Saturday, April 13, 2013

ಶಿಕ್ಷಣ ಹಕ್ಕು ಕಾನೂನು ಪರಿಣಾಮಕಾರಿ ಜಾರಿ ಅಗತ್ಯಏಪ್ರಿಲ್ -13-2013

ಕರ್ನಾಟಕದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದು ೩ ವರ್ಷಗಳು ಗತಿಸಿವೆ. ಈ ಕಾನೂನಿನ ಮೂಲಕ ಶಿಕ್ಷಣ ಮೂಲಭೂತ ಹಕ್ಕಾಗಿ ಮೂರು ವರ್ಷಗಳು ಅದನಂತರವೂ ೫೪ ಸಾವಿರ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗ, ಶಿವವೊಗ್ಗ, ಮಂಗಳೂರು ಮತ್ತಿತರ ನಗರಗಳಲ್ಲಿ ಶಾಲೆಗಳನ್ನು ಬಿಟ್ಟ ಮಕ್ಕಳು ಗ್ಯಾರೇಜ್ ಮತ್ತಿತರ ಕಡೆ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದಾರೆ. ಶೇ.೪.೫ ದಲಿತ ಮಕ್ಕಳು ಅರ್ಧದಲ್ಲೇ ಶಾಲೆಯನ್ನು ತೊರೆಯುತ್ತಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆಯ ೮-೯ನೆ ಕಲಮ್ಮಿನ ಪ್ರಕಾರ ಮಕ್ಕಳು ಅರ್ಧದಲ್ಲೇ ಶಾಲೆಯನ್ನು ಬಿಡದಂತೆ ಸರಕಾರ ನೋಡಿಕೊಳ್ಳಬೇಕಾಗುತ್ತದೆ. ಆದರೆ ಕಳೆದ ೫ ವರ್ಷಗಳಿಂದ ಈ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರಕಾರ ತನ್ನ ಸಂವಿಧಾನತ್ಮಕ ಕರ್ತವ್ಯ ಪಾಲನೆಯಲ್ಲಿ ವಿಫಲವಾಗುತ್ತಲೇ ಬಂದಿವೆ. ಪಠ್ಯಪುಸ್ತಕಗಳ ಕೇಸರೀಕರಣ, ಸಾರ್ವಜನಿಕ ಸಂಪತ್ತಿನ ಕಬಳಿಕೆ-ಇಂಥ ಕೆಲ ವಿಷಯಗಳ ಬಗ್ಗೆ ಮಾತ್ರ ವಿಶೇಷ ಕಾಳಜಿ ವಹಿಸಿದ ಈ ಸರಕಾರದ ಮಂತ್ರಿಗಳು ಶಿಕ್ಷಣ ಹಕ್ಕು ಕಾಯ್ದೆ ನಿರರ್ಥಕವಾಗುವಂತೆ ಮಾಡಿದ್ದಾರೆ.
ಎಲ್ಲಕ್ಕಿಂತ ಆತಂಕದ ಸಂಗತಿಯೆಂದರೆ ನಮ್ಮ ಸಾಮಾಜಿಕ ಜೀವನದಲ್ಲಿ ಅಸ್ಪಶತೆ ಕ್ರಮೇಣ ಮಾಯವಾಗುತ್ತಿದ್ದರೆ, ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಅದು ಹೊಸ ರೂಪ ಪಡೆದುಕೊಳ್ಳುತ್ತಿರುವುದು ಗೋಚರಿಸುತ್ತಿದೆ. ಸರಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ನಡುವೆ ಅಸಮಾನತೆಯ ಗೋಡೆ ಎದ್ದು ಕಾಣುತ್ತಿದೆ.  ೨೦೧೧-೧೨ರ ಅಂಕಿ-ಅಂಶಗಳ ಪ್ರಕಾರ 1ನೆ ತರಗತಿಯಿಂದ ೧೦ನೆ ತರಗತಿಯವರೆಗೆ ಓದುತ್ತಿರುವ ಒಂದು ಕೋಟಿ ಮಕ್ಕಳಲ್ಲಿ ೮೦ ಲಕ್ಷ ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ್ದಾರೆ.
