Monday, April 1, 2013

ಕ್ಷಮೆ ಯಾಚಿಸಬೇಕಾದವರು ಯಾರು? ಏಪ್ರಿಲ್ -01-2013

ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ಬಿಜೆಪಿಯ ನೂತನ ಅಧ್ಯಕ್ಷ ಪ್ರಹ್ಲಾದ್ ಜೋಷಿಯವರು ಬಿಜೆಪಿ ಅಭ್ಯರ್ಥಿಗಳಿಗೆ ಮನೆ ಮನೆಗೆ ತೆರಳಲು ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲ ಮನೆ ಮನೆಗೆ ತೆರಳಿ ಕ್ಷಮೆ ಕೋರಿ ಎಂದು ಹೇಳಿದ್ದಾರೆ. ಇದು ಒಬ್ಬ ರಾಜಕೀಯ ಪಕ್ಷದ ಮುಖಂಡನ ಆತ್ಮವಿಮರ್ಶೆಯ ಮಾತೂ ಹೌದು. ಮೊತ್ತ ಮೊದಲು ಈ ರಾಜಕಾರಣಿಗಳು ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳಬೇಕು. ತಾವು ಮಾಡಿದುದು ತಪ್ಪು ಎನ್ನುವುದರ ಅರಿವಿರುವವರು ಮಾತ್ರ ಮುಂದಿನ ದಿನಗಳಲ್ಲಿ ತಪ್ಪು ಹೆಜ್ಜೆಗಳನ್ನು ಇಡಲು ಹಿಂದೆ ಮುಂದೆ ನೋಡಿಯಾರು. ಸದ್ಯದ ರಾಜಕೀಯ ಸಂದರ್ಭದಲ್ಲಿ ತಪ್ಪುಗಳನ್ನು ಒಪ್ಪಿಕೊಳ್ಳುವವರು, ಅದಕ್ಕಾಗಿ ಕ್ಷಮೆ ಯಾಚಿಸು ವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ತಪ್ಪು ಘಟಿಸಿದ ಬಳಿಕವೂ, ತಮ್ಮಿಂದ ತಪ್ಪಾಗಿಲ್ಲ, ಅದೆಲ್ಲ ವಿರೋಧ ಪಕ್ಷಗಳ ಪಿತೂರಿ ಎಂದು ವಾದಿಸುವವರೇ ಅಧಿಕ.
ಈಶ್ವರಪ್ಪನವರಂತಹ ನಾಯಕರು ದಿನಕ್ಕೊಂದು ಮಾತನಾಡುತ್ತಾರೆ. ತಮ್ಮ ಬಳಗದ ತಪ್ಪನ್ನು ಯಡಿಯೂರಪ್ಪನವರ ತಲೆಗೆ ಕಟ್ಟಿ ಚುನಾವಣೆಯಲ್ಲಿ ಮತ ಯಾಚಿಸಬಹುದು ಎಂದು ಅವರು ತಿಳಿದು ಕೊಂಡಿದ್ದಾರೆ. ಇದೀಗ ಪಕ್ಷದಲ್ಲಿ ಯಾರೂ ಭ್ರಷ್ಚಾಚಾರಿಗಳಿಲ್ಲ ಎನ್ನುವ ಶೆಟ್ಟರ್ ಕುರಿತೂ ಆರೋಪಗಳಿವೆ. ಹಾಗೆಯೇ ಸಚಿವ ಅಶೋಕ್, ಸದಾನಂದ ಗೌಡ ಹೀಗೆ ಹಲವು ನಾಯಕರ ಮೇಲೆ ಲಂಚದ ಆರೋಪಗಳಿವೆ.
