Wednesday, April 10, 2013

ಸಂಜಯ್‌ಗಾಂಧಿ ನಾಯಕತ್ವ ಪ್ರಶ್ನಿಸಿದ್ದ ಆ್ಯಂಟನಿ: ಇಂದಿರಾ ಪುತ್ರನ ವಿರುದ್ಧ 1976ರ ಎಐಸಿಸಿ: ಅಧಿವೇಶನದಲ್ಲಿ ಹೊಗೆಯಾಡಿದ್ದ ಅಸಮಾಧಾನ ; ವಿಕಿಲೀಕ್ಸ್ ಬಹಿರಂಗಏಪ್ರಿಲ್ -10-2013

ಹೊಸದಿಲ್ಲಿ: ಪ್ರಿಯರಂಜನ್‌ದಾಸ್ ಮುನ್ಶಿಯವರನ್ನು ಹೊರತುಪಡಿಸಿದರೆ, 1976ರಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಗುವಾಹಟಿಯಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿ ಸಂಜಯ್‌ಗಾಂಧಿ ವಿರುದ್ಧ ನೇರವಾಗಿ ಟೀಕಿಸಿದ ಏಕೈಕ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿಯೆಂದು ಖ್ಯಾತ ಮಾಹಿತಿ ಸೋರಿಕೆ ಅಂತರ್ಜಾಲ ತಾಣ ವಿಕಿಲೀಕ್ಸ್ ಬಹಿರಂಗಪಡಿಸಿದೆ.
ಆಗ ಕಾಂಗ್ರೆಸ್‌ನ ಕೇರಳ ಘಟಕದ ಅಧ್ಯಕ್ಷರಾಗಿದ್ದ ಎ.ಕೆ.ಆ್ಯಂಟನಿ ನೇತೃತ್ವದ ಪಕ್ಷದ ನಾಯಕರ ಗುಂಪೊಂದು ಎಐಐಸಿಸಿ ಅಧಿವೇಶನದಲ್ಲಿ ಸಂಜಯ್‌ಗೆ ಬೆಂಬಲವನ್ನು ನೀಡಲು ನಿರಾಕರಿಸಿತು ಹಾಗೂ ದೇಶಕ್ಕಾಗಿ ಸಂಜಯ್ ಯಾವ ರೀತಿಯ ತ್ಯಾಗ ಮಾಡಿದ್ದಾರೆಂದು ಕೇಳುವ ಮೂಲಕ ಆತ ತ್ವರಿತವಾಗಿ ಅಧಿಕಾರಕ್ಕೇರುವುದನ್ನು ಪ್ರಶ್ನಿಸಿತೆಂದು ವಿಕಿಲೀಕ್ಸ್ ವರದಿ ಮಾಡಿದೆ.
ಗುವಾಹಟಿಯ ಎಐಸಿಸಿ ಅಧಿವೇಶನ ಹಾಗೂ ಯುವಕಾಂಗ್ರೆಸ್ ಸಮಾವೇಶದಲ್ಲಿ ಸಂಜಯ್ ಪ್ರಮುಖ ಆಕರ್ಷಣೆಯಾಗಿದ್ದರು ಹಾಗೂ ಪಕ್ಷಕ್ಕೆ ಪುನಶ್ಚೇತನ ನೀಡುವ ಹಿಂದಿರುವ ಪ್ರೇರಕ ಶಕ್ತಿ ಹಾಗೂ ಇಂದಿರಾಗಾಂಧಿಯನ್ನು ಹೊರತುಪಡಿಸಿದರೆ, ದೇಶದ ಏಕೈಕ ಅಗ್ರಗಣ್ಯ ನಾಯಕನೆಂದು ಸಂಜಯ್ ಸಮಾವೇಶದಲ್ಲಿ ಬಣ್ಣಿಸಲ್ಪಟ್ಟಿದ್ದರು.
