Tuesday, March 5, 2013

ಲೈಂಗಿಕ ಕಿರುಕುಳದ ದೂರು ನೀಡಿದ ಯುವತಿಗೆ ಥಳಿಸಿದ ಪಂಜಾಬ್ ಪೊಲೀಸರು!ತರಣ್‌ತರಣ್(ಪಂಜಾಬ್): ರಕ್ಷಣೆ ಯಾಚಿಸಿ ದವರ ಮೇಲೆಯೇ ಪೊಲೀಸರು ಕಿರಾತಕರಂತೆ ವರ್ತಿಸಿದರೆ ಜನಸಾಮಾನ್ಯರನ್ನು ಕಾಪಾಡುವರ್ಯಾರು? ಪಂಜಾಬ್‌ನ ತರಣ್‌ತರಣ್‌ನಲ್ಲಿ ಸೋಮವಾರ ಅಂತಹ ಒಂದು ಘಟನೆ ನಡೆದಿದೆ.
ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಟ್ರಕ್ ಚಾಲಕರ ವಿರುದ್ಧ ದೂರು ನೀಡಿದ ಯುವತಿ ಹಾಗೂ ಆಕೆಯ ತಂದೆಯನ್ನು ಪೊಲೀಸರು ಅಮಾನವೀಯವಾಗಿ ಥಳಿಸಿದ ಘಟನೆಯೊಂದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ.
ಆ ಪ್ರದೇಶದ ಟ್ರಕ್ ಚಾಲಕರು ತನಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆ ಯುವತಿ ಆ ದಾರಿಯಾಗಿ ಬಂದ ನಾಲ್ವರು ಪೊಲೀಸರಲ್ಲಿ ದೂರಿದ್ದಳು. ಆಗ ವಿನಾಕಾರಣ ರೊಚ್ಚಿಗೆದ್ದ ಪೊಲೀಸರು ಆ ಯುವತಿಯನ್ನು ನೆಲಕ್ಕೆ ದೂಡಿದರಲ್ಲದೆ, ಆಕೆಗೆ ಲಾಠಿಯಿಂದ ಥಳಿಸಿದರು.ಅವರು ಅಷ್ಟಕ್ಕೆ ಸುಮ್ಮನಾಗದೆ ಯುವತಿಯ ತಂದೆಗೂ ಹಿಗ್ಗಾಮಗ್ಗಾ ಬಡಿದರು.
ಪೊಲೀಸರು ಯುವತಿಗೆ ಹಾಗೂ ಆಕೆಯ ತಂದೆಗೆ ಥಳಿಸುತ್ತಿರುವ ದೃಶ್ಯವನ್ನು ದಾರಿಹೋಕನೊಬ್ಬ ಮೊಬೈಲ್ ಫೋನ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಅದನ್ನು ವಿವಿಧ ಟಿವಿ ವಾಹಿನಿಗಳು ಪ್ರಸಾರ ಮಾಡಿವೆ.
ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ ಹಾಗೂ ಈ ಸಂಬಂಧ ಯಾವುದೇ ಪ್ರಕರಣ ಕೂಡಾ ದಾಖಲಾಗಿಲ್ಲವೆಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ

No comments:

Post a Comment