Monday, April 1, 2013

ಸೌದಿ ಭಾರತೀಯ ಕಾರ್ಮಿಕರ ಕೊರಳಿಗೆ ನಿತಾಕತ್ ಉರುಳು: ಕಣ್ಣಿದ್ದೂ ಕುರುಡರಂತೆ ವರ್ತಿಸುವ ಇಂಡಿಯನ್ ಎಂಬಸಿಏಪ್ರಿಲ್ -01-2013
ಮಂಗಳೂರು: ಸ್ಥಳೀಯರಿಗೆ ಉದ್ಯೋಗದಲ್ಲಿ ಶೇ.10ರಷ್ಟು ಅವಕಾಶ ಒದಗಿಸಬೇಕು ಎಂಬ ನಿಯಮ ಹೊಂದಿರುವ ನಿತಾಕತ್ ಎಂಬ ಹೆಸರಿನ ಕಾರ್ಮಿಕ ಕಾನೂನನ್ನು ಸೌದಿ ಆರೇಬಿಯದ ಆಡಳಿತ ಜಾರಿ ಮಾಡಿದೆ. ಈ ಕಾನೂನಿನ ಪ್ರಕಾರ ಸಣ್ಣ ಮತ್ತು ಮಧ್ಯಮ ಉದ್ಯಮ ಸಂಸ್ಥೆಗಳಲ್ಲಿ ಪ್ರತಿ ಹತ್ತು ಮಂದಿ ಉದ್ಯೋಗಿಗಳಲ್ಲಿ ಒಬ್ಬ ಸ್ಥಳೀಯನಿಗೆ ಉದ್ಯೋಗಾವಕಾಶ ನೀಡಲೇಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಹತ್ತರಲ್ಲಿ ಓರ್ವ ವಿದೇಶಿ ಕಾರ್ಮಿಕ ಕೆಲಸ ಕಳೆದುಕೊಳ್ಳಬೇಕಾಗಿದೆ. ಕಾನೂನು ಜಾರಿಗೆ 2013ರ ಮಾರ್ಚ್ 27 ಕೊನೆಯ ದಿನವಾಗಿತ್ತು. ಕಳೆದ ನಾಲ್ಕು ತಿಂಗಳುಗಳಿಂದ ಸೌದಿ ಆಡಳಿತ ಕಾನೂನು ಜಾರಿಗೆ ಸೂಚನೆಯನ್ನು ನೀಡುತ್ತ ಬಂದಿದೆ. ಕೊನೆಯ ದಿನ ಮುಗಿಯುತ್ತಿದ್ದಂತೆ ಅಕ್ರಮಗಳ ಪರಿಶೀಲನೆಯ ಕಾರ್ಯ ನಡೆಯುತ್ತಿದೆ. ಹತ್ತರಲ್ಲಿ ಒಬ್ಬ ವಿದೇಶಿ ಕಾರ್ಮಿಕ ಕೆಲಸ ಕಳೆದುಕೊಂಡು ತವರಿಗೆ ಮರಳುವುದು ನಿರಂತರ ವಾಗಿದೆ. ನೂತನ ಕಾನೂನಿನ ಸಂತ್ರಸ್ತರಾಗಿ ಹಿಂದಿರುಗುತ್ತಿರುವವರಲ್ಲಿ ಹೆಚ್ಚಿನ ಪಾಲು ಭಾರತೀಯರದಾಗಿದೆ.ಸೌದಿಯಲ್ಲಿ ಕಟ್ಟುನಿಟ್ಟಾಗಿ ಕಾನೂನು ಜಾರಿಯಾಗುವುದು ಅಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳಿಗೆ ತಿಳಿಯದ ವಿಷಯವೇನಲ್ಲ ಆದರೂ ಸೌದಿ ಎಂಬಸೀ(ಭಾರತೀಯ ದೂತವಾಸ)ದ ಅಧಿಕಾರಿಗಳು ಐಷಾರಾಮಿಯಾಗಿ ಹವಾನಿಯಂತ್ರಿತ ಕೊಠಡಿಗಳಲ್ಲಿ ಸರಕಾರ ನೀಡಿದ ಕುರ್ಚಿಗಳಲ್ಲಿ ಕುಳಿತು ಟೈಂ ಪಾಸ್ ಮಾಡುತ್ತಾರೆ ವಿನಾಃ ಬಾರತೀಯರ ಯಾವುದೇ ಸಹಾಯಕ್ಕೂ ತಲುಪದೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದಾಗಿ ಸೌದಿಯಲ್ಲಿರುವ ಭಾರತೀಯರಿಂದ ಕೇಳಿ ಬರುತ್ತಿದೆ
