Sunday, March 10, 2013

ಹೆಣ್ಣು ಭ್ರೂಣ ಹತ್ಯೆ ತಡೆ: ಕಾನೂನು ಮಾತ್ರ ಸಾಲದುಪ್ರತಿ ವರ್ಷದಂತೆ ಈ ಸಲವೂ ಎಲ್ಲೆಡೆ ಮಹಿಳಾ ದಿನಾಚರಣೆ ಆಚರಿಸಲ್ಪಟ್ಟಿತು. ವಿಶ್ವ ಮಹಿಳಾ ದಿನದ ರೂವಾರಿ ಕ್ಲಾರಾ ಜೆಡ್‌ಕಿನ್‌ರನ್ನು ನೆನಪಿಸುತ್ತಲೇ ಇಂದಿಗೂ ಹೆಣ್ಣನ್ನು ಬಾಧಿಸುತ್ತಿರುವ ನೂರಾರು ಸಮಸ್ಯೆಗಳ ಬಗ್ಗೆ ಎಲ್ಲೆಡೆ ಚರ್ಚೆ ಸಂವಾದ ಸಭೆಗಳು ನಡೆದವು. ಇಷ್ಟೆಲ್ಲ ಜಾಗೃತಿ ಮೂಡಿಸಿದರೂ ಮಹಿಳೆಯರ ಬವಣೆಯನ್ನು ಸಂಪೂರ್ಣ ನಿವಾರಿಸಲು ಇನ್ನೂ ಸಾಧ್ಯವಾಗಿಲ್ಲ. ನಿಜ, ಬದಲಾವಣೆ ಆಗಿದೆ. ಮಹಿಳೆ ಇಂದು ಸಾರ್ವಜನಿಕ ಜೀವನದ ಎಲ್ಲ ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಾ ಮುನ್ನಡೆದಿದ್ದಾಳೆ. ಮುಖ್ಯಮಂತ್ರಿಯಾಗಿ, ಪ್ರಧಾನಿ, ರಾಷ್ಟ್ರಪತಿಯಾಗಿ ಹಾಗೂ ರಾಜ್ಯಪಾಲೆ, ನ್ಯಾಯಾಧೀಶೆಯಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಾಟಿಯಾಗಿ ನಿಂತಿದ್ದರೂ ಕೂಡ ಒಟ್ಟು ಮಹಿಳಾ ಸಮುದಾಯದ ಸ್ಥಿತಿಗತಿಯಲ್ಲಿ ಪರಿಣಾಮಕಾರಿಯಾಗಿ ಬದಲಾವಣೆ ಆಗಿಲ್ಲ.
ನಮ್ಮ ಸಮಾಜದ ಪಾಳೆಗಾರಿ ಮೌಲ್ಯಗಳಿಗೆ ಇಂದಿಗೂ ಮಹಿಳೆ ಬಲಿಯಾಗುತ್ತಿದ್ದಾಳೆ. ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ಅಧಿಕಾರ ಕೇಂದ್ರದ ನೆರಳಲ್ಲೇ ‘ನಿರ್ಭಯ’ಳಂತಹ ಯುವತಿ ಪೈಶಾಚಿಕ ಅತ್ಯಾಚಾರಕ್ಕೆ ಬಲಿಯಾದಳು. ಇದು ದೇಶವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು. ಆದರೆ ದೇಶದ ಗ್ರಾಮೀಣ ಪ್ರದೇಶದ ಮಹಿಳೆ ಇನ್ನೂ ಹೀನಾಯ ಸ್ಥಿತಿಯಲ್ಲಿದ್ದಾಳೆ. ನಿತ್ಯವೂ ಅತ್ಯಾಚಾರದ ಘಟನೆಗಳು ಅಲ್ಲಿ ಸಂಭವಿಸುತ್ತಿದ್ದರೂ ಮಾಧ್ಯಮಗಳಲ್ಲಿ ಬೆಳಕಿಗೆ ಬರುವುದಿಲ್ಲ. ಆದರೂ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್‌ರಂತಹ ಮನುವಾದಿಗಳ ದೃಷ್ಟಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಚಾರ ನಡೆಯುವುದಿಲ್ಲ. ಅತ್ಯಾಚಾರ ನಡೆದರೂ ತಪ್ಪು ಪುರುಷರದಲ್ಲ. ಈ ಮನಃಸ್ಥಿತಿ ನಮ್ಮ ದೇಶದಲ್ಲಿ ಹಲವರಿಗಿದೆ.