ಸಂಜಯ್‌ರ ಸಾಮರ್ಥ್ಯದ ಬಗ್ಗೆ ಅವರ ಬೆಂಬಲಿಗರು ವ್ಯಾಪಕ ಪ್ರಚಾರ ಮಾಡಿದ ಹೊರತಾಗಿಯೂ, ಅವರು ಅಧ್ಯಕ್ಷರಾಗಿದ್ದ ಯುವಕಾಂಗ್ರೆಸ್‌ಗೆ ಸದಸ್ಯತ್ವ ಪಡೆದವರ ಸಂಖ್ಯೆಯಲ್ಲಿ ಹೆಚ್ಚಳವಾದ ಬಗ್ಗೆ ಆ ಸಮಯದಲ್ಲಿ ಹೊಸದಿಲ್ಲಿಯಲ್ಲಿನ ಅಮೆರಿಕದ ರಾಜತಾಂತ್ರಿಕರಿಗೆ ಯಾವುದೇ ಮಾಹಿತಿ ದೊರೆತಿರಲಿಲ್ಲವೆಂದು ವಿಕಿಲೀಕ್ಸ್ ವರದಿಗಳು ತಿಳಿಸಿವೆ.
ಯುವ ಕಾಂಗ್ರೆಸ್ ಹಾಗೂ ಸಂಜಯ್ ವಿರುದ್ಧ ವ್ಯಾಪಕ ಟೀಕೆ ಮಾಡಿದ ಕೆಲವೇ ಕೆಲವು ನಾಯಕರಲ್ಲಿ ಆಗಿನ ಕೇರಳ ಕಾಂಗ್ರೆಸ್ ಅಧ್ಯಕ್ಷ ಎ.ಕೆ.ಆ್ಯಂಟನಿ ಒಬ್ಬರಾಗಿದ್ದರು. ಸಮಾವೇಶದಲ್ಲಿ ಸಂಜಯ್ ನಾಯಕತ್ವವನ್ನು ಟೀಕಿಸಿದ ಇನ್ನೊಬ್ಬರೆಂದರೆ ಪಶ್ಚಿಮ ಬಂಗಾಳ ಕಾಂಗ್ರೆಸ್ ನಾಯಕ ಪಿ.ಆರ್.ದಾಸ್‌ಮುನ್ಶಿ ಎಂದು ಅದು ಹೇಳಿದೆ.
1977ರಲ್ಲಿ ಲೋಕಸಭಾ ಚುನಾವಣೆಗಳು ನಡೆಯುವುದಕ್ಕೆ ಮುನ್ನ ಕಾಂಗ್ರೆಸ್ ಕಾರ್ಯ ಕರ್ತರಲ್ಲಿ ಅತೃಪ್ತಿ ಹೊಗೆಯಾಡುತ್ತಿತ್ತು ಹಾಗೂ ಪಕ್ಷದ ಘಟಕಗಳು ಕೂಡಾ ಪರಿಣಾಮಕಾರಿಯಾಗಿ ಕಾರ್ಯನಿರ್ವ ಹಿಸುತ್ತಿರಲಿಲ್ಲವೆಂದು ಅದು ಹೇಳಿದೆ.
ಕೇರಳದಲ್ಲಿ ಸಂಜಯ್ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಇಂದಿರಾ ಗಾಂಧಿ ದ್ವಿತೀಯ ಪುತ್ರನಾದ ಸಂಜಯ್ ಕೇರಳದಲ್ಲಿ ಜನಪ್ರಿಯತೆ ಪಡೆದಿರಲಿಲ್ಲ ವೆಂಬುದು ಕೇರಳದ ವಿವಿಧ ವರ್ಗಗಳ ಜನರ ಜೊತೆ ನಡೆಸಿದ ಸಂವಾದದಿಂದ ತಿಳಿದು ಬಂದಿದ್ದಾಗಿ ವಿಕಿಲೀಕ್ಸ್‌ಗೆ ಲಭ್ಯವಾದ ಅಮೆರಿಕದ ರಾಯಭಾರಿ ಕಚೇರಿಯ ಇನ್ನೊಂದು ದಾಖಲೆಯು ಬಹಿರಂಗಪಡಿಸಿದೆ.
ಆದರೆ ಆಗ ಕೇರಳದ ಗೃಹ ಸಚಿವರಾಗಿದ್ದ ಕೆ.ಕರುಣಾಕರನ್ ನೇತೃತ್ವದ ಬಣವು ಸಂಜಯ್‌ಗೆ ಬೆಂಬಲ ನೀಡಿತ್ತು. ಆ ಸಮಯದಲ್ಲಿ ಕೇರಳದ ಯುವಕಾಂಗ್ರೆಸ್ ಇತರ ರಾಜ್ಯಗಳ ಯುವಕಾಂಗ್ರೆಸ್ ಘಟಕಗಳಿಗಿಂತ ಹೆಚ್ಚು ವೈಚಾರಿಕತೆಯನ್ನು ಹೊಂದಿತ್ತು ಹಾಗೂ ಆ ರಾಜ್ಯದಲ್ಲಿ ಸಂಜಯ್‌ರ ನೀತಿಗಳು ಜನಪ್ರಿಯ ವಾಗಿರಲಿಲ್ಲವೆಂದು ವಿಕಿಲೀಕ್ಸ್ ವರದಿ ಹೇಳಿದೆ.

No comments:

Post a Comment