Saturday, April 27, 2013

ಹಜ್‌ಯಾತ್ರೆ-2013;ಆನ್‌ಲೈನ್ ಮೂಲಕ 5672 ಯಾತ್ರಿಗಳ ಆಯ್ಕೆಬೆಂಗಳೂರು: ರಾಜ್ಯದಿಂದ ಪ್ರಸ್ತುತ ಸಾಲಿನ ಪವಿತ್ರ ಹಜ್‌ಯಾತ್ರೆ ಕೈಗೊಳ್ಳಲು 6774 ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಪೈಕಿ 5672 ಯಾತ್ರಿಗಳನ್ನು ಖುರ್ರಾ(ಆನ್‌ಲೈನ್ ಲಾಟರಿ) ಮೂಲಕ ಆಯ್ಕೆ ಮಾಡಲಾಗಿದೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆನ್‌ಲೈನ್ ಮೂಲಕ ಯಾತ್ರಿಗಳ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಸಿ.ಎಸ್.ಸುರಂಜನ ಚಾಲನೆ ನೀಡಿದರು.
ಹಜ್‌ಯಾತ್ರೆಗಾಗಿ ರಾಜ್ಯ ಹಜ್ ಸಮಿತಿಗೆ 15,521 ಅರ್ಜಿಗಳು ಸಲ್ಲಿಕೆಯಾಗಿದ್ದವು. ಸೂಕ್ತ ದಾಖಲಾತಿಗಳ ಕೊರತೆಯಿಂದ 296, ಕೇಂದ್ರ ಹಜ್ ಸಮಿತಿಯ ನೂತನ ಮಾರ್ಗಸೂಚಿಯಂತೆ ಒಮ್ಮೆ ಮಾತ್ರ ಹಜ್‌ಯಾತ್ರೆಗೆ ಅವಕಾಶ ಕಲ್ಪಿಸಿರುವುದರಿಂದ 14 ಮಂದಿ ಪುನರಾವರ್ತಿತರರ, ಅನಾರೋಗ್ಯದ ಕಾರಣದಿಂದ ಯಾತ್ರೆಯಿಂದ ಹಿಂದೆ ಸರಿಯಲು ಬಯಸಿದ ಐವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಮೀಸಲು ವರ್ಗ-ಎ ನಲ್ಲಿ 769 ಅರ್ಜಿಗಳು(70 ವರ್ಷ ಮೇಲ್ಪಟ್ಟವರು ಹಾಗೂ ಅವರ ಸಹವರ್ತಿ) ಹಾಗೂ ವರ್ಗ-ಬಿ ನಲ್ಲಿ (ನಾಲ್ಕನೆ ಬಾರಿ ಅರ್ಜಿ ಸಲ್ಲಿಸಿ ನೇರವಾಗಿ ಆಯ್ಕೆಯಾದವರು) 333 ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು 6774 ಮಂದಿಯ ಪೈಕಿ ಮೀಸಲಾತಿ ವರ್ಗಗಳಲ್ಲಿ ಆಯ್ಕೆಯಾಗಿರುವವರನ್ನು ಹೊರತುಪಡಿಸಿ 5672 ಮಂದಿಯನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ.
ರಾಜ್ಯದ 30 ಜಿಲ್ಲೆಗಳಲ್ಲಿ ಮುಸ್ಲಿಮರ ಜನಸಂಖ್ಯಾ ಆಧಾರದ ಮೇಲೆ ಯಾತ್ರಿಗಳನ್ನು ಆಯ್ಕೆ ಮಾಡಲಾಗಿದ್ದು, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಈ ಐದು ಜಿಲ್ಲೆಗಳ ಅರ್ಜಿದಾರರನ್ನು ನೇರವಾಗಿ ಆಯ್ಕೆ ಮಾಡಲಾಗಿದ್ದು, ಇವರನ್ನು ಲಾಟರಿ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.
ಯಾತ್ರೆಗೆ ಆಯ್ಕೆಯಾಗಿರುವ ಯಾತ್ರಿಗಳ ವಿವರವನ್ನು ಕೇಂದ್ರಿಯ ಹಜ್ ಸಮಿತಿಯ ವೆಬ್‌ಸೈಟ್ www.hajcommittee.comಹಾಗೂ ರಾಜ್ಯ ಹಜ್ ಸಮಿತಿಯ www.karhaj.in ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಖುರ್ರಾ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸನಾವುಲ್ಲಾ, ರಾಜ್ಯ ಹಜ್ ಸಮಿತಿ ಅಧ್ಯಕ್ಷ ಎಂ.ಎಂ.ಅಹ್ಮದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ಲತೀಫ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಆರ್.ಅಬ್ದುಲ್ ರಿಯಾಝ್‌ಖಾನ್, ವೌಲಾನಾ ಝೈನುಲ್ ಆಬಿದೀನ್ ರಶಾದಿ, ನ್ಯಾ.ಎಂ.ಫಾರೂಖ್, ವೌಲಾನ ಇಫ್ತಿಖಾರ್ ಅಹ್ಮದ್ ಖಾಸ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment