Saturday, March 9, 2013

ಸೌದಿ ಬಾಗಿಲಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್


ಸೌದಿ ಬಾಗಿಲಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್

*ಮಂಗಳೂರಿನಿಂದ ದಮಾಮ್‌ಗೆ ನೇರ ವಿಮಾನ 
*ಏರ್ ಇಂಡಿಯಾ ಮಂಗಳೂರು ಸ್ಟೇಶನ್ ಮ್ಯಾನೇಜರ್ ಜೊತೆ ವಿಶೇಷ ಸಂದರ್ಶನ
ಭಾರತ ಸರಕಾರದ ಸ್ವಾಮ್ಯದ ‘ಏರ್ ಇಂಡಿಯಾ’ದ ಉಪ ಸಂಸ್ಥೆ ‘ಏರ್ ಇಂಡಿಯಾ ಎಕ್ಸ್‌ಪ್ರೆಸ್’ ಶೀಘ್ರದಲ್ಲೆ ಮಂಗಳೂರು -ದಮಾಮ್ ನೇರ ವಿಮಾನ ಯಾನವನ್ನು ಆರಂಭಿಸುತ್ತಿದೆ. ಸೌದಿ ಅರೇಬಿಯದಲ್ಲಿರುವ ಮಂಗಳೂರು ಹಾಗೂ ಇಡೀ ಕರಾವಳಿ ಪ್ರದೇಶಗಳ ಅಗಾಧ ಸಂಖ್ಯೆಯ ಜನರನ್ನು ಗಮನದಲ್ಲಿಟ್ಟುಕೊಂಡು ಸರಕಾರಿ ವಾಯುಯಾನ ಸಂಸ್ಥೆ ನೂತನ ವಿಮಾನ ಯಾನವನ್ನು ನಿರ್ವಹಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರ ಈ ವಲಯದ ಜನರಿಗೆ ವರದಾನ ವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ...
ಈ ವಿಷಯದಲ್ಲಿ ಹೆಚ್ಚಿನ ಮಾಹಿತಿ ಪಡೆ ಯಲು ‘ವಾರ್ತಾಭಾರತಿ’ ಏರ್ ಇಂಡಿಯಾದ ಮಂಗಳೂರು ಸ್ಟೇಶನ್ ಮ್ಯಾನೇಜರ್ ಮೆಲ್ವಿನ್ ಡಿ’ಸಿಲ್ವರನ್ನು ಭೇಟಿ ಮಾಡಿತು.ಅವರೊಂದಿಗೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
ವಾರ್ತಾಭಾರತಿ: ಸೌದಿ ಅರೇಬಿಯದಲ್ಲ್ತಿರುವ ಮಂಗಳೂರು ಮತ್ತು ಸುತ್ತಮುತ್ತ ಲಿನ ವಲಯಗಳ ಜನರಿಗಾಗಿ ಏರ್ ಇಂಡಿಯ ಎಕ್ಸ್‌ಪ್ರೆಸ್ ಮಂಗಳೂರು-ದಮಾಮ್ ನೇರ ವಿಮಾನ ಯಾನ ಆರಂಭಿಸುತ್ತಿರುವುದು ಸಂತೋಷದ ವಿಷಯ. ಈ ಯಾನದ ಬಗ್ಗೆ ಹೆಚ್ಚಿನ ಮಾಹಿತಿ...
ಮೆಲ್ವಿನ್ ಡಿ’ಸಿಲ್ವ: ಮಂಗಳೂರು- ದಮಾಮ್ ನೇರ ವಿಮಾನ ಯಾನ ಬೇಸಿಗೆ ವೇಳಾಪಟ್ಟಿಯಲ್ಲಿ ಆರಂಭಗೊಳ್ಳುತ್ತದೆ. ಬೇಸಿಗೆ ವೇಳಾಪಟ್ಟಿ ಆರಂಭ ಗೊಳ್ಳುವುದು ಮಾರ್ಚ್ 31ರಂದು. ಮಂಗಳೂರಿ ನಿಂದ ದಮಾಮ್‌ಗೆ ಮೊದಲ ವಿಮಾನ ಎಪ್ರಿಲ್ ೩ರಂದು ಹಾರಲಿದೆ.
