Friday, March 22, 2013

ಸಂಜಯ್ ಮನವಿ ಮಾಡಿದರೆ ರಾಜ್ಯಪಾಲರು ವಿವೇಚನಾಧಿಕಾರ ಬಳಸುವರು: ಕಾನೂನು ಸಚಿವ ಮಾರ್ಚ್ -23-2013

ಹೊಸದಿಲ್ಲಿ: 1993ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟನಿಗೆ ಕ್ಷಮಾದಾನ ನೀಡುವಂತೆ ಕೋರಿ ಪತ್ರಿಕಾ ಮಂಡಳಿ ಅಧ್ಯಕ್ಷ ಮಾರ್ಕಂಡೇಯ ಕಟ್ಜು ಮಹಾರಾಷ್ಟ್ರ ರಾಜ್ಯಪಾಲರಿಗೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ, ಇಂಥ ಮನವಿಯನ್ನು ನಟ ಮಾಡಿದರೆ ಅದನ್ನು ಪರಿಶೀಲಿಸಲಾಗುವುದು ಹಾಗೂ ಸೂಕ್ತ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವುದು ಎಂಬ ಸೂಚನೆಯನ್ನು ಸರಕಾರ ಶುಕ್ರವಾರ ನೀಡಿದೆ.
‘‘ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೆ ಅವರು ತನ್ನ ವಿವೇಚನಾಧಿಕಾರವನ್ನು ಬಳಸುವರು. ಕ್ಷಮಾದಾನ ನೀಡುವ ಅಧಿಕಾರ ಅವರಿಗಿದೆ. ಅದರ ಬಗ್ಗೆ ನಾವು ಏನೂ ಹೇಳುವ ಹಾಗಿಲ್ಲ’’ ಎಂದು ಕೇಂದ್ರ ಕಾನೂನು ಸಚಿವ ಅಶ್ವಿನಿ ಕುಮಾರ್ ಹೇಳಿದರು.
ಸೂಕ್ತ ಮಟ್ಟದಲ್ಲಿ ಈ ವಿಷಯವನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಪರಿಶೀಲನೆ ನಡೆಸುವುವು ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಹೇಳಿದರು.
 ‘‘ನ್ಯಾ. ಕಟ್ಜು ಸುಪ್ರೀಂ ಕೋರ್ಟ್‌ನ ಅತ್ಯಂತ ಧೀಮಂತ ನ್ಯಾಯಾಧೀಶರಾಗಿದ್ದವರು. ಯಾವುದಾದರೂ ಒಂದು ವಿಷಯದ ಬಗ್ಗೆ ಅವರು ಒಂದು ನಿಲುವು ತೆಗೆದುಕೊಂಡರೆ ಸರಕಾರದೊಳಗೆ ಹಾಗೂ ಹೊರಗಿರುವವರೆಲ್ಲರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತಾರೆ’’ ಎಂದು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ ಹೇಳಿದರು.
ನಟ ಸಂಜಯ್ ದತ್ತ್ 20 ವರ್ಷಗಳಲ್ಲಿ ನೊಂದಿದ್ದಾರೆ ಹಾಗೂ ಅವರನ್ನು ಮಾನವೀಯ ನೆಲೆಯಲ್ಲಿ ಕ್ಷಮಿಸಬೇಕಾದ ಅಗತ್ಯವಿದೆ ಎಂದು ಕಟ್ಜು ಶುಕ್ರವಾರ ಟಿವಿ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.
‘‘ಸಂಜಯ್ ದತ್ತ್‌ರನ್ನು ಕ್ಷಮಿಸುವಂತೆ ಕೋರಿ ಮಹಾರಾಷ್ಟ್ರ ರಾಜ್ಯಪಾಲರಿಗೆ ನಾನು ಮನವಿಯೊಂದನ್ನು ಕಳುಹಿಸಿದ್ದೇನೆ. ಮಾನವೀಯ ಕಾರಣಗಳಿಗಾಗಿ ನಾನು ಇದನ್ನು ಹೇಳುತ್ತಿದ್ದೇನೆ’’ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರೂ ಆಗಿರುವ ಕಟ್ಜು ಹೇಳಿದರು.
‘‘ನಾನು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸುತ್ತಿಲ್ಲ. ನಾನು ಈ ವಿಷಯದ ಬಗ್ಗೆ ಓರ್ವ ನಾಗರಿಕನಾಗಿ ಮಾತನಾಡುತ್ತಿದ್ದೇನೆಯೇ ಹೊರತು, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶನಾಗಿ ಅಲ್ಲ’’ ಎಂದರು.
ಸಂವಿಧಾನದ 161ನೆ ವಿಧಿಯನ್ವಯ ಸಂಜಯ್‌ಗೆ ಕ್ಷಮಾದಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ತನ್ನ ಈ ನಿಲುವಿಗೆ ಕಾರಣಗಳನ್ನು ವಿವರಿಸಿದ ಕಟ್ಜು, ಸಂಜಯ್ ಭಯೋತ್ಪಾದಕನಲ್ಲ ಹಾಗೂ ಭಯೋತ್ಪಾದಕ ಕೃತ್ಯದಲ್ಲಿ ಶಾಮೀಲಾಗಿರುವುದು ಕಂಡು ಬಂದಿಲ್ಲ ಎಂದರು. ಪರವಾನಿಗೆಯಿಲ್ಲದೆ ಶಸ್ತ್ರಾಸ್ತ್ರಗಳನ್ನು ಆತ ಹೊಂದಿದ್ದನು ಎಂದು ಹೇಳಿದರು.
‘‘ಸಂಜಯ್ ದತ್ತ್‌ರ ಹೆತ್ತವರು ಸಮಾಜ ಸೇವೆ ಮಾಡಿದವರು. ಚಲನಚಿತ್ರಗಳಲ್ಲಿ ಗಾಂಧಿ ತತ್ವಗಳನ್ನು ಪ್ರಚಾರ ಮಾಡಿದ್ದು ಸೇರಿದಂತೆ ಸ್ವತಃ ಅವರು ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಇಬ್ಬರು ಚಿಕ್ಕ ಮಕ್ಕಳಿವೆ ಹಾಗೂ ಅವರು20 ವರ್ಷಗಳಿಂದ ನೋವನುಭವಿಸಿದ್ದಾರೆ’’ ಎಂದು ಕಟ್ಜು ಅಭಿಪ್ರಾಯಪಟ್ಟರು.
ನಟ 18 ತಿಂಗಳುಗಳ ಕಾಲ ಜೈಲಿನಲ್ಲಿದ್ದರು ಹಾಗೂ ಹಲವು ಕಷ್ಟ ಕೋಟಲೆಗಳನ್ನು ಎದುರಿಸಿದ್ದರು ಎಂದರು.
‘‘ನಾನು ಸಂಜಯ್ ದತ್ತ್‌ರ ಅಭಿಮಾನಿಯೂ ಅಲ್ಲ, ಕಳೆದ 40 ವರ್ಷಗಳಲ್ಲಿ ಒಂದೇ ಒಂದು ಚಿತ್ರ ನೋಡಿಲ್ಲ’’ ಎಂದು ಪತ್ರಿಕಾ ಮಂಡಳಿ ಅಧ್ಯಕ್ಷರು ಹೇಳಿದರು

No comments:

Post a Comment