Saturday, March 23, 2013

ಮುಸ್ಲಿಮರೊಂದಿಗೆ ಮಾತುಕತೆಗೆ ಪೋಪ್ ಫ್ರಾನ್ಸಿಸ್ ಉತ್ಸುಕ


ಮುಸ್ಲಿಮರೊಂದಿಗೆ ಮಾತುಕತೆಗೆ ಪೋಪ್ ಫ್ರಾನ್ಸಿಸ್ ಉತ್ಸುಕ
 ಮಾರ್ಚ್ -23-2013

*ಚೀನಾ ಹಾಗೂ ಇತರ ರಾಷ್ಟ್ರಗಳಿಗೆ ಮೈತ್ರಿ ಸಂದೇಶ
ವ್ಯಾಟಿಕನ್: ಮುಸ್ಲಿಮರೊಂದಿಗೆ  ಮಾತುಕತೆ ಹೆಚ್ಚಿಸುವ ಪ್ರಬಲ ಬಯಕೆಯನ್ನು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ವ್ಯಕ್ತಪಡಿಸಿದ್ದಾರೆ ಮತ್ತು ವ್ಯಾಟಿಕನ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರದ ಚೀನಾ ಹಾಗೂ ಇತರ ರಾಷ್ಟ್ರಗಳಿಗೂ ಅವರು ಮೈತ್ರಿಯ  ಸಂದೇಶ ರವಾನಿಸಿದ್ದಾರೆ. ಪೋಪ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾಡಿದ ತಮ್ಮ ಪ್ರಥಮ ವಿದೇಶಾಂಗ ನೀತಿ ಭಾಷಣದಲ್ಲಿ ಅವರು ಇಟಾಲಿಯನ್ ಭಾಷೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಪೋಪ್‌ರ ಭಾಷಣದ ವೇಳೆ ವ್ಯಾಟಿಕನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ವಿಶ್ವದ  180 ರಾಷ್ಟ್ರಗಳ ರಾಯಭಾರಿಗಳು ಪಾಲ್ಗೊಂಡಿದ್ದರು. ಶಾಂತಿಗಾಗಿ ಶ್ರಮಿಸುವುದು, ಬಡವರಿಗಾಗಿ ಸೇವೆ ಹಾಗೂ ಜನತೆಯ ನಡುವಿನ ಕಂದರಗಳಿಗೆ ಸಂಬಂಧ ಸೇತು ನಿರ್ಮಿಸುವ ಬಗ್ಗೆ ತಮ್ಮ ಭಾಷಣದಲ್ಲಿ ಪೋಪ್ ತಿಳಿಸಿದ್ದಾರೆ.
ತಮ್ಮ ಹುದ್ದೆ ‘ಪಾಂಟಿಫ್’ನ ಅರ್ಥ ‘ಸೇತು ನಿರ್ಮಾತೃ’ ಎಂಬ ಅಂಶದ ಬಗ್ಗೆಯೂ ಅವರು ಇದೇ ವೇಳೆ ಸಭಿಕರ ಗಮನ ಸೆಳೆದರು.ವಿಶೇಷವಾಗಿ ಇಸ್ಲಾಂ ಒಳಗೊಂಡಂತೆ ವಿವಿಧ ಧರ್ಮಗಳ ಮುಖಂಡರೊಂದಿಗೆ ಮಾತುಕತೆಯನ್ನು ತೀವ್ರಗೊಳಿಸುವ ಮಹತ್ವ ಹಾಗೂ ನಾಸ್ತಿಕರನ್ನೂ ತಲುಪುವ ಚರ್ಚ್‌ನ ಉದ್ದೇಶದ ಬಗ್ಗೆ ವಿವರಿಸಿದ್ದಾರೆ. ಪೋಪ್ 16ನೆ ಬೆನಡಿಕ್ಟ್ ಅವಧಿಯಲ್ಲಿ ಮುಸ್ಲಿಮರೊಂದಿಗಿನ ವ್ಯಾಟಿಕನ್‌ನ ಬಾಂಧವ್ಯ ಅನೇಕ ಏರುಪೇರುಗಳನ್ನು ಕಂಡಿತ್ತು. 