Wednesday, April 10, 2013

ಕ್ರಿಮಿನಲ್ ಚಟುವಟಿಕೆಗಳ ಅಡ್ಡೆಗಳಾಗುತ್ತಿರುವ ಮಠಗಳುಏಪ್ರಿಲ್ -10-2013

ಮಠಗಳು ತಮ್ಮ ಅಧ್ಯಾತ್ಮ ಗೆರೆಯನ್ನು ದಾಟಿದರೆ ಏನು ಸಂಭವಿಸಬಹುದೋ ಅದೇ ಬೀದರ್‌ನ ಚೌಳಿ ಮಠದಲ್ಲಿ ನಡೆದಿದೆ. ಕಳೆದ ಒಂದು ವರ್ಷದಲ್ಲಿ ಆ ಮಠದೊಳಗೆ ನಡೆಯುತ್ತಿದ್ದ ನಿಗೂಢ ಚಟುವಟಿಕೆಗಳು, ಅಕ್ರಮಗಳು ಇವೆಲ್ಲವೂ ಸೋಮವಾರ ಭೀಕರ ದುರಂತವೊಂದಕ್ಕೆ ಕಾರಣವಾದವು. ಮೂವರು ಸ್ವಾಮೀಜಿಗಳು ಸಾರ್ವಜನಿಕವಾಗಿ, ಎಲ್ಲರ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಇವರಲ್ಲಿ ಪ್ರಣವ್ ಎಂಬಾತನನ್ನು ನಾವು ಸ್ವಾಮೀಜಿ ಎಂದು ಕರೆಯುವುದೂ ತಪ್ಪಾಗುತ್ತದೆ. ಆತನಿಗೆ ಇನ್ನೂ ಮದುವೆಯಾಗುವ ವಯಸ್ಸೇ ಆಗಿಲ್ಲ. ಈ ಅಪ್ರಾಪ್ತ ವಯಸ್ಸಿನ ಬಾಲಕನೂ ಸ್ವಾಮೀಜಿಯ ಹೆಸರಿನಲ್ಲಿ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಯಲಾಗದ ವಯಸ್ಸಿನಲ್ಲಿ ಸನ್ಯಾಸಕ್ಕೆ ನೂಕಿದ ಜನರು, ಇದೀಗ ಈ ಬಾಲಕನನ್ನು ಉರಿಯುವ ಬೆಂಕಿಗೂ ತಳ್ಳಿದ್ದಾರೆ. ಒಂದು ರೀತಿಯಲ್ಲಿ ಉಳಿದಿಬ್ಬರು ಸ್ವಾಮೀಜಿಗಳ ಸಾವನ್ನು ಆತ್ಮಹತ್ಯೆಯೆಂದು ಕರೆಯಬಹುದಾದರೂ, ಈ ಬಾಲಕನ ಸಾವನ್ನು ಬರ್ಬರ ಕೊಲೆಯೆಂದೇ ನಾವು ಗುರುತಿಸಬೇಕಾಗುತ್ತದೆ.
