Tuesday, April 16, 2013

ಮೋದಿಯ ಹರಿದ ಗಾಳಿಪಟಮಂಗಳವಾರ - ಏಪ್ರಿಲ್ -16-2013

ನರೇಂದ್ರಮೋದಿ ಮತ್ತು ಅವರ ಬಳಗ ಗಾಳಿಯಲ್ಲಿ ಹಾರಿ ಬಿಟ್ಟ ‘ಪ್ರಧಾನಿ ಅಭ್ಯರ್ಥಿ’ ಎಂಬ ಗಾಳಿಪಟದ ದಾರವನ್ನು ಬಿಜೆಪಿ ಯೊಳಗಿನ ಅವರ ವಿರೋಧಿಗಳು ಭಾಗಶಃ ಕಡಿದು ಹಾಕಿದ್ದಾರೆ. ಮೊನ್ನೆಯವರೆಗೂ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಾ, ರಾಹುಲ್‌ಗಾಂಧಿಯ ಮೇಲೆ ಹರಿಹಾಯುತ್ತಿದ್ದ ನರೇಂದ್ರ ಮೋದಿ ಒಮ್ಮಿಂದೊಮ್ಮೆಗೆ ಬಾಯಿ ಮುಚ್ಚಿ ಕೂತಿದ್ದಾರೆ. ಇನ್ನೇನು ಬಿಜೆಪಿಯ ಅನಭಿಷಿಕ್ತ ನಾಯಕನಾಗಿ ಬಿಂಬಿತನಾಗಬೇಕು ಎನ್ನುವಾಗಲೇ ಜೆಡಿಯು ಮೋದಿಯ ವಿರುದ್ಧ ತನ್ನ ಆಕ್ಷೇಪವನ್ನು ಎತ್ತಿದೆ. ಗುಜರಾತ್ ಹತ್ಯಾಕಾಂಡವನ್ನು ತಡೆಯುವಲ್ಲಿ ವಿಫಲರಾಗಿರುವ ನರೇಂದ್ರ ಮೋದಿ ಒಬ್ಬ ವಿಫಲ ಮುಖ್ಯಮಂತ್ರಿ ಎಂದು ಕರೆದಿರುವ ಜೆಡಿಯು, ಅವರು ಪ್ರಧಾನಿ ಅಭ್ಯರ್ಥಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ಈ ಪ್ರಶ್ನೆ ನಿಜಕ್ಕೂ ಯೋಗ್ಯವಾದುದೇ. ಇನ್ನುಳಿದಂತೆ ಗುಜರಾತ್ ಅಭಿವೃದ್ಧಿಯಾಗಿದೆ ಎಂಬ ಭ್ರಮೆಯನ್ನು ಮುಂದಿಟ್ಟುಕೊಂಡು ಕೆಲವು ಹಿತಾಸಕ್ತಿಗಳು, ಕಾರ್ಪೊರೇಟ್ ವಲಯ ಮತ್ತು ಮಾಧ್ಯಮ ಮೋದಿಯನ್ನು ಪ್ರಧಾನಿಯನ್ನಾಗಿಸಲು ಹೊರಟಿದೆ. ಆದರೆ ಗುಜರಾತ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಕತೆಯೇನು ಎನ್ನುವುದು ಒಂದೊಂದಾಗಿ ಹೊರ ಬೀಳುತ್ತಿದೆ.
ಬರಗಾಲದಿಂದ ಗುಜರಾತ್ ತತ್ತರಿಸಿದೆ. ಸಹಸ್ರಾರು ಹಳ್ಳಿಗಳು ಕುಡಿಯುವ ನೀರಿಗಾಗಿ ಒದ್ದಾಡುತ್ತಿವೆ. ಒಂದೆಡೆ ನರ್ಮದಾ ನದಿಯ ನೀರನ್ನು ದಲಿತರಿಗೆ ಮುಟ್ಟಲು ಅವಕಾಶ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹೊರಗಿನ ಉದ್ಯಮಿಗಳಿಗೆ ಗುಜರಾತ್‌ನ್ನು ಹರಾಜಿಗಿಟ್ಟು, ಮೋದಿ ಅಭಿವೃದ್ಧಿಯ ಭ್ರಮೆಯನ್ನು ಸೃಷ್ಟಿಸುತ್ತಿದ್ದಾರೆ. ಇಂತಹ ಅಭಿವೃದ್ಧಿ ಈ ದೇಶಕ್ಕೆ ಮಾದರಿಯಲ್ಲ ಎನ್ನುವುದನ್ನು ನಿತೀಶ್ ಕುಮಾರ್ ಇತ್ತೀಚೆಗೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಳಮಟ್ಟದಿಂದ ಬಿಹಾರವನ್ನು ಮೇಲೆತ್ತಲು ನಾನು ನಡೆಸುತ್ತಿರುವ ಹೋರಾಟವೇ ದೇಶಕ್ಕೆ ಮಾದರಿ ಎನ್ನುವ ಮೂಲಕ ನರೇಂದ್ರ ಮೋದಿ ಅಭಿವೃದ್ಧಿಗೆ ಸವಾಲು ಹಾಕಿದ್ದಾರೆ.ನಿತೀಶ್ ಮಾತಿನಲ್ಲಿ ಸತ್ಯ ಇದೆ. ಇದು ಕೇವಲ ಬಿಹಾರಕ್ಕೆ ಮಾತ್ರ ಸೀಮಿತವಾಗುವ ಮಾತಲ್ಲ. ಇಡೀ ದೇಶಕ್ಕೆ ಅನ್ವಯವಾಗುವ ಮಾತು. ಕೆಲವು ಬೃಹತ್ ಉದ್ದಿಮೆದಾರರು ರೈತರ ಭೂಮಿಯನ್ನು ವಶಪಡಿಸಿಕೊಂಡು ಅಲ್ಲಿ ಬೃಹತ್ ಉದ್ದಿಮೆಗಳನ್ನು ಆರಂಭಿಸಿದಾಕ್ಷಣ ದೇಶ ಉದ್ಧಾರವಾಗುತ್ತದೆ ಎನ್ನುವ ಭ್ರಮೆ ಕಳಚಿ ಬಿದ್ದಿದೆ. ದೇಶದಲ್ಲಿ ಬಡವರು ಇನ್ನಷ್ಟು ಬಡವರಾಗಿದ್ದಾರೆ. ಉಗ್ರವಾದ ತೀವ್ರವಾಗಿದೆ.
