Monday, April 22, 2013


ಗುಜರಾತ್ ಹತ್ಯಾಕಾಂಡ: ಮೋದಿ ಪರವಾಗಿರುವ ತನಿಖಾ ಸಂಸ್ಥೆಗಳು!

*ಅಮೆರಿಕದ ಮಾನವ ಹಕ್ಕುಗಳ ವರದಿ ಬಹಿರಂಗ
ವಾಶಿಂಗ್ಟನ್, : 2002ರ ಗುಜರಾತ್ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಅಮಾಯಕ ಜನರನ್ನು ರಕ್ಷಿಸಲು ಹಾಗೂ ಈ  ಭೀಕರ ರಕ್ತಪಾತಕ್ಕೆ ಕಾರಣರಾದವರನ್ನು ಬಂಧಿಸುವಲ್ಲಿ  ಗುಜರಾತ್ ಸರಕಾರದ ವೈಫಲ್ಯದ ಬಗ್ಗೆ ನಾಗರಿಕ ಸಮಾಜದ ಆತಂಕವು ಇನ್ನೂ ಕೊನೆಗೊಂಡಿಲ್ಲವೆಂದು ಮಾನವಹಕ್ಕುಗಳ ಕುರಿತ ಅಮೆರಿಕದ ವರದಿಯೊಂದು ತಿಳಿಸಿದೆ. ಗುಜರಾತ್ ಹಿಂಸಾಚಾರದ ಬಗ್ಗೆ ತನಿಖೆ ನಡೆಸುತ್ತಿರುವ ವಿವಿಧ ತನಿಖಾಸಂಸ್ಥೆಗಳು ಮುಖ್ಯಮಂತ್ರಿ ನರೇಂದ್ರ ಮೋದಿ ಪರವಾಗಿ ಪಕ್ಷಪಾತದಿಂದ ವರ್ತಿಸುತ್ತಿವೆಯೆಂದು ಅಮೆರಿಕದ ವಿದೇಶಾಂಗ ಇಲಾಖೆಯು ಬಿಡುಗಡೆಗೊಳಿಸಿರುವ ‘2012ರ ಮಾನವಹಕ್ಕುಗಳ  ಕುರಿತ ರಾಷ್ಟ್ರೀಯ ವರದಿ’ಯು ತಿಳಿಸಿದೆ.
ಬಹುತೇಕ ಮುಸ್ಲಿಮರು ಸೇರಿದಂತೆ 1200ಕ್ಕೂ ಅಧಿಕ ಮಂದಿ ಹತ್ಯೆಗೀಡಾದ 2002ರ ಗುಜರಾತ್ ಕೋಮುಗಲಭೆಯಲ್ಲಿ ಅಮಾಯಕ ನಾಗರಿಕರನ್ನು ರಕ್ಷಿಸಲು ಹಾಗೂ ಈ  ನರಮೇಧಕ್ಕೆ ಕಾರಣರಾದವರನ್ನು ಬಂಧಿಸಲು ಗುಜರಾತ್ ಸರಕಾರವು ವಿಫಲವಾಗಿರುವ ಬಗ್ಗೆ ನಾಗರಿಕ ಸಮಾಜದ ಕಾರ್ಯಕರ್ತರಲ್ಲಿ  ಈಗಲೂ ಆತಂಕ ಮುಂದುವರಿದಿದೆಯೆಂದು ವರದಿ ತಿಳಿಸಿದೆ.
ನ್ಯಾಯಾಲಯದ ಮೆಟ್ಟಿಲೇರಿರುವ ಹಲವಾರು ವೊಕದ್ದಮೆಗಳು ಪ್ರಗತಿ ಕಂಡಿವೆಯಾದರೂ,ನಾಗರಿಕ ಸಮಾಜದ ಆತಂಕ ಇನ್ನೂ ಮರೆಯಾಗಿಲ್ಲವೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಬಿಡುಗಡೆಗೊಳಿಸಿರುವ ವರದಿಯು ತಿಳಿಸಿದೆ.ಕಾನೂನುಬಾಹಿರ ಹತ್ಯೆಗಳು, ನಾಗರಿಕರ ಮೇಲೆ ಪೊಲೀಸ್ ಹಾಗೂ ಭದ್ರತಾಪಡೆಗಳ ದೌರ್ಜನ್ಯಗಳು, ಅತ್ಯಾಚಾರ, ಸರಕಾರದ ಎಲ್ಲಾ ಹಂತಗಳಲ್ಲಿಯೂ ವ್ಯಾಪಕವಾಗುತ್ತಿರುವ ಭ್ರಷ್ಟಾಚಾರ, ನ್ಯಾಯ ನಿರಾಕರಣೆ, ಪ್ರತ್ಯೇಕವಾದ, ಬಂಡುಕೋರ ಚಟುವಟಿಕೆ ಹಾಗೂ ಜನಾಂಗೀಯ ಹಿಂಸಾಚಾರವು 2012ರಲ್ಲಿ ಭಾರತದ ಪ್ರಮುಖ ಮಾನವಹಕ್ಕುಗಳ ಸಮಸ್ಯೆಗಳಾಗಿದ್ದವು ಎಂದು ವರದಿಯಲ್ಲಿರುವ ಭಾರತದ ಕುರಿತಾದ 60ಪುಟಗಳ ಅಧ್ಯಾಯದಲ್ಲಿ ವಿವರಿಸಲಾಗಿದೆ.
