Thursday, March 7, 2013

ಚಾವೆಝ್ ಎಂಬ ಯೋಧ‘‘ನಾನೊಂದು ಬೀದಿ ಬದಿಯ ಹೂ ಕೊಡುವ ಮುಳ್ಳಿನ ಗಿಡ. ಹೂವನ್ನು ಕೊಡುವುದಕ್ಕೂ ಗೊತ್ತು. ಹಾಗೆಯೇ ಚುಚ್ಚುವುದೂ ಗೊತ್ತು’’ ವೆನೆಝುವೆಲಾ ಎನ್ನುವ ಪುಟ್ಟ ದೇಶದ ಅಧ್ಯಕ್ಷನಾದರೂ, ವಿಶ್ವಕ್ಕೆ ಆತ್ಮಾಭಿಮಾನದ ಬದುಕನ್ನು ಮತ್ತು ಸಮಾನತೆಯ ಕನಸನ್ನು ಹಂಚಿ ಹೋದ ಹ್ಯೂಗೋ ಚಾವೆಝ್‌ರ ಮಾತಿದು. ಅಮೆರಿಕಕ್ಕೆ ಎಚ್ಚರಿಕೆಯ ರೂಪದಲ್ಲಿ ಅವರು ಮೇಲಿನ ಮಾತನ್ನಾಡಿದ್ದರು. ವಿಯೆಟ್ನಾಮ್, ಕ್ಯೂಬಾಗಳಂತೆಯೇ ಅಮೆರಿಕಕ್ಕೆ ಸಡ್ಡು ಹೊಡೆದು, ಆತ್ಮಾಭಿಮಾನದಿಂದ ಬದುಕಿದ ಪುಟ್ಟ ವೆನೆಝುವೆಲಾ, ಇಂದು ವಿಶ್ವಕ್ಕೆ ಆದರ್ಶವಾಗಿದೆ.
ಶ್ರೀಮಂತ ರಾಷ್ಟ್ರಗಳಿಗೆ ಡೊಗ್ಗು ಸಲಾಮು ಹಾಕದೆ ಎದೆ ಎತ್ತಿ ಬದುಕಬಹುದು ಎನ್ನುವುದನ್ನು ತೋರಿಸಿ ಕೊಟ್ಟ ದೇಶ ವೆನೆಝುವೆಲಾ. ಅದಕ್ಕೆ ಕಾರಣರಾದವರು ಹ್ಯೂಗೋ ಚಾವೆಝ್. ಒಂದೆಡೆ ಭಾರತವೆನ್ನುವ ಅಲಿಪ್ತ ರಾಷ್ಟ್ರದ ನೇತಾರರು ಎಲ್ಲೂ ಸಲ್ಲದೆ, ಅಮೆರಿಕದ ಎಂಜಲು ಸ್ನೇಹಕ್ಕೆ ಹಲ್ಲು ಗಿಂಜುತ್ತಿರುವ ದಿನಗಳಲ್ಲಿ ವೆನೆಝುವೆಲಾದ ಅಭಿವೃದ್ಧಿಗೆ ಅಮೆರಿಕದಂತಹ ರಾಷ್ಟ್ರಗಳ ಗುಲಾಮಗಿರಿ ಅಗತ್ಯವಿಲ್ಲ ಎನ್ನುವುದನ್ನು ಸಾಬೀತು ಮಾಡಿ, ಜಗತ್ತಿನಿಂದ ವಿದಾಯ ಹೇಳಿದ್ದಾರೆ. ಇರಾಕ್‌ನ ಮೇಲೆ ಅಮೆರಿಕ ದಾಳಿ ನಡೆಸಿದಾಗ ಭಾರತ ದ್ವಂದ್ವ ನಿಲುವನ್ನು ಅನುಸರಿಸಿತ್ತು. ನ್ಯಾಯವನ್ನು ಹೇಳಲು ಹಿಂಜರಿದಿತ್ತು. ಆದರೆ ಹ್ಯೂಗೋ ಚಾವೆಝ್ ಬುಶ್‌ರನ್ನು ಪ್ರಖರವಾಗಿ ಟೀಕಿಸುತ್ತಾ, ‘‘ಬುಶ್‌ರ ಮುಂದೆ ಹಿಟ್ಲರ್ ಸಣ್ಣ ಮಗು’’ ಎಂದಿದ್ದರು. ವಿಶ್ವಸಂಸ್ಥೆಯಲ್ಲಿ ಬಲಾಢ್ಯ ರಾಷ್ಟ್ರಗಳ ಮುಂದೆ ಬುಶ್‌ರನ್ನು ‘‘ದೆವ್ವ’’ ಎಂದು ಟೀಕಿಸಿದ್ದರು. ಅಮೆರಿಕಕ್ಕೆ ಮಾತ್ರವಲ್ಲ, ಶ್ರೀಮಂತ ರಾಷ್ಟ್ರಗಳಿಗೆಲ್ಲ ಪ್ರತಿ ನಿಮಿಷವೂ ತಲೆನೋವಾದರು. ಅವರ ವಿರುದ್ಧ ಅಮೆರಿಕ ನಡೆಸಿದ ಸಂಚುಗಳೆಲ್ಲವೂ ವಿಫಲವಾದವು. ಒಂದು ಹಂತದಲ್ಲಿ ಜಾವೆಝ್‌ನ್ನು ಸರ್ವಾಧಿಕಾರಿ ಎಂದು ಬಿಂಬಿಸಿ ಅಲ್ಲಿನ ಜನರನ್ನೇ ಎತ್ತಿ ಕಟ್ಟುವ ಪ್ರಯತ್ನವೂ ನಡೆಯಿತು. ಆದರೆ ಅವೆಲ್ಲವುಗಳನ್ನು ಮೀರಿ, ಜಾವೆಝ್ ಗೆದ್ದರು. ಅವರಷ್ಟೇ ಅಲ್ಲ, ಅವರೊಂದಿಗೆ ವೆನೆಝುವೆಲಾ ಕೂಡ ಗೆದ್ದಿತು.
