Thursday, March 28, 2013

ದುಃಖದ ಮಡುವಲ್ಲಿ ಬಾಲಮ್ಮ ನಿಲಯ


ದುಃಖದ ಮಡುವಲ್ಲಿ ಬಾಲಮ್ಮ ನಿಲಯ
 ಮಾರ್ಚ್ -28-2013

ಫ್ರೆಂಚ್ ಸೇನಾ ದಾಳಿಗೆ ಕುಂದಾಪುರ ನಿವಾಸಿ ಬಲಿ
ಬಳ್ಕೂರು: ಇಲ್ಲಿನ ‘ಬಾಲಮ್ಮ ನಿಲಯ’ದಲ್ಲಿ ನೀರವ ವೌನ ಮನೆ ಮಾಡಿದೆ. ಮನೆ ತುಂಬಾ ಜನರಿದ್ದರೂ ಅಲ್ಲಿ ಸಂತೋಷ, ನಗು ಎಂಬುದು ದೂರದ ದೇಶದಲ್ಲಿ ಇನ್ನೆಂದೂ ಬಾರದ ಲೋಕಕ್ಕೆ ಹೊರಟುಹೋದ ಮನೆಯ ಕಿರಿಯ ಮಗನ ಜೊತೆಯಲ್ಲೇ ಹೋದಂತೆ ಕಂಡುಬರುತ್ತಿತ್ತು.
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕನ್ (ಸಿಎಆರ್)ನಲ್ಲಿ ಸೋಮವಾರ ಮುಂಜಾನೆ ಫ್ರೆಂಚ್ ಸೈನಿಕರು ದೇಶದ ರಾಜಧಾನಿ ಬಂಗುಯಿಯಲ್ಲಿ ವಿಮಾನ ನಿಲ್ದಾಣದತ್ತ ಸಾಗುತ್ತಿದ್ದ ವಾಹನವೊಂದರ ಮೇಲೆ ತಪ್ಪು ಕಲ್ಪನೆಯಿಂದ ನಡೆಸಿದ ಗುಂಡಿನ ದಾಳಿಗೆ ಮೃತಪಟ್ಟ ಇಬ್ಬರು ಭಾರತೀಯರಲ್ಲಿ ಈ ಮನೆಯ ಮಗ ಕೃಷ್ಣಯ್ಯ ಮೊಗವೀರ (37) ಸಹ ಸೇರಿದ್ದರು. ಸಿಎಆರ್‌ನಲ್ಲಿ ಅಟ್ಟಹಾಸ ಮಾಡುತ್ತಿರುವ ಬಂಡುಕೋರರೆಂದು ಗ್ರಹಿಸಿ, ದೇಶದ ರಕ್ಷಣೆಗೆ ನಿಯೋಜಿತರಾದ ಫ್ರೆಂಚ್ ಸೇನಾ ಪಡೆಗಳು ಈ ದಾಳಿ ನಡೆಸಿವೆ ಎಂದು ಹೇಳಲಾಗಿದೆ.
ತಾಯ್ನಡನ್ನು ತೊರೆದು ದೂರದ ದೇಶದಲ್ಲಿ ದುರಂತ ಅಂತ್ಯಕಂಡ ಮಗನನ್ನು ಕಳೆದುಕೊಂಡ ಈ ಮನೆಯಲ್ಲೀಗ ದು:ಖ ಹಾಗೂ ಅನಿಶ್ಚಿತತೆ ತಾಂಡವವಾಡುತ್ತಿದೆ. ನಾಲ್ವರು ಮಕ್ಕಳಲ್ಲಿ ಕೊನೆಯವರಾದ ಕೃಷ್ಣಯ್ಯರ ಹಠಾತ್ ಸಾವಿನ ಸುದ್ದಿ ತಿಳಿ ದಾಗಿನಿಂದ ಅವರ ಹೆತ್ತವರಾದ ನಾರಾಯಣ ಮೊಗವೀರ (72) ಹಾಗೂ ಬಾಲು ಮೊಗವೀರ(59) ತೀವ್ರ ಶೋಕಕ್ಕೊಳಗಾಗಿದ್ದಾರೆ.