ತಮಗೆ ತಾವೇ ಪ್ರಾಮಾಣಿಕರು ಎಂದು ಘೋಷಿಸಿದಾಕ್ಷಣ ಜನರು ಬಿಜೆಪಿಯನ್ನು ಕ್ಷಮಿಸುತ್ತಾರೆ ಎನ್ನುವುದು ಅವರ ವೌಢ್ಯ ವಾಗಿದೆ. ಮೊದಲು ಮಾಡಿದ ತಪ್ಪನ್ನು ಒಪ್ಪಿಕೊಳ್ಳಬೇಕು. ಅದಕ್ಕಾಗಿ ಕ್ಷಮೆ ಯಾಚಿಸ ಬೇಕು. ಬಳಿಕ ಜನರಲ್ಲಿ ಮತ ಯಾಚಿಸಬೇಕು. ಪ್ರಹ್ಲಾದ್ ಜೋಷಿಯವರು ಇದನ್ನೇ ವಿಜಯ ಸಂಕಲ್ಪ ಸಮಾವೇಶದಲ್ಲಿ ಹೇಳಿದ್ದಾರೆ. ಆದರೆ ಕೇವಲ ಅಭ್ಯರ್ಥಿಗಳು ಅಥವಾ ಕಾರ್ಯ ಕರ್ತರು ಕ್ಷಮೆ ಯಾಚಿಸಿದರೆ ಸಾಲದು. ನಿಜಕ್ಕೂ ಕ್ಷಮೆ ಯಾಚನೆ ಅನಂತಕುಮಾರ್ ರಿಂದಲೇ ಆರಂಭವಾಗಬೇಕು.
ಅಧಿಕಾರಕ್ಕೇರಿದ ಬಿಜೆಪಿಯೊಳಗೆ ಭಿನ್ನಮತ ವನ್ನು ಭಿತ್ತಿದವರು ಅನಂತಕುಮಾರ್. ಅವರ ಸಂಚಿನ ಫಲವಾಗಿಯೇ ಬಿಜೆಪಿ ಛಿದ್ರ ವಾಯಿತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರು ವಲ್ಲಿ ಕಿಂಚಿತ್ತೂ ಶ್ರಮವನ್ನು ಹಾಕದ ಅನಂತಕುಮಾರ್, ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದರ ಫಲವಾಗಿಯೇ ಅಲ್ಲಿ ಗೊಂದಲ ಆರಂಭವಾಯಿತು. ಆದುದರಿಂದ ಅನಂತಕುಮಾರ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಬೇಕು. ಹಾಗೆಯೇ, ಬಿಜೆಪಿ ಸರಕಾರದ ಮೇಲಿರುವ ಅತಿ ದೊಡ್ಡ ಆರೋಪ ಅಕ್ರಮ ಗಣಿಗಾರಿಕೆ.
ರೆಡ್ಡಿ ಸಹೋದರರ ಅಕ್ರಮ ಗಣಿಕಾರಿಕೆಯನ್ನು ಪ್ರೋತ್ಸಾಹಿಸಿ, ಅವರಿಂದ ಕೋಟಿಗಟ್ಟಲೆ ದುಡ್ಡನ್ನು ದೋಚಿದ ಆರೋಪ ಬಿಜೆಪಿ ಮುಖಂಡರಾದ ನಿತಿನ್ ಗಡ್ಕರಿ ಮತ್ತು ಸುಶ್ಮಾ ಸ್ವರಾಜ್‌ರ ಮೇಲಿದೆ. ರೆಡ್ಡಿಗಳನ್ನು ಪೋಷಿಸಿ, ಬೆಳೆಸಿದುದೇ ಈ ಇಬ್ಬರು ನಾಯಕರು. ಆದುದರಿಂದ ದಿಲ್ಲಿಯ ಈ ಮುಖಂಡರು ರಾಜ್ಯದ ಜನರ ಕ್ಷಮೆ ಯಾಚಿಸಿ, ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳಿಗೆ ಮಾದರಿಯಾಗಬೇಕು.
