Wednesday, March 27, 2013

ಕೇರಳ ಸರಕಾರದಿಂದ ಬೇಡಿಕೆ ಈಡೇರಿಕೆಯ ಭರವಸೆ; ಎಂಡೋ ಸಂತ್ರಸ್ತರ ನಿರಾಹಾರ ಧರಣಿ ಅಂತ್ಯಮಾರ್ಚ್ -27-2013

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಬೇಡಿಕೆ ಈಡೇರಿಕೆಗಾಗಿ ಎಂಡೋ ಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ ಕಳೆದ 36 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಹಿಂದೆಗೆದುಕೊಂಡಿದೆ.
ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಹಾಗೂ ಎಂಡೋ ಸಲ್ಫಾನ್ ವಿರೋಧಿ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ದೊರೆತ ಭರವಸೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಮುಷ್ಕರವನ್ನು ಹಿಂಪಡೆದಿ ದ್ದಾರೆ. ಭರವಸೆ ಈಡೇರಿಸದಿದ್ದಲ್ಲಿ ಮುಷ್ಕರ ಮತ್ತೆ ಮುಂದುವರಿಸುವುದಾಗಿ ಒಕ್ಕೂಟದ ಅಧ್ಯಕ್ಷ ಅಂಬಲತ್ತರ ಕುಂಞಿಕೃಷ್ಣನ್ ತಿಳಿಸಿದ್ದಾರೆ.
ಹೊಸ ಬಸ್ ನಿಲ್ದಾಣ ಪರಿಸರದ ಸಹಿ ವೃಕ್ಷದಡಿಯಲ್ಲಿ ಫೆಬ್ರವರಿ 18ರಂದು ಮುಷ್ಕರ ಆರಂಭಿಸಲಾಗಿತ್ತು. ಇದುವರೆಗೆ ಒಟ್ಟು ಆರು ಮಂದಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಈ ಪೈಕಿ ಪರಿಸರ ಹೋರಾಟಗಾರ ಪಿ.ಮೋಹನ್ ಕುಮಾರ್ ಹೋರಾಟದ ಸ್ಥಳ ಹಾಗೂ ಆಸ್ಪತ್ರೆಯಲ್ಲಿ 21 ದಿನಗಳ ಕಾಲ ನಿರಾಹಾರ ಸತ್ಯಾಗ್ರಹ ನಡೆಸಿದ್ದರು. 
ಮೋಹನ್ ಕುಮಾರ್‌ರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಸಾಮಾ ಜಿಕ ಕಾರ್ಯಕರ್ತರಾದ ಗ್ರೋ ವಾಸು ಮತ್ತು ಮೋಯಿನ್ ಬಾಪು ಸತ್ಯಾಗ್ರಹ ನಡೆಸಿದ್ದರು. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಮುಷ್ಕರವನ್ನು ಅಂತ್ಯಗೊಳಿಸಲಾಯಿತು. ಹೋರಾಟಕ್ಕೆ ಬೆಂಬಲ ಸೂಚಿಸಿ ಸೋಮವಾರ ಸಂಜೆ ಕಾಸರಗೋಡು ನಗರದಲ್ಲಿ ವಿವಿಧ ಸಂಘಟನೆ, ರಾಜಕೀಯ ಪಕ್ಷ, ವಿದ್ಯಾರ್ಥಿಗಳು ಹಾಗೂ ಸಂಘಸಂಸ್ಥೆಗಳ ನೇತೃತ್ವದಲ್ಲಿ ಬೃಹತ್ ಜನ ಸಮುದ್ರ ಹೋರಾಟ ವನ್ನು ಆಯೋಜಿಸಿತ್ತು.

