Wednesday, April 24, 2013

ಸೌದಿ ಸರಕಾರದಿಂದ 5,000 ಕೋಟಿ ರೂ. ಪರಿಹಾರಕ್ಕೆ ಮಲಬಾರ್ ವಂಶಸ್ಥರ ಆಗ್ರಹ



ಮಲಪ್ಪುರಂ: ಹಿಂದೆ ಮಲಬಾರ್ ಕರಾವಳಿಯನ್ನು ಆಳುತ್ತಿದ್ದ ಅರಕ್ಕ್ಕಲ್ ಮನೆತನದ 45 ವಂಶಸ್ಥರು ಸೌದಿ ಅರೇಬಿಯ ಸರಕಾರದಿಂದ ತಮಗೆ ಪರಿಹಾರ ರೂಪದಲ್ಲಿ ಬರಬೇಕಿರುವ 5,000 ಕೋಟಿ ರೂ. ಮೊತ್ತಕ್ಕೆ ಸಂಯುಕ್ತ ದಾವೆಯನ್ನು ಮಂಡಿಸಲಿದ್ದಾರೆ.ಮಾಯಿನ್ ಕುಟ್ಟಿ ಕೇಯಿ ಕೇರಳದ ಹಜ್ ಯಾತ್ರಿಗಳಿಗೆ ಆಶ್ರಯ ಒದಗಿಸಲು ಮಕ್ಕಾದಲ್ಲಿ ಕಟ್ಟಿದ್ದ ಬಂಗಲೆಯನ್ನು ಸೌದಿ ಅರೇಬಿಯ ಸರಕಾರವು 1971ರಲ್ಲಿ ಕೆಡವಿತ್ತು. ಬಂಗಲೆಗೆ ಅಂದು 400 ಕೋಟಿ ರೂ. ಪರಿಹಾರ ನಿಗದಿಪಡಿಸಿತ್ತು. ಮಾಯಿನ್ ಕುಟ್ಟಿ ಕೇಯಿ ಅರಕ್ಕಾಲ್ ಮನೆತನದ ಅರಕ್ಕ್ಕಲ್  ಬೀವಿಯನ್ನು ಮದುವೆಯಾಗಿದ್ದರು.
ಬಂಗಲೆ ‘ಕೇಯಿ ರುಬಾತ್’ನ್ನು ಕಾಬಾದ ಹರಮ್ ಶರೀಫ್ ಸಮೀಪ ೧೮೪೮ರಲ್ಲಿ ಕಟ್ಟಲಾಗಿತ್ತು. ಹರಮ್ ವಿಸ್ತರಣೆ ಯೋಜನೆಯ ಭಾಗವಾಗಿ ಕಟ್ಟಡವನ್ನು ಸೌದಿ ಸರಕಾರ  1971ರಲ್ಲಿ ಕೆಡವಿತ್ತು. ಅದಕ್ಕೆ 14 ಲಕ್ಷ ಸೌದಿ ರಿಯಾಲ್ ಪರಿಹಾರವನ್ನು ಸರಕಾರ ನಿಗಡಿಪಡಿಸಿತ್ತು. ಆದರೆ, ಪರಿಹಾರ ಯಾರಿಗೆ ನೀಡಬೇಕು ಎಂಬ ಬಗ್ಗೆ ಮನದಟ್ಟಾಗದ ಹಿನ್ನೆಲೆಯಲ್ಲಿ ಸೌದಿ ಸರಕಾರ ಪರಿಹಾರವನ್ನು ಬಿಡುಗಡೆ ಮಾಡಿರಲಿಲ್ಲ.
ಉತ್ತರಾಧಿಕಾರಿಗಳ ಪತ್ತೆಯಾಗುವವರೆಗೆ ಪರಿಹಾರ ಮೊತ್ತವನ್ನು ಔಕಾಫ್ ಇಲಾಖೆಯಲ್ಲಿ ಹೂಡಿಕೆ ಮಾಡಲು ಸರಕಾರ ನಿರ್ಧರಿಸಿತು. ಅರಕ್ಕಾಲ್ ಮತ್ತು ಕೇಯಿ ಕುಟುಂಬಗಳ ನಡುವೆ ಇದ್ದ ವಿವಾದವೇ ಪರಿಹಾರ ವಿತರಣೆ ವಿಳಂಬವಾಗಲು ಕಾರಣವಾಗಿದೆ. ತಾವೇ ಕೇಯಿಯ ನಿಜವಾದ ಉತ್ತರಾಧಿಕಾರಿಗಳು ಎಂಬುದಾಗಿ ಹೇಳಿಕೊಂಡು ಎರಡೂ ಕುಟುಂಬಗಳು ಸೌದಿ ಸರಕಾರದ ಮುಂದೆ ಹಲವು ಬಾರಿ ಪರಿಹಾರ ಬೇಡಿಕೆ ಮಂಡಿಸಿದ್ದವು. ಆದರೆ ಅವುಗಳ ಎಲ್ಲ ಅರ್ಜಿಗಳು ತಿರಸ್ಕಾರಗೊಂಡವು.
