Thursday, March 7, 2013

ಮೀನು ಹಿಡಿಯಲು ಕಲಿಸಿ, ಮೀನು ಹಿಡಿದುಕೊಡಬೇಡಿhanuman_begger

ಹಬ್ಬ ಹರಿದಿನಗಳಲ್ಲಿ ದೇವತೆಗಳ ವೇಷ ಧರಿಸಿ ಮನೆ ಮನೆ ತಿರುಗಿ ಭಿಕ್ಷೆ ಬೇಡುವ ಜನವರ್ಗವುಂಟು. ಅದೂ ಅಲ್ಲದೇ ಪುಣ್ಯ ಕ್ಷೇತ್ರಗಳಂತಹ ಸ್ಥಳಗಳಲ್ಲಿ ವರ್ಷದುದ್ದಕ್ಕೂ ವೇಷ ಧರಿಸಿದ ಅಥವಾ ಧರಿಸದ ಭಿಕ್ಷುಕರೂ ಕಾಣಿಸಿಕೊಳ್ಳುವುದುಂಟು. ಕೈಲಾಗದವರು, ವಯಸ್ಸಾದವರು ಮಾತ್ರವಲ್ಲದೇ ಚಿಕ್ಕ ಮಕ್ಕಳೂ ಭಿಕ್ಷೆಗೆ ಕೈಯೊಡ್ಡುವುದುಂಟು. ಇಂತವರ ಕಾಟ ತಾಳಲಾರದೇ ಪುಣ್ಯ ಕ್ಷೇತ್ರಗಳ ಬಗ್ಗೆ ಜಿಗುಪ್ಸೆ ಮೂಡುವುದು ಸಹಜ. ಆದರೆ ಇತ್ತೀಚೆಗೆ ಇವು ಕೇವಲ ಪುಣ್ಯ ಕ್ಷೇತ್ರಗಳಷ್ಟೇ ಅಲ್ಲದೇ ಬೆಂಗಳೂರಿನ ಸಮೀಪದ ಹಳ್ಳಿಗಳಲ್ಲೂ ಪಸರಿಸಿರುವುದು ವಿಪರ್ಯಾಸ!

