Saturday, March 9, 2013

ಕತಾರ್‌ ವಿಶ್ವಕಪ್‌ ಫುಟ್ಬಾಲ್‌ ಚಳಿಗಾಲದಲ್ಲಿ ನಡೆಯಲಿದೆ!


ಕತಾರ್‌ ವಿಶ್ವಕಪ್‌ ಫುಟ್ಬಾಲ್‌ ಚಳಿಗಾಲದಲ್ಲಿ ನಡೆಯಲಿದೆ!


ಈಡನ್‌ಬಾರ್ಗ್, ಸ್ಕಾಟ್ಲಂಡ್ : 2022ರ ಪ್ರತಿಷ್ಠಿತ ವಿಶ್ವಕಪ್ ಫುಟ್ಬಾಲ್ ಪಂದ್ಯಾಟದ ಆಯೋಜನೆಯ ಹಸಿರುನಿಶಾನೆ ಪಡೆದಿರುವ ಕತಾರ್ ರಾಷ್ಟ್ರದಲ್ಲಿ ಕೆಲವೊಂದು ವೈದ್ಯಕೀಯ ಕಾರಣಗಳಿಂದ ಪಂದ್ಯಾಟವನ್ನು  ಚಳಿಗಾಲದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಫಿಫಾ ಹೇಳಿದೆ.
2022ರ ಫುಟ್‌ಬಾಲ್ ಪಂದ್ಯಾಟದ ಪ್ರಾಯೋಜಕತ್ವವನ್ನು ತನಗೆ ನೀಡಬೇಕೆಂದು ಕತಾರ್ ರಾಷ್ಟ್ರವು ಸಲ್ಲಿಸಿದ ಮನವಿಗೆ ಸ್ಪಂದಿಸಿದ್ದ ಫಿಫಾ ಅದಕ್ಕೆ ಸಮ್ಮತಿಸಿದೆಯಾದರೂ ಪಂದ್ಯಾಟವನ್ನು  ಸಾಧಾರಣವಾಗಿ 40 ಡಿಗ್ರಿ ಸೆಲ್ಸಿಯಸ್ ಬಿಸಿಲ ದಗೆ ಇರುವ ಬೇಸಿಗೆಕಾಲಕ್ಕಿಂತಲೂ ಚಳಿಗಾಲದಲ್ಲಿ ನಡೆಸುವುದು ಸೂಕ್ತ ಎಂದು ಅಭಿಪ್ರಾಯಿಸಿದೆ.ಬಿಸಿಲಿನ ದಗೆಯಲ್ಲಿ ಇದನ್ನು ನಡೆಸಿದರೆ ಇದು ಆಟಗಾರರಿಗೆ ಅಪಾಯವನ್ನು ತಂದೊಡ್ಡಬಹುದು ಎನ್ನುವುದು ನಮ್ಮ ಆತಂಕವಾಗಿದೆ ಎಂದು ಫಿಫಾ ಮುಖ್ಯ ಕಾರ್ಯದರ್ಶಿ ಜೆರೊಂ ವಾಲ್ಕೆ ತಿಳಿಸಿದರು.
ಪಂದ್ಯಾಟ ನಡೆಯಲು ಇನ್ನೂ 9 ವರ್ಷಗಳಿವೆ. ಅದಕ್ಕಿಂತ ಮುಂಚಿತವಾಗಿ 2 ವಿಶ್ವಕಪ್ ಪಂದ್ಯಾಟಗಳು ಕ್ರಮವಾಗಿ ಬ್ರಿಝಿಲ್ ಮತ್ತು ರಶ್ಯದಲ್ಲಿ ನಡೆಯಲಿರುವುದರಿಂದ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ತಯಾರಿಸಲು ನಾವಿನ್ನೂ ತೊಡಗಿಲ್ಲ ಎಂದು ಅವರು ಹೇಳಿದರು.
2022ರ ಫುಟ್‌ಬಾಲ್ ಪ್ರಾಯೋಜಕತ್ವಕ್ಕೆ ಸ್ಪರ್ಧಿಸಿದ್ದ ಅಮೆರಿಕ, ಜಪಾನ್,ದಕ್ಷಿಣ ಕೊರಿಯಾ ಹಾಗೂ ಆಸ್ಟ್ರೇಲಿಯಾ ಕತಾರ್ ವಿರುದ್ದ ಸೋತಿದ್ದವು.
ಫುಟ್‌ಬಾಲ್ ಪಂದ್ಯಾಟಗಳು ಸಾಮಾನ್ಯವಾಗಿ ಜೂನ್‌ತಿಂಗಳಲ್ಲಿ ನಡೆಯಲಿರುವುದಾದರೂ ಆಟಗಾರರ ದೈಹಿಕ ರಕ್ಷಣೆಯ ದೃಷ್ಟಿಯಿಂದ ಕತಾರ್‌ನಲ್ಲಿ ಜೂನ್‌ತಿಂಗಳಲ್ಲಿ ನಡೆಯುವ ಫುಟ್‌ಬಾಲ್ ಪಂದ್ಯಾಟವನ್ನು ಚಳಿಗಾಲಕ್ಕೆ ಮಾರ್ಪಡಿಸುವುದಕ್ಕೆ ತನ್ನ ಸಹಮತವಿದೆ ಎಂದು ಫಿಫಾ ಅಧ್ಯಕ್ಷ ಸೆಪ್ ಬ್ಲೆಟಾರ್ ಹೇಳಿದ್ದಾರೆ.

No comments:

Post a Comment