Wednesday, March 27, 2013

ನುಂಗಲು ಕಷ್ಟವಾಗುತ್ತಿದ್ದ ಮಹಿಳೆಯ ಅನ್ನನಾಳದಲ್ಲಿತ್ತು ಕೃತಕ ಹಲ್ಲಿನ ಸೆಟ್!



 ಮಾರ್ಚ್ -27-2013

ಮುಂಬೈ: ನಾಗೊತಾನೆಯ ಗೃಹಿಣಿ ರಾಣಿದೇವಿ (56)ಗೆ ಒಮ್ಮೆಲೆ ಘನ ಆಹಾರವನ್ನು ನುಂಗಲು ಕಷ್ಟವಾದಾಗ ಏನೋ ಕೆಟ್ಟದನ್ನು ಊಹಿಸಿದ ಅವರ ಮನೆಯವರು ಬೆದರಿದರು. ಆದರೆ, ಜೆಜೆ ಆಸ್ಪತ್ರೆಯ ವೈದ್ಯರು ಸಮಸ್ಯೆಗೆ ಕಾರಣಬಹಳ ಸರಳ ಎಂಬುದನ್ನು ಪತ್ತೆ ಹಚ್ಚಿದರು. ಆಕೆಯ ಕೃತಕ ಹಲ್ಲಿನ ಸೆಟ್ಟಿನ ಒಂದು ತುಂಡು ಅನ್ನನಾಳದಲ್ಲಿ ಸಿಕ್ಕಿಹಾಕಿಕೊಂಡಿತ್ತು.

‘‘ಆ ವಸ್ತುವನ್ನು ಹೊರಗೆ ಎಳೆಯುವ ಮುನ್ನ ಅದು ಕೃತಕ ಹಲ್ಲಿನ ಭಾಗ ಎಂದು ನಮಗೆ ಗೊತ್ತಿರಲಿಲ್ಲ’’ ಎಂದು ಬೈಕುಲಾದಲ್ಲಿರುವ ಆಸ್ಪತ್ರೆಯ ಜನರಲ್ ಸರ್ಜರಿ ಪ್ರೊಫೆಸರ್ ಡಾ. ಅಜಯ್ ಭಂಡಾರ್‌ವಾರ್ ಹೇಳಿದರು.
ಕೃತಕ ಹಲ್ಲಿನ ಸೆಟ್‌ಗಳನ್ನು ನುಂಗುವುದು ಅಸಾಮಾನ್ಯ ಘಟನೆಯೇನಲ್ಲ. ಆದರೆ, ರಾಣಿದೇವಿಗೆ ತಾನು ಅದನ್ನು ನುಂಗಿರುವುದು ತಿಳಿದಿರಲಿಲ್ಲ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಅವರು ಎರಡು ತಿಂಗಳ ಕಾಲ ಮುಂಬೈಯಲ್ಲಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆದಾಡಿದರು. ಅದು ಕ್ಯಾನ್ಸರ್ ಇರಬಹುದು ಎಂಬ ಅಭಿಪ್ರಾಯವನ್ನು ಒಂದು ಆಸ್ಪತ್ರೆಯ ವೈದ್ಯರು ವ್ಯಕ್ತಪಡಿಸಿದರು.

ಕೊನೆಯದಾಗಿ ಆಕೆ ಫೆಬ್ರವರಿ ಎರಡರಂದು ಜೆಜೆ ಆಸ್ಪತ್ರೆಗೆ ಬಂದಾಗ ‘ಕ್ಯಾನ್ಸರ್’ ಬೆಳವಣಿಗೆಯ ಸ್ವರೂಪವನ್ನು ಪತ್ತೆಹಚ್ಚುವುದಕ್ಕಾಗಿ ವಿವಿಧ ಪರೀಕ್ಷೆಗಳನ್ನು ನಡೆಸಿದರು.

‘‘ಅಲ್ಲಿ ಯಾವುದೇ ಬೆಳವಣಿಗೆ ಇರಲಿಲ್ಲ. ಹಾಗಾಗಿ, ಅದು ಹೊರಗಿನ ವಸ್ತುವಿರಬೇಕೆಂದು ನಾವು ಭಾವಿಸಿದೆವು’’ ಎಂದು ಸಹಾಯಕ ಸರ್ಜನ್‌ಗಳಾದ ಅಮಲ್ ವಾಗ್ ಮತ್ತು ಸುಹೈಬ್ ರಾವೂತ್ ಹೇಳಿದರು.
ಆದರೆ, ವಸ್ತುವನ್ನು ತೆಗೆಯಲು ನಡೆಸಲಾದ ಎರಡು ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳು ವಿಫಲವಾದವು. ಯಾಕೆಂದರೆ ಎರಡೂ ಸಂದರ್ಭಗಳಲ್ಲಿ ಉಪಕರಣ ಕೊಂಚ ಬಾಗಿತು.
ಬಳಿಕ ‘ಶಾರ್ಕ್ ಟೂತ್ ಫಾರ್ಸೆಪ್ಸ್’ ಎಂಬ ಉಪಕರಣದ ಮೂಲಕ ಅನ್ನನಾಳದ ತಳದಲ್ಲಿದ್ದ ಕೃತಕ ಹಲ್ಲಿನ ಭಾಗವನ್ನು ಹೊರತೆಗೆಯಲಾಯಿತು.
ಕೃಪೆ ವಾ.ಭಾರತಿ 

No comments:

Post a Comment