Tuesday, March 26, 2013

ಆಸನ’ ಕಾರ್ಖಾನೆಯಲ್ಲಿ ಅಗ್ನಿ ಆಕಸ್ಮಿಕ:ಆರು ಮಂದಿ ಸಜೀವ ದಹನಮಾರ್ಚ್ -26-2013

*ಮೃತರೆಲ್ಲರೂ ದಿಲ್ಲಿ ಮೂಲದ ಕಾರ್ಮಿಕರು 
*ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಶಂಕೆ
ಬೆಂಗಳೂರು, ಮಾ.25: ಸಿನೆಮಾ ಮಂದಿರಗಳಿಗೆ ಆಸನ ಸಿದ್ಧಪಡಿಸುತ್ತಿದ್ದ ಕಾರ್ಖಾನೆಯೊಂದರಲ್ಲಿ ಉಂಟಾದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಆರು ಮಂದಿ ಕೂಲಿ ಕಾರ್ಮಿಕರು ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.
ಮೃತರನ್ನು ದಿಲ್ಲಿ ಮೂಲದ ಸರ್ಫ್ರಾಝ್, ತಾಲಿಬ್, ಶುಐಬ್, ನೂರ್ ಹಸನ್, ಘಾಝಿ, ಉಸ್ಮಾನ್ ಎಂದು ಗುರುತಿಸಲಾಗಿದ್ದು, ಮೃತರೆಲ್ಲರೂ 35ರಿಂದ 40ವರ್ಷದೊಳಗಿನವರು ಎಂದು ತಿಳಿದು ಬಂದಿದೆ.ಇಲ್ಲಿನ ಮಾಗಡಿ ರಸ್ತೆಯಲ್ಲಿನ ಕಡಬಗೆರೆ ಕ್ರಾಸ್ ಸಮೀಪದಲ್ಲಿನ ಎಸ್.ಆರ್.ಸೀಟಿಂಗ್ ಸಿಸ್ಟಮ್ ಕಾರ್ಖಾನೆಯ ಗೋದಾಮಿನಲ್ಲಿ ಸೋಮವಾರ ಬೆಳಗಿನ ಜಾವ 5:30ರ ಸುಮಾರಿಗೆ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲೇ ಇಡೀ ಕಾರ್ಖಾನೆಗೆ ವ್ಯಾಪಿಸಿದೆ ಎನ್ನಲಾಗಿದೆ.
ಇಲ್ಲಿಂದ ಸಿನೆಮಾ ಮಂದಿರ, ಬಸ್ಸು, ಕಾರು ಹಾಗೂ ಮಾಲ್ ಗಳಿಗೆ ಆಸನಗಳನ್ನು ಸಿದ್ಧಪಡಿಸಿ ಸರಬರಾಜು ಮಾಡ ಲಾಗುತ್ತಿತ್ತು. ಕಾರ್ಖಾನೆಯ ಏಳು ಮಂದಿ ಸಿಬ್ಬಂದಿ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದು, ಕಾರ್ಖಾನೆಯಲ್ಲಿ ವಾಸ್ತವ್ಯ ಹೂಡಿದ್ದರು. ನಿನ್ನೆ ರಾತ್ರಿ 2 ಗಂಟೆಯ ವರೆಗೂ ಕೆಲಸ ಮಾಡಿದ್ದ ಆರು ಮಂದಿ ಕಾರ್ಮಿಕರು ನಿದ್ರೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.ಬೆಳಗ್ಗೆ 5:30ರ ಸುಮಾರಿಗೆ ಕಾರ್ಮಿಕನೋರ್ವ ಚಹಾ ಸೇವಿಸಲು ಕಾರ್ಖಾನೆಯಿಂದ ಹೊರ ಬಂದಿದ್ದು, ಕಾರ್ಖಾನೆಗೆ ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿದ್ದ.