ತಿಂಗಳ ಹಿಂದಷ್ಟೇ ಭೇಟಿ ನೀಡಿದ ಸ್ಕಂಧಗಿರಿ ಒಂದು ಬಗೆಯ ಉದಾಹರಣೆಯಾದರೆ ವಾರದ ಹಿಂದೆ ಭೇಟಿ ನೀಡಿದ ಪಾಂಡವಪುರ ಇನ್ನೊಂದು ಬಗೆಯದು. ವಾರಾಂತ್ಯಗಳಲ್ಲಿ ಬಿಡುವು ಮಾಡಿಕೊಂಡು ಸ್ಕಂಧಗಿರಿಯಂತಹ ತಾಣಕ್ಕೆ ಹೋದರೆ ಸ್ವಯಂಘೋಷಿತ ಗೈಡುಗಳ ಕಾಟ. ಮೊದಲು "ಸಾರ್ ದಾರಿ ನಿಮಗೆ ಗೊತ್ತಾಗೋದಿಲ್ಲ, ಮಧ್ಯದಲ್ಲಿ ಅಪಾಯಕರ ಪ್ರಾಣಿಗಳು ಎದುರಾಗಬಹುದು", ಇತ್ಯಾದಿ ಬೆದರಿಕೆಯೊಡ್ಡಿ ಗೈಡಿನ ಅನಿವಾರ್ಯತೆ ಸೂಚಿಸುತ್ತಾರೆ. ಇದಕ್ಕೆ ನೀವು ಮಣೆ ಹಾಕದಿದ್ದರೆ, ಗುಂಪು ಕಟ್ಟಿಕೊಂಡು ಬಂದು "ಇಲ್ಲಿ ಕಳ್ಳಕಾಕರು ಜಾಸ್ತಿ, ದಾರೀಲಿ ನಿಮಗೇನಾದರೂ ಅಪಾಯವಾಗಬಹುದು; ನಿಮ್ಮ ವಾಹನ ಇಲ್ಲೇ ಬಿಟ್ಟಿದ್ದೀರ, ಅದಕ್ಕೆ ನಾವು ಜವಾಬ್ದಾರರಲ್ಲ;" ಇತ್ಯಾದಿಯಾಗಿ ಬೆದರಿಸುವುದರ ಮೂಲಕವಾದರೂ ಒಂದು ಬೆಲೆಯನ್ನು ನಿಶ್ಚಯಿಸಿ ನಿಮ್ಮೊಂದಿಗೆ ಬರುತ್ತಾರೆ. ಇನ್ನು ಕೊಕ್ಕರೆ ಬೆಳ್ಳೂರು ಅಥವಾ ತೊಣ್ಣೂರು ಕೆರೆಗೋ ಭೇಟಿಯಿತ್ತರೆ ಬೇರೆಯ ಬಗೆಯ ವಸೂಲಿ. "ಅಣ್ಣ ಅಣ್ಣ, ನನ್ನ ಹತ್ರ ಪೆನ್ನಿಲ್ಲ/ಪುಸ್ತಕವಿಲ್ಲ. ತಗೋಳೋಕೆ ದುಡ್ಡು ಕೊಡಿ. ನಂಬಿಕೆ ಇಲ್ಲದಿದ್ರೆ ಇಲ್ಲೇ ಹತ್ತಿರದಲ್ಲಿ ಅಂಗಡಿ ಇದೆ ಕೊಡ್ಸಿ ಅಣ್ಣ " ಅಂತ ಬೇಡೋ ಮಕ್ಕಳು.  ಮೊದಲನೆಯದು ಒಂದು ರೀತಿಯಲ್ಲಿ ಹಿಂದಿನಿಂದ ಇದ್ದಿದ್ದೇ. ಆದರೆ ಎರಡನೆಯದು ಮಾತ್ರ ಭಿಕ್ಷೆ ಬೇಡುವ ಹೊಸ ಪರಿ. ನನಗೆ ಆಶ್ಚರ್ಯವಾಗಿದ್ದು ಇವರು ದುಡ್ಡು ಬಿಟ್ಟು ಪುಸ್ತಕ ಪೆನ್ನನ್ನು ಕೇಳಲು ತೊಡಗಿದ್ದು ಹೇಗೆ ಎಂದು.