20 ಲಕ್ಷ ಭಾರತೀಯರು ಸೌದಿಯಲ್ಲಿ ಉದ್ಯೋಗಿಗಳಾಗಿದ್ದಾರೆ. ಅಲ್ಪಮಟ್ಟಿನ ಸಮಾಧಾನದ ಸಂಗತಿ ಎಂದರೆ ಎಲ್ಲ ಉದ್ಯೋಗಿಗಳಿಗೂ ನಿತಾಕತ್ ಕಾನೂನು ಅನ್ವಯ ವಾಗುವುದಿಲ್ಲ. ಕೆಳದರ್ಜೆಯ ಕಾರ್ಮಿಕರಿಗೆ ಹಾಗೂ ಉನ್ನತ ಮಟ್ಟದ ಅಧಿಕಾರಿ ವರ್ಗದವರಿಗೆ ಈ ಕಾನೂನು ಅನ್ವಯವಾಗುವುದಿಲ್ಲ. ಮಧ್ಯಮ ವರ್ಗದವರು ನಿತಾಕತ್ ಕಾನೂನಿನ ಸಂತ್ರಸ್ತ ರಾಗಲಿದ್ದಾರೆ.
ದುರದೃಷ್ಟ ಎಂದರೆ ಮಧ್ಯಮ ವರ್ಗದ ಉದ್ಯೋಗಿಗಳಲ್ಲಿ ಭಾರತೀಯರ ಪ್ರಮಾಣವೇಹೆಚ್ಚು. ಕೆಳ ವರ್ಗದ ಕಾರ್ಮಿಕ ಕೆಲಸಗಳಾದ ಶೌಚಾಲಯ ನಿರ್ವಹಣೆ, ಕಟ್ಟಡ ನಿರ್ಮಾಣ, ಮನೆಗೆಲಸ, ಸೆಕ್ಯೂರಿಟಿ ಗಾರ್ಡ್, ಅಡುಗೆ ಮುಂತಾದ ಕಡಿಮೆ ವೇತನದ ಕೆಲಸ ಮಾಡಲು ಸೌದಿಯ ನಾಗರಿಕರು ಇಷ್ಟ ಪಡುವುದಿಲ್ಲ. ಇಂತಹ ಕೆಲಸಗಳಲ್ಲಿ ಇರುವುದು ನೇಪಾಳ, ಅಫ್ಘಾನಿಸ್ಥಾನ, ಮ್ಯಾನ್ಮಾರ್ ಮುಂತಾದ ಬಡ ರಾಷ್ಟ್ರಗಳ ನಾಗರಿಕರೇ ಹೆಚ್ಚು.
ಇನ್ನು ಉನ್ನತ ಹುದ್ದೆಗಳಾದ ಚಾರ್ಟಡ್ ಅಕೌಂಟೆಂಟ್, ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಮುಂತಾದ ಕಂಪೆನಿಗಳ ಹುದ್ದೆಗಳನ್ನು ನಿಭಾಯಿಸುವ ಸಾಮರ್ಥ್ಯದ ಶಿಕ್ಷಣ ಸೌದಿಯ ನಾಗರಿಕರು ಇನ್ನೂ ಪಡೆದಿಲ್ಲ. ಇಂತಹ ಹುದ್ದೆಗಳಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತಿತರ ಶ್ರೀಮಂತ ರಾಷ್ಟ್ರಗಳ ನಾಗರಿಕರಿರುವುದೇ ಹೆಚ್ಚು. ಭಾರತೀಯರ ಪಾಲುದಾರಿಕೆ ಮಧ್ಯಮ ವರ್ಗದ್ದಾಗಿದೆ.