ಈಶಾನ್ಯ ಭಾಗ ಭಾರತದಿಂದ ಕಳಚುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಒಂದು ಮಾತನ್ನು ಉದ್ದಿಮೆದಾರರಿಗೆ ಹೇಳಿದ್ದರು. ‘‘ಪರಕೀಯತೆಯನ್ನು ಸೃಷ್ಟಿಸುವುದರಿಂದ, ದೇಶದಲ್ಲಿ ಭೇದವನ್ನು ಬಿತ್ತುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ’’. ಇದೂ ಕೂಡ ಮೋದಿಯನ್ನು ಉದ್ದೇಶಿಯೇ ಆಡಿದ ಮಾತು. ಯಾವ ದೇಶ ಹಿಂಸೆ, ಕೋಮುಗಲಭೆಯಿಂದ ತತ್ತರಿಸುತ್ತದೆಯೋ ಆ ದೇಶದಲ್ಲಿ ಅಭಿವೃದ್ಧಿ ಸಾಧ್ಯವೇ ಇಲ್ಲ.
ಕೋಮುಗಲಭೆಯ ಮೂಲಕವೇ ಮೋದಿ ಗುಜರಾತಿನ ನಾಯಕರಾದರು. ಆ ಮೂಲಕವೇ ಅವರು ದೇಶದಲ್ಲಿ ಜನಪ್ರಿಯರಾದರು.ಇಂತಹ ನಾಯಕನಿಗೆ ಇಡೀ ದೇಶವನ್ನು ಒಂದಾಗಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ವಿಶೇಷವೆಂದರೆ, ಜೆಡಿಯು ಮತ್ತು ಕಾಂಗ್ರೆಸ್‌ನ ಮಾತುಗಳನ್ನು ಸ್ವತಃ ಬಿಜೆಪಿಯೇ ಅನುಮೋದಿಸುತ್ತಿದೆ. ಅಲ್ಲಿಯೂ ಮೋದಿಯ ವಿರುದ್ಧ ಅಸಮಾಧಾನ ತೀವ್ರವಾಗಿದೆ.
ಈ ಅಸಮಾಧಾನವನ್ನು ಯಾರೋ ಸಣ್ಣ ಪುಟ್ಟ ನಾಯಕರು ವ್ಯಕ್ತಪಡಿಸಿದ್ದಿದ್ದರೆ ಅದನ್ನು ನಿರ್ಲಕ್ಷಿಸಬಹುದಿತ್ತು. ಮೋದಿಯನ್ನು ವಿರೋಧಿಸುತ್ತಿರುವವರಲ್ಲಿ, ಬಿಜೆಪಿಯ ನಾಯಕ ಎಲ್.ಕೆ.ಅಡ್ವಾಣಿಯವರೇ ಮೊದಲಿಗರಾಗಿ ನಿಂತಿದ್ದಾರೆ. ಇಂದು ಇಡೀ ಬಿಜೆಪಿ ಮೋದಿ ಮತ್ತು ಅಡ್ವಾಣಿಯಾಗಿ ಒಡೆದಿದೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಿರಿಯರೆಲ್ಲ ಅಡ್ವಾಣಿಯ ಹಿಂದೆ ನಿಂತಿದ್ದಾರೆ. ಆರೆಸ್ಸೆಸ್ ಕೂಡ ಪರೋಕ್ಷವಾಗಿ ನರೇಂದ್ರ ಮೋದಿಯನ್ನು ವಿರೋಧಿಸುತ್ತಿದೆ. ನೇರವಾಗಿ ಮೋದಿಯನ್ನು ತಿರಸ್ಕರಿಸಲಾಗದೆ ಚಡಪಡಿಸುತ್ತಿದೆ. ಇದೆಲ್ಲದರ ಪರಿಣಾಮವಾಗಿ ರಾಜ್‌ನಾಥ್ ಸಿಂಗ್ ತನ್ನ ರಾಗವನ್ನು ಬದಲಿಸಿದ್ದಾರೆ.
