Sunday, April 14, 2013

ಫ್ಯಾಸಿಸ್ಟ್ ಹಿಂದುತ್ವದ ಗಂಡಾಂತರ ಏಪ್ರಿಲ್ -08-2013                                       Sanath Kumar Belagali 

ದೇಶದ ಋಣ ತೀರಿಸಲು ನರೇಂದ್ರ ಮೋದಿಗೆ ತುರ್ತಾಗಿ ಪ್ರಧಾನಿಯಾಗ ಬೇಕಾಗಿದೆ. ಕೈಕಟ್ಟಿ ಶಿರ ಬಗ್ಗಿಸಿ ತಮ್ಮ ಸೇವೆ ಮಾಡಲು ಮೋದಿಯಂಥ ಗುಲಾಮ ಪ್ರಧಾನಿಯಾಗುವುದು ಕಾರ್ಪೊರೇಟ್ ಕಂಪೆನಿಗಳ ಧಣಿಗಳಿಗೂ ಅವಶ್ಯವಿದೆ. ತನ್ನ ಕನಸಿನ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿರುವ ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಹೂತು ಹಾಕಲು ನರೇಂದ್ರ ಮೋದಿಯೇ ಬೇಕು ಎಂಬುದು ಆರೆಸ್ಸೆಸ್ ಸಹಜ ಆಯ್ಕೆಯಾಗಿದೆ. ಮಿಡಿಯಾಗಳಲ್ಲಿರುವ ವಟುಗಳು ಮತ್ತು ಅವರ ಜುಟ್ಟುಗಳು ಇದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ.ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಒಂಭತ್ತು ವರ್ಷಗಳ ಸುದೀರ್ಘ ಆಡಳಿತ ದಿಂದ ಜನರೋಸಿ ಹೋಗಿದ್ದಾರೆ. ಅದೇ ರೀತಿ ಕರ್ನಾಟಕದಂಥ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಜನ ಇನ್ನಷ್ಟು ರೋಸಿ ಹೋಗಿ ಕಾಂಗ್ರೆಸ್‌ನತ್ತ ಮುಖ ಮಾಡಿ ನಿಂತಿದ್ದಾರೆ.
ಈ ಸನ್ನಿವೇಶವನ್ನು ಉಪಯೋಗಿಸಿಕೊಂಡು ಕೇಂದ್ರದ ಅಧಿಕಾರ ಸೂತ್ರ ಹಿಡಿಯಲು ಫ್ಯಾಸಿಸ್ಟ್ ಕೋಮುವಾದಿ ಶಕ್ತಿಗಳು ಮಸಲತ್ತು ನಡೆಸಿವೆ. ಕಾಂಗ್ರೆಸ್‌ಗೆ ಪರ್ಯಾಯವಾದ ಯಾವುದೇ ಜನಪರ ಕಾರ್ಯಕ್ರಮ ಗಳಿಲ್ಲದಿದ್ದರೂ ಮೋದಿ ಪ್ರಧಾನಿಯಾದರೆ ಸ್ವರ್ಗವೇ ಧರೆಗಿಳಿದು ಬರುತ್ತದೆ ಎಂಬ ಭ್ರಮಾಸಾಗರದಲ್ಲಿ ಜನರನ್ನು ಮುಳುಗಿಸಲಾಗುತ್ತಿದೆ. ಹಿಂದು ಫ್ಯಾಸಿಸ್ಟರು ತಲೆ ಎತ್ತುವ ಅಪಾಯಕಾರಿ ಸೂಚನೆಗಳು ಕಾಣುತ್ತಿವೆ.