ಆದುದರಿಂದ ನಿತಾಕತ್ ಕಾನೂನಿನ ಸಂತ್ರಸ್ತರಲ್ಲಿ ಭಾರತೀಯರ ಪಟ್ಟಿ ಬೆಳೆಯುತ್ತ ಸಾಗುತ್ತದೆ. ಮ್ಯಾನೇಜರ್, ಸೆಕ್ರೆಟರಿ, ರಿಸಪ್ಶನಿಸ್ಟ್, ಟೈಪಿಸ್ಟ್, ಸೇಲ್ಸ್‌ಮನ್, ಡ್ರೈವರ್, ಕಂಪ್ಯೂಟರ್ ಮತ್ತು ಟೆಲಿಪೋನ್ ಆಪರೇಟರ್, ಆಡಳಿತ ಸಹಾಯಕರು, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಹೋಟೆಲ್ ಉದ್ಯೋಗಿಗಳು, ಅಧ್ಯಾಪಕ ವರ್ಗ ನಿತಾಕತ್ ಕಾನೂನಿನ ಸಂತ್ರಸ್ತರ ಪಟ್ಟಿಯಲ್ಲಿದ್ದಾರೆ.
ಒಂದಿಷ್ಟು ಲೆಕ್ಕ...ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರ ಸಂಖ್ಯೆ 2.5 ಕೋಟಿ ಮೀರಿದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಉದ್ಯೋಗಿಗಳ ಸಂಖ್ಯೆ 60 ಸಾವಿರ. ಇದರಲ್ಲಿ ಸೌದಿ ಹಾಗೂ ಕುವೈತ್‌ನಲ್ಲಿರುವವರ ಪ್ರಮಾಣವೇ ಶೇ. 48 ಆಗಿದೆ ಎಂಬ ಅಂಕಿಅಂಶವನ್ನು ನಿತಾಕತ್ ಕಾನೂನು ಜಾರಿಯಾದ ಬಳಿಕ ಹೊರಡಿಸಿದ ಪತ್ರಿಕಾ ಹೇಳಿಕೆಯಲ್ಲಿ ಅನಿವಾಸಿ ಭಾರತೀಯ ವ್ಯವಹಾರಗಳ ಸಚಿವ ವಯಲಾರ್ ರವಿ ನೀಡಿದ್ದಾರೆ. ವಿದೇಶದಲ್ಲಿ ಉದ್ಯೋಗ ಅರಿಸಿ ಹೋಗುವವರಲ್ಲಿ ಆಂದ್ರ ಪ್ರದೇಶ ಹಾಗೂ ಕೇರಳಿಗರ ಪ್ರಮಾಣ ಹೆಚ್ಚು. ಸೌದಿ ದೂತಾವಾಸದ ಅಂಕಿಅಂಶಗಳ ಆಧಾರದಲ್ಲಿ ಹೇಳುವುದಾದರೆ 5.7 ಲಕ್ಷ ಕೇರಳೀಯ ಸೌದಿಯಲ್ಲಿ ದುಡಿಯುತ್ತಿದ್ದಾರೆ.

ರಕ್ಷಣೆಗೆ ಬಾರದ ದೂತಾವಾಸ
ಸ್ವದೇಶೀಯರ ಹಿತ ಕಾಪಾಡಲು ಸೌದಿ ಸರಕಾರ ನಿತಾಕತ್ ಎಂಬ ಹೆಸರಿನ ಕಾರ್ಮಿಕ ಕಾನೂನು ಜಾರಿಗೆ ತಂದಿದೆ. ಈ ಕಾನೂನಿನಿಂದ ಸ್ಥಳೀಯರಿಗೆ ಉದ್ಯೋಗಾವಾಕಾಶ ತೆರೆದುಕೊಳ್ಳಲಿದೆಯಾದರೂ ಅದರ ದುಷ್ಪರಿಣಾಮವನ್ನು ಅಲ್ಲಿ ನೆಲೆಸಿರುವ ಭಾರತೀಯರು ಅನುಭವಿಸಬೇಕಿದೆ. ಸೌದಿಯ ಮಧ್ಯಮ ಮತ್ತು ಸಣ್ಣ ಉದ್ಯಮ ಸಂಸ್ಥೆಗಳಲ್ಲಿ ಶೇ.10ರಷ್ಟು ಉದ್ಯೋಗಾವಕಾಶ ಸ್ಥಳೀಯರಿಗೆ ಒದಗಿಸಬೇಕು ಎನ್ನುತ್ತದೆ ನಿತಾಕತ್ ಕಾನೂನು. ಈ ಕಾನೂನನ್ನು ಅಲ್ಲಿಯ ಆಡಳಿತ ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಕಾರ್ಯಪ್ರವೃತ್ತ ವಾಗಿದೆ. ಇದರ ಪರಿಣಾಮವಾಗಿ ನಿತ್ಯ ನೂರಾರು ಭಾರತೀಯರು ಉದ್ಯೋಗ ಕಳೆದುಕೊಂಡು ಬರಿಗೈಯಲ್ಲಿ ತವರಿಗೆ ಮರಳುತ್ತಿದ್ದಾರೆ.