Thursday, March 14, 2013

ಇಟೆಲಿಯ ಕೈಗೆ ಕೋಲು ಕೊಟ್ಟು ಹೊಡೆಸಿಕೊಂಡ ಸರಕಾರಮೀನುಗಾರರ ಹತ್ಯೆಗೆ ಸಂಬಂಧಿಸಿ ಭಾರತದಲ್ಲಿ ವಿಚಾರಣೆ ಎದುರಿಸುತ್ತಿರುವ ತನ್ನ ಇಬ್ಬರು ನೌಕಾ ಸಿಬ್ಬಂದಿಯನ್ನು ಮರಳಿ ಕಳುಹಿಸುವುದಿಲ್ಲ ಎಂದು ಇಟಲಿ ಹೇಳಿದೆ. ಭಾರತ ಇಟಲಿಯ ಕೈಗೆ ಕೋಲು ಕೊಟ್ಟು ಹೊಡೆಸಿಕೊಂಡ ಕೇಂದ್ರ ಸರಕಾರ ಮೀನುಗಾರರ ಹತ್ಯೆಗೆ ಸಂಬಂಧಿಸಿ ಭಾರತದಲ್ಲಿ ವಿಚಾರಣೆ ಎದುರಿಸುತ್ತಿರುವ ತನ್ನ ಇಬ್ಬರು ನೌಕಾ ಸಿಬ್ಬಂದಿಯನ್ನು ಮರಳಿ ಕಳುಹಿಸುವುದಿಲ್ಲ ಎಂದು ಇಟಲಿ ಹೇಳಿದೆ. ಭಾರತ ಇಟಲಿಯ ಕೈಗೆ ಕೋಲು ಕೊಟ್ಟು ಹೊಡೆಸಿಕೊಂಡಿದೆ. ಇದೀಗ ‘ಇಟಲಿಯಿಂದ ದ್ರೋಹ, ವಂಚನೆ’ ಎಂಬಿತ್ಯಾದಿಯಾಗಿ ಹೇಳಿಕೆಗಳನ್ನು ಕೇಂದ್ರ ಸರಕಾರ ಸುರಿಸುತ್ತಿದೆ. ಆದರೆ ದ್ರೋಹ ಮಾಡಿರುವುದು ಇಟಲಿಯಲ್ಲ. ಕೇಂದ್ರ ಸರಕಾರ.

ಕೇರಳದಲ್ಲಿ ಇಬ್ಬರು ಮೀನುಗಾರರನ್ನು ಬರ್ಬರವಾಗಿ ಕೊಂದ ನೌಕಾ ಸಿಬ್ಬಂದಿಗೆ ಪರಾರಿಯಾಗಲು ಸರಕಾರವೇ ಅನುವು ಮಾಡಿ ಕೊಡುವ ಮೂಲಕ, ಈ ನೆಲದ ಜನತೆಗೆ ದ್ರೋಹ ವೆಸಗಿದೆ. ಇಟಲಿಯ ಜನರ ಪ್ರಾಣಕ್ಕಿರುವ ಬೆಲೆ, ನಮ್ಮ ನೆಲದ ಮೀನುಗಾರರ ಪ್ರಾಣ ಕ್ಕಿಂತ ಬಲು ದೊಡ್ಡದು ಎಂದು ಹೇಳಿ ಕೊಂಡಿದೆ. ಇದೀಗ, ಇಟಲಿಯ ವಿರುದ್ಧ ಅದೇನು ಟೀಕಾ ಪ್ರಹಾರ ಮಾಡಿದರೂ, ಕೇಂದ್ರ ಸರಕಾರದ ಬೇಜವಾಬ್ದಾರಿಯಿಂದಲೇ ಇದು ನಡೆದಿದೆ. ಆದರೆ ಈ ತಪ್ಪಿಗೆ ಬೆಲೆ ತೆರಬೇಕಾದವನು ಮಾತ್ರ ಜನಸಾಮಾನ್ಯ. ಆರೋಪಿಗಳು ಕೆಲವು ತಿಂಗಳು ತಿಂದು, ಉಂಡು, ರಾಜವೈಭೋಗ ನಡೆಸಿದುದೇ ಬಂತು.

