Monday, April 1, 2013

ಚುನಾವಣೆ: ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಹೆಚ್ಚಿದ ಒತ್ತಡ



 ಏಪ್ರಿಲ್ -01-2013

 ಮಂಗಳೂರು,: ಚುನಾ ವಣೆಯ ಹಿನ್ನೆಲೆಯಲ್ಲಿ ಮೂರು ವರ್ಷ ಕ್ಕಿಂತ ಅಧಿಕ ಸಮಯ ಒಂದೇ ಕಡೆ ಯಿರುವ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ವರ್ಷಗಳಿಂದ ನೆಲೆಯೂರಿರುವ ಅಧಿಕಾರಿಗಳ ವರ್ಗಾವಣೆಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರಿಂದ ಒತ್ತಡ ಹೆಚ್ಚಾಗಿದೆ.
ಮಾಹಿತಿ ಹಕ್ಕು ಅಧಿನಿಯಮ 2005ರ ಅನ್ವಯ ಸಾಮಾಜಿಕ ಕಾರ್ಯ ಕರ್ತರೊಬ್ಬರು ಕೆಲವು ತಿಂಗಳ ಹಿಂದೆ ಪಡೆದ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 3 ವರ್ಷಕ್ಕಿಂತ ಅಧಿಕ ಸಮಯ ಒಂದೇ ಕಡೆ ಇರುವ ಅಧಿಕಾರಿಗಳು ಇಲ್ಲ. ಕೇಂದ್ರ ಸ್ಥಾನ (ಪಶ್ಚಿಮ ವಲಯ)ದಲ್ಲಿ ಡಿವೈಎಸ್ಪಿ ಪಿ.ಹರಿಶ್ಚಂದ್ರ 2008ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದ ಹಾಗೆ, ಸಾರ್ವಜನಿಕ ಮಾಹಿತಿ ಅಧಿಕಾರಿ ಕೂಡ ಅವರೇ ಆಗಿರುವುದು ವಿಶೇಷ. ಇನ್ನುಳಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ 17 ಪೊಲೀಸ್ ಠಾಣೆ ಗಳಿದ್ದು, 14 ಪೊಲೀಸ್ ಅಧಿಕಾರಿಗಳು ಈ ಠಾಣೆಗಳಲ್ಲಿ 3 ವರ್ಷಗಳಿಗಿಂತ ಅಧಿಕ ಸಮಯದಿಂದ ಸೇವೆಯಲ್ಲಿದ್ದಾರೆ.
ಅದರಲ್ಲಿ ಬಂದರ್ ಠಾಣೆಯ ಎಸ್ಸೈ ಕೆ.ಕೆ.ರಾಮಕೃಷ್ಣ, ಸಂಚಾರ ಪೂರ್ವ ಠಾಣೆಯ ಎಸ್ಸೈ ಸಿದ್ದಪ್ಪ, ಸಂಚಾರಿ ಪಶ್ಚಿಮ ಠಾಣೆಯ ಎಸ್ಸೈ ಗೋಪಾಲಕೃಷ್ಣ ಭಟ್, ಉರ್ವ ಠಾಣೆಯ ಎಸ್ಸೈ ಗೋಪಾಲ ಕೆ,. ಉಳ್ಳಾಲ ಠಾಣೆಯ ರಮೇಶ್ ಎಚ್.