Saturday, March 23, 2013

ಪುರುಷ ಸಹೋದ್ಯೋಗಿಗಳ ಬಗ್ಗೆ ಟ್ವೀಟ್ ಮಾಡಿದ ಮಹಿಳಾ ಟೆಕ್ಕಿ ಕೆಲಸದಿಂದ ಔಟ್!


ಸ್ಯಾನ್ ಹೋಸೆ, : ಕಂಪ್ಯೂಟರ್ ಕಾನ್ಫರೆನ್ಸೊಂದರಲ್ಲಿ ಅಸಭ್ಯವಾಗಿ ಪಿಸುಮಾತನಾಡುತ್ತಿದ್ದ ಪುರುಷ ಸಹೋದ್ಯೋಗಿಗಳ ಬಗ್ಗೆ ಟ್ವೀಟ್ ಮಾಡಿದ ಮಹಿಳಾ ಉದ್ಯೋಗಿಯನ್ನು ಸಾಫ್ಟ್ ವೇರ್ ಕಂಪನಿ ಕೆಲಸದಿಂದ ಕಿತ್ತೊಗೆದಿರುವುದು ಟ್ವಿಟ್ಟರ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪುರುಷ ಉದ್ಯೋಗಿಗಳ ಫೋಟೋ ಪ್ರಕಟಿಸಿದ್ದಲ್ಲದೆ, ಅವರ ವರ್ತನೆಯನ್ನು ಟ್ವೀಟ್ ಮಾಡುವ ಮುಖಾಂತರ ಕಂಪನಿಯ ಮಾನವನ್ನು ಬಹಿರಂಗವಾಗಿ ಹರಾಜುಹಾಕಿದ್ದಾಳೆ ಎಂದು ಸೆನ್‌ಗ್ರಿಡ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಡ್ರಿಯಾ ರಿಚರ್ಡ್ಸ್ ಎಂಬಾಕೆಯನ್ನು ಕೆಲಸದಿಂದ ಕಿತ್ತುಹಾಕಲಾಗಿದೆ.
ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಆಡ್ರಿಯಾ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಕೆಲ ಸಹೋದ್ಯೋಗಿಗಳು ಪೆನ್ ಡ್ರೈವ್ ಬಗ್ಗೆ ಮಾತನಾಡುತ್ತ, ಅಸಭ್ಯ ಮತ್ತು ಅಶ್ಲೀಲ ಸಂಭಾಷಣೆಯಲ್ಲಿ ತೊಡಗಿದ್ದರು. ಇದರಿಂದ ವಿಚಲಿತಳಾದ ಆಕೆ ಅವರ ಫೋಟೋ ತೆಗೆದಿದ್ದಲ್ಲದೆ ಅವರಾಡಿದ ಮಾತುಗಳನ್ನು ಟ್ವೀಟ್ ಮಾಡಿದ್ದಳು.
ಆಡ್ರಿಯಾಳ ಟ್ವೀಟನ್ನು ಗಮನಿಸಿದ ಕಂಪನಿ ಆಡಳಿತ ಮಂಡಳಿ ಎಲ್ಲರನ್ನು ಕರೆದು ವಿವರಣೆ ಕೇಳಿದೆ. ತಾವು ಅಸಭ್ಯವಾಗಿ ಮಾತನಾಡಿದ್ದನ್ನು ಪುರುಷ ಸಹೋದ್ಯೋಗಿಗಳು ಒಪ್ಪಿಕೊಂಡು ಕ್ಷಮೆ ಕೋರಿದ್ದರು. ಆಡ್ರಿಯಾ ಮಾಡಿದ್ದು ಸರಿಯಾಗಿದ್ದರೂ ಮಾಡಿರುವ ರೀತಿ ಸರಿಯಾಗಿಲ್ಲ ಎಂದು ಕಂಪನಿ ಆಕ್ಷೇಪ ವ್ಯಕ್ತಪಡಿಸಿದೆ.
ಟ್ವೀಟ್ ಮಾಡುವುದರ ಜೊತೆಗೆ ಕಂಪನಿಯ ಉದ್ಯೋಗಿಗಳ ಫೋಟೋ ಟ್ವಿಟ್ಟರಲ್ಲಿ ಹಾಕಿರುವುದು ಕಂಪನಿ ಹಾಕಿರುವ ಗೆರೆಯನ್ನು ದಾಟಿದೆ ಕಂಪನಿಯ ಸಿಇಓ ಜಿಮ್ ಫ್ಲಾಂಕ್ಲಿನ್ ಕಂಪನಿಯ ಬ್ಲಾಗ್‌ನಲ್ಲಿ ಬರೆದಿದ್ದಾರೆ. ಆಡ್ರಿಯಾ ಕಂಪನಿಯ ಬಿಸಿನೆಸ್ಸಿಗೆ ಧಕ್ಕೆ ತಂದಿದ್ದಾಳೆ ಮತ್ತು ಡೆವಲಪರ್ಸ್‌ಗಳನ್ನು ವಿಭಾಗಿಸಿದ್ದಾಳೆ. ಆಕೆಯಿಂದ ಕಂಪನಿಗೆ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದ್ದಾರೆ.
ಈ ಘಟನೆ ಲಿಂಗ ಭೇದ ಕುರಿತು ಚರ್ಚೆಗೆ ಗ್ರಾಸವಾಗಿದೆ. ಓರ್ವ ಪುರುಷ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಲಾಗಿದ್ದರೂ, ಅಶ್ಲೀಲ ಸಂಭಾಷಣೆ ನಡೆಸಿದ್ದ ಮತ್ತೊಬ್ಬ 'ಮೌಲ್ಯವಿರುವ' ಪುರುಷ ಉದ್ಯೋಗಿಯನ್ನು ಕಂಪನಿಯಲ್ಲಿ ಉಳಿಸಿಕೊಳ್ಳಲಾಗಿದೆ. ಮಹಿಳಾ ಉದ್ಯೋಗಿಯ ಹೆಸರು ಬಹಿರಂಗಪಡಿಸಲಾಗಿದೆ. ಆದರೆ, ಅಸಭ್ಯ ಮಾತುಕತೆ ನಡೆಸಿದ ಪುರುಷರಿಬ್ಬರ ಹೆಸರನ್ನು ಕಂಪನಿ ಬಹಿರಂಗಪಡಿಸಿಲ್ಲ.
ಪುರುಷರ ಅಸಭ್ಯ ವರ್ತನೆಯನ್ನು ಬಹಿರಂಗಪಡಿಸಿದ ಮಹಿಳಾ ಉದ್ಯೋಗಿ ಪ್ರಯೋಜನಕ್ಕೆ ಬಾರದವಳು ಎಂದು ಕಂಪನಿ ಸಿಇಓ ಜರಿದಿರುವುದು ಮತ್ತು ಪುರುಷರ ಹೆಸರು ಬಹಿರಂಗಪಡಿಸದಿರುವುದು ಮತ್ತು ಓರ್ವನನ್ನು ಉಳಿಸಿಕೊಂಡಿರುವುದು ಟ್ವಿಟ್ಟರಿನಲ್ಲಿಯೇ ಟೀಕೆಗೆ ಗುರಿಯಾಗಿದೆ. ಹಲವಾರು ಟ್ವಿಟ್ಟಿಗರು ಆಡ್ರಿಯಾ ರಿಚರ್ಡ್ಸ್ ಪರ ವಾದ ಮಾಡುತ್ತಿದ್ದಾರೆ.
ಕೃಪೆ;ವನ್ ಇಂಡಿಯಾ

No comments:

Post a Comment