Friday, March 29, 2013

ಕ್ಷಮಾದಾನ ಕೇಳಲ್ಲ: ದತ್ತ್


ಕ್ಷಮಾದಾನ ಕೇಳಲ್ಲ: ದತ್ತ್
ಮಾರ್ಚ್ -29-2013

ಮುಂಬೈ, ಮಾ.28: ಕಳೆದ 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಕಾರಾಗೃಹಕ್ಕೆ ಮರಳುವಂತೆ ಸುಪ್ರೀಂ ಕೋರ್ಟ್‌ನಿಂದ ಆದೇಶಿಸಲ್ಪಟ್ಟಿರುವ ನಟ ಸಂಜಯ ದತ್ತ್, ಆಗಾಗ ಉಮ್ಮಳಿಸಿ ಬರುತ್ತಿದ್ದ ಅಳುವಿನ ನಡುವೆಯೇ, ತಾನು ಯಾವುದೇ ಕ್ಷಮಾದಾನ ಕೇಳುವುದಿಲ್ಲ ಹಾಗೂ ನಿಗದಿತ ಗಡುವಿನೊಳಗೆ ಶರಣಾಗುತ್ತೇನೆಂದು ಇಂದಿಲ್ಲಿ ಹೇಳಿದ್ದಾರೆ.ಅವರಿಗೆ ಕ್ಷಮಾದಾನ ನೀಡುವಂತೆ ಹೆಚ್ಚಿರುವ ಬೇಡಿಕೆಗಳ ನಡುವೆಯೇ, ಮಾ.21ರಂದು ಸುಪ್ರೀಂಕೋರ್ಟ್ ಶಸ್ತ್ರಾಸ್ತ್ರ ಕಾಯ್ದೆಯನ್ವಯ ಶಿಕ್ಷೆಯನ್ನು ಎತ್ತಿ ಹಿಡಿದ ಹಾಗೂ ಶರಣಾಗತಿಗೆ 4ವಾರಗಳ ಗಡುವು ನೀಡಿದ ಬಳಿಕ ಭಾವುಕರಾದ ದತ್ತ್ ಮೌನ ಮುರಿದಿದ್ದಾರೆ.
ಕ್ಷಮಾದಾನಕ್ಕಾಗಿ ಮನವಿ ಸಲ್ಲಿಸಿಲ್ಲವೆಂದಷ್ಟೇ ತಾನು ಹೇಳಬಲ್ಲೆ ಎಂದು ತನ್ನ ಸಹೋದರಿ ಹಾಗೂ ಕಾಂಗ್ರೆಸ್ ಸಂಸದೆ ಪ್ರಿಯಾ ದತ್ತ್‌ರೊಂದಿಗೆ ಇಂದು ನಡೆಸಿದ ಕಿರು ಮಾಧ್ಯಮ ಸಂವಾದದಲ್ಲಿ ಸಂಜಯ್ ಹೇಳಿದರು. ಗೋಷ್ಠಿಯಲ್ಲಿ ಅವರು ಯಾವುದೇ ಪ್ರಶ್ನೆ ಕೇಳಲು ಆಸ್ಪದ ನೀಡಲಿಲ್ಲ. ಕ್ಷಮಾದಾನಕ್ಕೆ ಅರ್ಹರಾದ ಹಲವು ಜನರಿದ್ದಾರೆ. ತಾನು ಕ್ಷಮೆ ಯಾಚಿಸಲು ಹೋಗುವುದಿಲ್ಲ ಎಂದ ಬಳಿಕ ಆ ಬಗ್ಗೆ ಚರ್ಚೆಗೆ ಅವಕಾಶವೇ ಇಲ್ಲವೆಂಬುದನ್ನು ತಾನು ಮಾಧ್ಯಮಗಳು ಹಾಗೂ ದೇಶದ ನಾಗರಿಕರ ಮುಂದೆ ಕೈಮುಗಿದು ಹೇಳಬಯಸುತ್ತೇನೆಂದು ದತ್ತ್ ತಿಳಿಸಿದರು.
ಗೌರವಾನ್ವಿತ ಸುಪ್ರೀಂ ಕೋರ್ಟ್ ತನಗೆ ಶರಣಾಗಲು ಕಾಲಾವಕಾಶ ನೀಡಿವೆ. ಅದರೊಳಗೆ ತಾನು ಶರಣಾಗುತ್ತೇನೆಂದು ಪ್ರಿಯಾರ ಸಾಂತ್ವನದ ನಡುವೆಯೇ ಅವರು ಸ್ಪಷ್ಟಪಡಿಸಿದರು.ಸಂಜಯ್ ಈಗಾಗಲೇ ೧೮ ತಿಂಗಳುಗಳನ್ನು ಬಂದಿಖಾನೆಯಲ್ಲಿ ಕಳೆದಿರುವುದರಿಂದ ಅವರಿನ್ನು ಮೂರುವರೆ ವರ್ಷ ಶಿಕ್ಷೆ ಅನುಭವಿಸಬೇಕಿದೆ.