ತಾವು ಮಾಡಿದ ತಪ್ಪುಗಳನ್ನು ಕರ್ನಾಟಕದ ಬಿಜೆಪಿಯ ನಾಯಕರ ಮೇಲೆ ಹಾಕಿ ಕೈ ತೊಳೆದುಕೊಂಡರೆ, ರಾಜ್ಯ ನಾಯಕರು ಸ್ಥಳೀಯ ನಾಯಕರ ತಲೆಯ ಮೇಲೆ ಹಾಕಿ ಕೈ ತೊಳೆದುಕೊಳ್ಳುತ್ತಾರೆ. ಆದುದರಿಂದ ಮೊದಲು ಆತ್ಮವಿಮರ್ಶೆ, ಕ್ಷಮೆಯಾಚನೆ ನಡೆಯ ಬೇಕಾದುದು ನಿತಿನ್ ಮತ್ತು ಸುಶ್ಮಾರಿಂದ. ಇದಿಷ್ಟಾದರೆ ಸಾಕೇ? ಆರೆಸ್ಸೆಸ್ ಕೂಡ ಪ್ರಹ್ಲಾದ್ ಜೋಷಿಯವರ ಮಾತಿಗೆ ತಲೆಬಾಗಿ ಕ್ಷಮೆ ಯಾಚಿಸಬೇಕಾಗಿದೆ. ಯಡಿಯೂರಪ್ಪ ಬೇಡ ಬೇಡ ಎಂದರೂ ಆಡಳಿತದಲ್ಲಿ ಮೂಗು ತೂರಿಸಿದುದು ಆರೆಸ್ಸೆಸ್. ತಮ್ಮ ಶಿಷ್ಯರನ್ನು ರಕ್ಷಿಸುವುದಕ್ಕಾಗಿ ಆರೆಸ್ಸೆಸ್ ಕೊನೆಯವರೆಗೂ ಪ್ರಯತ್ನ ನಡೆಸಿತು. ಯಡಿಯೂರಪ್ಪನವರಿಗೆ ನಿಂತಲ್ಲಿ ಕುಂತಲ್ಲಿ ಬೆದರಿಕೆ ಹಾಕುತ್ತಾ, ಅವರ ಕೈಗಳನ್ನು ಕಟ್ಟಿ ಹಾಕಿತು.
ಯಾವುದೇ ರೀತಿಯಲ್ಲಿ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲಾಗದ ಸ್ಥಿತಿಗೆ ತಲುಪಿಸಿತು. ಯಡಿಯೂರಪ್ಪನವರ ವಿರುದ್ಧ ಉಳಿದವರನ್ನು ಎತ್ತಿ ಕಟ್ಟುವಲ್ಲಿ ಆರೆಸ್ಸೆಸ್ ಪಾತ್ರ ಬಲು ದೊಡ್ಡದು. ಬಿಜೆಪಿ ಒಡೆಯುವುದಕ್ಕೆ ಆರೆಸ್ಸೆಸ್ ಸಾಕಷ್ಟು ಕಾರಣವಾಗಿದೆ. ಹಿಂದುತ್ವದ ಹೆಸರು ಹೇಳಿದರೂ, ಕಟ್ಟ ಕಡೆಯಲ್ಲಿ ಬ್ರಾಹ್ಮಣರನ್ನೇ ಅಧಿಕಾರಕ್ಕೇರಿಸಲು ಮಾಡಿದ ಆರೆಸ್ಸೆಸ್‌ನ ಪ್ರಯತ್ನ ರಾಜ್ಯದ ಮೇಲೂ, ಪಕ್ಷದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಆದುದರಿಂದ ಆರೆಸ್ಸೆಸ್ ಕೂಡ ಸಾರ್ವಜನಿಕ ವಾಗಿ ಜನರೊಂದಿಗೆ ಕ್ಷಮೆ ಯಾಚಿಸ ಬೇಕು. ಜೋಷಿಯವರು ಅದನ್ನು ನಡೆಸಿಕೊಡಬೇಕು. ಅವರಿಂದ ಅದು ಸಾಧ್ಯವೇ?

