Tuesday, April 2, 2013

ನಿತಾಕತ್: ಅನಿವಾಸಿಗಳಿಗೆ 6 ತಿಂಗಳ ಕ್ಷಮಾದಾನ; ಸೌದಿಯನ್ನು ಕೋರಲು ಕೇಂದ್ರಕ್ಕೆ ಕೇರಳ ಆಗ್ರಹ



 ಏಪ್ರಿಲ್ -02-2013

ತಿರುವನಂತಪುರ,: ಸ್ಥಳೀಯರಿಗೆ ಉದ್ಯೋಗಗಳಲ್ಲಿ ಪ್ರಾಶಸ್ತ್ಯ ನೀಡುವ ಉದ್ದೇಶದಿಂದ ಸೌದಿ ಆರೇಬಿಯವು ಜಾರಿಗೊಳಿಸಿರುವ ನೂತನ ಕಾರ್ಮಿಕ ನೀತಿ ‘ನಿತಾಕತ್’ನಿಂದಾಗಿ ತೊಂದರೆಗೊಳಗಾಗುವ ಅನಿವಾಸಿ ಭಾರತೀಯರಿಗಾಗಿ ಆರು ತಿಂಗಳುಗಳ ಸಾರ್ವತ್ರಿಕ ಕ್ಷಮಾದಾನವನ್ನು ನೀಡುವಂತೆ ಕೇಂದ್ರವು ಸೌದಿ ಸರಕಾರಕ್ಕೆ ಮನವಿ ಮಾಡಬೇಕೆಂದು ಕೇರಳ ಸರಕಾರವು ಕೋರಿದೆ.
ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಂಗಳವಾರ ವಿಧಾನಸಭಾ ಕಲಾಪದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಉದ್ಯೋಗವನ್ನು ಕಳೆದುಕೊಂಡವರನ್ನು ಸೌದಿ ಸರಕಾರವು ಗಡಿಪಾರು ಪ್ರಕ್ರಿಯೆ ಮೂಲಕ ಸ್ವದೇಶಕ್ಕೆ ವಾಪಾಸ್ ಕಳುಹಿಸದಂತೆ ಕೇಂದ್ರ ಸರಕಾರವು ನೋಡಿಕೊಳ್ಳಬೇಕೆಂದು ಸಲಹೆ ಮಾಡಿದರು. ಒಂದು ವೇಳೆ ಉದ್ಯೋಗ ಕಳಕೊಂಡವರನ್ನು ಗಡಿಪಾರು ವಿಧಾನದಲ್ಲಿ ವಾಪಾಸ್ ಕಳುಹಿಸಿದಲ್ಲಿ ಅವರು ಗಲ್ಫ್ ರಾಷ್ಟ್ರಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದಂತೆ ಶಾಶ್ವತ ನಿಷೇಧಕ್ಕೊಳಗಾಗುವರು ಎಂದು ಚಾಂಡಿ ತಿಳಿಸಿದರು.
‘‘ಒಂದು ದೇಶದ ಕಾನೂನನ್ನು ಪ್ರಶ್ನಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಸೌದಿಯ ನೂತನ ಕಾರ್ಮಿಕ ನೀತಿಯು ಅನಿವಾಸಿ ಭಾರತೀಯರಿಗೆ ಸಂಕಷ್ಟ ಹಾಗೂ ಸಮಸ್ಯೆಗಳನ್ನು ತಂದೊಡ್ಡಿದೆಯೆಂಬುದು ಅಷ್ಟೇ ನಿಜ’’ ಎಂದು ಮುಖ್ಯಮಂತ್ರಿ ಅಭಿಪ್ರಾಯಿಸಿದರು.
ಆದರೆ ಈ ಬಗ್ಗೆ ಯಾರೂ ಭೀತಿಪಡುವ ಅಗತ್ಯವಿಲ್ಲವೆಂದು ಹೇಳಿದ ಚಾಂಡಿ, ಸೌದಿಯ ಜೊತೆ ಭಾರತವು ಉತ್ತಮ ಬಾಂಧವ್ಯವನ್ನು ಹೊಂದಿರುವುದರಿಂದ, ಈ ಬಿಕ್ಕಟ್ಟು ಬಗೆಹರಿಯಲಿದೆಯೆಂಬ ಆಶಾವಾದವನ್ನು ವ್ಯಕ್ತಪಡಿಸಿದರು.
ನಿತಾಕತ್‌ನಿಂದಾಗಿ ಉದ್ಯೋಗ ಕಳೆದುಕೊಂಡು ತಾಯ್ನೋಡಿಗೆ ಮರಳುವವರಿಗಾಗಿ ಪುನರ್ವಸತಿ ಪ್ಯಾಕೇಜ್ ಕಾರ್ಯಕ್ರಮವನ್ನು ಘೋಷಿಸಬೇಕೆಂದು ಕೇರಳವು ಕೇಂದ್ರವನ್ನು ಕೋರಲಿದೆಯೆಂದು ಅವರು ತಿಳಿಸಿದರು. ಆದರೆ ಈ ವಿಷಯದ ಬಗ್ಗೆ ನಿಲುವಳಿ ಗೊತ್ತುವಳಿಯನ್ನು ಮಂಡಿಸಬೇಕೆಂಬ ಪ್ರತಿಪಕ್ಷ ಸಿಪಿಎಂ ನೇತೃತ್ವದ ಎಡರಂಗದ ಬೇಡಿಕೆಯನ್ನು ಸ್ಪೀಕರ್ ಜಿ. ಕಾರ್ತಿಕೇಯನ್ ತಳ್ಳಿಹಾಕಿದರು.
ಸದನದಲ್ಲಿ ಸಿಪಿಎಂನ ಕೆ.ವಿ. ಅಬ್ದುಲ್ ಖಾದರ್ ಮಾತನಾಡುತ್ತಾ, ಸೌದಿಯಲ್ಲಿ ದುಡಿಯುವ ಸಹಸ್ರಾರು ಅನಿವಾಸಿ ಭಾರತೀಯರನ್ನು ಅನಿಶ್ಚಿತತೆಯತ್ತ ದೂಡಿರುವ ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ತಪ್ಪಿಸುವುದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರಕಾರವು ವಿಫಲವಾಗಿದೆಯೆಂದು ಆಪಾದಿಸಿದರು.
ಪ್ರತಿಪಕ್ಷ ನಾಯಕ ವಿ.ಎಸ್.ಅಚ್ಯುತಾನಂದನ್ ಮಾತನಾಡುತ್ತಾ ಈ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸುತ್ತಿಲ್ಲವೆಂದು ಟೀಕಿಸಿದರು. ಸೌದಿಯ ನೂತನ ಕಾರ್ಮಿಕ ನೀತಿಯ ಪರಿಣಾಮವಾಗಿ ಗಂಭೀರ ಪರಿಸ್ಥಿತಿ ಉದ್ಭವಿಸಿರುವುದನ್ನು ಮನವರಿಕೆ ಮಾಡಲು ಕೇರಳದ ಸರ್ವಪಕ್ಷ ನಿಯೋಗವು ಪ್ರಧಾನಿಯನ್ನು ಭೇಟಿಯಾಗಬೇಕೆಂದು ಅಚ್ಯುತಾನಂದನ್ ಆಗ್ರಹಿಸಿದರು.

No comments:

Post a Comment