ನಾಗರಿಕರ ಕಣ್ಮರೆ, ಜೀವಕ್ಕೆ ಅಪಾಯತರುವಂತಹ ಕಳಪೆ ಕಾರಾಗೃಹಗಳು, ಯಾವುದೇ ವಿಚಾರಣೆಯಿಲ್ಲದೆ ಬಂಧನ, ವಿಚಾರಣೆಗೆ ಮುನ್ನವೇ ದೀರ್ಘಾವಧಿಯವರೆಗೆ ಬಂಧನ ಇವು ಭಾರತದಲ್ಲಿ ಸಾಮಾನ್ಯವಾಗಿರುವ ಇತರ ಪ್ರಮುಖ ಮಾನವಹಕ್ಕು ಉಲ್ಲಂಘನೆಗಳಾಗಿವೆ.ಸಶಸ್ತ್ರ ಪಡೆಗಳ ಯೋಧರು, ಪೊಲೀಸರು, ಸರಕಾರಿ ಅಧಿಕಾರಿಗಳು ಹಾಗೂ ನಾಗರಿಕರ ಹತ್ಯೆ ಸೇರಿದಂತೆ ಜಮ್ಮುಕಾಶ್ಮೀರ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ತೀವ್ರವಾದಿಗಳಿಂದ ಮತ್ತು ನಕ್ಸಲೀಯರಿಂದ ಹಲವಾರು ಗಂಭೀರ ಮಾನವಹಕ್ಕು ಉಲ್ಲಂಘನೆಯ ಕೃತ್ಯಗಳು ನಡೆದಿರುವುದಾಗಿ ವರದಿ ಹೇಳಿದೆ.
ಬಂಡುಕೋರರಿಂದ ಸುಲಿಗೆ,ಹಲ್ಲೆ ಹಾಗೂ ಅಪಹರಣದಂತಹ  ಅಪರಾಧ ಕೃತ್ಯಗಳೂ ನಡೆದಿವೆ ಮತ್ತು ಹಲವಾರು ಸಂದರ್ಭಗಳಲ್ಲಿ ಅವರು ಬಾಲ ಯೋಧರನ್ನು ಬಳಸಿಕೊಂಡಿದ್ದಾರೆಂದು ವರದಿ ತಿಳಿಸಿದೆ.ಸತತ ಎರಡನೆ ವರ್ಷವೂ ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಗಣನೀಯ ಪ್ರಮಾಣದ ಹಿಂಸಾಚಾರ ಸಂಭವಿಸಿದೆಯೆಂದು ಅದು ತಿಳಿಸಿದೆ.
ಕಾನೂನು ಪಾಲಕ ಅಧಿಕಾರಿಗಳು ಕೆಲವು ಸಂದರ್ಭಗಳಲ್ಲಿ ಅತ್ಯಾಚಾರ ಸಂತ್ರಸ್ತರು ಹಾಗೂ ಅವರ ದಾಳಿಕೋರರ ನಡುವೆ ಸಂಧಾನವೇರ್ಪಡಿಸಲು ಶ್ರಮಿಸಿದ್ದಾರೆ. ಕೆಲವು ಸನ್ನಿವೇಶಗಳಲ್ಲಿ ಅವರು ಅತ್ಯಾಚಾರ ಸಂತ್ರಸ್ತೆಯರು ತಮ್ಮ ಮೇಲೆ ದಾಳಿ ನಡೆಸಿದವರನ್ನೇ ಮದುವೆಯಾಗುವಂತೆ ಪ್ರೋತ್ಸಾಹಿಸಿದ್ದಾರೆಂದು ವರದಿ ತಿಳಿಸಿದೆ. ಅತ್ಯಾಚಾರ ಪೀಡಿತೆಯರ ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರೇ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಿದರ್ಶನಗಳೂ ಇವೆಯೆಂದು ವರದಿಯು ಹೇಳಿದೆ.

No comments:

Post a Comment