ಪುತ್ತೂರಿನ ಬೀದಿ ಬೀದಿಗಳಲ್ಲಿ ನಿಂತು, ಮುಸ್ಲಿಮರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಾ, ತಮಗೆ ಹಿಂದೂಗಳ ಮತ ಮಾತ್ರ ಸಾಕು ಎಂದು ಘೋಷಿಸಿ ಅಧಿಕಾರಕ್ಕೇರಿದವರು ಸದಾನಂದ ಗೌಡ. ಆದರೆ ಒಕ್ಕಲಿಗರ ಸಮಾವೇಷದ ವೇದಿಕೆಯಲ್ಲಿ “ನನ್ನನ್ನು ಮುಖ್ಯಮಂತ್ರಿ ಮಾಡಿದವರು ಒಕ್ಕಲಿಗರು” ಎಂದು ಘೋಷಿಸಿದರು. ಹಿಂದುತ್ವದ ಹೆಸರಲ್ಲಿ ಜನರನ್ನು ಮೋಸ ಮಾಡಿದರು. ಈ ಕಾರಣಕ್ಕಾಗಿ ಸದಾನಂದ ಗೌಡರು ಕರಾವಳಿಯ ಜನರ ಕ್ಷಮೆ ಯಾಚಿಸಬೇಕು. ಅದಕ್ಕವರು ಸಿದ್ಧರಿದ್ದಾರೆಯೇ?
ಅಷ್ಟೇ ಅಲ್ಲ, ತನ್ನ ಕರಾವಳಿಯ ರಾಜಕೀಯಕ್ಕಾಗಿ ಸರಕಾರವನ್ನು ಬೇಕಾ ಬಿಟ್ಟಿ ಬಳಸಿಕೊಂಡ ಕಲ್ಲಡ್ಕ ಪ್ರಭಾಕರ ಭಟ್ಟ, ರಾಸಲೀಲೆಯಲ್ಲಿ ಭಾಗಿಯಾದ ರಘುಪತಿ ಭಟ್ಟರೂ ಜನರ ಕ್ಷಮೆ ಯಾಚಿಸಬೇಕು. ಹೀಗೆ, ನಾಯಕರು ಕ್ಷಮೆ ಯಾಚಿಸಿದ ಬಳಿಕ, ತಳಮಟ್ಟದ ನಾಯಕರು ಮನೆಮನೆಗೆ ತೆರಳಿ ಕ್ಷಮೆ ಯಾಚಿಸುವುದರಲ್ಲಿ ಅರ್ಥವಿದೆ. ಮುಖಂಡರು ಮಾಡಿದ ತಪ್ಪಿಗೆ, ಸ್ಥಳೀಯ ಶಾಸಕರಿಗೆ ಬರೆ ಹಾಕುವುದು ನ್ಯಾಯವಲ್ಲ. ವೊದಲು ನಾಯಕರು. ಅನಂತರ ಅವರ ಹಿಂಬಾಲಕರು ಕ್ಷಮೆ ಯಾಚಿಸಿದರೆ ಅದು ಅರ್ಥಪೂರ್ಣ. ಹಾಗಾದಲ್ಲಿ ಮಾತ್ರ ಬಿಜೆಪಿಯ ತಪ್ಪನ್ನು ಜನರು ಕ್ಷಮಿಸುವ ಕಡೆಗೆ ಯೋಚಿಸಿಯಾರು. ಮೊಸಳೆ ಕಣ್ಣೀರು ಹಾಕಿ ಮತ್ತೆ ಜನರನ್ನು ಮೋಸ ಮಾಡುವುದು ಅಷ್ಟು ಸುಲಭದ ಮಾತಲ್ಲ.
 ಕೃಪೆ:ವಾ.ಭಾರತಿ 

No comments:

Post a Comment