ಕಳೆದ ಡಿಸೆಂಬರ್‌ನಲ್ಲಿ ಈ ಆರೋಪಿಗಳನ್ನು ಕ್ರಿಸ್ಮಸ್ ಆಚರಿಸುವುದಕ್ಕೆಂದು ಇಟಲಿಗೆ ಕಳುಹಿಸಿ ಕೊಟ್ಟಾಗಲೇ ಕೇರಳದ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಸದನದಲ್ಲೂ ಇದು ಗದ್ದಲಕ್ಕೆ ಕಾರಣವಾಗಿತ್ತು. ಯಾವುದೇ ಕಾರಣಕ್ಕೂ ಈ ಆರೋಪಿಗಳನ್ನು ಇಟಲಿಗೆ ಕಳುಹಿಸಬಾರದು ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಬಳಿಕವೂ ಕೇಂದ್ರ ಸರಕಾರದ ಒಪ್ಪಿಗೆಯೊಂದಿಗೆ ನ್ಯಾಯಾಲಯ ಕ್ರಿಸ್ಮಸ್ ಆಚರಿಸಲು ಈ ಆರೋಪಿಗಳನ್ನು ಇಟಲಿಗೆ ಕಳುಹಿಸಿಕೊಟ್ಟಿತ್ತು.
ಇಬ್ಬರು ಅಮಾಯಕ ಮೀನುಗಾರರನ್ನು ತೀರಾ ಹತ್ತಿರದಿಂದ ಅನುಮಾನಾಸ್ಪದವಾಗಿ ಕೊಂದು ಹಾಕಿದ ಆರೋಪಿಗಳನ್ನು ಕೇವಲ ಕ್ರಿಸ್‌ಮಸ್ ನೆಪದಿಂದ ಇಟಲಿಗೆ ಕಳುಹಿಸಿಕೊಡುವ ಅನಿವಾರ್ಯ ಇತ್ತೇ? ಸಾಧಾರಣವಾಗಿ ಮದುವೆ ಅಥವಾ ಸಾವಿನ ಕಾರಣಕ್ಕಾಗಿ ಆರೋಪಿಗಳನ್ನು ಪೆರೋಲ್ ಮೇಲೆ ಕಳುಹಿಸುವುದಿದೆ. ಆದರೆ ಇಲ್ಲಿ, ಆರೋಪಿಗಳು ವಿದೇಶೀಯರು. ಒಮ್ಮೆ ಅವರು ತಮ್ಮ ದೇಶಕ್ಕೆ ತೆರಳಿದರೆ ಅವರು ಬರುತ್ತಾರೆಂದು ನಂಬುವಂತಿಲ್ಲ.
ಒಂದು ವೇಳೆ ಬರದೇ ಇದ್ದರೆ ನೇರವಾಗಿ ಆ ದೇಶಕ್ಕೆ ತೆರಳಿ ಅವರನ್ನು ಬಂಧಿಸುವುದಕ್ಕೆ ಸಾಧ್ಯವಿಲ್ಲ. ಆ ದೇಶದಲ್ಲಿ ಅವರ ಮೇಲೆ ಇನ್ನೊಂದು ವೊಕದ್ದಮೆಯೇನಾದರೂ ದಾಖಲಾದರೆ, ಅದರ ವಿಚಾರಣೆ ಮುಗಿಯುವವರೆಗೆ ಕಳುಹಿಸಿಕೊಡಲಾಗುವುದಿಲ್ಲ ಎನ್ನುವ ಅವಕಾಶ ಆ ದೇಶಕ್ಕಿದೆ. ಆದುದರಿಂದಲೇ ಕ್ರಿಸ್‌ಮಸ್ ಹಬ್ಬದಂತಹ ತೆಳುವಾದ ಕಾರಣಕ್ಕಾಗಿ ಅವರನ್ನು ಇಟಲಿಗೆ ಕಳುಹಿಸಬಾರದು ಎಂದು ಕೇರಳದ ನಾಯಕರು ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಆದರೆ ಈ ಎಲ್ಲ ಆಕ್ಷೇಪಗಳನ್ನು ಬದಿಗೆ ಸರಿಸಿ, ಕೇಂದ್ರ ಸರಕಾರ ಅವರನ್ನು ಇಟಲಿಗೆ ಕಳುಹಿಸಲು ಒಪ್ಪಿಕೊಂಡಿತ್ತು. ಅದೇನೋ, ಕ್ರಿಸ್‌ಮಸ್ ಆಚರಿಸಲೆಂದು ಹೋದವರು ಮತ್ತೆ ಈ ದೇಶಕ್ಕೆ ಮರಳಿದರು.
ಬಹುಶಃ ಇದರಿಂದ, ಈ ಆರೋಪಿಗಳು ಪುಣ್ಯಕೋಟಿ ವಂಶಸ್ಥರೆಂದು ಸರಕಾರ ನಂಬಿ ಬಿಟ್ಟಿತೇನೋ. ಆದರೆ ಅವರು ಇಟಲಿಗೆ ತೆರಳಿದ್ದುದು ಅಲ್ಲಿನ ಸರಕಾರಕ್ಕೆ ತಮ್ಮ ಸ್ಥಿತಿಯನ್ನು ವಿವರಿಸುವುದಕ್ಕೆ ಮತ್ತು ಬೆಳವಣಿಗೆಗಳನ್ನು ವಿವರಿಸುವುದಕ್ಕೆ. ತಮ್ಮ ಕೆಲಸವನ್ನು ಮುಗಿಸಿ ಅವರು ಗೂಡು ಸೇರಿದ್ದಾರೆ. ಇಷ್ಟರಲ್ಲಿ ಇಟಲಿ ಇವರ ಕುರಿತಂತೆ ಯಾವ ನಿರ್ಧಾರ ತಳೆಯಬೇಕು ಎನ್ನುವ ಕುರಿತು ಚರ್ಚಿಸಿದೆ.