ಫ್ಯಾಸಿಸಂ ಅಪಾಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಮತ್ತು ಅದರ ವಿರುದ್ಧ ಹೋರಾಟ ರೂಪಿಸಿದ ಬಲ್ಗೇರಿಯಾದ ಮಾರ್ಕ್ಸ್‌ವಾದಿ ಚಿಂತಕ ಡಿಮಿತ್ರೋವ್ ನಲವತ್ತರ ದಶಕದಲ್ಲೇ ಈ ಗಂಡಾಂತರ ಸ್ವರೂಪದ ಬಗ್ಗೆ ವಿಶ್ಲೇಷಿಸಿದ್ದರು. “ಫ್ಯಾಸಿಸಂ ಎಂಬುದು ಜನರ ಮುಂದೆ ಪ್ರಾಮಾಣಿಕ ಹಾಗೂ ಭ್ರಷ್ಟಚಾರ ರಹಿತ ಸರಕಾರ ನೀಡುವ ಭರವಸೆಯೊಂದಿಗೆ ಬರುತ್ತದೆ. ಆದರೆ ಜನರನ್ನು ಅತ್ಯಂತ ಕೆಟ್ಟದಾದ ಭ್ರಷ್ಟ ಮತ್ತು ಲಂಚ ಕೋರತನದ ವಿಷ ವರ್ತುಲಕ್ಕೆ ಸಿಲುಕಿಸುತ್ತದೆ. ಜನತೆಯ ಭ್ರಮ ನಿರಶನದ ಮನಸ್ಥಿತಿಯೊಂದಿಗೆ ಆಟವಾಡುತ್ತದೆ. ಕಾರ್ಮಿಕರ ಒಂದು ವಿಭಾಗವೂ ಸೇರಿದಂತೆ ಪುಟ್ಟ ಬಂಡವಾಳ ಶಾಹಿ (ಪೇಟಿ ಬೂರ್ಷ್ವಾ) ಸಮೂಹವು ಫ್ಯಾಸಿಸಂನ ಜನಾಂಗ ದ್ವೇಷದ ಸಂಚಿಗೆ ಬಲಿಯಾಗುತ್ತದೆ” ಎಂದು ಡಿಮಿತ್ರೋನ್ ಅಂದೇ ಹೇಳಿದ್ದರು.
ಭಾರತದ ಇಂದಿನ ಸ್ಥಿತಿಯನ್ನು ನೋಡಿ ದಾಗ ಡಿಮಿತ್ರೋನ್ ಮಾತು ನೆನಪಿಗೆ ಬರುತ್ತದೆ. ಜನರನ್ನು ದಾರಿತಪ್ಪಿಸಲು ಒಮ್ಮೆ ತಾನು ಗಾಂಧಿವಾದಿ ಎಂದು ಹೇಳಿಕೊಳ್ಳುತ್ತ, ಇನ್ನೊಮ್ಮೆ ವಿವೇಕಾನಂದರ ಹೆಸರನ್ನು ಉಚ್ಚರಿಸುತ್ತ ಅತ್ಯಂತ ನಾಜೂಕಾಗಿ ಮನುವಾದಿ ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿರುವ ಆರೆಸ್ಸೆಸ್ ಈಗ ಮತ್ತೆ ಉಗ್ರ ಹಿಂದುತ್ವದತ್ತ ಮುಖ ಮಾಡಿದೆ.ರಾಮಜನ್ಮಭೂಮಿ ವೇಷ ಹಾಕಿ ರಕ್ತಪಾತಕ್ಕೆ ಕಾರಣರಾದ ಎಲ್.ಕೆ.ಅಡ್ವಾಣಿ ಸಂಸತ್ತಿನಲ್ಲಿ ಬಿಜೆಪಿ ಸಂಖ್ಯಾಬಲವನ್ನು ಒಂದಂಕಿಯಿಂದ ಎರಡಂಕಿಗೆ ಹೆಚ್ಚಿಸಿ ಮೂರಂಕಿ ಸಮೀಪ ತಂದು ನಿಲ್ಲಿಸಿದ್ದರು. ಇದರ ಫಲವಾಗಿ ವಾಜಪೇಯಿ ಪ್ರಧಾನಿಯಾದರು.
ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಈ ದೇಶಕ್ಕೆ ಹೊಸದೇನನ್ನು ನೀಡಲಿಲ್ಲ. ಆ ಕಾಲದಲ್ಲೇ ರಿಲಯನ್ಸ್ ಕಂಪೆನಿ ಎಜೆಂಟ್ ಪ್ರಮೋದ ಮಹಾಜನ್ ಬಿಎಸ್ಸೆನ್ನೆಲ್ ಎಂಬ ಸರಕಾರಿ ಸ್ವಾಮ್ಯದ ದೂರಸಂಪರ್ಕ ಕೇಂದ್ರದ ವಿನಾಶಕ್ಕೆ ಅಡಿಪಾಯ ಹಾಕಿದರು. ಜಾಗತೀಕರಣದ ದೇಶವಿರೋಧಿ ಒಪ್ಪಂದಗಳಿಗೆ ಆ ಕಾಲದಲ್ಲೇ ಸಹಿ ಹಾಕಲಾಯಿತು. ದೇಶದ ರೈತರನ್ನು ನೇಣಿಗೇರಿಸುವ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲೇ ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮಗೊಳಿಸಿ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲಾಯಿತು.
