Monday, April 1, 2013

ಕೇರಳದಿಂದ ಗಲ್ಫ್ ವಲಸೆಯಲ್ಲಿ ಇಳಿಮುಖ



ಏಪ್ರಿಲ್ -01-2013

ತಿರುವನಂತಪುರ,: ಸೌದಿ ಆರೇಬಿಯದ ನೂತನ ಕಾರ್ಮಿಕ ನೀತಿಯಿಂದಾಗಿ ಅಲ್ಲಿ ನೆಲೆಸಿರುವ ಸಹಸ್ರಾರು ಕೇರಳೀಯರು ಉದ್ಯೋಗ ಕಳೆದುಕೊಳ್ಳುವರೆಂಬ ಆತಂಕವುಂಟಾಗಿರುವಂತೆಯೇ, ಇತ್ತೀಚಿನ ವರ್ಷಗಳಲ್ಲಿ ಆ ರಾಜ್ಯದಿಂದ ಗಲ್ಫ್ ರಾಷ್ಟ್ರಗಳಿಗೆ ವಲಸೆಹೋಗುವವರ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆಯೆಂದು ಅಧ್ಯಯನ ವರದಿಯೊಂದು ತಿಳಿಸಿದೆ.
2011ರಲ್ಲಿ ವಿದೇಶದಲ್ಲಿ ನೆಲೆಸಿರುವ ಕೇರಳೀಯರ ಸಂಖ್ಯೆ 20.28 ಲಕ್ಷವೆಂದು ಅಂದಾಜಿಸಲಾಗಿದೆ. 2008ರಲ್ಲಿ 20.19 ಲಕ್ಷ ಕೇರಳೀಯರ ವಿದೇಶದಲ್ಲಿ ವಾಸವಾಗಿದ್ದರೆ. ಹಾಗೆಯೇ 2003ರಲ್ಲಿ 18 ಲಕ್ಷ ಹಾಗೂ 1998ರಲ್ಲಿ 13.60 ಲಕ್ಷ ಕೇರಳೀಯರು ವಿದೇಶದಲ್ಲಿ ವಾಸಿಸುತ್ತಿದ್ದರು.
ಈ ನಾಲ್ಕು ಸಮೀಕ್ಷೆಯ ಅವಧಿಯಲ್ಲಿ ವಿದೇಶಗಳಿಗೆ ವಲಸೆ ಹೋಗುವ ಕೇರಳೀಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದರೂ, ಇದೀಗ ಅದು ಇಳಿಮುಖವಾಗತೊಡಗಿದೆಯೆಂದು ತಿರುವನಂತಪುರದ ಅಭಿವೃದ್ಧಿ ಅಧ್ಯಯನ ಕೇಂದ್ರದ ಕೆ.ಸಿ. ಝಕಾರಿಯಾ ಹಾಗೂ ಎಸ್. ಹೃದಯ ರಾಜನ್ ನೇತೃತ್ವದಲ್ಲಿ ನಡೆದ ಸಮೀಕ್ಷಾ ವರದಿ ತಿಳಿಸಿದೆ.
‘‘ಭವಿಷ್ಯದಲ್ಲಿ ಕೇರಳದಿಂದ ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುವ ನೋಟವು ಕಾಣಸಿಗದು’’ ಎಂದು ಹೃದಯ ರಾಜನ್ ಅಭಿಪ್ರಾಯಿಸಿದ್ದಾರೆ. ಸೌದಿ ಆರೇಬಿಯದಲ್ಲಿನ ಬೆಳವಣಿಗೆಯು ಕೇರಳದ ಮೇಲೆ ಯಾವ ರೀತಿ ಪರಿಣಾಮ ಬೀರುವುದೆಂಬುದನ್ನು ತಿಳಿಯಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆಯೆಂದು ಅವರು ಹೇಳಿದ್ದಾರೆ. ಪ್ರಾಯಶಃ ಸೌದಿಯ ನೂತನ ಕಾರ್ಮಿಕ ಕಾನೂನಿಂದಾಗಿ ಮುಂಬರುವ ದಿನಗಳಲ್ಲಿ ಕೇರಳದಿಂದ ವಲಸೆಯ ಪ್ರಮಾಣ ಇನ್ನಷ್ಟು ಇಳಿಮುಖಗೊಳ್ಳಲಿದೆಯೆಂದು ಅವರು ಹೇಳಿದ್ದಾರೆ.
ಗಲ್ಫ್ ರಾಷ್ಟ್ರಗಳ ಜೊತೆ ಕೇರಳದ ನಂಟು ಮುಂದಿನ ನಾಲ್ಕೈದು ವರ್ಷಗಳಲ್ಲಿ ಅತ್ಯಧಿಕ ಕುಸಿತವನ್ನು ಕಾಣಲಿದೆಯೆಂದು ರಾಜನ್ ಭವಿಷ್ಯ ನುಡಿದಿದ್ದಾರೆ. 2015ರ ವೇಳೆಗೆ ಕೇರಳದಿಂದ ಗಲ್ಫ್‌ಗೆ ವಲಸೆ ಹೋಗುವ ಪ್ರವೃತ್ತಿಯ ಹೆಚ್ಚುಕಮ್ಮಿ ನಿಂತುಹೋಗಲಿದೆಯೆಂದು ಅವರು ಹೇಳಿದ್ದಾರೆ.

No comments:

Post a Comment