ಇದೇ ಸಂದರ್ಭದಲ್ಲಿ ಭಾರತದ ನ್ಯಾಯ ವ್ಯವಸ್ಥೆ ಸರಣಿ ಮರಣ ದಂಡನೆ ವಿಧಿಸುತ್ತಿರುವುದು ಇಟಲಿಯನ್ನು ಅಲುಗಾಡಿಸಿದೆ. ಆರೋಪಿಗಳ ಕೃತ್ಯಕ್ಕೆ ಭಾರತ ಮರಣದಂಡನೆಯನ್ನು ವಿಧಿಸಿದರೆ, ತಮ್ಮ ಜನರಿಗೆ ಉತ್ತರವನ್ನು ನೀಡ ಬೇಕಾಗುತ್ತದೆ ಎನ್ನುವುದನ್ನು  ಅದು ಮನಗಂಡಿದೆ. ಅದರಂತೆಯೇ ಮತ್ತೆ ಮತದಾನದ ಹೆಸರಿನಲ್ಲಿ ಆರೋಪಿಗಳನ್ನು ಕರೆಸಿಕೊಂಡು, ಭಾರತಕ್ಕೆ ಚಳ್ಳೆ ಹಣ್ಣು ತಿನ್ನಿಸಿದೆ. ಭಾರತವೋ ಹಸುಗೂಸಿನಂತೆ ಅಳುವುದಕ್ಕೆ ಶುರುಹಚ್ಚಿದೆ.
ಒಟ್ಟು ವಿದ್ಯಮಾನದಲ್ಲಿ ಇಟಲಿ ನಂಬಿಕೆ ದ್ರೋಹವೆಸಗಿರುವುದರಿಂದ ಅದರ ವರ್ಚಸ್ಸಿನ ಮೇಲೆ ಧಕ್ಕೆಯಾಗುವುದರಲ್ಲಿ ಅನುಮಾನ ವಿಲ್ಲ. ಆದರೆ ಇದೇ ಸಂದರ್ಭದಲ್ಲಿ ಭಾರತದ ಕಾನೂನು ವ್ಯವಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೀಡಾಗಿದೆ. ಕೈಯಲ್ಲಿದ್ದ ಆರೋಪಿಗಳನ್ನು ಬಿಟ್ಟುಕೊಟ್ಟು ಬಳಿಕ ಅವರಿಗಾಗಿ ಅಳುತ್ತಿರುವ ನಮ್ಮ ಸರಕಾರದ ಧೋರಣೆ, ನಮ್ಮ ಜನರ ಬದುಕನ್ನು ಪ್ರಾಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀರಾ ಅಗ್ಗವಾಗಿಸಿದೆ.
ಇಟಲಿಗೆ ತನ್ನ ಜನರ ಬಗ್ಗೆ ಕಾಳಜಿಯಿದೆ. ಆದುದರಿಂದಲೇ ಅದು ತನ್ನ ಕೆಲಸವನ್ನು ಮಾಡಿದೆ. ಆದರೆ ಭಾರತ ನಿಜಕ್ಕೂ ಮೀನುಗಾರರ ಬರ್ಬರ ಕೊಲೆಗೆ ಸ್ಪಂದಿಸಿದ್ದರೆ ಆರೋಪಿಗಳನ್ನು ಇಷ್ಟು ಸುಲಭದಲ್ಲಿ ಬಿಟ್ಟುಕೊಡುತ್ತಿರಲಿಲ್ಲ. ಇನ್ನು ಅವರನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳುವುದು ಅಷ್ಟು ಸುಲಭವಿಲ್ಲ. ಈ ಅವಮಾನದ ಸಂಪೂರ್ಣ ಹೊಣೆಯನ್ನು ಕೇಂದ್ರ ಸರಕಾರ ವಹಿಸಿ ಕೊಳ್ಳಬೇಕು. ತಾನು ಮಾಡಿದ ತಪ್ಪನ್ನು ತಾನೇ ತಿದ್ದಿಕೊಳ್ಳಲು ಮುಂದಾಗಬೇಕಾಗಿದೆ. ಇಟಲಿ ಸೋನಿಯಾಗಾಂಧಿಯವರ ತವರು ಕೂಡ ಹೌದು. ಇಡೀ ಪ್ರಕರಣವನ್ನು ವಿರೋಧ ಪಕ್ಷ ಸೋನಿಯಾ ವಿರುದ್ಧ ಬಳಸುವುದಕ್ಕೆ ಮುನ್ನ ಕೇಂದ್ರ ಎಚ್ಚೆತ್ತುಕೊಳ್ಳುವುದು ಒಳಿತು. 

No comments:

Post a Comment