ವಾಜಪೇಯಿಗೆ ಮುನ್ನ 1977ರಲ್ಲಿ ವೊರಾರ್ಜಿ ದೇಸಾಯಿ, ಎಂಬತ್ತರ ದಶಕದ ಕೊನೆಯಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಲು ಬಿಜೆಪಿ ಬೆಂಬಲ ನೀಡಿದರೂ ಆರೆಸ್ಸೆಸ್ ತನ್ನ ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ಆ ಕಾಲದಲ್ಲೇ ಜಾರಿಗೆ ತರಲು ಮುಂದಾಯಿತು. ಶಾಲಾಪಠ್ಯ ಪುಸ್ತಕಗಳ ಕೇಸರೀಕರಣ ಆ ಕಾಲದಲ್ಲೇ ಆರಂಭವಾಯಿತು. ವಿ.ಪಿ.ಸಿಂಗ್ ಸರಕಾರಕ್ಕೆ ಬಲಪಂಥೀಯ ಬಿಜೆಪಿ, ಎಡಪಂಥೀಯ ಕಮ್ಯುನಿಸ್ಟರು ಆಸರೆಯಾಗಿ ನಿಂತಿದ್ದರೂ ಅಂತಿಮವಾಗಿ ಇದರ ರಾಜಕೀಯ ಲಾಭವಾಗಿದ್ದು ಸಂಘ ಪರಿವಾರಕ್ಕೆ.
ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ವಿರುದ್ಧದ ಹೋರಾಟ ಧರಣಿಗಳಲ್ಲಿ ಬಿಜೆಪಿಯ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಜೊತೆಗೆ ಕಮ್ಯುನಿಸ್ಟ್ ನಾಯಕರಾದ ಎ.ಬಿ.ಬರ್ದನ್, ಸೀತಾರಾಮ್ ಯೆಚೂರಿ ಕಾಣಿಸಿಕೊಂಡಾಗ ಒವ್ಮೊಮ್ಮೆ ತುಂಬ ಆಘಾತವಾಗುತ್ತದೆ. ಹಿಂದಿನ ತಪ್ಪುಗಳಿಂದ ಕಮ್ಯುನಿಸ್ಟ್ ಗೆಳೆಯರು ಪಾಠ ಕಲಿತಿಲ್ಲವೆ? ಮತ್ತೇಕೆ ಈ ಫ್ಯಾಸಿಸ್ಟ್ ರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ? ಎಂದು ಒವ್ಮೊಮ್ಮೆ ಆತಂಕ ಉಂಟಾಗುತ್ತದೆ.
ಕಾಂಗ್ರೆಸ್ಸಿನ ಆರ್ಥಿಕ ನೀತಿಗೆ ಬಿಜೆಪಿ ಬಳಿ ಪರ್ಯಾಯವಾದ ಯಾವುದೇ ಆರ್ಥಿಕ ನೀತಿ ಧೋರಣೆಗಳಿಲ್ಲ. ಎರಡೂ ಪಕ್ಷಗಳೂ ಲಜ್ಜೆಗೆಟ್ಟು ಬಹುರಾಷ್ಟ್ರೀಯ ಬಂಡವಾಳ ಶಾಹಿ ಕಂಪೆನಿಗಳ ಸೇವೆಗೆ ನಿಂತಿವೆ. ಭ್ರಷ್ಟಾಚಾರ ಎರಡೂ ಪಕ್ಷಗಳಲ್ಲಿ ತಾಂಡವ ವಾಡುತ್ತದೆ. ಲಕ್ಷಾಂತರ ಕೋಟಿ ರೂಪಾಯಿಗಳ 2ಜಿ ಹಗರಣದ ಬಗ್ಗೆ ಮಾತನಾಡುವ ಬಿಜೆಪಿಯ ಅನಂತಕುಮಾರ ಮುಂತಾದ ವರು ನೀರಾ ರಾಡಿಯಾರಂಥ ಕಾರ್ಪೊ ರೇಟ್ ದಲ್ಲಾಳಿಗಳ ಕಿಂಕರರಾಗಿದ್ದಾರೆ.