ಚಾವೆಝ್ ಒಬ್ಬ ಯೋಧನಂತೆ ಬದುಕಿದರು. ಹಾಗೆಯೇ ಮೃತಪಟ್ಟರು. ಸಾಯುವಾಗ ಅವರ ವಯಸ್ಸು 58 ವರ್ಷ. ಅವರ ಸಾವಿನ ಕುರಿತಂತೆ ಇನ್ನೂ ಅನುಮಾನಗಳಿವೆ. ಆದರೆ ಚಾವೆಝ್‌ರ ಸಾವಿನಿಂದ ಅವರು ಮುಕ್ತಾಯಗೊಳ್ಳುವುದಿಲ್ಲ. ಅವರ ಬದುಕಿನ ಹಾದಿ, ಸಂಘರ್ಷ, ಬಿಕ್ಕಟ್ಟು ಇತ್ಯಾದಿಗಳೆಲ್ಲ ವೆನೆಝುವೆಲಾಗೆ ಮಾತ್ರವಲ್ಲ, ಶ್ರೀಮಂತ ರಾಷ್ಟ್ರಗಳ ಆಕ್ರಮಣದಿಂದ ನರಳುತ್ತಿರುವ ಇತರ ದೇಶಗಳಿಗೂ ಮಾರ್ಗದರ್ಶಿಯಾಗಿರುತ್ತವೆ. ಚಾವೆಝ್ ರಾಜಕೀಯಕ್ಕೆ ಕಾಲಿಟ್ಟುದೇ ಒಬ್ಬ ಯೋಧನ ರೀತಿಯಲ್ಲಿ. ರೆವೆಲ್ಯೂಶನರಿ ಬೊಲಿವೇರಿಯನ್ ಮೂವ್‌ಮೆಂಟ್ ಮೂಲಕ ಅವರು ಜನರನ್ನು ಸಂಘಟಿಸ ತೊಡಗಿದರು. ಲ್ಯಾಟಿನ್ ಅಮೆರಿಕದ ಸ್ವಾತಂತ್ರಕ್ಕಾಗಿ ಹೋರಾಡಿದ ಸಿಮೋನ್ ಬೊಲಿವರ್ ಅವರಿಗೆ ಆದರ್ಶವಾಗಿದ್ದು, ಅವರ ಹೆಸರಿನಿಂದಲೇ ಸಂಘಟನೆಯನ್ನು ಕಟ್ಟಿದರು. ಆರಂಭದಲ್ಲಿ ತೀವ್ರವಾದಿಯಂತೆ ಕಂಡ ಚಾವೆಝ್ ನಿಧಾನಕ್ಕೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ತನ್ನ ಹೋರಾಟದಲ್ಲಿ ರೂಢಿಸಿಕೊಂಡರು. ಮುಂದೆ ಯುನೈಟೆಡ್ ಸೋಶಿಯಲಿಸ್ಟ್ ಪಾರ್ಟಿ ಆಫ್ ವೆನೆಝುವೆಲಾ ಆಗಿ ಅವರ ಸಂಘಟನೆ ಪುನರ್ ಅಸ್ತಿತ್ವವನ್ನು ಪಡೆಯಿತು. 1992ರಲ್ಲಿ ಕ್ಷಿಪ್ರ ಕ್ರಾಂತಿಯ ಮೂಲಕ ಸರಕಾರವನ್ನು ಪತನಗೊಳಿಸಲು ಯತ್ನಿಸಿದರಾದರೂ ಅದರಲ್ಲಿ ವಿಫಲರಾದರು. ಆದರೆ ಅಷ್ಟರಲ್ಲೇ ಅಪಾರ ಜನಪ್ರಿಯತೆಯನ್ನು ಪಡೆದಿದ್ದ ಜಾವೆಝ್ ಕ್ಷಮಾದಾನ ಪಡೆದರು. ಮುಂದೆ 1998ರ ಚುನಾವಣೆಯಲ್ಲಿ ಸಮಾಜವಾದಿ ಪ್ರಣಾಳಿಕೆಯೊಂದಿಗೆ ಗೆದ್ದರು.