ಸೌದಿಯಲ್ಲಿರುವ ಭಾರತೀಯರು ನಿರುದ್ಯೋಗಿಗಳಾಗಿ ನಿತ್ಯ ಮರಳುತ್ತಿದ್ದರೂ ಭಾರತೀಯ ನಿರುದ್ಯೋಗಿಗಳ ಹಿತ ಕಾಪಾಡುವಲ್ಲಿ ಅಲ್ಲಿರುವ ಭಾರತೀಯ ದೂತಾವಾಸ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನಿರುದ್ಯೋಗಿಗಳಾದ ಬಗ್ಗೆ ಯಾವುದೇ ದೂರುಗಳು ನಮಗೆ ತಲುಪಿಲ್ಲ ಎಂದು ಅಲ್ಲಿಯ ದೂತಾವಾಸ ಕಚೇರಿಯ ಅಧಿಕಾರಿಗಳು ಹೇಳುವುದರ ಮೂಲಕ ಸಂತ್ರಸ್ತರ ಸಂಕಟಕ್ಕೆ ಸ್ಪಂದಿಸುವ ಹೊಣೆಗಾರಿಕೆಯಿಂದ ಜಾರಿಕೊಂಡಿದ್ದಾರೆ.
. ನಿತಾಕತ್ ಕಾನೂನಿನ ಸಂತ್ರಸ್ತರು ಉನ್ನತ ಮಟ್ಟದ ಶಿಕ್ಷಣ ಪಡೆದವರೂ ಅಲ್ಲ ಆದುದರಿಂದ ಅವರು ತವರಿಗೆ ಮರಳುವುದೊಂದೇ ಪರಿಹಾರ ಎಂದುಕೊಂಡು ಮರಳುತ್ತಿದ್ದಾರೆ. ಅಂತಹವರನ್ನು ಭಾರತೀಯ ದೂತಾವಾಸದ ಅಧಿಕಾರಿಗಳು ತಾವಾಗಿಯೇ ಸಂಪರ್ಕಿಸಿ ಪರಿಹಾರೋಪಾಯದ ಕ್ರಮ ಕೈಗೊಳ್ಳುವುದು ಬಿಟ್ಟು ಯಾರಿಂದಲೂ ದೂರು ಬಂದಿಲ್ಲ ಎಂದು ದೂರಿಗಾಗಿ ಕಾದು ಕುಳಿತಿದ್ದಾರೆ.
ಈ ಮೂಲಕ ಭಾರತೀಯ ದೂತಾವಾಸದ ಜಡತ್ವವನ್ನು ಜಗತ್ತಿಗೆ ತೋರ್ಪಡಿಸುತ್ತಿದ್ದಾರೆ.ನಿತಾಕತ್ ಕಾನೂನನ್ನು ಸೌದಿ ಆಡಳಿತ 2011ರ ಜೂನ್‌ನಲ್ಲಿ ಅಂಗೀಕರಿಸಿದೆ. ಇತ್ತೀಚೆಗಷ್ಟೇ ಅದು ಜಾರಿಗೆ ಬಂದಿದೆ. ಭಾರತೀಯ ದೂತಾವಾಸದ ಅಧಿಕಾರಿಗಳಿಗೆ ಭಾರತೀಯ ಉದ್ಯೋಗಿಗಳ ಬಗ್ಗೆ ಕಾಳಜಿ ಇದ್ದಿದ್ದರೆ ಕಾನೂನು ಅಂಗೀಕಾರವಾದ ದಿನದಿಂದಲೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಸೌದಿಯಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಭಾರತೀಯ ಉದ್ಯೋಗಿಗಳ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಮಾಡುವುದಲ್ಲದೆ ಸಂತ್ರಸ್ತರಿಗೆ ಅನ್ಯ ಮಾರ್ಗ ಕಾಣುತ್ತಿಲ್ಲ

No comments:

Post a Comment