ಹಾನಾಪುರ, ಕೊಣಾಜೆ ಠಾಣೆಯಲ್ಲಿದ್ದ ಎಸ್ಸೈ ಶಿವಪ್ರಕಾಶ್, ಪಣಂಬೂರು ಠಾಣೆಯ ಭಾರತಿ, ಮೂಡುಬಿದಿರೆ ಠಾಣೆಯ ರಮೇಶ್ ಕುಮಾರ್, ಸಿಎಸ್‌ಬಿಯ ಗಿರಿಜಾ, ಸಿಸಿಬಿಯ ಶ್ಯಾಮಸುಂದರ, ಮಂಗಳೂರು ಉತ್ತರ ಠಾಣೆಯ ಪಿಐ ಮಂಜುನಾಥ ಶೆಟ್ಟಿ, ಪೋರ್ಟ್ ರಿಜಿಸ್ಟ್ರೇಶನ್ ಪಿಐ ಕೆ.ಎಂ. ಚಂದ್ರಶೇಖರ್, ಸಿಸಿಬಿ ಇನ್ಸ್‌ಪೆಕ್ಟರ್ ವೆಂಕಟೇಶ್ ಪ್ರಸನ್ನ, ಸಿಎಸ್‌ಬಿ ಇನ್ಸ್‌ಪೆಕ್ಟರ್ ವಿನಯ ಗಾಂವ್ಕರ್ ಸೇರಿದ್ದಾರೆ. ಅಲ್ಲದೆ, ಇನ್ನೂ ಕೆಲವು ಪೊಲೀಸ್ ಅಧಿಕಾರಿಗಳು 3 ವರ್ಷ ಕ್ಕಿಂತ ಅಧಿಕ ಕಾಲ ಸೇವೆ ಸಲ್ಲಿಸಿದ ಬಗ್ಗೆ ಮಾಹಿತಿಯಿದೆ. ಚುನಾವಣೆ ಸುಸೂತ್ರವಾಗಿ ನಡೆಸುವ ದೃಷ್ಟಿಯಿಂದ ಇವರನ್ನು ವರ್ಗಾವಣೆ ಮಾಡಲು ರಾಜಕೀಯ ಪಕ್ಷಗಳಿಂದ ಒತ್ತಡ ಕೇಳಿ ಬರುತ್ತಿದೆ.
ಈತನ್ಮಧ್ಯೆ ಮಂಗಳೂರು ಗ್ರಾಮಾಂ ತರ ಠಾಣೆಯ ಸುಧಾಕರ್ ಅವರನ್ನು ಕೊಣಾಜೆ, ಮಂಗಳೂರು ದಕ್ಷಿಣ ಠಾಣೆಯ ಎಚ್.ಎಂ.ಪೂವಪ್ಪರನ್ನು ಕಾವೂರು, ಸಂಚಾರ ಪಶ್ಚಿಮ ಠಾಣೆಯ ಗೋಪಾಲಕೃಷ್ಣ ಭಟ್‌ರನ್ನು ಮಂಗಳೂರು ಗ್ರಾಮಾಂತರ ಠಾಣೆ, ಸಂಚಾರ ಪೂರ್ವ ಠಾಣೆಯ ಸಿದ್ದಪ್ಪರನ್ನು ಮಂಗಳೂರು ದಕ್ಷಿಣ ಠಾಣೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಪೊಲೀಸ್ ಅಧಿಕಾರಿಗಳನ್ನು ಕಮಿಷನರೇಟ್ ವ್ಯಾಪ್ತಿ ಅಥವಾ ಜಿಲ್ಲೆಯಿಂದ ಹೊರಗೆ ಕಳುಹಿಸಿದರೆ ಮಾತ್ರ ಚುನಾವಣಾ ಸಂದರ್ಭದ ವರ್ಗಾವಣೆಗೆ ಹೆಚ್ಚು ಮಹತ್ವ ಸಿಗ ಲಿದ್ದು, ಇದರ ವಿರುದ್ಧ ಹೋರಾಟ ಮಾಡಲು ಸಿದ್ಧತೆ ನಡೆಯುತ್ತಿದೆ.
ಅಲ್ಲದೆ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳ ಮಾಹಿತಿಯನ್ನು ಕೂಡಾ ಕಲೆ ಹಾಕ ಲಾಗುತ್ತಿದೆ. ಕೆಲವೆಡೆ ಹಿರಿಯ ಅಧಿಕಾರಿಗಳೂ ಈ ಪಟ್ಟಿಯಲ್ಲಿ ಬರುವ ಕಾರಣ ಅವರಿಗೆ ಆತಂಕ ಎದುರಾಗಿದೆ. ಒಟ್ಟಿನಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಬಿರುಸಿನ ಚಟುವಟಿಕೆ ನಡೆದಿದೆ

No comments:

Post a Comment