Wednesday, March 27, 2013

ಕಾಂಗ್ರೆಸ್‌ನಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಇಳಿಮುಖ;ಮುಸ್ಲಿಮ್ ಅಭ್ಯರ್ಥಿಗಳ ಕುರಿತು ಮಲತಾಯಿ ಧೋರಣೆ-ಮುಖಂಡರ ಆಕ್ರೋಶ



ಮಾರ್ಚ್ -27-2013

ಬೆಂಗಳೂರು: ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ನಾಳೆ ಅಂತಿಮಗೊಳಿಸಲಿದ್ದು, ಅಲ್ಪಸಂಖ್ಯಾತ ಮುಖಂಡರು ಕನಿಷ್ಠ 30 ಸ್ಥಾನಗಳಿಗಾಗಿ ಪಟ್ಟು ಹಿಡಿದಿರುವುದು ರಾಜ್ಯ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ವಿವಿಧ ಜಾತಿಗಳಿಗೆ ಇಂತಿಷ್ಟು ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಕಾಂಗ್ರೆಸ್ ಮುಖಂಡರು ಅಲ್ಪಸಂಖ್ಯಾತರನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎನ್ನುವುದು ಮುಸ್ಲಿಮ್ ಮುಖಂಡರ ಅಸಮಾಧಾನವಾಗಿದೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಮರಿಗೆ ನ್ಯಾಯ ಸಿಗದೇ ಇದ್ದಲ್ಲಿ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಾಗಿರುವ ಮುಸ್ಲಿಮ್ ಮತದಾರರು ಕಾಂಗ್ರೆಸ್‌ಗೆ ಮುಖತಿರುಗಿಸಲಿದ್ದಾರೆ ಎಂದು ಮುಖಂಡರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಹಲವು ಮುಖಂಡರು ದಿಲ್ಲಿಗೆ ತೆರಳಿದ್ದು, ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆನ್ನಲಾಗಿದೆ. ಉಡುಪಿಯಲ್ಲಿ ಮುಸ್ಲಿಮ್ ಅಭ್ಯರ್ಥಿಗೆ ಒಂದು ಸ್ಥಾನವನ್ನು ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಮರಿಗೆ ಟಿಕೆಟ್ ನೀಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಇಳಿಮುಖವಾಗುತ್ತಿರುವ ಮುಸ್ಲಿಮ್ ಪ್ರಾತಿನಿಧ್ಯ:
ಜನಸಂಖ್ಯೆಯ ಆಧಾರದ ಮೇಲೆ ಮತ್ತು ಸಾಮಾಜಿಕ ನ್ಯಾಯವನ್ನು ನೀಡುವ ನಿಟ್ಟಿನಲ್ಲಿ ಮುಸ್ಲಿಮ್ ಶಾಸಕರ ಪ್ರಮಾಣ ಕನಿಷ್ಠ 27ರಷ್ಟಾದರೂ ಇರಬೇಕಾಗಿದೆ. ಲೋಕಸಭೆಯಲ್ಲಿ ಕನಿಷ್ಟ 6 ಜನ ಸದಸ್ಯರಾದರೂ ಇರಬೇಕಾಗಿದೆ. ಆದರೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮುಸ್ಲಿಮರ ಕುರಿತಂತೆ ತಳೆದ ನಿರ್ಲಕ್ಷದ ಪರಿಣಾಮವಾಗಿ ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆ ಇಳಿಮುಖವಾಗಿದೆ. ಇದು ಪರೋಕ್ಷವಾಗಿ ಮುಸ್ಲಿಮರ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರಿದೆ ಎಂದು ಸಾಚಾರ್ ವರದಿ ಹೇಳುತ್ತಿದೆ.

ಯಾವಾಗ ಮುಸ್ಲಿಮರು ಅತ್ಯಧಿಕವಾಗಿ ಆಯ್ಕೆಯಾದರೋ ಆಗೆಲ್ಲ ಕಾಂಗ್ರೆಸ್ ಪಕ್ಷ ಬಹುಮತದಿಂದ ಆರಿಸಿ ಬಂದಿದೆ. ಆದರೆ ಮುಸ್ಲಿಮ್ ಅಭ್ಯರ್ಥಿಗಳ ಕುರಿತಂತೆ ಕಾಂಗ್ರೆಸ್ ಪಕ್ಷಪಾತ ನಿಲುವು ತಳೆಯುತ್ತಾ ಬಂದ ದಿನದಿಂದ ಕಾಂಗ್ರೆಸ್ ರಾಜ್ಯದಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಮುಸ್ಲಿಮರ ಮತಗಳು ಬೇಕು, ಆದರೆ ಅಧಿಕಾರ ಅವರಿಗೆ ನೀಡಲಾರೆವು ಎನ್ನುವುದು ಕಾಂಗ್ರೆಸ್‌ನ ಇತ್ತೀಚಿನ ನಿಲುವು. ಇದು ಸಹಜವಾಗಿಯೇ ಮುಸ್ಲಿಮ್ ಮುಖಂಡರ ಸಿಟ್ಟಿಗೆ ಕಾರಣವಾಗಿದೆ.