2006ರಲ್ಲಿ ಮಾಡಿದ ಭಾಷಣವೊಂದರಲ್ಲಿ ಪೋಪ್ 16ನೆ ಬೆನಡಿಕ್ಟ್, ಪ್ರವಾದಿ ಮುಹಮ್ಮದರ ಬೋಧನೆಗಳನ್ನು ‘ಕೆಟ್ಟವು ಹಾಗೂ ಅಮಾನವೀಯ’ ಎಂಬ ಗ್ರೀಕ್ ದೊರೆಯ ಹೇಳಿಕೆಯೊಂದನ್ನು ಉಲ್ಲೇಖಿಸಿರುವುದು ಮುಸ್ಲಿಮರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈಜಿಪ್ಟ್‌ನಲ್ಲಿ ಕ್ರೈಸ್ತರಿಗೆ ಹೆಚ್ಚಿನ ರಕ್ಷಣೆ ನೀಡಬೇಕೆಂದು 2011ರಲ್ಲಿ ಬೆನಡಿಕ್ಟ್ ನೀಡಿದ್ದ ಕರೆಗೆ ಪ್ರತಿಭಟನಾರ್ಥವಾಗಿ ಸುನ್ನಿ ಮುಸ್ಲಿಂ ಜಗತ್ತಿನ ಮಹತ್ವದ ಇಸ್ಲಾಮಿಕ್ ಕಲಿಕಾ ಸಂಸ್ಥೆ ಕೈರೊದ ಅಲ್ಅಝ್‌ಹರ್ ವ್ಯಾಟಿಕನ್‌ನೊಂದಿಗಿನ ಮಾತುಕತೆಯನ್ನು ಸ್ಥಗಿತಗೊಳಿಸಿತ್ತು. ಆದಾಗ್ಯೂ, ಅಲ್ ಅಝ್‌ಹರ್‌ನ ಮುಖ್ಯ ಇಮಾಮ್ ಶೇಖ್ ಅಹ್ಮದ್ ಅಲ್ ತಯ್ಯಿಬ್ ಶುಕ್ರವಾರ ನೂತನ ಪೋಪ್ ಅಗಿ ಆಯ್ಕೆಗೊಂಡಿರುವ ಫ್ರಾನ್ಸಿಸ್‌ರಿಗೆ ಅಭಿನಂದನಾ ಸಂದೇಶ ಕಳುಹಿಸಿದ್ದು, ಸಹಕಾರವನ್ನು ಅಪೇಕ್ಷಿಸುವುದಾಗಿ ತಿಳಿಸಿದ್ದಾರೆ  ಎಂದೂ ವ್ಯಾಟಿಕನ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇದು ನೂತನ ಪೋಪ್‌ರ ಸ್ನೇಹಪರ ಸಂಬಂಧದ ದ್ಯೋತಕವಾಗಿದೆ ಎಂದು ಭಾವಿಸಲಾಗಿದೆ. ಸೌದಿ ಅರೇಬಿಯದೊಂದಿಗೂ ವ್ಯಾಟಿಕನ್  ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲ. ವ್ಯಾಟಿಕನ್‌ನೊಂದಿಗೆ ರಾಜತಾಂತ್ರಿಕ ಸಂಬಂಧಗಳಿಗೆ ಸಂಬಂಧಿಸಿ ಕಳೆದ ತಿಂಗಳಷ್ಟೆ ದಕ್ಷಿಣ ಸುಡಾನ್‌ಗೆ ಮಾನ್ಯತೆ ನೀಡಲಾಗಿತ್ತು.
ಕೃಪೆ:ವಾ.ಭಾರತಿ

No comments:

Post a Comment