ಎಂಡೋ ಸವಲತ್ತು 1,318 ಸಂತ್ರಸ್ತರಿಗೆ ವಿಸ್ತರಣೆ; ಹೋರಾಟಕ್ಕೆ ಸಿಕ್ಕ ಫಲ
ಕಾಸರಗೋಡು, ಮಾ.26: ಎಂಡೋಸಲ್ಫಾನ್‌ನಿಂದ ಸಂತ್ರಸ್ತರಾದ ಇನ್ನೂ 1,318 ಮಂದಿಗೆ ಸಹಾಯಧನ ಮತ್ತು ಸವಲತ್ತುಗಳನ್ನು ವಿತರಿಸಲು ಸರಕಾರ ನಿರ್ಧರಿಸಿದೆ. ಇದರೊಂದಿಗೆ ಸರಕಾರಿ ಸವಲತ್ತು ಪಡೆಯುತ್ತಿರುವ ಸಂತ್ರಸ್ತರ ಸಂಖ್ಯೆ 5,500ಕ್ಕೆ ಏರಿದೆ. ಕಳೆದ 36 ದಿನಗಳಿಂದ ಎಂಡೋಸಲ್ಫಾನ್ ಸಂತ್ರಸ್ತ ಜನಪರ ಒಕ್ಕೂಟ ನಡೆಸುತ್ತಿದ್ದ ಹೋರಾಟಕ್ಕೆ ಗೆಲುವಾಗಿದೆ.
ತಿರುವನಂತಪುರದಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೇತೃತ್ವದಲ್ಲಿ ಸರ್ವಪಕ್ಷ ಹಾಗೂ ಎಂಡೋ ವಿರೋಧಿ ಸಮಿತಿ ಪದಾಧಿಕಾರಿಗಳ ನಡುವೆ ಸೋಮವಾರ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಹೋರಾಟ ನಡೆಸುತ್ತಿದ್ದ ಒಕ್ಕೂಟ ಮುಂದಿಟ್ಟ ಬಹುತೇಕ ಬೇಡಿಕೆಗಳ ಇತ್ಯರ್ಥಕ್ಕೆ ಸರಕಾರ ಹಸಿರು ನಿಶಾನೆ ತೋರಿಸಿದೆ.
ಸಂತ್ರಸ್ತ 5,500 ಮಂದಿಗೆ ಉಚಿತ ಚಿಕಿತ್ಸೆ, ಉಚಿತ ಪಡಿತರ ಲಭಿಸಲಿದೆ. ಸಂತ್ರಸ್ತ ಎಲ್ಲಾ ಕುಟುಂಬಗಳನ್ನು ಬಿಪಿಎಲ್ ಪಟ್ಟಿ ಯಲ್ಲಿ ಸೇರ್ಪಡೆಗೊಳಿಸಲಾಗುವುದು. ಹಾಸಿಗೆ ಹಿಡಿದವರ ಆರೈಕೆಗೆ ನೇಮಿಸುವ ಓರ್ವ ವ್ಯಕ್ತಿಗೆ ಪಿಂಚಣಿ ಲಭಿಸಲಿದೆ. ಕ್ಯಾನ್ಸರ್ ಪೀಡಿತ ರೋಗಿಗಳನ್ನು ಸಂತ್ರಸ್ತ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುವುದು. ಸಂತ್ರಸ್ತರ ಸಾಲ ಮರುಪಾವತಿ ಕಾಲಾವಧಿಯನ್ನು ಆರು ತಿಂಗಳಿಗೆ ವಿಸ್ತರಿಸಲಾಗಿದೆ ಎಂದು ಸಭೆಯ ಬಳಿಕ ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಿಳಿಸಿದರು.
  ಸಾಲಮನ್ನಾ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಲಾ ಗಿದೆ. ಸಂತ್ರಸ್ತರಿಗೆ ಉಚಿತ ಚಿಕಿತ್ಸಾ ಸೇವೆಗಾಗಿ ಸದ್ಯ 12 ಆಸ್ಪತ್ರೆ ಗಳಿದ್ದು, ಇದಕ್ಕೆ ಇನ್ನು 4 ಆಸ್ಪತ್ರೆಗಳಾದ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಅಂಮಾಲಿ ಲಿಟ್ಲ್ ಫ್ಲವರ್ ನೇತ್ರಾಲಯ, ಪರಿಯಾರಂ ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಕೋಝಿಕ್ಕೋಡ್ ಸರಕಾರಿ ಹೋಮಿಯೋ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಸೇರ್ಪಡೆಗೊಳಿಸಲಾಗಿದೆ ಎಂದವರು ವಿವರಿಸಿದರು.
