Wednesday, April 17, 2013

7ನೆ ಶಿಖರಾರೋಹಣಕ್ಕೆ ಹೊರಟು ನಿಂತ ಇಬ್ಬರು ಮಕ್ಕಳ ತಾಯಿ



ಏಪ್ರಿಲ್ -17-2013

ಜಮ್ಶೆಡ್‌ಪುರ,: ಪ್ರಪಂಚದ ಸಪ್ತ ಪರ್ವತ ಶಿಖರಗಳನ್ನು ಏರುವ 47 ವರ್ಷದ ಪ್ರೇಮಲತಾರ ಮಹತ್ವಾಕಾಂಕ್ಷೆ ಪೂರ್ಣಗೊಳ್ಳಲು ಇನ್ನೊಂದು ಶಿಖರ ಮಾತ್ರ ಬಾಕಿಯಿದೆ. ತನ್ನ ಕೊನೆಯ ಸವಾಲನ್ನು ಪೂರೈಸುವ ಯೋಜನೆಯ ಭಾಗವಾಗಿ ಪ್ರೇಮಲತಾ ಉತ್ತರ ಅಮೆರಿಕದಲ್ಲಿರುವ ವೌಂಟ್ ಮೆಕಿನ್ಲೆ (6196 ಮೀ.) ಆರೋಹಣಕ್ಕೆ ಮುಂದಿನ ತಿಂಗಳು ಹೊರಡಲಿದ್ದಾರೆ.
ಏಳು ಖಂಡಗಳಲ್ಲಿರುವ ತಲಾ ಒಂದೊಂದು ಎತ್ತರದ ಪರ್ವತ ಶಿಖರಗಳನ್ನು ಏರಲು ಪ್ರೇಮಲತಾಗೆ ಸಾಧ್ಯವಾದರೆ ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆಯಾಗುತ್ತಾರೆ ಹಾಗೂ ವಿಶ್ವದ ಅತ್ಯಂತ ಹಿರಿಯ ಮಹಿಳೆಯೂ ಆಗಲಿದ್ದಾರೆ ಎಂದು ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಶನ್ ಮುಖ್ಯಸ್ಥೆ ಬಚೇಂದ್ರಿ ಪಾಲ್ ಹೇಳುತ್ತಾರೆ.
ಝಾರ್ಖಂಡ್‌ನ ಗೃಹಿಣಿ ಈಗಾಗಲೇ ‘ಸಪ್ತ ಶಿಖರ’ಗಳ ಪೈಕಿ ಆರನ್ನು ಹತ್ತಿದ್ದಾರೆ. ಅವುಗಳೆಂದರೆ ವೌಂಟ್ ಎವರೆಸ್ಟ್ (8848 ಮೀ., ನೇಪಾಳ, ಏಶ್ಯ), ವೌಂಟ್ ಎಲ್ಬ್ರಸ್ (5642 ಮೀ., ರಶ್ಯ, ಯುರೋಪ್), ವೌಂಟ್ ಕಿಲಿಮಾಂಜರೊ (5895 ಮೀ, ತಾಂಝಾನಿಯ, ಆಫ್ರಿಕ), ವೌಂಟ್‌ವಿನ್ಸನ್ (4897 ಮೀ., ಅಂಟಾರ್ಕ್ಟಿಕ), ವೌಂಟ್ ಅಕಾಂಕಾಗ್ವ (6962 ಮೀ., ಅರ್ಜೆಂಟೀನ, ದಕ್ಷಿಣ ಅಮೆರಿಕ) ಮತ್ತು ವೌಂಟ್ ಕಾರ್ಸೆಂಝ್ ಪಿರಾಮಿಡ್ (4884 ಮೀ., ಆಸ್ಟ್ರೇಲಿಯ).
ಇಬ್ಬರು ಬೆಳೆದ ಪುತ್ರಿಯರ (ಒಬ್ಬರಿಗೆ ಮದುವೆಯಾಗಿದೆ) ತಾಯಿಯಾಗಿರುವ ಪ್ರೇಮಲತಾ ವೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ಭಾರತೀಯ ಮಹಿಳೆಯಾಗಿದ್ದಾರೆ. ಅವರು 45ನೆ ವಯಸ್ಸಿನಲ್ಲಿ 2011 ಮೇ 20ರಂದು ಈ ಸಾಧನೆ ಮಾಡಿದ್ದರು.
ವೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಬಚೇಂದ್ರಿ ಪಾಲ್ ಪ್ರೇಮಲತಾರ ಮಾರ್ಗದರ್ಶಿಯಾಗಿದ್ದಾರೆ. ಪ್ರೇಮಲತಾ ಕಳೆದ ವರ್ಷದ ಎಪ್ರಿಲ್-ಮೇ ತಿಂಗಳಲ್ಲಿ ವೌಂಟ್ ಮೆಕಿನ್ಲೆ ಪರ್ವತವನ್ನು ಏರುವುದರಿಂದ ಸ್ವಲ್ಪದರಲ್ಲೇ ಅವರು ವಂಚಿತರಾಗಿದ್ದರು. ಕೆಟ್ಟ ಹವಾಮಾನದಿಂದಾಗಿ ಅವರಿಗೆ ಶಿಖರ ಏರುವುದು ಸಾಧ್ಯವಾಗಿರಲಿಲ್ಲ.
ಶಿಖರದಿಂದ ಅವರು ಕೇವಲ 700 ಅಡಿಗಳ ದೂರದಲ್ಲಿದ್ದರು. ಆಗ ಒಮ್ಮೆಲೇ ಹವಾಮಾನ ಬಿರುಸುಗೊಂಡಿತು. ಉಷ್ಣತೆ ಮೈನಸ್40 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಿತು ಹಾಗೂ ಬಲವಾದ ಗಾಳಿ ಬೀಸಿತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ಪ್ರಯತ್ನವನ್ನು ಕೈಚೆಲ್ಲಲೇಬೇಕಾಯಿತು.
ಸಹಿಷ್ಣುತೆ, ದೈಹಿಕ ಮತ್ತು ಮಾನಸಿಕ ದಾರ್ಢ್ಯವನ್ನು ಹೆಚ್ಚಿಸಿಕೊಳ್ಳಲು ಪ್ರೇಮಲತಾ ಒಂದು ತಿಂಗಳಿನಿಂದ ದಾರ್ಜಿಲಿಂಗ್‌ನಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಶಿಖರದಲ್ಲಿ ಎದುರಾಗುವ ಕಠಿಣ ವಾತಾವರಣಕ್ಕೆ ಹೊಂದಿಕೊಳ್ಳಲು ಇದು ಅವಶ್ಯಕವಾಗಿದೆ ಎಂದು ಬಚೇಂದ್ರಿ ಪಾಲ್ ಹೇಳುತ್ತಾರೆ.
ಪ್ರೇಮಲತಾ ಹೊಸದಿಲ್ಲಿಯಲ್ಲಿ ಎಪ್ರಿಲ್ 20ರಂದು ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಬಳಿಕ ಎಪ್ರಿಲ್ 29ರಂದು ವೌಂಟ್ ಮೆಕಿನ್ಲೆ ಆರೋಹಣಕ್ಕೆ ತೆರಳುವರು ಎಂದು ಅವರ ಗಂಡ ಇಲ್ಲಿನ ಇಂಗ್ಲಿಷ್ ದೈನಿಕವೊಂದರ ಸಂಪಾದಕ ವಿಮಲ್ ಅಗರ್‌ವಾಲ್ ಹೇಳಿದರು.

No comments:

Post a Comment