ಈ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ದಹ್ಯ ವಸ್ತುಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಾರ್ಖಾನೆಗೆ ವ್ಯಾಪಿಸಿದೆ.ನಿದ್ರೆಯಲ್ಲಿದ್ದ ಕಾರ್ಮಿಕರು ಪ್ರಾಣಾಪಾಯ ದಿಂದ ಪಾರಾಗಿ ಹೊರ ಹೋಗಲು ಯತ್ನಿಸಿದರಾದರೂ ಕಾರ್ಖಾನೆಗೆ ಹೊರಗಿನಿಂದ ಬೀಗ ಹಾಕಿದ್ದ ಕಾರಣ ಅದು ಸಾಧ್ಯವಾಗದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ ಎಂದು ತಾವರೆಕೆರೆ ಠಾಣಾ ಪೊಲೀಸರು ತಿಳಿಸಿದ್ದಾರೆ.ಸುದ್ದಿ ತಿಳಿದ ಕೂಡಲೇ 11 ಅಗ್ನಿ ಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಿ ಬೆಂಕಿ ನಂದಿಸಿದ್ದಾರೆ.
ಅಗ್ನಿ ಸುರಕ್ಷೆಗೆ ಆದ್ಯತೆ ನೀಡದ ಕಾರಣ ಆರು ಮಂದಿ ಸಜೀವ ದಹನವಾಗಿದ್ದಾರೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ರವಿಶಂಕರ್ ಮಾಹಿತಿ ನೀಡಿದ್ದಾರೆ.ಕಾರ್ಖಾನೆಗೆ ಹೊರಗಿನಿಂದ ಬೀಗ ಹಾಕಿದ್ದು, ಶಟರ್ ಬಳಿ ಓರ್ವನ ಮೃತದೇಹ ಪತ್ತೆಯಾಗಿದೆ. ಉಳಿದ ಐದು ಮಂದಿ ಮಲಗಿದ್ದಲ್ಲೇ ದಟ್ಟ ಹೊಗೆಯಿಂದ ಉಸಿರುಗಟ್ಟಿ ಸಜೀವವಾಗಿ ದಹನವಾಗಿದ್ದಾರೆ ಎಂದು ರವಿಶಂಕರ್ ತಿಳಿಸಿದರು.
ಉಸಿರುಗಟ್ಟಿ ಸಾವು:ಆಸನ ತಯಾರಿಕಾ ಕಾರ್ಖಾನೆಯ ಗೋದಾಮಿನಲ್ಲಿ ಪ್ರಾಥಮಿಕ ತನಿಖೆಯ ಅನ್ವಯ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ. ನಿದ್ರಾವಸ್ಥೆಯಲ್ಲಿದ್ದ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಗೋದಾಮಿನಲ್ಲಿ ಅಪಾರ ಪ್ರಮಾಣದ ಸ್ಪಾಂಜ್‌ಗಳನ್ನು ಶೇಖರಿಸಲಾಗಿದ್ದು ಕಾರ್ಮಿಕರು ಕೆಲಸ ಮುಗಿಸಿ ಮುಂಜಾನೆ ನಿದ್ರೆಗೆ ಜಾರಿದ್ದಾರೆ. ಬೆಂಕಿ ಕಾಣಿಸಿಕೊಂಡು ಸ್ಪಾಂಜ್‌ಗೆ ತಗುಲಿ ದಟ್ಟ ಹೊಗೆ ಆವರಿಸಿದುದರಿಂದ ಕಾರ್ಮಿಕರು ಉಸಿರುಗಟ್ಟಿ ಮಲಗಿದ್ದ ಜಾಗದಲ್ಲೇ ಸಾವನ್ನಪ್ಪಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಪ್ರಕರಣದ ಸಂಬಂಧ ಇಲ್ಲಿನ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆಯ ಮಾಲಕ ಅಮಿತ್ ರಾಠೋಡ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.
ಕೃಪೆ:ವಾ.ಭಾರತಿ 

No comments:

Post a Comment