೨೦ ಲಕ್ಷ ಮಕ್ಕಳು ಮಾತ್ರ ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಾಗಿದ್ದಾರೆ. ಇದರಿಂದ ಮಕ್ಕಳಲ್ಲಿ ಪ್ರತ್ಯೇಕತೆಯ ಕಂದರ ನಿರ್ಮಾಣ ವಾಗುತ್ತಿದೆ. ನಾಳಿನ ನಾಗರಿಕರೆಂದು ನಾವು ಹೇಳುವ ಮಕ್ಕಳು ಬಾಲ್ಯದಲ್ಲೇ ಒಬ್ಬರಿಂದ ಇನ್ನೊಬ್ಬರು ದೂರವಾಗುತ್ತಿದ್ದಾರೆ. ದುಬಾರಿ ಶುಲ್ಕ ತೆತ್ತು ವ್ಯಾಸಂಗ ಮಾಡುವ ಸಿರಿವಂತರ ಮಕ್ಕಳು ಒಂದೆಡೆ ಇದ್ದರೆ, ಇನ್ನೊಂದೆಡೆ ಸರಕಾರಿ ಶಾಲೆಗಳಿಗೆ ಹೋಗುವ ಬಡ ಮಕ್ಕಳಿದ್ದಾರೆ.
ನಮ್ಮ ಬಹುತೇಕ ಸರಕಾರಿ ಶಾಲೆಗಳ  ಇನ್ನೊಂದು ಸಮಸ್ಯೆಯೆಂದರೆ ಯಾವುದೇ  ಶಾಲೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ವಿಲ್ಲ. ದೇಹ ಬಾಧೆ ತೀರಿಸಿಕೊಳ್ಳಲು ಮಕ್ಕಳು ಪರದಾಡಬೇಕಾಗುತ್ತದೆ. ೨೦೧೩ ಮಾರ್ಚ್ ೩೧ರ ಒಳಗೆ ಎಲ್ಲ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು ಇಲ್ಲದಿದ್ದರೆ ಅಂತಹ ಶಾಲೆಗಳ ಅನುಮತಿಯನ್ನು ರದ್ದುಪಡಿಸಬೇಕು. ಎಂದು ಆರ್‌ಟಿಐ ಕಾಯ್ದೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ರಾಜ್ಯದ ಅರ್ಧಕ್ಕಿಂತ ಹೆಚ್ಚು ಶಾಲೆಗಳಲ್ಲಿ ಶೌಚಾಲಯ ಗಳಿಲ್ಲ. ಶೌಚಾಲಯಗಳಿದ್ದರೂ ಅವುಗಳು ಬಳಕೆಗೆ ಯೋಗ್ಯವಾಗಿಲ್ಲ.
ಶೇ.55 ಶಾಲೆಗಳಲ್ಲಿ ಮಾತ್ರ ಆಟದ ಮೈದಾನಗಳಿವೆ. ಈ ಸಂಬಂಧ ದಲ್ಲಿ ಶಿಕ್ಷಣ ಇಲಾಖೆ ನೀಡಿದ ಮಾಹಿತಿ ಕೂಡ ಸಂಪೂರ್ಣ ಸತ್ಯಾಂಶದಿಂದ ಕೂಡಿಲ್ಲ. ವಾಸ್ತವವಾಗಿ ಅನೇಕ ಹಳ್ಳಿಗಳಲ್ಲಿ ಸರಕಾರಿ ಶಾಲೆಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. ಇಂದಿಗೂ ಯಾವುದೋ ಗುಡಿಯ ಕಟ್ಟೆಯ ಮೇಲೆ, ಮರದ ಕೆಳಗೆ ಮಕ್ಕಳು ಪಾಠ ಕೇಳುತ್ತಿದ್ದಾರೆ. ಶಿಕ್ಷಕರ ಕೊರತೆಯನ್ನು ನಿವಾರಿಸುವುದು ಕೂಡ ಸಾಧ್ಯವಾಗಿಲ್ಲ. ಅನೇಕ  ಕಡೆ 200 ಮಕ್ಕಳು ಓದುವ ಶಾಲೆಗಳಲ್ಲಿ ಕೇವಲ ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. 
