Saturday, April 6, 2013

ಥಾಣೆ ಕಟ್ಟಡ ಕುಸಿತ: ಮೃತರ ಸಂಖ್ಯೆ 72ಕ್ಕೆಏಪ್ರಿಲ್ -07-2013

ಥಾಣೆ, : ಇಲ್ಲಿನ ಶಿಲ್ ಫಾಟ ಪ್ರದೇಶದಲ್ಲಿ ಕುಸಿದ ಅಕ್ರಮ ಏಳು ಅಂತಸ್ತಿನ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಅವಶೇಷಗಳಡಿಯಿಂದ ಇನ್ನಷ್ಟು ಮೃತದೇಹಗಳನ್ನು ರಕ್ಷಣಾ ಕಾರ್ಯಕರ್ತರು ಇಂದು ಹೊರತೆಗೆದಿದ್ದಾರೆ. ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 72ಕ್ಕೇರಿದೆ.
33 ಪುರುಷರು, 22 ಮಹಿಳೆಯರು ಮತ್ತು 17 ಮಕ್ಕಳು ಸೇರಿದಂತೆ 72 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ವಿಪತ್ತು ನಿರ್ವಹಣಾ ನಿಯಂತ್ರಣ (ಆರ್‌ಡಿಎಂಸಿ) ಮೂಲಗಳು ತಿಳಿಸಿವೆ.
60 ಮಂದಿ ಗಾಯಗೊಂಡಿದ್ದು, ಅವರ ಪೈಕಿ 36 ಮಂದಿಯನ್ನು ಥಾಣೆ, ಕಲ್ವ ಮತ್ತು ಮುಂಬ್ರ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಮುಂಬೈನ ಜೆಜೆ ಮತ್ತು ಸಯನ್ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.
ಈ ನಡುವೆ, ಅವಶೇಷಗಳಡಿಯಲ್ಲಿ ಶಿಕ್ಷಕಿಯೊಬ್ಬರು ತನ್ನ ಆರೇಳು ವಿದ್ಯಾರ್ಥಿಗಳೊಂದಿಗೆ ಸಿಕ್ಕಿಹಾಕೊಂಡಿರುವ ಮಾಹಿತಿ ಲಭ್ಯವಾಗಿದೆ. ಅವಶೇಷಗಳಡಿಯಿಂದ ಜೀವಂತವಾಗಿ ಹೊರಬಂದ ಶಬ್ನಮ್ ಎಂಬವರು ದುರಂತ ಸ್ಥಳದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ನಿನ್ನೆ ಅಪರಾಹ್ನ 3 ಗಂಟೆಹೊತ್ತಿಗೆ ತನ್ನ ಮೊಬೈಲ್ ಫೋನ್‌ಗೆ ತುರ್ತು ಕರೆ ಮಾಡಿದ ಶಿಕ್ಷಕಿ, ಆರೇಳು ವಿದ್ಯಾರ್ಥಿಗಳೊಂದಿಗೆ ತಾನು ಅವಶೇಷಗಳಡಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಹೇಳಿದರು ಎಂದು ಶಬ್ನಮ್ ತಿಳಿಸಿದರು.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ಸ್ಥಿತಿ ಏನಾಗಿದೆಯೆಂದು ಗೊತ್ತಾಗಿಲ್ಲ.
ಈ ಮೊದಲು, ಸ್ಥಳೀಯ ಪೊಲೀಸ್ ಮತ್ತು ನಗರಾಡಳಿತಕ್ಕೆ ಸಹಾಯ ಮಾಡುವುದಕ್ಕಾಗಿ ನಿಯೋಜಿಸಲ್ಪಟ್ಟ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ 59 ಮಂದಿಯನ್ನು ರಕ್ಷಿಸಿತ್ತು.
ಬಿಲ್ಡರ್‌ಗಳಾದ ಸಲೀಲ್ ಮತ್ತು ಖಲೀಲ್ ಜಮಾದಾರ್ ವಿರುದ್ಧ ಐಪಿಸಿಯ 304ನೆ ವಿಧಿಯಂತೆ (ಕೊಲೆಯಲ್ಲದ ಶಿಕ್ಷಾರ್ಹ ಮಾನವ ಹತ್ಯೆ) ಮೊಕದ್ದಮೆ ದಾಖಲಿಸಲಾಗಿದೆ. ಆದರೆ, ಯಾರನ್ನೂ ಬಂಧಿಸಲಾಗಿಲ್ಲ.
ಸ್ಥಳೀಯ ಉಪ ಮುನಿಸಿಪಲ್ ಕಮಿಶನರ್ ಮತ್ತು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರೊಬ್ಬರನ್ನು ಅಮಾನತುಗೊಳಿಸಲಾಗಿದೆ ಹಾಗೂ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ನಿನ್ನೆ ಮಹಾರಾಷ್ಟ್ರ ವಿಧಾನಸಭೆಗೆ ತಿಳಿಸಿದರು. ಕಟ್ಟಡ ಗುರುವಾರ ಕುಸಿದಿತ್ತು.

No comments:

Post a Comment