Thursday, April 18, 2013

ಬಾಂಬ್ ಸ್ಫೋಟ:ಮಾಹಿತಿ ನೀಡಿದರೆ 5 ಲಕ್ಷ ರೂ.ಬಹುಮಾನಏಪ್ರಿಲ್ -18-2013

ಬೆಂಗಳೂರು, ಎ. 18: ನಗರದ ಮಲ್ಲೇಶ್ವರಂನಲ್ಲಿ ನಿನ್ನೆ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿಗಳ ಖಚಿತ ಮಾಹಿತಿ ನೀಡಿದವರಿಗೆ 5ಲಕ್ಷ ರೂ.ನಗದು ಬಹುಮಾನ ನೀಡಲಾಗುವುದೆಂದು ಘೋಷಿಸಿರುವ ಡಿಜಿಪಿ ಲಾಲ್ ರುಖುಮೋ ಪಚಾವೋ, ಸ್ಫೋಟದ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಗುರುವಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಲ್ಲೇಶ್ವರಂನ ಒಂದನೆ ಟೆಂಪಲ್ ಸ್ಟ್ರೀಟ್‌ನ ಮನೆಯೊಂದರ ಮುಂದೆ ಸ್ಫೋಟ ಸಂಭವಿಸಿದ್ದು, 4 ಕಾರುಗಳು, 3 ದ್ವಿಚಕ್ರ ವಾಹನಗಳು ಹಾಗೂ 1 ಕೆಎಸ್ಸಾರ್ಪಿ ವ್ಯಾನ್ ಹಾಗೂ ಅಕ್ಕಪಕ್ಕದ ಮನೆಗಳ ಕಿಟಕಿ ಗಾಜು ಜಖಂಗೊಂಡಿವೆ ಎಂದು ವಿವರಿಸಿದರು.
ಘಟನೆಯಲ್ಲಿ 11 ಮಂದಿ ಕೆಎಸ್ಸಾರ್ಪಿ ಸಿಬ್ಬಂದಿ ಹಾಗೂ ಐದು ಮಂದಿ ನಾಗರೀಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಎಎಸ್‌ಐ ಕುಂಜಪ್ಪ, ಎಚ್.ಸಿ.ಗಣೇಶ್ ರಾವ್, ಎಚ್.ಸಿ.ವೆಂಕಟೇಶ್, ಎಚ್.ಸಿ.ಚೌಡಪ್ಪ, ಎಚ್.ಸಿ.ಕೋನಿಯಾ, ಎಚ್.ಸಿ.ಬಾಲಕೃಷ್ಣ, ಎಚ್.ಸಿ.ರಾಮೇಗೌಡ ಹಾಗೂ ನಾಗರಿಕರಾದ ರಕ್ಷಿತಾ, ಲೀನಾ, ಇಂದಿರಾಪಾರ್ಥಸಾರಥಿ, ರಂಜಿತ್ ಕುಮಾರ್, ನಾಗರಾಜ್ ಎಂದು ಅವರು ತಿಳಿಸಿದರು.
ಗಾಯಾಳುಗಳಲ್ಲಿ ಎಎಸ್‌ಐ ಕುಂಜಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಚ್.ಸಿ.ಗಣೇಶ್ ರಾವ್ ಅವರನುನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಲಾಲ್ ರುಖುಮೋ ಪಚಾವೋ ಮಾಹಿತಿ ನೀಡಿದರು.
ಪ್ರಾಥಮಿಕ ತನಿಖೆಯಿಂದ ಟಿವಿಎಸ್ ಸುಜುಕಿ ಮಾಕ್ಸ್-100 ದ್ವಿಚಕ್ರ ವಾಹನದಲ್ಲಿ ಬಾಂಬ್ ಇರಿಸಿ ಸ್ಫೋಟಿಸಲಾಗಿದೆ ಎಂದು ಗೊತ್ತಾಗಿದೆ ಎಂದ ಅವರು, ಎನ್‌ಐಎ, ಎನ್‌ಎಸ್‌ಜಿ, ಬಾಂಬ್ ನಿಷ್ಕೃಿಯ ದಳ ಆಗಮಿಸಿದ್ದಾರೆ. ಅಲ್ಲದೆ, ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿಗಳು ಹಾಗೂ ರಾಜ್ಯದ ಎಫ್‌ಎಸ್‌ಎಲ್‌ನ ಅಧಿಕಾರಿಗಳ ಸಹ ತನಿಖೆ ಕೈಗೊಂಡಿದ್ದಾರೆಂದು ತಿಳಿಸಿದರು.
ಇಲ್ಲಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಸ್ಫೋಟ ಪ್ರಕರಣ ಸಂಬಂಧ 1021-‘ಎ’, 120-‘ಬಿ’, 121, 123, 201, 435, 307, 332 ಹಾಗೂ ಐಪಿಸಿ 3, 4 ಪಿಡಿಪಿಪಿ ಕಾಯ್ದೆ ಅನ್ವಯ 3, 10, 11, 13, 16, 17, 18, 19, 20 ಸಹಿತ ಕಾನೂನು ಬಾಹಿರ ಕೃತ್ಯ ವಿರೋಧಿ ಕಾಯ್ದೆ ಅನ್ವಯ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಗರದಲ್ಲಿ ಕಟ್ಟೆಚ್ಚರ:
ಮುನ್ನಚ್ಚರಿಕೆ ಕ್ರಮವಾಗಿ ನಗರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಬಂದೋಬಸ್ತ್ ಏರ್ಪಡಿಸಲಾಗಿದೆ. ರಾಜಭವನ, ಹೈಕೋರ್ಟ್, ವಿಧಾನಸೌಧ, ಕ್ರೀಡಾಂಗಣಗಳು, ಬಸ್ಸು, ರೈಲ್ವೆ, ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೆ, ನಗರದಲ್ಲಿನ ಎಲ್ಲ ರಾಜಕೀಯ ಪಕ್ಷಗಳ ಕಚೇರಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್‌ಕರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಶಂಕಿತ ಆರೋಪಿಯ ರೇಖಾಚಿತ್ರ:
ಮಲ್ಲೇಶ್ವರಂನಲ್ಲಿ ನಿನ್ನೆ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸ್ಥಳದಲ್ಲಿದ್ದ ಕೆಎಸ್ಸಾರ್ಪಿ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ದ್ವಿಚಕ್ರ ವಾಹನ ತಂದು ನಿಲ್ಲಿಸಿದ ಸಂಶಯದ ಮೇಲೆ ವ್ಯಕ್ತಿಯೊಬ್ಬನ ರೇಖಾಚಿತ್ರವನ್ನು ಪೊಲೀಸರು ಸಿದ್ದಪಡಿಸಿದ್ದಾರೆ ಎಂದು ತಿಳಿದು ಬಂದಿದೆ

No comments:

Post a Comment