ಮಾಯಿನ್ ಕುಟ್ಟಿ ಕೇಯಿ ಈ ಆಸ್ತಿಯನ್ನು ಖರೀದಿಸಿದ್ದಾಗ ಅರಕ್ಕಲ್ ಮನೆತನದ ಜೊತೆ ಯಾವುದೇ ಸಂಬಂಧ ಹೊಂದಿರಲಿಲ್ಲ ಎಂದು ವಾದಿಸಿದ ಕೇಯಿ ಮನೆತನ ತಾವೇ ನಿಜವಾದ ವಾರೀಸುದಾರರು ಎಂದು ಹೇಳಿಕೊಂಡಿತು. ಅದೇ ವೇಳೆ, ಮಾಯಿನ್ ಕುಟ್ಟಿ ಕೇಯಿ ಅರಕ್ಕಲ್ ಬೀವಿಯನ್ನು ಮದುವೆಯಾದ ಬಳಿಕ ‘ಇಳಯ’ ಎಂಬ ಹೆಸರನ್ನು ಸ್ವೀಕರಿಸಿದ್ದರು, ಹಾಗಾಗಿ ತಾವೇ ನಿಜವಾದ ವಾರೀಸುದಾರರು ಎಂದು ಅರಕ್ಕಲ್ ಮನೆತನ ವಾದಿಸಿತ್ತು.
1938ರಲ್ಲಿ ಎ.ಪಿ. ಉಮ್ಮರ್ ಕುಟ್ಟಿ ಇಳಯ ಬರೆದ ‘ಹಿಸ್ಟರಿ ಆಫ್ ಕೇಯಿಸ್ ಇನ್ ಮಲಬಾರ್’ ಎಂಬ ಪುಸ್ತಕವನ್ನು ಅರಕ್ಕಾಲ್ ಮನೆತನ ಉಲ್ಲೇಖಿಸಿತು. ಮಾಯಿನ್ ಕುಟ್ಟಿ ಕೇಯಿ ಮತ್ತು ಅರಕ್ಕ್ಕಲ್ ಮುತ್ತುಬೀವಿ ದಂಪತಿಗೆ ಐವರು ಮಕ್ಕಳಿದ್ದರು ಎಂಬುದಾಗಿ ಪುಸ್ತಕ ಹೇಳುತ್ತದೆ. ಶರಿಯಾ ಕೇವಲ ‘ಮರುಮಕ್ಕತ್ತಾಯ’ (ಅಳಿಯಕಟ್ಟು) ವ್ಯವಸ್ಥೆಯನ್ನು ಮಾನ್ಯ ಮಾಡುತ್ತದೆ ಎಂಬುದಾಗಿ ಸೌದಿ ಅಧಿಕಾರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಅರಕ್ಕಾಲ್ ಮನೆತನ ಹೇಳಿತು.
ತಮ್ಮ ಪರವಾಗಿ ದಾವೆ ಸಲ್ಲಿಸುವಂತೆ ಎರಡೂ ಮನೆತನಗಳು ಒಂದಾದ ನಂತರ ಒಂದರಂತೆ ಬಂದ ಕೇರಳ ಸರಕಾರಗಳನ್ನು ಒತ್ತಾಯಿಸಿದವು. ಬಳಿಕ, ಕೇಯಿ ಕುಟುಂಬ ದಾವೆಯನ್ನು ಹಿಂದಕ್ಕೆ ಪಡೆದುಕೊಂಡಿತು.ಕಾನೂನುಬದ್ಧ ದಾವೆದಾರರ ಪಟ್ಟಿಯೊಂದನ್ನು ಸಲ್ಲಿಸಲು ಕಾನೂನು ಸಲಹಾಕಾರರೊಬ್ಬರನ್ನು ನೇಮಿಸುವಂತೆ ಸೌದಿ ಅರೇಬಿಯದಲ್ಲಿರುವ ಭಾರತೀಯ ಕಾನ್ಸುಲೇಟ್ ಈಗ ಅರಕ್ಕ್ಕಲ್ ಕುಟುಂಬಕ್ಕೆ ಸೂಚಿಸಿದೆ.
ಅರಕ್ಕಾಲ್ ಮನೆತನ ಸಲ್ಲಿಸಿದ ದಾಖಲೆಗಳ ಸುದೀರ್ಘ ಪರಿಶೀಲನೆಯ ಬಳಿಕ ಕಾನ್ಸುಲೇಟ್‌ನ ಈ ಸೂಚನೆ ಹೊರಬಿದ್ದಿದೆ. ಭಾರತೀಯ ಕಾನ್ಸುಲೇಟ್‌ನ ನೆರವಿನೊಂದಿಗೆ ನೇಮಕಗೊಳ್ಳುವ ಪ್ರತಿನಿಧಿಯೊಬ್ಬರ ಮೂಲಕ ಅರಕ್ಕಾಲ್ ಬೀವಿಯ ವಾರೀಸುದಾರರಾದ ೪೫ ಮಂದಿಯ ಪಟ್ಟಿಯನ್ನು ಸೌದಿ ಸರಕಾರಕ್ಕೆ ಸಲ್ಲಿಸಲಾಗುವುದು.

No comments:

Post a Comment