ವ್ಯವಸ್ಥೆ ಒಂದಾಗಿ ಈ ಹುಡುಗನನ್ನು ಬೆಂಕಿಗೆ ತಳ್ಳಿದೆ. ಇಡೀ ರಾಜ್ಯವೇ ಬೆಚ್ಚಿ ಬೀಳುವ ಪ್ರಕರಣ, ಸರಕಾರದ ಜಾಣ ಕಿವುಡು ಮತ್ತು ಕುರುಡುತನದಿಂದಾಗಿ ಮುಚ್ಚಿ ಹೋಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ.ಸ್ವಾಮೀಜಿಗಳ ಆತ್ಮಹತ್ಯೆ ಅನಿರೀಕ್ಷಿತವಾಗಿರಲಿಲ್ಲ. ಇವರು ಆತ್ಮಹತ್ಯೆಗೈಯುವ ಸುದ್ದಿ ಈಗಾಗಲೇ ಎಲ್ಲ ಕಡೆ ಪ್ರಚಾರವಾಗಿತ್ತು. ಅದೇನು ತಕ್ಷಣ ತೆಗೆದುಕೊಂಡ ತೀರ್ಮಾನವಾಗಿರಲಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ, ಅವರ ಆತ್ಮಹತ್ಯೆಗೆ ಸ್ಪಷ್ಟ ಕಾರಣವೂ ಇತ್ತು. ಮಠದಲ್ಲಿ ನಡೆದಿರುವ ಸ್ವಾಮೀಜಿಯೊಬ್ಬರ ನಾಪತ್ತೆ ಪ್ರಕರಣ ಹಾಗೂ ಇನ್ನೊಬ್ಬ ಸ್ವಾಮೀಜಿಯ ಕೊಲೆ ಪ್ರಕರಣ ಈ ಆತ್ಮಹತ್ಯೆಯೊಂದಿಗೆ ತಳಕು ಹಾಕಿಕೊಂಡಿದೆ. ಫೆಬ್ರವರಿ 28ರಂದು ಮಠದ ಹಿರಿಯ ಸ್ವಾಮೀಜಿಯೊಬ್ಬರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. ಇದೊಂದು ವ್ಯವಸ್ಥಿತ ಕೊಲೆ ಎಂಬ ಆರೋಪವೂ ಇದೆ. ಇದಾದ ಬಳಿಕ, ಈ ಮಠದಿಂದ ಇನ್ನೊಬ್ಬ ಸ್ವಾಮೀಜಿ ನಿಗೂಢವಾಗಿ ನಾಪತ್ತೆಯಾದರು. ನಾಪತ್ತೆಯಾಗುವ ಮೊದಲು ಈ ಸ್ವಾಮೀಜಿಗೆ ಕೆಲವು ಮಂದಿ ಹಿಂಸೆ ಕಿರುಕುಳ ನೀಡಿದ್ದರೆಂಬ ಆರೋಪವಿದೆ.  ಯಾರೋ ಚಾಕುವಿನಿಂದ ಇರಿದಿದ್ದಾರೆ ಎಂದೂ ಆರೋಪಿಸಲಾಗಿದೆ.
ದುಷ್ಕರ್ಮಿಗಳ ಕಿರುಕುಳಕ್ಕೆ ಹೆದರಿ ಮಾರುತಿ ಸ್ವಾಮಿ ಕಾಣೆಯಾದರು ಎಂಬ ಮಾತಿದೆ. ಇದೇ ಸಂದರ್ಭದಲ್ಲಿ ಅವರನ್ನು ಕೊಂದು ಎಲ್ಲೋ ಹೂತು ಹಾಕಿರಬಹುದು ಎಂದೂ ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ. ಇವುಗಳ ಬೆನ್ನಿಗೇ ರಾರೆಡ್ಡಿ ಸ್ವಾಮೀಜಿ, ಜಗನ್ನಾಥ ಸ್ವಾಮೀಜಿ ಮತ್ತು ಪ್ರಣವ್ ಸ್ವಾಮೀಜಿ ಅಗ್ನಿಪ್ರವೇಶ ಮಾಡುವ ಎಚ್ಚರಿಕೆಯನ್ನು ನೀಡಿದ್ದರು. ಅವರು ಅಂದು ನುಡಿದ ಮಾತಿನ ಪ್ರಕಾರ, ಈ ಮಠದೊಳಗೆ ಯಾವುದೂ ಸರಿಯಾಗಿ ನಡೆಯುತ್ತಿಲ್ಲ.
ಮಠಗಳೊಳಗೆ ಒಳಸಂಘರ್ಷ ನಡೆಯುತ್ತಿತ್ತು. ಇಲ್ಲಿರುವ ಹಣ ಆಸ್ತಿಗಾಗಿಯೂ ಪೈಪೋಟಿ ನಡೆಯುತ್ತಿತ್ತು. ಬಹುಶಃ ಈ ಹಿನ್ನೆಲೆಯಲ್ಲಿಯೇ ಹಿರಿಯ ಸ್ವಾಮೀಜಿ ನಿಗೂಢವಾಗಿ ಸಾವನ್ನಪ್ಪಿರಬೇಕು. ಹಾಗೆಯೇ ಇನ್ನೊಬ್ಬ ಸ್ವಾಮೀಜಿ ನಿಗೂಢವಾಗಿ ಕಾಣೆ ಯಾಗಿರಬೇಕು. ಆತ್ಮಹತ್ಯೆ ಮಾಡಿಕೊಂಡಿರು ವಂತಹ ಸ್ವಾಮೀಜಿಗಳಲ್ಲಿ ಕೆಲವು ಬೇಡಿಕೆಗಳಿದ್ದವು. ಮುಖ್ಯವಾಗಿ, ಹಿರಿಯ ಸ್ವಾಮೀಜಿಗಳ ಸಾವಿನ ಕುರಿತಂತೆ ಹಾಗೂ ಇನ್ನಿತರ ವಿಷಯಗಳ ಕುರಿತಂತೆ ಗಂಭೀರ ತನಿಖೆ ನಡೆಯಬೇಕು ಎಂದು ಸಾರ್ವಜನಿಕರನ್ನು, ಸರಕಾರವನ್ನು ಎಚ್ಚರಿಸುವ ಉದ್ದೇಶವಿತ್ತು.