ಹೀಗೆ ಪರ್ಯಾಯ ಕಾರ್ಯಕ್ರಮ ಗಳಿಲ್ಲದ ಬಿಜೆಪಿ ಬಳಿ ಇರುವ ಕಾಂಗ್ರೆಸ್‌ಗೆ ಭಿನ್ನವಾದ ಸಿದ್ಧಾಂತವೆಂದರೆ ಫ್ಯಾಸಿಸ್ಟ್ ಹಿಂದುತ್ವ. ಅಂತಲೆ 2014ರ ಲೋಕಸಭಾ ಚುನಾವಣೆಯಲ್ಲಿ ಉಗ್ರ ಹಿಂದುತ್ವದ ಮೂಲಕ ಬಿಜೆಪಿ ಮತ್ತೆ ಜನರ ಮುಂದೆ ಬರಲಿದೆ. ಅದಕ್ಕೆ ಪೂರಕವಾಗಿ ತನ್ನ ಸಂಘಟನಾ ಸ್ವರೂಪವನ್ನು ಬಿಜೆಪಿ ಬದಲಿಸಿ ಕೊಂಡಿದೆ. ಗುಜರಾತ್ ನರಹಂತಕ ನರೇಂದ್ರ ಮೋದಿಗೆ ಸಾರಥ್ಯ ನೀಡಲು ಮುಂದಾಗಿದೆ.
ಬಿಜೆಪಿ ನಾಯಕತ್ವದಲ್ಲಿದ್ದ ಉದಾರವಾದ ವ್ಯಕ್ತಿತ್ವದ ಜಶ್ವಂತ್ ಸಿಂಗ್, ಯಶವಂತ ಸಿನ್ಹಾರಂಥವರನ್ನು ಮೂಲೆಗೆ ತಳ್ಳಲಾಗಿದೆ. ಬಾಬರಿ ಮಸೀದಿ ನೆಲಕ್ಕುರುಳುವಾಗ ಮುರಳಿ ಮನೋಹರ ಜೋಶಿಯನ್ನು ತಬ್ಬಿಕೊಂಡು ಕೇಕೆ ಹಾಕಿದ ಉಮಾಭಾರತಿಯನ್ನು ನಾಯಕತ್ವದ ಮುಂಚೂಣಿಗೆ ತರಲಾಗಿದೆ. ಮುಸಲ್ಮಾನರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದ ವರುಣ್ ಗಾಂಧಿಗೆ ಅಗ್ರಸ್ಥಾನ ನೀಡಲಾಗಿದೆ. ಸೊಹ್ರಾಬುದ್ದಿನ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿ ಗುಜರಾತ್‌ನ ಮಾಜಿ ಗೃಹ ಸಚಿವ ಅಮಿತ ಶಾ ಎಂಬಾತನನ್ನು ರಾಷ್ಟ್ರೀಯ ನಾಯಕತ್ವಕ್ಕೆ ಭಡ್ತಿ ನೀಡಲಾಗಿದೆ.
ಮತ್ತೆ ಅಯೋಧ್ಯೆಯ ರಾಮಮಂದಿರ ವಿವಾದವನ್ನು ಕೆರಳಿಸಿ ಕೇವಲ ಉನ್ಮಾದ ಕೆರಳಿಸಲು ಸಂಘಪರಿವಾರ ಷಡ್ಯಂತ್ರ ರೂಪಿಸಿದೆ. ಭಜರಂಗ ದಳದಿಂದ ಪ್ರತ್ಯೇಕಗೊಂಡು ಶ್ರೀರಾಮಸೇನೆ ಕಟ್ಟಿಕೊಂಡಿದ್ದ ಪ್ರಮೋದ ಮುತಾಲಿಕರನ್ನು ಮತ್ತೆ ಬರಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸಲು ಅವಕಾಶ ನೀಡುವ ಯತ್ನವೂ ನಡೆದಿದೆ. ಹೀಗೆ ಫ್ಯಾಸಿಸ್ಟ್ ಹಿಂದುತ್ವವಾದಿ ಶಕ್ತಿಗಳ ಧ್ರುಕರಣ ಆರಂಭವಾಗಿದೆ.