ಅಧ್ಯಕ್ಷರಾಗಿ ಅವರು ಮಾಡಿದ ರಾಷ್ಟ್ರೀಯ ಸುಧಾರಣೆ ಕೇವಲ ವೆನೆಝುವೆಲಾದ ಮೇಲೆ ಮಾತ್ರವಲ್ಲ, ಕೆಲವು ಶ್ರೀಮಂತ ರಾಷ್ಟ್ರಗಳ ಮೇಲೂ ತನ್ನ ಪರಿಣಾಮವನ್ನು ಬೀರಿತು. ತೈಲ ಕಂಪೆನಿಗಳನ್ನು ಅವರು ಮೊತ್ತ ಮೊದಲು ರಾಷ್ಟ್ರೀಕರಣಗೊಳಿಸಿದರು. ಇದು ಅಮೆರಿಕದಂತಹ ದೇಶಗಳಿಗೆ ನುಂಗಲಾರದ ತುತ್ತಾಯಿತು. ವಿಶ್ವದಲ್ಲೇ ಅತ್ಯಧಿಕ ತೈಲ ಸಂಗ್ರಹವುಳ್ಳ ವೆನೆಝುವೆಲಾ ಅಲ್ಲಿಯವರೆಗೆ ಬಡತನದಿಂದ ನರಳುತ್ತಿತ್ತು. ಇಡೀ ವಿಶ್ವವೇ ದಂಗು ಬಡಿಯುವಂತೆ ಅವರು ವೆನೆಝುವೆಲಾವನ್ನು ಬಡತನದಿಂದ ಮೇಲೆತ್ತಿದರು. ತೈಲ ಕಂಪೆನಿಗಳ ರಾಷ್ಟ್ರೀಕರಣದಿಂದ ಅಸಮಾನತೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಯಿತು. ಶೇ. 71ರಷ್ಟಿದ್ದ ಬಡತನ ಇಂದು ಶೇ. 21ಕ್ಕೆ ಇಳಿದಿದೆ. ಶೇ. 40 ರಷ್ಟಿದ್ದ ತೀವ್ರ ಬಡತನ 7.3ಕ್ಕೆ ಇಳಿದಿದೆ. ಆ ಪುಟ್ಟ ದೇಶದ 2.1 ಮಿಲಿಯದಷ್ಟು ವೃದ್ಧರು ಪೆನ್ಶನ್ ಪಡೆಯುತ್ತಿದ್ದಾರೆ. ಯೋಜನೆಗಳು ತಳ ಮಟ್ಟದವರೆಗೆ ತಲುಪಿದವು. ಬರೇ ಅಮೆರಿಕ ವಿರೋಧಿ ನೀತಿಯಿಂದಷ್ಟೇ ಯಾವ ಪ್ರಯೋಜನವೂ ಇಲ್ಲ. ಮೊದಲು ತನ್ನ ಜನರ ಪ್ರೀತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಬೇಕು. ತನ್ನ ದೇಶವನ್ನು ಪ್ರಾಮಾಣಿಕವಾಗಿ ಉದ್ಧರಿಸುವ ಪ್ರಯತ್ನ ಮಾಡಬೇಕು ಮತ್ತು ಆ ದಾರಿಯಲ್ಲಿ ಎದುರಾಗುವ ಶ್ರೀಮಂತ ರಾಷ್ಟ್ರಗಳ ಸೊಕ್ಕಿಗೆ ಪ್ರತಿ ಏಟು ನೀಡಬೇಕು. ಇದು ಜಾವೆಝ್‌ರ ನಿಲುವಾಗಿತ್ತು ಮತ್ತು ಅದರಲ್ಲಿ ಅವರು ಯಶಸ್ವಿಯೂ ಆದರು.
ಜಾವೆಝ್ ಯಾವಾಗ ನಿಧನರಾಗುತ್ತದಾರೆ ಎಂದು ಅಮೆರಿಕ ದಿನ ಎಣಿಸುತ್ತಿತ್ತು. ಮುಂದಿನ ದಿನಗಳಲ್ಲಿ ವೆನೆಝುವೆಲಾ ಅಮೆರಿಕ ಎನ್ನುವ ಹದ್ದಿಗೆ ಬಲಿಯಾಗುತ್ತದೆಯೋ ಅಥವಾ ಹೊಸ ನಾಯಕರು ಜಾವೆಝ್‌ರ ಕನಸುಗಳನ್ನು, ಆದರ್ಶಗಳನ್ನು ಮುಂದುವರಿಸುತ್ತಾರೆಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ವೆನೆಝುವೆಲಾದ ಮುಂದಿನ ಬೆಳವಣಿಗೆ ವಿಶ್ವದ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಾಲಿಗೆ ಭಾರೀ ಮಹತ್ವದ್ದಾಗಿದೆ

No comments:

Post a Comment