Tuesday, April 23, 2013

ಚೋರ ಗುರು, ಚಂಡಾಲ ಶಿಷ್ಯಸದ್ಯಕ್ಕೆ ಬಿಜೆಪಿಯ ಎರಡನೆ ಅಟಲ್ ಬಿಹಾರಿ ವಾಜಪೇಯಿಯ ಫೋಸ್ ಕೊಡುತ್ತಾ ಎಲ್.ಕೆ. ಅಡ್ವಾಣಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಬಿಜೆಪಿಯೊಳಗಿನ ನಾಯಕನಾಗಿದ್ದುಕೊಂಡೇ ಬಿಜೆಪಿಯ ಭ್ರಷ್ಟತೆ,ಅಕ್ರಮ ವ್ಯವಹಾರಗಳ ಬಗ್ಗೆ ಧ್ವನಿಯೆತ್ತುತ್ತಾ, ಸದ್ಯಕ್ಕೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಒಂದು ಕಾಲದಲ್ಲಿ ವಾಜಪೇಯಿ ನಡೆಸಿಕೊಂಡು ಬಂದ ತಂತ್ರವನ್ನೇ ಅಡ್ವಾಣಿ ಬಳಕೆ ಮಾಡುತ್ತಿದ್ದಾರೆ. ಒಂದು ರೀತಿಯ ವಿಷಾದ, ಪ್ರಲಾಪ, ಖೇದಗಳ ಮೂಲಕ ದೇಶದ ಅನುಕಂಪಗಳನ್ನು ಗಿಟ್ಟಿಸುತ್ತಾ, ಆ ಮೂಲಕವೇ ತನ್ನನ್ನು ತಾನು ಪ್ರಧಾನಿ ಅಭ್ಯರ್ಥಿಗೆ ಅರ್ಹರಾಗಿಸುತ್ತಿದ್ದಾರೆ ಅಡ್ವಾಣಿ. ಈ ಕಾರಣದಿಂದಲೇ, ಅಡ್ವಾಣಿ ಕರ್ನಾಟಕಕ್ಕೆ ಪ್ರಚಾರಕ್ಕೆ ಬರುವುದಿಲ್ಲ ಎಂಬ ವದಂತಿ ಹಬ್ಬಿತ್ತು.  ಕರ್ನಾಟಕ ಬಿಜೆಪಿಯ ಅಕ್ರಮಗಳ ಕುರಿತಂತೆ ವ್ಯಾಪಕ ಆಕ್ರೋಶವನ್ನು ಕಾಲಕಾಲಕ್ಕೆ ವ್ಯಕ್ತಪಡಿಸುತ್ತಾ ಬಂದಿರುವ ಅಡ್ವಾಣಿ ಪ್ರಚಾರಕ್ಕೆ ಬರುತ್ತಾರೋ ಇಲ್ಲವೋ ಎನ್ನುವ ಆತಂಕ ಬಿಜೆಪಿ ನಾಯಕರಿಗಿತ್ತು. ಕೊನೆಗೂ ಅಡ್ವಾಣಿ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದಕ್ಕೆ ಆಗಮಿಸಿದರು.
ಅನಂತಕುಮಾರ್ ಅವರಿಗೆ ಪ್ರಯೋಜನವಾಗುವ ಕೆಲವು ಕ್ಷೇತ್ರಗಳಿಗಷ್ಟೇ ಅವರು ಮುಖ ತೋರಿಸಿದರು. ಆದರೆ ಅದರಿಂದ ನಿರೀಕ್ಷಿತ ಪ್ರಯೋಜನವೇನೂ ಆಗಲಿಲ್ಲ. ಬಹುತೇಕ ಕಡೆ ಅಡ್ವಾಣಿಯನ್ನು ಖಾಲಿ ಖಾಲಿ ಕುರ್ಚಿಗಳೇ ಸ್ವಾಗತಿಸಿದವು. ಬಿಜೆಪಿಯ ರಾಜ್ಯ ನಾಯಕರು ಮಾತ್ರವಲ್ಲ, ರಾಷ್ಟ್ರ ನಾಯಕರ ಕುರಿತಂತೆಯೂ ಜನರು ಭ್ರಮನಿರಸನಗೊಂಡಿದ್ದಾರೆ ಎನ್ನುವುದನ್ನು ಇದು ಸಾಬೀತು ಪಡಿಸಿತು.