ಆದುದರಿಂದಲೇ ಅವರು ಬೆದರಿಕೆಯ ರೂಪದಲ್ಲಿ, ಧರಣಿಯ ರೂಪದಲ್ಲಿ ಈ ಆತ್ಮಹತ್ಯೆ ಅಥವಾ ಜೀವಂತ ಸಮಾಧಿಯ ಎಚ್ಚರಿಕೆಯನ್ನು ನೀಡಿದ್ದರು. ಸರಕಾರ ಮತ್ತು ಸ್ಥಳೀಯ ಆಡಳಿತ ಈ ವಿಷಯವನ್ನು ಒಂದಿಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೆ, ಈ ಸ್ವಾಮೀಜಿಗಳು ಬರ್ಬರವಾಗಿ ಸಾಯುವುದನ್ನು ತಪ್ಪಿಸಬಹುದಾಗಿತ್ತು. ಮೂವರು ಸ್ವಾಮೀಜಿಗಳನ್ನು ಜಿಲ್ಲಾಡಳಿತ ಕಚೇರಿಗೆ ಕರೆಸಿ ಅಥವಾ ಅವರನ್ನು ಭೇಟಿ ಮಾಡಿ ಅವರೊಳಗಿನ ಬೇಡಿಕೆಯನ್ನು ಪರಿಶೀಲಿಸಬಹುದಿತ್ತು.
ಅಥವಾ ಹಿಂದಿನ ಸ್ವಾಮೀಜಿಗಳ ನಿಗೂಢ ಸಾವು ಮತ್ತು ನಾಪತ್ತೆಯನ್ನು ಗಂಭೀರವಾಗಿ ತನಿಖೆ ನಡೆಸಿದ್ದರೂ ಇಂದು ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ.ಇಷ್ಟಕ್ಕೂ, ಮೂವರು ಸ್ವಾಮೀಜಿಗಳು ಫೆ.7ರಂದು ಜೀವಂತ ಸಮಾಧಿಯಾಗುವ ನಿರ್ಧಾರದಿಂದ ಹಿಂದೆ ಸರಿದಿದ್ದರು.ಹೀಗಿರುವಾಗ, ಸೋಮವಾರ ಏಕಾಏಕಿ ಆತ್ಮಾಹುತಿ ಮಾಡಿಕೊಳ್ಳುವುದಕ್ಕೆ ಕಾರಣವೇನು?ಈ ಸ್ವಾಮೀಜಿಗಳನ್ನು ಯಾರಾದರೂ ಬ್ಲಾಕ್‌ಮೇಲ್ ಮಾಡುತ್ತಿದ್ದರೇ?ಅಥವಾ ಯಾರಾದರೂ ಬೆದರಿಸುತ್ತಿದ್ದರೇ? ಅಥವಾ ಅವರನ್ನು ಬೆಂಕಿ ಕೊಟ್ಟು ಕೊಂದು ಹಾಕಿದರೇ?
