Wednesday, April 24, 2013

ಸ್ಫೋಟದ ಹಿಂದಿನ ರಾತ್ರಿ ಆಟೋರಾಜ ಕಂಡಿದ್ದೇನು?

  ಬೆಂಗಳೂರು, ಎ.24: ಮಲ್ಲೇಶ್ವರಂ ಸ್ಫೋಟ ಪ್ರಕರಣದಲ್ಲಿ ಉಗ್ರರ ಬೆನ್ನುಹತ್ತಲು ಮಹತ್ವದ ಸುಳಿವು ನೀಡಿ, ಪೊಲೀಸರಿಗೆ ನೆರವಾಗಿರುವುದು ಒಬ್ಬ ಆಟೋ ಚಾಲಕ. ಆದರೆ ಭದ್ರತೆ ಮತ್ತು ತನಿಖೆ ಸುಗಮವಾಗಿ ನಡೆಯಲೆಂಬ ಕಾರಣಕ್ಕೆ ಪೊಲೀಸರು ಆಟೋದಾರನ ಹೆಸರು, ವಿಳಾಸ ಬಹಿರಂಗಪಡಿಸಿಲ್ಲ. 'ಆಟೋರಾಜ' ಬೈಕ್ ಉಗ್ರರನ್ನು ಗುರ್ತಿಸಿದ್ದು ಹೇಗೆ?: ಸ್ಫೋಟ ಸಂಭವಿಸಿದ ಹಿಂದಿನ ರಾತ್ರಿ ನಾಲ್ವರು ಬಂದು ತಮಿಳುನಾಡು ನೋಂದಣಿ ಸಂಖ್ಯೆಯಿದ್ದ ಬೈಕನ್ನು ನಿಲ್ಲಿಸಿದ್ದನ್ನು 'ಆಟೋರಾಜ' ನೋಡಿದ್ದಾನೆ. ರಾತ್ರಿ ವೇಳೆ ಆಟೋ ಓಡಿಸುತ್ತಿದ್ದ 'ಆಟೋರಾಜ' ಅಂದು ಪ್ರಯಾಣಿಕರು ಸಿಗದ ಕಾರಣ ಬಿಜೆಪಿ ಕಚೇರಿ ಎದುರು ಆಟೋ ನಿಲ್ಲಿಸಿಕೊಂಡು ಮಲಗಿದ್ದರು. ಆದರೆ ಅವರಿಗೆ ನಿದ್ರೆ ಹತ್ತಿರಲಿಲ್ಲ. ಆ ವೇಳೆಯಲ್ಲಿ 4 ಮಂದಿ ಬಂದು ಬೈಕ್ ನಿಲ್ಲಿಸಿದ್ದನ್ನು ಕಂಡಿದ್ದಾರೆ. ಅಲ್ಲದೆ ಆ ನಾಲ್ವರೂ ಮೊಬೈಲುಗಳ ಮೂಲಕ ಸಂಭಾಷಣೆ ನಡೆಸಿದ್ದನ್ನು ಕೇಳಿಸಿಕೊಂಡಿದ್ದಾರಾದರೂ ಬಾಷೆ ಅರ್ಥವಾಗದೆ ಸುಮ್ಮನಾಗಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿದ್ದ ಆ ನಾಲ್ವರು ಅಲ್ಲಿಂದ ತೆರಳಿದ್ದಾರೆ. ಮುಂಜಾಣೆ 5.30ರಲ್ಲಿ 'ಆಟೋರಾಜ' ಮನೆಗೆ ತೆರಳಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಾಂಬ್ ಸ್ಫೋಟದ ಸುದ್ದಿ ಇವರ ಕಿವಿಗೆ ಬಿದ್ದಿದೆ. ಆಗ ಕಣ್ಣಗಲಿಸಿಕೊಂಡು ಹಿಂದಿನ ರಾತ್ರಿ ಕಂಡಿದ್ದ ದೃಶ್ಯಗಳನ್ನು ಮೆಲುಕು ಹಾಕಿದ್ದಾರೆ. ತಡಮಾಡದೆ ಸೀದಾ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಅವರ ಕಚೇರಿಗೆ ಧಾವಿಸಿದ್ದಾರೆ. ರಾತ್ರಿ ಕಂಡಿದ್ದನ್ನು 'ಆಟೋರಾಜ' ಸಾದ್ಯಂತವಾಗಿ ವಿವರಿಸಿದ್ದಾನೆ. ಪೊಲೀಸರಿಗೆ ಅಷ್ಟು ಸಾಕಾಗಿತ್ತು. ಕ್ಷಿಪ್ರ ಕಾರ್ಚಾರಣೆಗಿಳಿದ ಬೆಂಗಳೂರು ಪೊಲೀಸರು 'ಆಟೋರಾಜ' ನೀಡಿದ್ದ ಮಾಹಿತಿ ಮೇರೆಗೆ ಮಲ್ಲೇಶ್ವರದ ಮೊಬೈಲ್ ಟವರ್ ಮೂಲಕ ರಾತ್ರಿ ವೇಳೆ ಹೊರ ಹೋದ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ ಅವು ಕೇರಳಕ್ಕೆ ಹೋಗಿರುವುದು ಖಚಿತಪಟ್ಟಿದೆ. ಆ ಕರೆಗಳ ಜಾಡು ಹಿಡಿದು ಕೇರಳಕ್ಕೆ ಹೋದ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದಾಗ ಅವರು ತಮಿಳುನಾಡಿನತ್ತ ಬೊಟ್ಟು ಮಾಡಿದ್ದರು. ತಮಿಳುನಾಡಿನಲ್ಲೂ ಕಾರ್ಯಾಚರಣೆಗೆ ಮುಂದಾದ ಬೆಂಗಳೂರು ಪೊಲೀಸರು ಮೂವರನ್ನು ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದಾರೆ. ತಮಿಳುನಾಡಿನಿಂದ ಕರೆತಂದ ಉಗ್ರರನ್ನು ಸದರಿ 'ಆಟೋರಾಜ'ನ ಮುಂದೆ ಪೆರೇಡ್ ಮಾಡಿಸಿದಾಗ ಆತ ಉಗ್ರರನ್ನು ಗುರುತಿಸಿದ್ದಾರೆ. ಬಾಂಬ್ ಇದ್ದ ಬೈಕನ್ನು ಇವರೇ ತಂದು ಇಟ್ಟಿದ್ದಾಗಿ ಖಚಿತಪಡಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ. ಈ ಮಧ್ಯೆ, ಸ್ಫೋಟದ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಅದರಂತೆ ಪೊಲೀಸರು 'ಆಟೋರಾಜ'ನಿಗೆ ಬಹುಮಾನ ನೀಡಲು ಮುಂದಾದರು. ಶ್ಲಾಘನೀಯವೆಂದರೆ ಹೀಗೆ ಉಗ್ರರ ಪತ್ತೆಗೆ ಸಹಕರಿಸಿದ 'ಆಟೋರಾಜ' ಬಹುಮಾನ ಬೇಡ. ಆ ಹಣವನ್ನು ಸ್ಫೋಟದಿಂದ ಗಾಯಗೊಂಡವರ ಚಿಕಿತ್ಸೆಗೆ ಬಳಸಿ ಎಂದು ಪೊಲೀಸರಿಗೆ ತಿಳಿಸಿ, ಮಾನವೀಯತೆ ಮೆರೆದಿದ್ದಾನೆ

ಕೃಪೆ :ವನ್ ಇಂಡಿಯಾ 

No comments:

Post a Comment