ಮಂಗಳೂರು-ದಮಾಮ್ ವಿಮಾನ ಆರಂಭದಲ್ಲಿ ವಾರಕ್ಕೆ ಎರಡು ಬಾರಿ ಹಾರಾಟ ನಡೆಸುತ್ತದೆ. ಐಎಕ್ಸ್ 385 ವಿಮಾನ ಮಂಗಳೂರಿನಿಂದ ಬುಧವಾರ ಮತ್ತು ಶನಿವಾರಗಳಂದು ಸಂಜೆ ೫ ಗಂಟೆಗೆ ಹೊರಟು ಸೌದಿ ಸಮಯ ಸಂಜೆ 7.10ಕ್ಕೆ  ದಮಾಮ್ ತಲುಪುತ್ತದೆ. ಬಳಿಕ ದಮಾಮ್‌ನಿಂದ ಅದೇ ದಿನ ಸ್ಥಳೀಯ ಸಮಯ ಸಂಜೆ 8.30ಕ್ಕೆ  ಹೊರಟು ಗುರುವಾರ ಮತ್ತು ರವಿವಾರಗಳಂದು ಮುಂಜಾನೆ 3.20ಕ್ಕೆ ಮಂಗಳೂರು ತಲುಪುತ್ತದೆ.
ಬೇಸಿಗೆ ವೇಳಾಪಟ್ಟಿಯಲ್ಲಿ ನಾವು ಹೊಸದಾಗಿ ಮಂಗಳೂರು-ಕೊಚ್ಚಿನ್ ಯಾನವನ್ನೂ ಆರಂಭಿಸ ಲಿದ್ದೇವೆ. ಈ ವಿಮಾನ ವಾರಕ್ಕೆ ಮೂರು ಬಾರಿ ಇದೆ. ಮಂಗಳವಾರ, ಗುರುವಾರ ಮತ್ತು ರವಿವಾರ ಮಂಗಳೂರಿನಿಂದ ಬೆಳಗ್ಗೆ 8.25ಕ್ಕೆ  ಹೊರಡುತ್ತದೆ.  ಸೋಮವಾರ, ಬುಧ ವಾರ ಮತ್ತು ಶನಿವಾರ ಹಿಂದಿರುಗಿ ಬರುತ್ತವೆ. ಕೊಚ್ಚಿನ್‌ನಿಂದ ಸಂಜೆ 4.25ಕ್ಕೆ ಹೊರಟು ಮಂಗಳೂರನ್ನು 5.25ಕ್ಕೆ ತಲುಪುತ್ತವೆ. ಟಿಕೆಟ್ ಬೆಲೆಯನ್ನು 1700ರೂ.ನಷ್ಟು ಕಡಿಮೆಗೆ ನಿಗದಿಗೊಳಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಬೈ, ಅಬುಧಾಬಿ, ಮಸ್ಕತ್, ಕುವೈತ್, ದೋಹ ಮತ್ತು ಬಹರೈನ್‌ಗೆ ಈಗಾಗಲೇ ನಾವುವಿಮಾನ ಯಾನಗಳನ್ನು ಹೊಂದಿದ್ದೇವೆ. ಈಗ ಮಂಗಳೂರು- ದಮಾಮ್ ಯಾನ ಬೇಸಿಗೆ ವೇಳಾಪಟ್ಟಿಗೆ ಸೇರ್ಪಡೆಯಾಗಿದೆ. ದುಬೈಗೆ ನಾವು ಪ್ರತಿ ದಿನ ಎರಡು ಯಾನಗಳನ್ನು ಹೊಂದಿದ್ದೇವೆ. ಒಂದು ಬೆಳಗ್ಗೆ ಮತ್ತು ಒಂದು ರಾತ್ರಿ. ಇದು ಜನರಿಗೆ ತುಂಬಾ ಅನು ಕೂಲಕರವಾಗಿದೆ.
ಏರ್ ಇಂಡಿಯ ಎಕ್ಸ್‌ಪ್ರೆಸ್ ಕಡಿಮೆ ವೆಚ್ಚದ ಯಾನ ವಾಗಿರುವುದರಿಂದ ದುಬೈಯಲ್ಲಿ ಇದರ ಭೂ ಸ್ಪರ್ಶಕ್ಕೆ ಪ್ರತ್ಯೇಕ ಟರ್ಮಿನಲ್ ಒದಗಿಸ ಲಾಗಿದೆ. ಇದರಿಂದಾಗಿ ವಿಮಾನ ನಿಲ್ದಾಣದಿಂದ 20 ನಿಮಿಷಗಳಲ್ಲಿ ಹೊರಗೆ ಬರಲು ಪ್ರಯಾಣಿಕರಿಗೆ ಸಾಧ್ಯವಾಗಿದೆ. ಪ್ರಯಾಣಿಕರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾಗಿ ನಮ್ಮ ‘ಸಮಯ ಪರಿಪಾಲನೆ’ ನಿರ್ವಹಣೆ 95 ಶೇ.ಕ್ಕೂ ಅಧಿಕ.