"community service" ಇತ್ತೀಚಿನ ದಿನಗಳಲ್ಲಿ ತಲೆಯೆತ್ತುತಿರುವ ಹೊಸ ಬಗೆಯ ಹವ್ಯಾಸ. ಜನರ ಸೇವೆಯ ಹೆಸರಿನಲ್ಲಿ ಉಳ್ಳವರಿಂದ ಹಣ ಸಂಗ್ರಹಿಸಿ, ಬಡವರನ್ನು ಹುಡುಕಿ ಅವರಿಗೆ ಸಹಾಯ ಮಾಡುವಂತದ್ದು.  ಇಂತವರು ಹೆಚ್ಚಾಗಿ ಸಹಾಯ ಮಾಡುವುದು ಶಾಲಾ ವಿದ್ಯಾರ್ಥಿಗಳಿಗೆ; ಪುಸ್ತಕ, ಪೆನ್ನು, ಪೆನ್ಸಿಲ್ ಬಟ್ಟೆ ಇತ್ಯಾದಿ ಹಂಚುವುದು. ಪಟ್ಟಣದಿಂದ ಆಗಾಗ್ಗೆ ಇಂಥವರು ಬಂದು ಪುಕ್ಕಟೆಯಾಗಿ ಪುಸ್ತಕ, ಪೆನ್ಸಿಲ್, ಪೆನ್ನು ಕೊಟ್ಟುಹೋಗುವುದನ್ನು ಕಂಡ ಮಕ್ಕಳು, ಅವರ ಹೆತ್ತವರು ಹಿಂದಿನ ರೀತಿ ಭಿಕ್ಷೆ ಬೇಡುವುದಕ್ಕಿಂತ ಪುಸ್ತಕ ಪೆನ್ನಿಗಾಗಿ ಕೇಳಿದರೆ ಜನರು ಹಣ ಕೊಡುತ್ತಾರೆ ಎಂಬುದನ್ನು ಮನಗಂಡರೇನೋ. ಕೊಕ್ಕರೆ ಬೆಳ್ಳೂರಿನಂತಹ ಹಳ್ಳಿಗೆ ವಾರಾಂತ್ಯದಲ್ಲಿ ಕನಿಷ್ಟಪಕ್ಷ ೧೦-೧೫ ಜನ ಭೇಟಿ ಕೊಟ್ಟರೂ ಪ್ರತಿಯೊಂದು ಮಕ್ಕಳಿಗೆ ೭ ದಿನಗಳಲ್ಲಿ ಅಷ್ಟೊಂದು ಪೆನ್ನು, ಪುಸ್ತಕಗಳ ಅವಶ್ಯಕತೆಯಾದರೂ ಏನುಂಟು? "community service"ನ ಹೆಸರಲ್ಲೋ, ನಾವೇ ಖುದ್ದಾಗಿ ಮಕ್ಕಳಿಗೆ ಪುಸ್ತಕ ಕೊಡಿಸಿದರೂ ಅವುಗಳನ್ನು ಮತ್ತೆ ಅಂಗಡಿಗೆ ಮಾರುವುದಿಲ್ಲ ಎಂದು ಹೇಗೆ ತಿಳಿಯುವುದು?

"community service"ನಲ್ಲಿ ತೊಡಗಿಸಿಕೊಂಡವರ ಉದ್ದೇಶ ಒಳ್ಳೆಯದಿರಬಹುದು. ಆದರೂ ಸಮಸ್ಯೆಯ ಮೂಲ ತಿಳಿಯದೆಯೆ ತಾತ್ಕಾಲಿಕ ಪರಿಹಾರ ಕೊಡಲು ಹೋದರೆ ಮೀನು ಕೊಟ್ಟಂತಾಗುತ್ತದೆ; ನಾಳೆ ಮೀನಿಗಾಗಿ ಮತ್ತೆ ಕೈ ಒಡ್ಡುವಂತಾಗುತ್ತದೆ. ಅದರ ಬದಲು ಸಮಸ್ಯೆಯ ಮೂಲದತ್ತ ಚಿಂತಿಸಿದರೆ ಒಳಿತಲ್ಲವೇ?

ಕಳೆದ ವಾರಾಂತ್ಯ ಇಂತಹ ಹಲವು ಮಕ್ಕಳನ್ನು ನೋಡಿ ನೋಡಿ ಬೇಸತ್ತು (ಯಾರಿಗೂ ಏನೂ ಕೊಡಲಿಲ್ಲ), ಕೊನೆಯಲ್ಲಿ ಬಂದವನ ಬಳಿ, ಅವನು ಮಾತನಾಡುವ ಮೊದಲೇ, "ತಮ್ಮಾ, ಪುಸ್ತಕ ಕೊಡ್ಸು" ಅಂತ ಕೇಳಿದೆ. ನನ್ನನ್ನೊಮ್ಮೆ ನೋಡಿ ಏನೂ ಹೇಳದೆ ಹಿಂದಿರುಗಿದ. ಜೊತೆಯಲ್ಲಿದ್ದ ರವಿ, "ಮುಂದಿನ ಬಾರಿ lap top ಕೊಡ್ಸೋಕೆ ಕೇಳ್ಕೊಳಿ" ಅಂದ್ರು
ಕೃಪೆ:ಅನುಭವ ಮಂಟಪ ಬ್ಲಾಗ್ 

No comments:

Post a Comment