ಇದೀಗ ಅಡ್ವಾಣಿ, ರಾಜ್ಯದಿಂದ ದಿಲ್ಲಿಗೆ ತೆರಳಿದ ಬೆನ್ನಿಗೇ ಕೆಜೆಪಿಯ ರಾಜ್ಯ ನಾಯಕ, ಬಿಜೆಪಿಯ ಮಾಜಿ ವರಿಷ್ಠ ಧನಂಜಯಕುಮಾರ್ ಒಂದು ಬಾಂಬನ್ನು ಸ್ಫೋಟಿಸಿದ್ದಾರೆ. ಈ ಸ್ಫೋಟಕ್ಕೆ ಇಡೀ ರಾಜ್ಯದ ಬಿಜೆಪಿಯ ಅಡಿಪಾಯವೇ ಸಣ್ಣಗೆ ಕಂಪಿಸಿದೆ. ಅಡ್ವಾಣಿಯೂ ಕೂಡ ಸಾಚಾ ಅಲ್ಲ ಎಂದಿದ್ದಾರೆ ಧನಂಜಯಕುಮಾರ್. ಈವರೆಗೆ ಇವರ ಗುರಿ ನಿತಿನ್ ಗಡ್ಕರಿ ಮತ್ತು ಸುಷ್ಮಾ ಸ್ವರಾಜ್ ಕಡೆಗಿತ್ತು. ಇದೀಗ ತಮ್ಮ ಬಿಲ್ಲನ್ನು ಅಡ್ವಾಣಿಯ ಕಡೆಗೇ ತಿರುಗಿಸಿದ್ದಾರೆ.
ಅಡ್ವಾಣಿ ಮತ್ತು ಅವರ ಕುಟುಂಬಸ್ಥರು ಮುಖ್ಯಮಂತ್ರಿಗಳನ್ನು ಬೆದರಿಸಿ ಅವರಿಂದ ಕಪ್ಪವನ್ನು ವಸೂಲಿ ಮಾಡಿಕೊಂಡು ಹೋಗುತ್ತಿದ್ದರು ಎನ್ನುವ ಆರೋಪವನ್ನು ನಾವು ಯಾವ ರೀತಿಯಲ್ಲೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಯಾಕೆಂದರೆ ಈ ಆರೋಪವನ್ನು ಮಾಡುತ್ತಿರುವವರು ಒಂದು ಕಾಲದಲ್ಲಿ ಬಿಜೆಪಿಯ ಆಗು ಹೋಗುಗಳಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದ್ದವರು. ಅಷ್ಟೇ ಅಲ್ಲ, ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿಯೂ ಧನಂಜಯ ಕುಮಾರ್ ತಿಳಿಸಿದ್ದಾರೆ.
ಯಡಿಯೂರಪ್ಪರಿಂದ ಕೋಟ್ಯಂತರ ರೂ.ಗಳನ್ನು ಅಡ್ವಾಣಿ ಮತ್ತು ಅವರ ಮಕ್ಕಳು ಪಡೆದುಕೊಂಡಿದ್ದಾರೆ ಎನ್ನುವುದು ಇನ್ನೊಂದು ಆರೋಪ.ಬಿಜೆಪಿಯ ಭೀಷ್ಮನ ಮೇಲೆ ಧನಂಜಯ ಬಿಟ್ಟ ಬಾಣ ಇಡೀ ಕೌರವ ಪಾಳಯವನ್ನು ಸಣ್ಣಗೆ ಕಂಪಿಸುವಂತೆ ಮಾಡಿದ್ದು ಸುಳ್ಳಲ್ಲ. ಈ ಆರೋಪವನ್ನು ಮಾಡಿದ ಬೆನ್ನಿಗೇ ಮುಖ್ಯಮಂತ್ರಿ ಶೆಟ್ಟರ್ ಸಹಿತ ಹಲವರು, ಇದು ಸುಳ್ಳು ಆರೋಪ ಎಂದು ಸ್ಪಷ್ಟೀಕರಣ ನೀಡಿದ್ದಾರೆ.ಧನಂಜಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿಯೂ ತಿಳಿಸಿದ್ದಾರೆ.