ವಾರ್ತಾಭಾರತಿ: ಈಗ ಮಂಗಳೂರು- ದಮಾಮ್ ಯಾನ ವಾರಕ್ಕೆ ಎರಡು ಬಾರಿ ಮಾತ್ರ. ಮುಂದೆ ಪ್ರತಿ ದಿನ ಯಾನ ಪ್ರಾರಂಭಿಸುವ ಯೋಜನೆಯಿದೆಯೇ?
ಮೆಲ್ವಿನ್ ಡಿ’ಸಿಲ್ವ: ಈ ಸೇವೆ ಯಶಸ್ವಿಯಾದರೆ ಹಾಗೂ ಮುಂದೆ ಜನರಿಂದ ಉತ್ತಮ ಬೆಂಬಲ ದೊರಕಿದರೆ ಖಂಡಿತವಾಗಿಯೂ ನಾವು ಯಾನ ಸಂಖ್ಯೆಯನ್ನು ಏರಿಸು ತ್ತೇವೆ. ಈಗ ವಾರಕ್ಕೆ ಎರಡು ಹಾರಾಟದೊಂದಿಗೆ ವಿಮಾನವನ್ನು ಆರಂಭಿಸಿದ್ದೇವೆ.
ವಾರ್ತಾಭಾರತಿ: ಮಂಗಳೂರು- ದಮಾಮ್ ಅಲ್ಲದೆ ಕೊಲ್ಲಿಯ ಇತರ ಸ್ಥಳಗಳಿಗೆ ನೇರ ವಿಮಾನ ಹಾರಾಟ ನಡೆಸುವ ಯೋಜನೆಯಿದೆಯೇ? ಉದಾಹರಣೆಗೆ, ರಿಯಾದ್, ಜಿದ್ದಾ ಮುಂತಾದ ಸ್ಥಳಗಳಿಗೆ ನೇರ ವಿಮಾನಕ್ಕಾಗಿ ಭಾರೀ ಬೇಡಿಕೆಯಿದೆ...
ಮೆಲ್ವಿನ್ ಡಿ’ಸಿಲ್ವ: ರಿಯಾದ್, ಜಿದ್ದಾ ಮತ್ತು ದಮಾಮ್ ಸೌದಿ ಅರೇಬಿಯದ ನಗರಗಳೇ. ಈಗ  ನಾವು ದಮಾಮ್ ಮೂಲಕ ಸೌದಿ ಅರೇಬಿಯವನ್ನು ಪ್ರಥಮವಾಗಿ ಸಂಪರ್ಕಿಸುತ್ತಿದ್ದೇವೆ. ಈ ಯಾನ ಸ್ಥಿರತೆ ಕಂಡರೆ ನಾವು ಇತರ ನಗರಗಳ ಕಡೆ ಮುಂದಕ್ಕೆ ಗಮನ ಹರಿಸಬಹುದು.
ವಾರ್ತಾಭಾರತಿ: ಈಗ ಖಾಸಗಿ ವಿಮಾನಯಾನ ಸಂಸ್ಥೆಗಳೂ ಮಂಗಳೂರು-ಕೊಲ್ಲಿ ಮಾರ್ಗದತ್ತ ಗಮನ ಹರಿಸುತ್ತಿವೆ. ಅವುಗಳಿಗೆ ಸ್ಪರ್ಧೆ ನೀಡಲು ನೀವು ಎಷ್ಟು ಸನ್ನದ್ಧರಾಗಿದ್ದೀರಿ?
ಮೆಲ್ವಿನ್ ಡಿ’ಸಿಲ್ವ: ಒಂದು ಸಂಸ್ಥೆ ಈಗಾಗಲೇ ದುಬೈಗೆ ವಿಮಾನ ಯಾನ ಆರಂಭಿಸಿದೆ.  ನಾವು ಖಂಡಿತವಾಗಿಯೂ ಅವರ ಸ್ಪರ್ಧೆಯನ್ನು ಚೆನ್ನಾಗಿ ಎದುರಿಸಿದ್ದೇವೆ. ನಮ್ಮ ವಿಮಾನ ಗಳ ಆಸನ ಸಾಮರ್ಥ್ಯದ ೯೦ಶೇ. ಅಧಿಕ ಭಾಗ ತುಂಬುತ್ತಿವೆ. ನಮ್ಮ ಸೇವೆ, ಬೆಲೆ ಮೂಲಕ ನಾವು ಅವರನ್ನು ಮಾರುಕಟ್ಟೆಯಲ್ಲಿ ಎದುರಿಸಬಲ್ಲೆವು. ದುಬೈಗೆ ನಮ್ಮ ಸಮಯ ಜನರಿಗೆ ಅನು ಕೂಲಕರವಾಗಿದೆ ಹಾಗೂ ಜನರು ಅದನ್ನು ಸ್ವೀಕರಿಸಿದ್ದಾರೆ. ನಾವು  ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇವೆ ಹಾಗೂ ಉತ್ತಮ ನಿರ್ವಹಣೆ ನೀಡುತ್ತಿದ್ದೇವೆ.
