Friday, March 29, 2013

ತ್ರಿಕೋನ ಸ್ಪರ್ಧೆಗೆ ಸಜ್ಜಾಗಲಿದೆಯೇ ಪುತ್ತೂರು?


ಮಾರ್ಚ್ -29-2013

ಪುತ್ತೂರು, ಮಾ.28: ವಿವಿಧ ಪಕ್ಷಗಳ ರಾಜ್ಯ ಮಟ್ಟದ ನಾಯಕರುಗಳಿಗೆ ಪ್ರತಿಷ್ಠೆಯ ಕ್ಷೇತ್ರವೆಂದೇ ಬಿಂಬಿತವಾಗಿರುವ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹೊರತು ಪಡಿಸಿ ಇತರ ಪಕ್ಷಗಳು ತನ್ನ ಅಭ್ಯರ್ಥಿಗಳನ್ನು ಇನ್ನೂ ಆಯ್ಕೆ ಮಾಡದೆ ಕಾರ್ಯಕರ್ತರ ಪಾಲಿಗೆ ಕಗ್ಗಂಟ್ಟು ಮೂಡಿಸಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಮಲ್ಲಿಕಾ ಪ್ರಸಾದ್, ಕಾಂಗ್ರೆಸ್‌ನಿಂದ ಬೊಂಡಾಲ ಜಗನ್ನಾಥ ಶೆಟ್ಟಿ ಮತ್ತು ಪಕ್ಷೇತರರಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ತ್ರಿಕೋನ ಸ್ಪರ್ಧೆ ಉಂಟಾಗಿತ್ತು. ಈ ಬಾರಿ ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಸಂಬಂಧಿಯೂ ಆಗಿರುವ ದಿನೇಶ್ ವಿ.ಎನ್. ಕಣಕ್ಕಿಳಿದಿರುವುದರಿಂದ ಇಲ್ಲಿ ಈ ಬಾರಿಯೂ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ಬಹುತೇಕ ನಿಚ್ಚಳವಾಗಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಗರಿಷ್ಟ ಸಂಖ್ಯೆಯಲ್ಲಿ ರುವ ಒಕ್ಕಲಿಗ ಗೌಡ ಜನಾಂಗದ ಮತದಾರರು ನಿರ್ಣಾಯಕರಾಗಿದ್ದು, ತಮ್ಮ ಸಮುದಾಯಕ್ಕೆ ಸೇರಿದ ದಿನೇಶ್‌ರನ್ನು ಬೆಂಬಲಿಸಿದಲ್ಲಿ ಇಲ್ಲಿನ ರಾಜಕೀಯ ವಿಭಿನ್ನ ತಿರುವು ಪಡೆಯುವ ಸಾಧ್ಯತೆಗಳು ಹೆಚ್ಚಿದೆ.
ಈ ಹಿಂದಿನ ಹಲವಾರು ವರ್ಷಗಳ ಕಾಲ ಪುತ್ತೂರನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದ್ದ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರಿಗೆ ರಾಜಕೀಯ ಬದುಕಿಗೆ ಮುನ್ನುಡಿ ಯಾದ ಇಲ್ಲಿ ಈ ಬಾರಿ ಡಿ.ವಿ ಅವರೇ ಸ್ಪರ್ಧಿಸಲಿ ದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ಸ್ವತ: ಡಿ.ವಿ.ಅವರು ಇದನ್ನು ಸ್ಪಷ್ಟ ಪಡಿಸುತ್ತಿಲ್ಲ. ಇಲ್ಲಿ ಬಿಜೆಪಿಯಿಂದ ಒಕ್ಕಲಿಗ ಗೌಡ ಸಮುದಾ ಯಕ್ಕೆ ಅವಕಾಶ ನೀಡುವ ಕುರಿತು ಹೆಚ್ಚಿನ ಚರ್ಚೆಗಳು ನಡೆಯುತ್ತಿದೆ ಎನ್ನಲಾಗುತ್ತಿದ್ದು, ಹಾಗಾದಲ್ಲಿ ಯಾರೊಂದಿಗೂ ನಿಷ್ಠುರ ಕಟ್ಟಿ ಕೊಳ್ಳದೆ ಪಕ್ಷ ನಿಷ್ಟರಾಗಿರುವ ಪಕ್ಷದ ಸಂಘಟಕ ಸಂಜೀವ ಮಠಂದೂರುರಿಗೆ ಅವಕಾಶ ಸಿಗುವುದು ಬಹುತೇಕ ನಿಚ್ಚಳ. ಉದ್ಯಮಿ ಅಶೋಕ್ ಕುಮಾರ್ ರೈಯವರ ಹೆಸರೂ ಬಿಜೆಪಿಯಿಂದ ಕೇಳಿ ಬರುತ್ತಿದ್ದು, ಈ ಹಿಂದಿನಂತೆ ಪಕ್ಷವು ಮಹಿಳೆಯರಿಗೆ ಆದ್ಯತೆ ನೀಡಿದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಅಥವಾ ಸುಧಾ ಎಸ್.