ಹೆಣ್ಣನ್ನು ಗರ್ಭದಲ್ಲೇ ಗುರುತಿಸಿ ಹೊಸಕಿ ಹಾಕುವ ಭ್ರೂಣ ಹತ್ಯೆಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹೆಣ್ಣು ಭ್ರೂಣ ಹತ್ಯೆಯಂತಹ ಅನಿಷ್ಟ ಪದ್ಧತಿಯ ತಡೆಗೆ ಸರಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ನೀಡಿದೆ. ಕಾನೂನು ಪ್ರಕಾರ ಹೆಣ್ಣು ಭ್ರೂಣಹತ್ಯೆ ನಿಷೇಧಿಸಲ್ಪಟ್ಟಿದ್ದರೂ ಕಾನೂನಿಗೆ ಹೆದರದ ನೀಚರು ಭ್ರೂಣ ಹತ್ಯೆಯಂತಹ ಕ್ರೌರ್ಯವನ್ನು ನಡೆಸುತ್ತಲೇ ಇದ್ದಾರೆ.
ಭ್ರೂಣ ಲಿಂಗ ಪತ್ತೆ ಮಾಡುವ ವಿವಿಧ ರೀತಿಯ ಕ್ಲಿನಿಕ್ ಮತ್ತು ಅಲ್ಟ್ರಾಸೌಂಡ್ ಸ್ಕಾನಿಂಗ್ ಕೇಂದ್ರಗಳ ಮೇಲೆ ಸೂಕ್ತ ನಿಗಾ ಇಡಬೇಕು. ಈ ನಿಟ್ಟಿನಲ್ಲಿ ಸರಕಾರದ ವೈಫಲ್ಯ ಎದ್ದು ಕಾಣುತ್ತದೆ ಎಂದು ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಕ್ಲಿನಿಕ್‌ಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಮೂರು ತಿಂಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಆದೇಶ ಮಾಡಿದೆ.
ಭ್ರೂಣ ಹತ್ಯೆಯನ್ನು ನಿಷೇಧಿಸಿ ಸರಕಾರ ಈಗಾಗಲೇ ಕಾನೂನು ಮಾಡಿದೆ. ಆದರೆ ಆ ಕಾನೂನು ಕಾಗದದಲ್ಲಿ ಉಳಿದಿದೆ. ಅದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಲ್ಲಿ ಆಡಳಿತ ಯಂತ್ರದ ವೈಫಲ್ಯ ಎದ್ದು ಕಾಣುತ್ತದೆ. ಒಟ್ಟು ಜನಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಮಹಿಳೆ ಹಾಗೂ ಪುರುಷರ ಅನುಪಾತದಲ್ಲಿ ವ್ಯತ್ಯಾಸವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ದೇಶದ 1,000 ಪುರುಷರಿಗೆ ಸರಾಸರಿ 840 ಮಹಿಳೆಯರಿದ್ದಾರೆಂದು ತಿಳಿದು ಬರುತ್ತದೆ.
ಇದು ಭ್ರೂಣ ಹತ್ಯೆಯ ಪರಿಣಾಮವಲ್ಲದೆ ಬೇರೇನೂ ಅಲ್ಲ. ಅತ್ಯಂತ ಹೆಚ್ಚು ಭ್ರೂಣ ಹತ್ಯೆ ನಡೆಯುತ್ತಿರುವುದು ಸಮಾಜದ ಸಿರಿವಂತ ಕುಟುಂಬಗಳಲ್ಲಿ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭ್ರೂಣ ಹತ್ಯೆಗೆ ಅವಕಾಶವಿಲ್ಲ. ಆದಿವಾಸಿಗಳಿಗಂತೂ ಮಹಿಳೆ ದೇವತೆಗೆ ಸಮಾನ. ತಾವು ಭಾರತೀಯ ಸಂಸ್ಕೃತಿಯ ರಕ್ಷಕರು ನಾಗರಿಕತೆಯ ಹರಿಕಾರರು ಎಂದು ಹೇಳಿಕೊಳ್ಳುತ್ತಿರುವ ನಗರ ಪ್ರದೇಶದ ಮಧ್ಯಮವರ್ಗದಲ್ಲಿ ಭ್ರೂಣ ಹತ್ಯೆಯ ಪ್ರಮಾಣ ಅತ್ಯಂತ ಹೆಚ್ಚಾಗಿದೆ.