ಇತ್ತ ತನ್ನ ಸ್ವಾರ್ಥ ಸಾಧನೆ ಗಾಗಿ ಬಿಜೆಪಿಯಿಂದ ಪ್ರತ್ಯೇಕ ಗೊಂಡು ಕೆಜೆಪಿ ಕಟ್ಟಿಕೊಂಡ ಯಡಿಯೂರಪ್ಪ ಚುನಾವಣೆ ನಂತರ ಮತ್ತೆ ಬಿಜೆಪಿಗೆ ಮರಳಿದರೆ ಅಚ್ಚರಿಪಡಬೇಕಾಗಿಲ್ಲ. ಸಂಘಪರಿವಾರದ ಜೊತೆಗೆ ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಲ್ಲದ ಯಡಿಯೂರಪ್ಪ, ನರೇಂದ್ರ ಮೋದಿ ಜೊತೆಗೆ ಈಗಲೂ ರಹಸ್ಯ ಸಂಪರ್ಕ ಹೊಂದಿದ್ದಾರೆ. ಅಂತಲೆ ಅವರು ಬಿಜೆಪಿಯ ರಾಷ್ಟ್ರೀಯ ನಾಯಕತ್ವದ ವಿರುದ್ಧ ನಿಷ್ಠುರವಾಗಿ ಮಾತಾಡುತ್ತಿಲ್ಲ.
ತಾತ್ವಿಕ ನಿಲುವುಗಳ ಪ್ರಶ್ನೆ ಬಂದಾಗ ಯಡಿಯೂರಪ್ಪ ನಿಲುವು ಆರೆಸ್ಸೆಸ್ ನಿಲುವಿಗಿಂತ ಭಿನ್ನವಾಗಿರುವುದಿಲ್ಲ. ಶ್ರೀರಂಗಪಟ್ಟಣದ ನಿಯೋಜಿತ ಅಲ್ಪಸಂಖ್ಯಾತ ವಿಶ್ವವಿದ್ಯಾಲಯಕ್ಕೆ ಟಿಪ್ಪುಸುಲ್ತಾನ ಹೆಸರನ್ನು ಇಡುವುದನ್ನು ವಿರೋಧಿಸಿದ ಯಡಿಯೂರಪ್ಪ ಆರೆಸ್ಸೆಸ್ ಸೂಚಿಸಿದ ಕಲಾಂ ಹೆಸರನ್ನು ಬೆಂಬಲಿಸಿದರು. ಕಾಂಗ್ರೆಸ್ ಮುಸ್ಲಿಂ ಓಟ್ ಬ್ಯಾಂಕ್ ಮಾಡಿಕೊಂಡಿದೆ ಎನ್ನುವ ಯಡಿಯೂರಪ್ಪ ಆರೆಸ್ಸೆಸ್‌ನ ಹಿಂದೂ ಓಟ್‌ಬ್ಯಾಂಕ್ ಬಗ್ಗೆ ಮಾತಾಡುವುದಿಲ್ಲ.
ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದರೆ ಫ್ಯಾಸಿಸ್ಟ್ ಹಿಂದುತ್ವ ಅತ್ಯಂತ ಉಗ್ರರೂಪದಲ್ಲಿ ಈ ದೇಶದಲ್ಲಿ ಮತ್ತೆ ವಕ್ಕರಿಸುವ ಅಪಾಯಗಳು  ಕಾಣಿಸುತ್ತಿದೆ. ಕಾರ್ಪೋರೇಟ್ ಬಂಡವಾಳ ಶಾಹಿಗೂ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಫ್ಯಾಸಿಸಂನ ಪ್ರಾಣವಾಯು ಬೇಕಾಗಿದೆ. ಈ ಗಂಡಾಂತರದ ಬಗ್ಗೆ ಪ್ರಗತಿಪರ ಶಕ್ತಿಗಳು ಜನರನ್ನು ಎಚ್ಚರಿಸಬೇಕಾಗಿದೆ.

No comments:

Post a Comment