ಕಳೆದ ಫೆಬ್ರವರಿಯಿಂದ ನಿನ್ನೆಯವರೆಗೆ ನಡೆದ ಎಲ್ಲ ಘಟನೆಗಳನ್ನು ಗಮನಿಸಿದರೆ, ಭಾರೀ ಕ್ರಿಮಿನಲ್ ಚಟುವಟಿಕೆಗಳು ಈ ಮಠದೊಳಗೆ ನಡೆದಿವೆ, ನಡೆಯುತ್ತಿವೆ. ಯಾವಾಗ ಮೂವರು ಸ್ವಾಮೀಜಿಗಳು ಬರ್ಬರವಾಗಿ ಕೊಲ್ಲಲ್ಪಟ್ಟರೋ, ತಕ್ಷಣ ಆ ಮಠಕ್ಕೆ ಬೀಗಜಡಿದು, ಅಲ್ಲಿರುವ ಮುಖ್ಯಸ್ಥರನ್ನು ಬಂಧಿಸಬೇಕಾಗಿತ್ತು. ಆದರೆ ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಇಡೀ ನಾಡು ಬೆಚ್ಚಿ ಬಿದ್ದಿದ್ದರೂ, ಸರಕಾರವಾಗಲಿ, ಪೊಲೀಸ್ ಇಲಾಖೆಯಾಗಲಿ ಈ ಘಟನೆಯಿಂದ ಬೆಚ್ಚಿ ಬಿದ್ದಿಲ್ಲ. ಬರೇ ತನಿಖೆಯ ಭರವಸೆಯನ್ನಷ್ಟೇ ನೀಡಲಾಗಿದೆ.
ಒಂದು ಮಠ ಸಾಲು ಸಾಲು ಕೊಲೆಗಳಿಗೆ ಸಾಕ್ಷಿಯಾಗುತ್ತಿರುವಾಗ, ಆ ಮಠದೊಳಗೆ ಇನ್ನೂ ಪೊಲೀಸರನ್ನು ನುಗ್ಗಿಸಲೇ ಸರಕಾರ ಮೀನಮೇಷ ಎಣಿಸುತ್ತಿದೆಯೆಂದರೆ ಇದರರ್ಥವಾದರೂ ಏನು?ಇಂದು ಕೇವಲ ಈ ಚೌಳಿಮಠ ಮಾತ್ರವಲ್ಲ, ರಾಜ್ಯದ ಬಹುತೇಕ ಮಠಗಳು ರಾಜಕೀಯ ಮತ್ತು ಕ್ರಿಮಿನಲ್‌ಗಳ ಸಂಚಿನ ಮನೆಗಳಾಗುತ್ತಿವೆ. ನಿತ್ಯಾನಂತ ಸ್ವಾಮಿಯ ಮೇಲಿರುವ ಆರೋಪವನ್ನೇ ಗಮನಿಸಿ. ಜೊತೆಗೆ ರಾಜಕೀಯದ ಜೊತೆಗೆ ನೇರ ಸಂಬಂಧಗಳನ್ನು ಹೊಂದಿರುವ ವಿವಿಧ ಮಠಗಳ ಸ್ವಾಮೀಜಿಗಳ ವರ್ತನೆಗಳನ್ನು ಗಮನಿಸಿ.
ಮಠಗಳು ಅಧ್ಯಾತ್ಮ ಉದ್ದೇಶವನ್ನು ಮರೆತು,ಲೌಕಿಕ ರಾಜಕಾರಣದಲ್ಲಿ ತೊಡಗಿವೆ.ಆದುದರಿಂದಲೇ ಇಂತಹ ಅನಾಹುತಗಳು ಮಠಗಳೊಳಗೆ ನಡೆಯುತ್ತಿವೆ.  ಇದನ್ನು ಹೀಗೇ ಬಿಟ್ಟಲ್ಲಿ, ಮುಂದಿನ ದಿನಗಳಲ್ಲಿ ಮಠಗಳೆನ್ನುವುದು ಕಳ್ಳರು, ಕ್ರಿಮಿನಲ್‌ಗಳು ಬಚ್ಚಿಟ್ಟುಕೊಳ್ಳುವ ಆವಾಸ ಸ್ಥಾನಗಳಾಗಲಿವೆ. ರಾಜಕಾರಣಿಗಳ ಕಪ್ಪು ಹಣ ಬಚ್ಚಿಡುವ ಗೋದಾಮುಗಳಾಗಲಿವೆ. ಅದಕ್ಕೆ ಮೊದಲು ನಾಡಿನ ಜನತೆ ಎಚ್ಚೆತ್ತು, ಸರಕಾರವನ್ನು ಎಚ್ಚರಿಸಬೇಕಾಗಿದೆ

No comments:

Post a Comment