ಕೃಷ್ಣಯ್ಯರಿಗೆ ವಿವಾಹವಾಗಿದ್ದು, ಪತ್ನಿ ಸುಮನಾ ಹಾಗೂ ಮೂರೂವರೆ ವರ್ಷದ ಮಗ ಆದಿತ್ಯನೊಂದಿಗೆ ಮುಂಬೈಯಲ್ಲಿ ವಾಸ ವಾಗಿದ್ದಾರೆ. ಸುಮನಾ ಸಾಸ್ತಾನ ಸಮೀಪದ ಕೋಡಿ ಕನ್ಯಾಣದವರು. ಕೃಷ್ಣಯ್ಯರಿಗೆ ಇಬ್ಬರು ಅಣ್ಣಂದಿರು ಹಾಗೂ ಒಬ್ಬ ಅಕ್ಕ ಇದ್ದಾರೆ. ಎರಡನೆ ಅಣ್ಣ ಆನಂದ ಮೊಗವೀರ ಬಳ್ಕೂರಿನ ಹಂಚಿನ ಕಾರ್ಖಾನೆಯಲ್ಲಿ ಸೂಪರ್‌ವೈಸರ್ ಆಗಿ ದ್ದಾರೆ. ಹಿರಿಯಣ್ಣ ಶೇಖರ್ ಮೊಗವೀರ ಮುಂಬೈ ಯಲ್ಲಿ ಕೆಲಸದಲ್ಲಿದ್ದಾರೆ. ಅಕ್ಕ ಪಾವರ್ತಿ, ಪತಿ ಮಕ್ಕಳೊಂದಿಗೆ ಅಮೆರಿಕದಲ್ಲಿದ್ದಾರೆ.
ಆನಂದ ಹೇಳುವಂತೆ, ‘ಕೃಷ್ಣಯ್ಯ ಕಳೆದ ಆರೇಳು ವರ್ಷಗಳಿಂದ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್‌ನ ಖಾಸಗಿ ಫಾರ್ಮಸ್ಯೂಟಿಕಲ್ ಕಂಪೆನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ. ಆತ ತನ್ನ ಸಹೋದರ ಸಂಬಂಧಿಯೊಂದಿಗೆ ಬಂಗುಯಿಗೆ ತೆರಳಿದ್ದ. ಅದೇ ಸಂಬಂಧಿಯ ಮೂಲಕ ಇದೀಗ ಕೃಷ್ಣಯ್ಯನ ನಿಧನ ವಾರ್ತೆ ಮನೆಯವರಿಗೆ ತಲುಪಿದೆ.