ಈ ಎಲ್ಲಾ ಸೌಲಭ್ಯಗಳು ಸಂತ್ರಸ್ತ ವಲಯದ 11 ಗ್ರಾಪಂ ವ್ಯಾಪ್ತಿಯ ವರಿಗೆ ಲಭ್ಯವಾಗಲಿದೆ. ಉಳಿದ ಪಂಚಾಯತ್‌ಗಳಲ್ಲಿ ಸಂತ್ರಸ್ತರನ್ನು ಗುರುತಿಸಲು 2 ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುವುದು. ರೋಗಿಗಳ ಶುಶ್ರೂಕರ ಪಿಂಚಣಿಯನ್ನು ರೂ. 700ಕ್ಕೆ ಏರಿಸಲು ಎಲ್ಲಾ ಬಡ್ಸ್ ಶಾಲೆಗಳ ನೌಕರರಿಗೆ ಗ್ರಾಪಂ ನೀಡುವ ರೂ. 3,500 ಹೊರತುಪಡಿಸಿ ಸರಕಾರ 1,500 ರೂ. ನೀಡಲಿದೆ. 11 ಗ್ರಾಪಂಗಳಿಗೆ ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗುವುದು. ಸಂತ್ರಸ್ತರ ಸಾಲ ಮನ್ನಾ ಕುರಿತು ಅಧ್ಯಯನಕ್ಕೆ ಕಾಸರಗೋಡು ಜಿಲ್ಲಾಧಿಕಾರಿ, ಲೀಡ್ ಬ್ಯಾಂಕ್ ಮ್ಯಾನೇಜರ್, ಸಹಕಾರಿ ಇಲಾಖೆಯ ಜಂಟಿ ಆಯುಕ್ತ, ಎಂಡೋಸಲ್ಫಾನ್ ವಿಶೇಷ ಅಧಿಕಾರಿಯನ್ನು ಒಳಗೊಂಡ ಸಮಿತಿಯನ್ನು ಸಭೆಯಲ್ಲಿ ರಚಿಸ ಲಾಯಿತು. ಈ ಸಮಿತಿ 3 ತಿಂಗಳೊಳಗೆ ವರದಿ ಸಲ್ಲಿಸಲಿದೆ. ಎಂಡೋ ಸಂತ್ರಸ್ತ 734 ಮಂದಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಶಿಫಾರಸಿನಂತೆ 5 ಲಕ್ಷ ರೂ. ಪಡೆಯಲು ಅರ್ಹ ರಾಗಿರುತ್ತಾರೆ. ಈ ಪೈಕಿ 600 ಮಂದಿಗೆ ಈಗಾಗಲೇ ಸಹಾಯ ಧನ ವಿತರಿಸಲಾಗಿದೆ. ಉಳಿದ 134 ಮಂದಿಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಸಭೆಯಲ್ಲಿ ಸಚಿವರಾದ ಕೆ.ಪಿ.ಮೋಹನನ್, ಎಂ.ಕೆ.ಮುನೀರ್, ಆರ್ಯಾಡನ್ ಮುಹಮ್ಮದ್, ಸಂಸದ ಪಿ.ಕರುಣಾಕರನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞಿರಾಮನ್ ಉದುಮ, ಕೆ.ಕುಂಞಿ ರಾಮನ್ (ತೃಕ್ಕರಿಪುರ), ಪಿ.ಬಿ.ಅಬ್ದುರ್ರಝಾಕ್, ಜಿಪಂ ಅಧ್ಯಕ್ಷೆ ಶ್ಯಾಮಲಾದೇವಿ, ವಿವಿಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.
ಕೃಪೆ ವಾ.ಭಾರತಿ 

No comments:

Post a Comment