2004ರ ಚುನಾವಣೆಯಲ್ಲಿ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ 5 ಜನರಷ್ಟೇ ಮುಸ್ಲಿಮ್ ಶಾಸಕರು. 2008ರ ಚುನಾವಣೆಯಲ್ಲೂ ಮುಸ್ಲಿಮರ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಸಾಚಾರ್ ವರದಿಯನ್ನು ಮಂಡಿಸಿ, ಮುಸ್ಲಿಮರಿಗೆ ಮಹದುಪಕಾರ ಮಾಡಿದಂತೆ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ವರ್ತಿಸುತ್ತಿದೆ. ಆದರೆ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವಾಗ ಮಾತ್ರ ಸಾಚಾರ್ ವರದಿಯನ್ನು ಗಾಳಿತೂರುತ್ತದೆ. ಆದುದರಿಂದಲೇ, ಮುಸ್ಲಿಮರಲ್ಲಿ ನಿಧಾನಕ್ಕೆ ಕಾಂಗ್ರೆಸ್‌ನ ಕುರಿತಂತೆ ಒಲವು ಕಡಿಮೆಯಾಗುತ್ತಿದೆ. ಯಡಿಯೂರಪ್ಪ ಅವರ ಕೆಜೆಪಿ ಮತ್ತು ಜೆಡಿಎಸ್ ಮುಸ್ಲಿಮರ ಬಗ್ಗೆ ಹೆಚ್ಚಿನ ಆಸ್ಥೆ ತೋರಿಸುತ್ತಿರುವುದರಿಂದ ಈ ಬಾರಿ ಮುಸ್ಲಿಮರ ಮತಗಳು ಒಡೆಯುವ ಸಂಭವ ಇಲ್ಲದಿಲ್ಲ.

ಇಂದು ಕರ್ನಾಟಕದಲ್ಲಿ ಕಾಂಗ್ರೆಸ್ ಒಕ್ಕಲಿಗ, ಲಿಂಗಾಯತರ ಕಡೆಗೆ ನೀಡಿದ ಗಮನವನ್ನು ಮುಸ್ಲಿವರ ಕಡೆಗೆ ನೀಡುತ್ತಿಲ್ಲ ಎನ್ನುವುದು ಇನ್ನೊಂದು ಅಸಮಾಧಾನ. ಮುಸ್ಲಿಮ್ ಸಮುದಾಯಕ್ಕೆ ಕಡಿಮೆ ಜನಸಂಖ್ಯೆ ಹೊಂದಿದರೂ ಅವರಿಗೇ ಹೆಚ್ಚು ಮಣೆ ಹಾಕಲು ಹೊರಟಿರುವ ಕಾಂಗ್ರೆಸ್ ಈ ಮೂಲಕ ತನ್ನ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಳ್ಳುತ್ತದೆ ಎನ್ನುವುದು ಕಾಂಗ್ರೆಸ್‌ನ ಮುಸ್ಲಿಮ್ ಮುಖಂಡರ ಕಳವಳ. ಬಿಎಸ್‌ಪಿ ರಾಜ್ಯದಲ್ಲಿ ನಿಧಾನಕ್ಕೆ ಬಲಿಷ್ಟವಾಗುತ್ತಿದ್ದು, ಮುಸ್ಲಿಮರನ್ನು ಸೆಳೆಯಲು ಮಾಯಾವತಿಯೂ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮಾತ್ರ ಮುಸ್ಲಿಮರನ್ನು ಮರೆತಿರುವುದು ಖೇದಕರ ಎಂದು ಮುಸ್ಲಿಮ್ ಮುಖಂಡರು ಅಭಿಪ್ರಾಯ ಪಡುತ್ತಿದ್ದಾರೆ.
ಕೃಪೆ ವಾ.ಭಾರತಿ 

No comments:

Post a Comment