ಸಿಎಆರ್‌ನಲ್ಲಿ ಬಂಡುಕೋರರ ಉಪಟಳದ ಹಿನ್ನೆಲೆಯಲ್ಲಿ ಕೃಷ್ಣಯ್ಯ ಕಳೆದ ನವೆಂಬರ್‌ನಲ್ಲಿ ಪತ್ನಿ ಹಾಗೂ ಮಗನನ್ನು ಕರೆದುಕೊಂಡು ಊರಿಗೆ (ಬಳ್ಕೂರು) ಬಂದಿದ್ದ. ಆದರೆ ಕೆಲಕಾಲದ ಬಳಿಕ ಆತ ಯಾವುದೋ ಕಾರಣದಿಂದ ಮತ್ತೆ ಗಲಭೆ ಸಂತ್ರಸ್ತ ದೇಶಕ್ಕೆ ಮರಳಲು ಬಯಸಿದ’ ಎಂದು ಆನಂದ ಹೇಳುತ್ತಾರೆ. ತಮ್ಮ ಕೊನೆಯ ಬಾರಿಗೆ ಮನೆಯವ ರೊಂದಿಗೆ ಮಾತನಾಡಿದ್ದು ಕಳೆದ ಶನಿವಾರ ಎನ್ನುವ ಆನಂದ್, ಆಗ ಮನೆಯಲ್ಲಿದ್ದ ಎಲ್ಲರೊಂದಿಗೂ ಖುಷಿಯಿಂದಲೇ ಮಾತ ನಾಡಿದ್ದ ಎನ್ನುತ್ತಾರೆ. ಆದರೆ ಎಲ್ಲರೊಂದಿಗೆ ಮಾತನಾಡಿದ್ದರೂ, ಅಲ್ಲಿಂದ ಊರಿಗೆ ಮರಳುವ ಬಗ್ಗೆಯಾಗಲಿ, ಅಲ್ಲಿ ಉಲ್ಬಣಿಸಿದ ಬಂಡುಕೋರ ಚಟುವಟಿಕೆಯ ಕುರಿತಾಗಲಿ ಆತ ಯಾವುದೇ ಸುಳಿವು ನೀಡಿರಲಿಲ್ಲ. ಅದು ನಾವೆಲ್ಲ ಕೊನೆಯ ಬಾರಿಗೆ ಆಲಿಸಿದ ಆತನ ಧ್ವನಿಯಾಗಿತ್ತು ಎಂದು ಗದ್ಗದಿತರಾದರು.
ಘಟನೆಗೆ ಮುನ್ನ ಆತ ನಮ್ಮನ್ನು ಸಂಪರ್ಕಿ ಸಲು ಸಾಧ್ಯವಾಗಿರಲಿಕ್ಕಿಲ್ಲ. ಏಕೆಂದರೆ ಮೊಬೈಲ್ ಫೋನ್ ಸೇರಿದಂತೆ ಆತನ ಎಲ್ಲಾ ವಸ್ತು ಗಳನ್ನು ಸೈನಿಕರು ವಶಪಡಿಸಿಕೊಂಡಿ ದ್ದಾರೆಂದು ಹೇಳಲಾಗುತ್ತಿದೆ. ನಾವು ಆತ ದೇಶಕ್ಕೆ ಬರುವ ನಿರೀಕ್ಷೆಯಲ್ಲೇ ಇರಲಿಲ್ಲ. ಏಕೆಂದರೆ ನಮಗಾರಿಗೂ ಅಲ್ಲಿನ ಪರಿಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಆನಂದ ಮೊಗವೀರ ಹೇಳಿದರು.
ನಮಗೆ ಘಟನೆಯ ಕುರಿತು ತಿಳಿದು ಬಂದಿದ್ದು ಮುಂಬೈಯಲ್ಲಿರುವ ಅಣ್ಣ ಶೇಖರ್ ಮೂಲಕ. ಸೋಮವಾರ ಅಪರಾಹ್ನ 3 ಗಂಟೆಗೆ ಆತ ದುರಂತದ ಬಗ್ಗೆ ತಿಳಿಸಿದ. ಆದರೆ ನಾವು ಈ ವಿಷಯವನ್ನು ಹೆತ್ತವರಿಂದ ಮುಚ್ಚಿಟ್ಟೆವು. ಶೇಖರ್‌ಗೆ ಸಿಎಆರ್‌ನಲ್ಲಿದ್ದ ಸಂಬಂಧಿಯ ಮೂಲಕ ಈ ವಿಷಯ ಗೊತ್ತಾಯಿತು. ಬಹು ಹೊತ್ತಿನ ಬಳಿಕ ಹೆತ್ತವರಿಗೆ ನಾನು ಈ ವಿಷಯ ತಿಳಿಸಿದೆ ಎಂದು ಆನಂದ್ ಹೇಳಿದರು. ವಿಷಯ ಅರಿತ ಬಳಿಕ ಅವರಿನ್ನೂ ಆ ಶಾಕ್‌ನಿಂದ ಹೊರಬಂದಿಲ್ಲ. ತಾಯಿ ಯಂತೂ ಹಾಸಿಗೆ ಹಿಡಿದಿದ್ದಾರೆ ಎಂದರು.