ವಾರ್ತಾಭಾರತಿ: ಸ್ಪರ್ಧೆ ಎದುರಾದ ಮೇಲೆ ಸೇವಾ ಗುಣ ಮಟ್ಟ ಹೆಚ್ಚಾಗಲೇ ಬೇಕು. ಇದರ ಬಗ್ಗೆ ಗಮನ ಹರಿಸಿದ್ದೀರಾ?
ಮೆಲ್ವಿನ್ ಡಿ’ಸಿಲ್ವ: ನಾವು ಯಾವಾಗಲೂ ಉತ್ತಮವಾದು ದನ್ನೇ ನೀಡುತ್ತಾ ಬಂದಿದ್ದೇವೆ.  ಇದಕ್ಕಾಗಿ ನಮಗೆ ಜನರಿಂದ ಪ್ರಶಂಸೆ ಸಿಕ್ಕಿದೆ. ಏರ್ ಇಂಡಿಯಾ ಅತ್ಯಂತ ಪ್ರಯಾಣಿಕ ಸ್ನೇಹಿ ಹಾಗೂ ನಾವು ಮಾನಯ ಅಂಶಗಳಿಗೆ ಹೆಚ್ಚು ಗಮನ ನೀಡುತ್ತೇವೆ ಎಂಬುದನ್ನು ಜನರು ಗಮನಿಸಿದ್ದಾರೆ.ಇದಕ್ಕೊಂದು ಉದಾಹರಣೆಗೆ ನೀಡುತ್ತೇನೆ. ಇತ್ತೀಚೆಗೆ ಶಾರ್ಜಾದಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬರು ತೀರಾ ಅಸ್ವಸ್ಥರಾದರು. ಆ ಕ್ಷಣದಲ್ಲಿ ಹತ್ತಿರದಲ್ಲಿದ್ದ ವಿಮಾನ ನಿಲ್ದಾಣ ಮಂಗಳೂರು.
ಆ ವಿಮಾನವನ್ನು ಮಂಗಳೂರಿನತ್ತ ತಿರುಗಿ ಸಲಾಯಿತು. ನಾವು ವಿಮಾನ ನಿಲ್ದಾಣದಲ್ಲಿ ಸಿದ್ಧರಾಗಿದ್ದೆವು. ಮೊದಲಿಗೆ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲೇ ಚಿಕಿತ್ಸೆ ನೀಡಿದೆವು. ಬಳಿಕ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದೆವು. 2-3 ದಿನಗಳಲ್ಲಿ ಆ ಪ್ರಯಾಣಿಕ ಸುಧಾರಿಸಿಕೊಂಡರು. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮನುಷ್ಯರಿಗೆ ಬೆಲೆ ನೀಡುತ್ತದೆ. ನಾವು ಇಲ್ಲಿ ಜನರ ಸೇವೆ ಮಾಡಲು ಇದ್ದೇವೆ. ಬೆಲೆ ಹಾಗೂ ಇತರ ಎಲ್ಲಾ ವಿಷಯಗಳಲ್ಲಿ  ಏರ್ ಇಂಡಿಯಾ ‘ಪ್ರಯಾಣಿಕರ ವಿಮಾನ’ವಾಗಿದೆ. “ನಾವು ಕಾಳಜಿ ತೆಗೆದುಕೊಳ್ಳುತ್ತೇವೆ” ಎಂದು ಏರ್ ಇಂಡಿಯಾದಲ್ಲಿ ನಾವು ಹೇಳುತ್ತೇವೆ.
ವಾರ್ತಾಭಾರತಿ: ಮಂಗಳೂರು -ಕೊಲ್ಲಿ ಕ್ಷೇತ್ರದಲ್ಲಿ ಇತರ ವಿಸ್ತರಣಾ ಯೋಜನೆಯಿದೆಯೇ?