ಈ ಲೋಪಗಳನ್ನೆಲ್ಲ ಸರಿಪಡಿಸಬೇಕೆಂದು ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸಿಲಾಗಿದ್ದರೂ ಕೂಡ ಅದು ಸರಿಯಾಗಿ ಜಾರಿಗೆ ಬಂದಿಲ್ಲ. ಈ ಕಾನೂನಿನ ಪ್ರಕಾರ ಖಾಸಗಿ ಶಾಲೆ ಪ್ರವೇಶದಲ್ಲಿ ಶೇ.25ರಷ್ಟು ಮೀಸಲಾತಿಯನ್ನು ನೀಡಬೇಕೆಂಬ ನಿಯಮ ವಿದ್ದರೂ ಕೂಡ ಅದು ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ.
ಶಿಕ್ಷಣ ಕ್ಷೇತ್ರದ ಈ ಲೋಪಗಳನ್ನು ಸರಿಪಡಿಸದಿದ್ದರೆ ಮುಂಬರುವ ದಿನಗಳಲ್ಲಿ ದೇಶ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಎಲ್ಲ ಮಕ್ಕಳು ಒಂದೇ ಸೂರಿನಡಿ ಇರುವ ಸಮಾನ ಶಾಲೆಗಳು ಈ ದೇಶದಲ್ಲಿ ಅಸ್ತಿತ್ವಕ್ಕೆ ಬರಬೇಕಾಗಿದೆ. ಯಾವುದೇ ಕಾರಣಕ್ಕೂ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಲೇ ಬಾರದು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ದಲಿತ ಮತ್ತು ಅಲ್ಪಸಂಖ್ಯಾತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕೆಂಬ ಮಹಾನ್ ಉದ್ದೇಶದಿಂದ ಜಾರಿಗೆ ಬಂದ ಶಿಕ್ಷಣ ಹಕ್ಕು ಕಾಯ್ದೆ ಅಧಿಕಾರಿಗಳ ವೈಫಲ್ಯದಿಂದಾಗಿ ತನ್ನ ಗುರಿ ಸಾಧನೆಯಲ್ಲಿ ವಿಫಲವಾಗಿದೆ.
ಈಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಓಟಿಗಾಗಿ ಮತದಾರನ ಮನೆಯ ಬಾಗಿಲಿಗೆ ಬರುತ್ತಿವೆ. ಈ ಸಂದರ್ಭದಲ್ಲಿ ಸಮಾನ ಶಾಲೆಗಳ ಅಗತ್ಯದ ಬಗ್ಗೆ ಈ ಪಕ್ಷಗಳಿಗೆ ಮನವರಿಕೆ ಮಾಡಿಕೊಡಬೇಕು. ಎಲ್ಲ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಬೇಕು. ಇದು ಸಾಧ್ಯವಾಗಬೇಕಾದರೆ ಚುನಾವಣೆಯಲ್ಲಿ ಸ್ಪರ್ಧಿಸಿದ ಶಿಕ್ಷಣ ರಂಗದಲ್ಲಿ ರುವ ವ್ಯಾಪಾರಿಗಳಿಗೂ ಕೂಡ ಜನ ಪಾಠ ಕಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ  ಜನಜಾಗೃತಿ ಆಂದೋಲನವೊಂದು ಈಗ ಅಗತ್ಯವಾಗಿದೆ.
ಶಿಕ್ಷಣ ರಂಗದಲ್ಲಿ ಲಾಭ ಮಾಡಿಕೊಳ್ಳಲು ಬರುತ್ತಿರುವ ರಾಜಕೀಯ ರಂಗದ ದಲ್ಲಾಳಿ ಗಳನ್ನು ನಿಯಂತ್ರಣದಲ್ಲಿಡದಿದ್ದರೆ ಬಡವರ ಮಕ್ಕಳು ವ್ಯಾಸಂಗ ಮಾಡಲು ಸಾಧ್ಯವಿಲ್ಲದಂತಾ ಗುತ್ತದೆ. ಅದನ್ನು ಸರಿಪಡಿಸಲೆಂದೇ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ. 

No comments:

Post a Comment