ಬಾಲ್ಯ: ಕೃಷ್ಣಯ್ಯ ಓದಿದ್ದು ಬಳ್ಕೂರಿನಲ್ಲೇ. ಬಳ್ಕೂರಿನ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳಲ್ಲಿ ಅವರ ಆರಂಭಿಕ ವಿದ್ಯಾಭ್ಯಾಸ ನಡೆಯಿತು. ಬಸ್ರೂರಿನ ಶಾರದಾ ಕಾಲೇಜಿನಿಂದ ಬಿ.ಕಾಂ ಪದವಿ ಪಡೆದು ಬಳಿಕ ಕುಂದಾಪುರದಲ್ಲಿ ಕಂಪ್ಯೂಟರ್‌ನಲ್ಲಿ ತರಬೇತಿ ಪಡೆದರು. ನಾಲ್ಕೂವರೆ ವರ್ಷಗಳ ಹಿಂದೆ ಅವರು ವಿವಾಹಿತರಾಗಿದ್ದರು.
‘‘ಮೃತದೇಹ ಯಾವಾಗ ಊರಿಗೆ ಬರುತ್ತದೆ ಎಂಬ ಬಗ್ಗೆ ನಮಗೆ ಇದು ವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮುಂಬೈಯಲ್ಲಿರುವ ಶೇಖರ್, ಭಾರತೀಯ ದೂತಾವಾಸದೊಂದಿಗೆ ಸಂಪರ್ಕದಲ್ಲಿದ್ದಾರೆ. ತಮ್ಮನ ಜೀವ ಅಪಾಯದಲ್ಲಿದೆ ಎಂಬುದು ನಮಗೆ ತಿಳಿದಿತ್ತು. ಆದರೆ ಅದು ಆತನ ಪ್ರಾಣ ವನ್ನೇ ಕೊಂಡೊಯ್ಯುತ್ತದೆ ಎಂಬ ಕಲ್ಪನೆಯೇ ನಮಗಿರಲಿಲ್ಲ. ಈ ಬಾರಿ ಊರಿಗೆ ಬಂದಾಗ ಆತ ಬೆಂಗಳೂರಿ ನಲ್ಲೇ ನೆಲೆ ನಿಲ್ಲಲಿ ಎಂಬ ಆಸೆ ನಮಗಿತ್ತು. ಆದರೆ ವಿಧಿ ನಮ್ಮಾಂದಿಗೆ ಬೇರೆಯೇ ಆಟವಾಡಿದೆ ಎಂದು ಗದ್ಗದಿತ ಸ್ವರದಲ್ಲಿ ಹೇಳಿದರು.
ಫ್ರೆಂಚ್ ಸೈನಿಕರೇ ನನ್ನ ತಮ್ಮನ ದುರಂತ ಸಾವಿಗೆ ಕಾರಣ. ಅವರಿಂ ದಾಗಿಯೇ ನಮ್ಮ ಬದುಕು ನುಚ್ಚು ನೂರಾಗಿದೆ ಎಂದ ಕೃಷ್ಣಯ್ಯರ ಅಣ್ಣ ಆನಂದ್, ಸಂಸದ ಜಯಪ್ರಕಾಶ್ ಹೆಗ್ಡೆ ನಮಗೆ ಸಾಧ್ಯ ವಿರುವ ಎಲ್ಲಾ ಸಹಾಯ ಮಾಡುವ ಭರವಸೆ ನೀಡಿದ್ದಾರೆ’’ ಎಂದರು
ಕೃಪೆ:ವಾ.ಭಾರತಿ 

No comments:

Post a Comment