ಸಾಮಾಜಿಕ ಅನುಪಾತದಲ್ಲಿ ಹೆಣ್ಣು ಮತ್ತು ಪುರುಷರ ಸಂಖ್ಯೆಯಲ್ಲಿ ಅಸಮತೋಲನ ಉಂಟಾಗುತ್ತಿ ರುವುದರಿಂದ ನಮ್ಮ ಸಮಾಜ ತೀವ್ರವಾದ ಆರ್ಥಿಕ ಮತ್ತು ಸಾಮಾಜಿಕ ಇಕ್ಕಟ್ಟಿಗೆ ಸಿಲುಕಿದೆ. ಮುಂದುವರಿದ ಜಾತಿಗಳ ಯುವಕರಿಗೆ ಅವರ ಜಾತಿಯಲ್ಲಿ ಮದುವೆಯಾಗಲು ಕನ್ಯೆಯರು ಸಿಗುತ್ತಿಲ್ಲ. ಅನೇಕ ಕಡೆ ಹಿಂದುಳಿದ ಸಮಾಜದ ಯುವತಿಯರನ್ನು ತಮ್ಮ ಜಾತಿಗೆ ಸೇರಿಸಿಕೊಂಡು ಮದುವೆಯಾಗುತ್ತಿದ್ದಾರೆ. ಇದಕ್ಕೆ ಮಠಾಧೀಶರ ಆಶೀರ್ವಾದವೂ ಇದೆ. ಇನ್ನೊಂದೆಡೆ ಮಹಿಳೆಯ ಮೇಲೆ ಕ್ರೌರ್ಯ ಹೆಚ್ಚುತ್ತಲೇ ಇದೆ. ಹೆಣ್ಣು ಮಕ್ಕಳ ಮೇಲಿನ ಕ್ರೌರ್ಯವನ್ನು ತಡೆಯಲು ಯಾವ ಮಠಾಧೀಶರಿಂದಲೂ ಸಾಧ್ಯವಾಗಿಲ್ಲ. ಸಂಸ್ಕೃತಿಯ ರಕ್ಷಕರೆಂದು ಹೇಳಿ ಕೊಂಡು ‘ಲವ್ ಜಿಹಾದ್’ ಹೆಸರಿನಲ್ಲಿ ಗಲಾಟೆ ಎಬ್ಬಿಸುತ್ತಿರುವ ಕೋಮುವಾದಿ ಸಂಘಟನೆಗಳು ಕೂಡ ಭ್ರೂಣ ಹತ್ಯೆಯ ವಿರುದ್ಧ ಧ್ವನಿ ಎತ್ತುವುದಿಲ್ಲ. ಹೆಣ್ಣು ಮಕ್ಕಳ ನೋವಿಗೆ ಅವರ ಹೃದಯ ಸ್ಪಂದಿಸುವುದಿಲ್ಲ. ಆದರೂ ಉಡುವ ಬಟ್ಟೆಯ ಬಗ್ಗೆ ಮಹಿಳೆಯರಿಗೆ ಧಾರಾಳವಾಗಿ ನೀತಿಬೋಧನೆ ಮಾಡುತ್ತವೆ.ಹೆಣ್ಣು ಭ್ರೂಣ ಹತ್ಯೆ ಮಾಡುವ ಕ್ಲಿನಿಕ್‌ಗಳನ್ನು ಮುಚ್ಚಿಸಲು ಸರಕಾರ ಎಷ್ಟೇ ಕಾನೂನು ರಚಿಸಿದರೂ ಸಾಲದು. ಮಹಿಳಾ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಿ ಕ್ಲಿನಿಕ್ ಮತ್ತು ಸ್ಕಾನಿಂಗ್ ಕೇಂದ್ರಗಳಿಗೆ ಬೀಗ ಹಾಕಿಸಬೇಕು.

No comments:

Post a Comment