ಬರೇ ಬಾಯಿ ಮಾತಿಗೆ ಎಷ್ಟೋ ಆರೋಪಗಳನ್ನು  ಮಾಡಬಹುದು. ಆದರೆ ಇದು ಹಣದ ವಿಷಯ. ಮತ್ತು ತನ್ನ ಜೊತೆ ದಾಖಲೆಗಳೂ ಇವೆ ಎನ್ನುತ್ತಿದ್ದಾರೆ ಧನಂಜಯ ಕುಮಾರ್. ಬಿಜೆಪಿಯಲ್ಲಿ ಕಪ್ಪ ಕಾಣಿಕೆಗಳು ಹೊಸತೇನಲ್ಲ. ಬಳ್ಳಾರಿಯಲ್ಲಿ ಪ್ರತಿವರ್ಷ ವರಮಹಾಲಕ್ಷ್ಮಿ ಪೂಜೆಗೆಂದು ಆಗಮಿಸಿ, ಸುಷ್ಮಾ ಸ್ವರಾಜ್ ಕೋಟಿ ಕೋಟಿ ದೋಚಿಕೊಂಡು ಹೋಗುತ್ತಿದ್ದರು ಎಂಬ ಆರೋಪಗಳು ಬಹುತೇಕ ನಿಜವೇ ಆಗಿ ಬಿಟ್ಟಿತು. ರೆಡ್ಡಿಗಳ ಅಮ್ಮಾ ಆಗಿದ್ದ ಸುಷ್ಮಾ ಹಾಗೂ ನಿತಿನ್ ಗಡ್ಕರಿಗಳ ಮೇಲಿರುವ ಭ್ರಷ್ಟಾಚಾರದ ಆರೋಪದ ಮೂಲ ಬಳ್ಳಾರಿಯೇ ಆಗಿದೆ.
ಇದೀಗ ಇವರಲ್ಲಿ ಅಡ್ವಾಣಿಯೂ ಸೇರಿದ್ದಾರೆ ಎನ್ನುವ ಸತ್ಯವನ್ನು ಧನಂಜಯ ಕುಮಾರ್ ಸ್ಫೋಟಿಸಿದ್ದಾರೆ. ಈ ಮಾತಿಗೆ ಉತ್ತರ ಹೇಳಬೇಕಾದವರು ರಾಜ್ಯದ ನಾಯಕರಲ್ಲ. ಸ್ವತಃ ಅಡ್ವಾಣಿಯೇ ಇದಕ್ಕೆ ಉತ್ತರಿಸಬೇಕು.  ಅವರು ಇದಕ್ಕೆ ಉತ್ತರಿಸಿದರೆ ಪ್ರತಿಯಾಗಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ ಧನಂಜಯ್. ಈ ಸವಾಲನ್ನು ಬಿಜೆಪಿ ಎತ್ತಿಕೊಳ್ಳಬೇಕು ಮತ್ತು ದಾಖಲೆಗಳನ್ನು ಬಿಡುಗಡೆ ಮಾಡಲು ಒತ್ತಾಯಮಾಡಬೇಕು.
ಇದೇ ಸಂದರ್ಭದಲ್ಲಿ ಧನಂಜಯ ಕುಮಾರ್ ಮತ್ತು ಅವರ ಬಳಗ ಒಂದನ್ನು ನೆನಪಿಟ್ಟುಕೊಳ್ಳಬೇಕು. ಹಣತೆಗೆದುಕೊಂಡ ವರು ಎಷ್ಟು ಭ್ರಷ್ಟರೋ, ಹಣಕೊಟ್ಟವರೂ ಅಷ್ಟೇ ಭ್ರಷ್ಟರು. ಬಿಜೆಪಿಯಲ್ಲಿರುವಾಗ ಇದನ್ನೆಲ್ಲ ಮುಚ್ಚಿಟ್ಟು, ಬಿಜೆಪಿ ಹಿಂದೂಗಳ ಪಕ್ಷ, ಪ್ರಾಮಾಣಿಕ ಪಕ್ಷ ಎಂದೆಲ್ಲ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವುದು ಜನರಿಗೆ ಮಾಡಿದ ದ್ರೋಹವಲ್ಲವೆ?
ಒಬ್ಬ ನಾಯಕ ತಾನು ಸ್ವಚ್ಚವಾಗಿದ್ದಾನೆ ಎಂದಾದರೆ ಯಾಕೆ ವರಿಷ್ಠರಿಗೆ ಹಣಕೊಟ್ಟು ಅವರ ಬಾಯಿ ಮುಚ್ಚಿಸಬೇಕು? ಅಡ್ವಾಣಿ ಭ್ರಷ್ಟರು ಎಂದರೆ, ಅದರ ಅರ್ಥ ಯಡಿಯೂರಪ್ಪ ಸಾಚಾ ಎಂದಲ್ಲ. ಅವರ ಜೊತೆಗೆ ನೀವೂ ಭ್ರಷ್ಟರಾದಿರಿ. ಬಿಜೆಪಿಯನ್ನು, ಅದರ ನಾಯಕರನ್ನು ಚೋರ ಗುರುಗಳು ಎಂದು ಕರೆದರೆ, ಕೆಜೆಪಿ ಮತ್ತು ಶಿಷ್ಯರನ್ನು ಚಂಡಾಲ ಶಿಷ್ಯರು ಎಂದು ಕರೆಯಬೇಕಾಗುತ್ತದೆ.

No comments:

Post a Comment