ಈ ವರೆಗೆ ನರೇಂದ್ರ ಮೋದಿಯೇ ಪ್ರಧಾನಮಂತ್ರಿ ಎಂದು ಹೇಳಿ ಓಡಾಡು ತ್ತಿದ್ದವರು ರವಿವಾರ ಏಕಾಏಕಿ ತನ್ನ ಮಾತನ್ನು ಹಿಂದೆಗೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಯಾರು ಎನ್ನುವುದು ಈವರೆಗೆ ನಿರ್ಣಯವಾಗಿಲ್ಲ ಎಂದು ಹೇಳಿರುವ ಅವರು, ಅದನ್ನು ಪಕ್ಷದ ಸಂಸದೀಯ ಸಮಿತಿ ನಿರ್ಧರಿಸುತ್ತದೆ ಎಂದಿದ್ದಾರೆ. ಇದು ಮೋದಿಗೆ ಬಿಜೆಪಿ ನೀಡಿ ರುವ ಬಹುದೊಡ್ಡ ಆಘಾತವಾಗಿದೆ. ಇದರ ನಂತರ ಮೋದಿ  ಬಾಯಿ ಮುಚ್ಚಿ ತೆಪ್ಪಗೆ ಕೂತಿದ್ದಾರೆ. ಕರ್ನಾಟಕಕ್ಕೆ ಪ್ರಚಾರಕ್ಕೆ ಆಗಮಿಸುವ ಅವರ ನಡೆಯ ಕುರಿತೂ ಅನುಮಾನವಿದೆ.
ಸೋಮವಾರ ಯಶವಂತ ಸಿನ್ಹಾ ಅವರು ಅಡ್ವಾಣಿಗೆ ತನ್ನ ಬೆಂಬಲವನ್ನು ಸೂಚಿಸಿದ್ದಾರೆ. ಬಿಜೆಪಿ ಮತ್ತು ಜೆಡಿಯು ನಡುವಿನ ಭಿನ್ನಮತ ಪರಿಹಾರವಾಗಬೇಕಾದರೆ, ಅಡ್ವಾಣಿಯನ್ನೇ ಪ್ರಧಾನಿಯನ್ನಾಗಿಸಬೇಕು ಎನ್ನುವುದು ಅವರ ಆಗ್ರಹವಾಗಿದೆ. ಈ ಮೂಲಕ ಮೋದಿ ಮತ್ತು ಅಡ್ವಾಣಿಯ ನಡುವಿನ ತೆರೆಮರೆಯ ಹಗ್ಗಜಗ್ಗಾಟ ಬೀದಿಗೆ ಬಿದ್ದಿದೆ. ಈ ಹಗ್ಗಜಗ್ಗಾಟದ ಪರಿಣಾಮ ರಾಜ್ಯ ಬಿಜೆಪಿಯ ಮೇಲೆ ನೇರವಾಗಿ ಬಿದ್ದಿದೆ.
ರಾಜ್ಯದ ಚುನಾವಣಾ ಪ್ರಚಾರಕ್ಕೆ ಆಗಮಿಸದೇ ಇರಲು ಅಡ್ವಾಣಿ ಈಗಾಗಲೇ ನಿರ್ಧರಿಸಿದ್ದಾರೆ. ಹಾಗೆಯೇ ಮೋದಿ ಕೂಡ, ದಿಲ್ಲಿ ವರಿಷ್ಠರ ಮೇಲಿನ ಅಸಮಾಧಾನದಿಂದ ಕರ್ನಾಟಕಕ್ಕೆ ಪ್ರಚಾರಕ್ಕಾಗಿ ಕಾಲಿಡಲು ಹಿಂಜರಿಯುತ್ತಿದ್ದಾರೆ. ಇದರಿಂದ ಈಗಾಗಲೇ ಸಾಕಷ್ಟು ಕುಗ್ಗಿ ಹೋಗಿರುವ ರಾಜ್ಯ ಬಿಜೆಪಿ ಇನ್ನಷ್ಟು ಕುಗ್ಗಲಿದೆ. ಒಟ್ಟಿನಲ್ಲಿ, ಬಿಜೆಪಿ ರಾಜ್ಯದಲ್ಲೂ, ರಾಷ್ಟ್ರದಲ್ಲೂ ಗೊಂದಲದಲ್ಲಿದೆ. ಇದೇ ಸಂದರ್ಭದಲ್ಲಿ ರಾಹುಲ್‌ಗಾಂಧಿ ತನ್ನ ತಾಜಾ ಮಾತುಗಳಿಂದ ಯುವಕರನ್ನು ಸೆಳೆಯುತ್ತಿರುವುದು ಗಮನಾರ್ಹವಾಗಿದೆ.        
    ಕೃಪೆ.ವಾ.ಭಾರತಿ                                   

No comments:

Post a Comment