ರಾವ್‌ರಿಗೆ ಅವಕಾಶ ಒಲಿದು ಬರುವ ಸಾಧ್ಯತೆಗಳಿವೆ. ಬಿಜೆಪಿ ಹೈಕಮಾಂಡ್ ಯಾರಿಗೆ ಹಸಿರು ನಿಶಾನೆ ನೀಡಲಿದೆ ಎಂಬುದು ಇನ್ನೂ ಕುತೂಹಲಕಾರಿಯಾಗಿದೆ.
ಕಾಂಗ್ರೆಸ್‌ನಿಂದ ಈಗಾಗಲೇ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಗೊಂಡ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಹೆಸರು ಕೇಳಿ ಬರುತ್ತಿದೆ. ಬ್ಲಾಕ್ ಅಧ್ಯಕ್ಷರಾಗಿ ಕಳೆದ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಹೇಮನಾಥ ಶೆಟ್ಟಿಯ ವರಿಗೆ ಅವಕಾಶ ನೀಡಬೇಕು ಎಂದು ಕಾರ್ಯ ಕರ್ತರ ಗುಂಪೊಂದು ಈಗಾಗಲೇ ಸುದ್ದಿಗೋಷ್ಟಿ ನಡೆಸಿ ಆಗ್ರಹಿಸಿದೆ. ಇನ್ನೊಂದೆಡೆಯಲ್ಲಿ ಶಕುಂತಳಾ ಶೆಟ್ಟಿಯವರ ಸೇರ್ಪಡೆಯಿಂದ ಪಕ್ಷದಲ್ಲಿ ಹೊಸ ಚೈತನ್ಯ ಕಂಡು ಬರುತ್ತಿದ್ದು, ಅವರಿಗೆ ಅವಕಾಶ ನೀಡಿದಲ್ಲಿ ಪಕ್ಷಕ್ಕೆ ಗೆಲುವು ನಿಶ್ಚಿತ. ಈ ಹಿನ್ನ್ನೆಲೆ ಯಲ್ಲಿ ಅವರಿಗೆ ಅವಕಾಶ ನೀಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರನ್ನು ಕಣಕ್ಕಿಳಿಸಲಿದೆ ಎಂಬುದು ಇನ್ನೂ ನಿಗೂಢವಾಗಿದೆ.
ಜೆಡಿಎಸ್ ಈಗಾಗಲೇ ತನ್ನ ಅಭ್ಯರ್ಥಿಯನ್ನು ಬಹಿರಂಗ ಪಡಿಸಿದ್ದು, ಸುಬ್ರಹ್ಮಣ್ಯದ ಉದ್ಯಮಿ, ಡಿ.ವಿ.ಸದಾನಂದ ಗೌಡರ ಹತ್ತಿರದ ಸಂಬಂಧಿ ಹಾಗೂ ಕಳೆದ ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದು ಇದೀಗ ಜೆಡಿಎಸ್ ಹಸ್ತಾಂತರಗೊಂಡ ದಿನೇಶ್ ವಿ. ಎನ್.ರನ್ನು ಕಣಕ್ಕಿಳಿಸಿದೆ. ಈಗಾಗಲೇ ಪಕ್ಷದ ಚುನಾವಣಾ ಕಚೇರಿಯನ್ನೂ ತೆರೆಯಲಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಜೆಡಿಎಸ್‌ನ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ದಿನೇಶ್‌ರು ಒಕ್ಕಲಿಗರ ಮತ್ತು ಮುಸ್ಲಿಮರ ಮತಗಳನ್ನು ಸೆಳೆಯುವತ್ತ ಪ್ರಯತ್ನ ನಡೆಸುತ್ತಿದ್ದಾರೆ. ದಿನೇಶ್ ಈ ಪ್ರಯತ್ನದಲ್ಲಿ ಯಶಸ್ವಿಯಾದಲ್ಲಿ ಇಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.
ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆ ಮತ್ತು ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಕಡೆಗಳಲ್ಲಿ ಆಯ್ಕೆಯಾ ಗಿರುವುದರಿಂದ ತಮ್ಮ ಪಕ್ಷದ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡರೆ, ಸರಕಾರದ ಐದು ವರ್ಷಗಳ ಗಣನೀಯ ಸಾಧನೆಗಳೇ ತಮ್ಮ ಗೆಲುವಿಗೆ ಕಾರಣವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ರಾಜ್ಯದಲ್ಲಿ 1952ರಿಂದ ವಿಧಾನ ಸಭಾ ಚುನಾವಣಾ ಪದ್ದತಿ ಆರಂಭಗೊಂಡಿದ್ದು, 1952ರಿಂದ 2008ರತನಕ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ 13 ಬಾರಿ ಶಾಸಕರ ಆಯ್ಕೆ ಯಾಗಿದೆ. ಈ ಪೈಕಿ 7 ಬಾರಿ ಕಾಂಗ್ರೆಸ್ ಮತ್ತು 6 ಬಾರಿ ಬಿಜೆಪಿ ಶಾಸಕರು ಚುನಾಯಿತರಾಗಿ ದ್ದಾರೆ.
ಕಾಂಗ್ರೆಸ್‌ನ ಕೂಜಿಗೋಡು ವೆಂಕಟ್ರಮಣ ಗೌಡ 1952, 1957 ಮತ್ತು 1962ರಲ್ಲಿ ಸ್ಪರ್ಧಿಸಿ 3 ಬಾರಿ ಪ್ರತಿನಿಧಿಸಿದ್ದರು. 1972ರಲ್ಲಿ ಕಾಂಗ್ರೆಸ್‌ನ ಶಂಕರ ಆಳ್ವ, 1978 ಮತ್ತು 1983ರಲ್ಲಿ ಬಿಜೆಪಿಯ ಕೆ.ರಾಮ ಭಟ್, 1985 ಮತ್ತು 1989ರಲ್ಲಿ ಕಾಂಗ್ರೆಸ್‌ನ ವಿನಯ ಕುಮಾರ್ ಸೊರಕೆ, 1994 ಮತ್ತು 1999ರಲ್ಲಿ ಬಿಜೆಪಿಯ ಡಿ.ವಿ.ಸದಾನಂದ ಗೌಡ, 2004ರಲ್ಲಿ ಜಿಜೆಪಿಯ ಟಿ. ಶಕುಂತಳಾ ಶೆಟ್ಟಿ ಹಾಗೂ 2008ರಲ್ಲಿ ಬಿಜೆಪಿಯ ಮಲ್ಲಿಕಾ ಪ್ರಸಾದ್ ಪ್ರತಿನಿಧಿಸಿದ್ದರು. ಮಾಜಿ ಶಾಸಕ ರಾಮಭಟ್ 1957ರಿಂದ 1985ರ ತನಕ 8 ಬಾರಿ ಸ್ಪರ್ಧಿಸಿದ್ದು, ಕಾಂಗ್ರೆಸ್‌ನ ಕೂಜಿಗೋಡು ವೆಂಟ್ರಮಣ ಗೌಡ, ಶಂಕರ ಆಳ್ವ, ಈಶ್ವರ ಭಟ್, ಸಂಕಪ್ಪರೈಯವರ ವಿರುದ್ಧ ಸ್ಪರ್ಧಿಸಿ 6 ಬಾರಿ ಸೋಲು ಕಂಡಿರು ವುದು ಮತ್ತು 2 ಬಾರಿ ಗೆಲುವು ಸಾಧಿಸಿರುವುದು ದಾಖಲೆಯಾಗಿದೆ.
14ನೆಯ ಬಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಯಾರು ಪ್ರತಿನಿಧಿಸಲಿದ್ದಾರೆ. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಯಾರನ್ನು ಕಣಕ್ಕಿಳಿಸಲಿದೆ. ಪುತ್ತೂರಿನ ಮತದಾರರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕೃಪೆ:ವಾ.ಭಾರತಿ 

No comments:

Post a Comment