ಯಾಕಾಂಡದ ಮುಖ್ಯ ರೂವಾರಿಯೂ ಆಗಿರುವ, ಈಗಾಗಲೇ ಹಲವು ಬಾರಿ ವಿಚಾರಣೆಗೂ ಒಳಗಾಗಿರುವ ಅಮಿತ್ ಶಾರನ್ನು ಕರೆದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಕುರ್ಚಿಯಲ್ಲಿ ಕೂರಿಸುತ್ತಿರಲಿಲ್ಲ. ಒಂದೆಡೆ ಕೊಡ್ನಾನಿಗೆ ಮರಣದಂಡನೆ, ಅಮಿತ್ ಶಾರಿಗೆ ಬಿಜೆಪಿಯ ವರಿಷ್ಠ ಪಟ್ಟ. ಇದು ವಿರೋಧಾಭಾಸವಲ್ಲದೆ ಇನ್ನೇನು?
ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಸ್ವತಃ ಮರಣದಂಡನೆ ಶಿಕ್ಷೆಗೆ ಅರ್ಹತೆಯುಳ್ಳವರು ನರೇಂದ್ರ ಮೋದಿ. ಕೊಡ್ನಾನಿ ಮತ್ತು ಬಳಗವನ್ನು ಬಲಿಕೊಡುವ ಮೂಲಕ ಇವರು ಯಾವ ಕಾರಣಕ್ಕೂ ಶಿಕ್ಷೆಯಿಂದಾಗಲಿ, ಕಳಂಕದಿಂದಾಗಲಿ ಮುಕ್ತರಾಗುವುದಿಲ್ಲ. ಕಾನೂನಿನ ಕೈ ನೀಳವಾದುದು ಎಂಬ ಮಾತಿದೆ. ಆ ನೀಳ ಒಂದಲ್ಲ ಒಂದು ದಿನ ನರೇಂದ್ರ ಮೋದಿಯ ಕತ್ತಿಗೆ ಸುತ್ತುವರಿಯುತ್ತದೆ ಎನ್ನುವ ನಿರೀಕ್ಷೆ ಈ ದೇಶದ ಪ್ರಜಾಸತ್ತೆಯ ಮೇಲೆ ನಂಬಿಕೆಯಿರುವ ಎಲ್ಲರದು. ಅದು ಆದಷ್ಟು ಬೇಗ ನಿಜವಾಗಲಿ. ಕೊಡ್ನಾನಿಯ ಜೊತೆ ಜೊತೆಗೆ ಅಮಿತ್‌ಶಾ, ನರೇಂದ್ರ ಮೋದಿಯೂ ಗಲ್ಲಿಗೇರುವಂತಾಗಲಿ. 

No comments:

Post a Comment