ಮೆಲ್ವಿನ್ ಡಿ’ಸಿಲ್ವ: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆರಂಭ ಗೊಂಡಾಗ ಕೇವಲ  ಎರಡು ಮಾರ್ಗಗಳಲ್ಲಿ ಹಾರಾಟ ನಡೆ ಸುತ್ತಿತ್ತು. ಈಗ ಅದು ತುಂಬಾ ವಿಸ್ತರಣೆಗೊಂಡಿದೆ. ಮಂಗಳೂರಿ ನಲ್ಲೂ ಈಗ ವಾರಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ೩೮ ಯಾನ ಗಳನ್ನು ನಿರ್ವಹಿಸುತ್ತಿದ್ದೇವೆ. ಮುಂದೆಯೂ ಈ ಮಾರ್ಗಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತೇವೆ ಹಾಗೂ ಅಗತ್ಯವನ್ನು ಆಧರಿಸಿ ಹೊಸ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತೇವೆ.
ವಾರ್ತಾಭಾರತಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ್ನು ಯಾವ ಕಾರಣಕ್ಕಾಗಿ ಆರಂಭಿಸಲಾಯಿತು?
ಮೆಲ್ವಿನ್ ಡಿ’ಸಿಲ್ವ: ಜನರ ಬಳಿಗೆ ಹೋಗುವ ದೃಷ್ಟಿಯಿಂದ, ಅದರಲ್ಲೂ ಮುಖ್ಯವಾಗಿ ಕೊಲ್ಲಿಗೆ ಹೋಗುವ ಜನರನ್ನು ಗಮನದಲ್ಲಿಟ್ಟುಕೊಂಡು ಏರ್ ಇಂಡಿಯಾ ಎಕ್ಸ್‌ಪ್ರೆಸನ್ನು  ಆರಂಭಿಸಲಾಯಿತು. ದೇಶದ ದಕ್ಷಿಣ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮಧ್ಯಪ್ರಾಚ್ಯಕ್ಕೆ ಹೋಗುತ್ತಿರುವುದನ್ನು ಏರ್ ಇಂಡಿಯಾ ಗಮನಿಸಿತು. ಅವರು ಮುಂಬೈ ಅಥವಾ ಇತರ ನಗರಗಳ ಮೂಲಕ ಹೆಚ್ಚು ಹಣ ಖರ್ಚು ಮಾಡಿ ಪ್ರಯಾಣಿಸ ಬೇಕಾಗಿತ್ತು. ಅವರಿಗೆ ತಮ್ಮ ಮನೆ ಸಮೀಪವೇ ಮಿತವ್ಯಯದಲ್ಲಿ ಕೊಲ್ಲಿಗೆ ಪ್ರಯಾಣ ಕಲ್ಪಿಸುವ ಉದ್ದೇಶದಿಂದ ಇದನ್ನು ಆರಂಭಿಸಲಾಯಿತು. ಇದು ಮಿತವ್ಯಯದ ವಿಮಾನ. ಮಿತವ್ಯಯದ ವಿಮಾನವಾಗಿರುವ ಹೊರತಾಗಿಯೂ, ನಾವು ಪ್ರಯಾಣಿಕರಿಗೆ ಉತ್ತಮ ಆಹಾರ ನೀಡುತ್ತಿದ್ದೇವೆ.

ಮಂಗಳೂರು-ದಮ್ಮಾಮ್ ಯಾನ ವಿವರ
 ಮಂಗಳೂರಿನಿಂದ ಹಾರಾಟ: ಬುಧವಾರ ಮತ್ತು ಶನಿವಾರ ಸಂಜೆ 5 ಗಂಟೆಗೆ 
ದಮ್ಮಾಮ್ ತಲುಪುವುದು: ಬುಧವಾರ ಮತ್ತು ಶನಿವಾರ ಸಂಜೆ 7.10 (ಸೌದಿ ಸಮಯ)
ದಮ್ಮಾಮ್‌ನಿಂದ ಹಾರಾಟ: ಬುಧವಾರ ಮತ್ತು ಶನಿವಾರ ಸಂಜೆ 8.30 (ಸೌದಿ ಸಮಯ)
ಮಂಗಳೂರು ತಲುಪುವುದು: ಗುರುವಾರ ಮತ್ತು ರವಿವಾರ ಮುಂಜಾನೆ 3.20
ಆರಂಭಿಕ ಬೆಲೆ: 10,000 ರೂ.ಯಿಂದ 11,000ರೂ.

No comments:

Post a Comment