ತಾನು ಸರ್ವನಾಶವಾದೆ. ಇದು ತನ್ನ ಜೀವನದ ಕಠಿಣ ಅವಧಿಯಾಗಿದೆ. ತನಗೆ ಶಾಂತಿಯಿಂದಿರಲು ಅವಕಾಶ ನೀಡುವಂತೆ ತಾನು ಮಾಧ್ಯಮಗಳು ಹಾಗೂ ನಾಗರಿಕರಲ್ಲಿ ಕೈಮುಗಿದು ವಿನಂತಿಸುತ್ತೇನೆಂದು ದತ್ತ್ ಹೇಳಿದರು.ಅನಧಿಕೃತ ಆಯುಧ ಹೊಂದಿದ್ದ ಪ್ರಕರಣದಲ್ಲಿ ಟಾಡಾ ಕೋರ್ಟ್ ನೀಡಿದ್ದ 6ವರ್ಷಗಳ ಶಿಕ್ಷೆಯ ಪ್ರಮಾಣವನ್ನು 5 ವರ್ಷಗಳಿಗೆ ಕಡಿತಗೊಳಿಸಿದ್ದ ಸುಪ್ರೀಂಕೋರ್ಟ್ ಅದನ್ನು ಪೂರ್ಣಗೊಳಿಸಲು ಕಾರಾಗೃಹಕ್ಕೆ ಮರಳುವಂತೆ ಸಂಜಯ್‌ಗೆ ಆದೇಶ ನೀಡಿದೆ.
2005ರಲ್ಲಿ ಅವರಿಗೆ 6 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದ್ದರೂ ದತ್ತ್, 2007ರಲ್ಲಿ ಜಾಮೀನು ಬಿಡುಗಡೆ ಪಡೆಯುವ ತನಕ ಕೇವಲ 18 ತಿಂಗಳು ಮಾತ್ರ ಬಂದಿಖಾನೆಯಲ್ಲಿದ್ದರು.ನನ್ನ ಮತ್ತು ನಮ್ಮ ಜೀವನದಲ್ಲಿ ಅತ್ಯಂತ ಕಠಿಣ ದಿನಗಳು ಬಂದಿವೆ. ನನ್ನನ್ನು ಹಾಗೂ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸಬಯಸುತ್ತಿದ್ದೇನೆ. ನನಗೆ ಕೇವಲ ಕೆಲವೇ ದಿನಗಳು ಉಳಿದಿವೆ ಹಾಗೂ ಅದರೊಳಗೆ ತನ್ನೆಲ್ಲ ಕೆಲಸಗಳನ್ನು ಮುಗಿಸಲು ಇಚ್ಛಿಸಿದ್ದೇನೆ. ನಾನು ಕುಟುಂಬದೊಂದಿಗೂ ಸಮಯ ಕಳೆಯಬೇಕಿದೆ ಎಂದು ಮಾಧ್ಯಮಗಳ ಪ್ರತಿಯೊಬ್ಬರಿಗೂ ನಾನು ಹೇಳ ಬಯಸುತ್ತೇನೆ’ ಎಂದು ದತ್ತ್ ನುಡಿದರು.
ಸುಪ್ರೀಂ ಕೋರ್ಟ್‌ನ ತೀರ್ಪಿನ ಬಳಿಕ ಇಂದು ಸಂಜಯ್ ಮೊದಲ ಬಾರಿಗೆ ಬಾಂದ್ರಾದ ತನ್ನ ನಿವಾಸದಿಂದ ಹೊರಗೆ ಬಂದಿದ್ದಾರೆ. ಅವರು ಚಿತ್ರೀಕರಣಕ್ಕೆ ಹೊರಡುವ ವೊದಲು ಈ ಹೇಳಿಕೆ ನೀಡಿದ್ದಾರೆ.‘ನಾನು ನನ್ನ ದೇಶವನ್ನು ಹಾಗೂ ಅದರ ನಾಗರಿಕರನ್ನು ಪ್ರೀತಿಸುತ್ತೇನೆ. ನಾನು ಭಾರತವನ್ನು ಪ್ರೀತಿಸುತ್ತೇನೆ’ ಎಂದು ದತ್ತ್ ಹೇಳಿದರು.
ಕೃಪೆ:ವಾ.ಭಾರತಿ 

No comments:

Post a Comment