Sunday, April 28, 2013

ಅ.1ರಿಂದ ಎಲ್‌ಪಿಜಿ ಸಬ್ಸಿಡಿ ಗ್ರಾಹಕರ; ಬ್ಯಾಂಕ್ ಖಾತೆಗಳಿಗೆ ನೇರ ಪಾವತಿ



ಹೊಸದಿಲ್ಲಿ,: ಕೇಂದ್ರ ಸರಕಾರವು ಅಕ್ಟೋಬರ್ 1ರಿಂದ ದೇಶಾದ್ಯಂತದ 14 ಕೋಟಿ ಎಲ್‌ಪಿಜಿ ಗ್ರಾಹಕರಿಗೆ ಸಬ್ಸಿಡಿ ಹಣವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿಸುವ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
ಎಲ್‌ಪಿಜಿ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಪಾವತಿಸುವ ಕುರಿತಾದ 'ನೇರ ಲಾಭ ವರ್ಗಾವಣೆ'(ಡಿಬಿಟಿ) ಯೋಜನೆಯನ್ನು ದೇಶಾದ್ಯಂತ ಅಕ್ಟೋಬರ್ 1ರಿಂದ ಪ್ರಾಯೋಗಿಕವಾಗಿ ಜಾರಿಗೊಳಿಸಲು ಕೇಂದ್ರ ಸರಕಾರ ತೀರ್ಮಾನಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಗ್ರಾಹಕರು ಎಲ್‌ಪಿಜಿ ಸಬ್ಸಿಡಿಯನ್ನು ಪಡೆಯಬೇಕಾದರೆ ಅವರು ಬ್ಯಾಂಕ್ ಖಾತೆಯೊಂದಿಗೆ ್ಝತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿರಬೇಕು. ಇದರಿಂದಾಗಿ ಓರ್ವ ಗ್ರಾಹಕನಿಗೆ ಅಂದಾಜು 4 ಸಾವಿರ ರೂ. ವಾರ್ಷಿಕ ಸಬ್ಸಿಡಿ ದೊರೆಯಲಿದೆ. ಸರಕಾರವು ವಾರ್ಷಿಕವಾಗಿ ಓರ್ವ ಗ್ರಾಹಕನಿಗೆ 9 ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸಬ್ಸಿಡಿ ಮಿತಿಯನ್ನು ನಿಗದಿಪಡಿಸಿದೆ.
ಈವರೆಗೆ ಭಾರತೀಯ ವಿಶಿಷ್ಟ ಗುರುತುಪತ್ರ ಪ್ರಾಧಿಕಾರ (ಯುಐಎಡಿಐ)ವು 32 ಕೋಟಿ ಆಧಾರ್ ಕಾರ್ಡ್‌ಗಳನ್ನು ವಿತರಿಸಿದೆ. ಈ ಪೈಕಿ ಕೇವಲ 80 ಲಕ್ಷ ಬ್ಯಾಂಕ್ ಖಾತೆಗಳಿಗೆ ಮಾತ್ರ ಆಧಾರ್ ಸಂಖ್ಯೆಯನ್ನು ನಮೂದಿಸಲಾಗಿದೆ.
ಎಲ್‌ಪಿಜಿ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಈ ಪೈಲಟ್ ಯೋಜನೆಯ ವ್ಯಾಪ್ತಿಗೆ ದೇಶಾದ್ಯಂತದ 20 ಜಿಲ್ಲೆಗಳನ್ನು ಮೇ 15ರೊಳಗೆ ಸೇರ್ಪಡೆಗೊಳಿಸಲಾಗುವುದು.
ಎಲ್‌ಪಿಜಿ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಈ ಯೋಜನೆಯು ಜಾರಿಗೆ ಬಂದಲ್ಲಿ ಗ್ರಾಹಕರು ಪ್ರಚಲಿತದಲ್ಲಿರುವ ಮಾರುಕಟ್ಟೆ ದರದಲ್ಲೇ ಎಲ್‌ಪಿಜಿ ಸಿಲಿಂಡರನ್ನು ಖರೀದಿಸಬೇಕಾಗುತ್ತದೆ (ಪ್ರಸ್ತುತ ದಿಲ್ಲಿಯಲ್ಲಿ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್‌ಗೆ 901.50 ರೂ. ಮಾರುಕಟ್ಟೆ ಬೆಲೆಯಿದೆ.).ಗ್ರಾಹಕರಿಗೆ ದೊರೆಯಬೇಕಾದ ಎಲ್‌ಪಿಜಿ ಸಬ್ಸಿಡಿ ಮೊತ್ತವನ್ನು ಸರಕಾರವು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಿದೆ.
ಎಲ್‌ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗಳ ಜೊತೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯವು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.
 ಎಲ್‌ಪಿಜಿ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಪಾವತಿಸುವ ಕುರಿತಾದ 'ನೇರ ಲಾಭ ವರ್ಗಾವಣೆ' (ಡಿಬಿಟಿ) ಯೋಜನೆಯ ಬಗ್ಗೆ ಸೋಮವಾರ ಹಣಕಾಸು ಸಚಿವ ಪಿ.ಚಿದಂಬರಂಂ, ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರು ರಾಜ್ಯ ಸರಕಾರದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆಂದು ತಿಳಿದುಬಂದಿದೆ

No comments:

Post a Comment