Monday, March 25, 2013

*ಆರಿದ ಬಾಯಿಗಳಿಗೆ ಎಲ್ಲಿದೆ ಸಾಂತ್ವನ?

 Dr. Srinivas Kakkilaya | ಡಾ| ಶ್ರೀನಿವಾಸ ಕಕ್ಕಿಲ್ಲಾಯ


> [ನೋಡಿ
>  |
> ನೋಡಿ
>
> *ಎಲ್ಲಾ ಜೀವಿಗಳ ಕಣಕಣದಲ್ಲೂ ಇರುವ ನೀರು ವ್ಯಾಪಾರದ ಸರಕಾಗಬಾರದು*
>
> ಅನಂತಾನಂತವಾದ ಈ ತಾರಾಮಂಡಲದಲ್ಲಿ ಭೂಮಿಯಂತಹ ಕೆಲ ಗ್ರಹಗಳಲ್ಲಷ್ಟೇ ನೀರಿರುವುದು, ಅಲ್ಲಷ್ಟೇ
> ಜೀವರಾಶಿಯಿರುವುದು. ನಮ್ಮ ದೇಹದೊಳಗೆ ನೀರಿನಂಶ ನೂರಕ್ಕೆ ಅರುವತ್ತರಷ್ಟು. ಯಾವ ಭೂಮಿಯಲ್ಲಿ
> ನೀರಿನಿಂದ ಜೀವಸಂಕುಲ ಬೆಳೆಯಿತೋ, ಅಲ್ಲೀಗ ಅದೇ ನೀರಿಗೆ ತತ್ವಾರ. ಅಂದಾಜಿನಂತೆ ಇನ್ನು
> ಹದಿನೈದೇ ವರ್ಷಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ
> ಏರುತ್ತಿರುವ ಬೇಡಿಕೆ, ಕ್ಷೀಣಿಸುತ್ತಿರುವ ಜಲಸಂಪನ್ಮೂಲಗಳ ಜೊತೆಗೆ ದುರ್ಬಲಗೊಳ್ಳುತ್ತಿರುವ
> ಜಲ ಸಂಗ್ರಹಣೆ, ಶೇಖರಣೆ ಹಾಗೂ ವಿತರಣೆ. ಜೀವದ ಹಕ್ಕಾದ ನೀರಿಗೂ ಗಂಟೆಗಟ್ಟಲೆ ನಿದ್ದೆಗೆಟ್ಟು
> ಕಾದು, ದುಡ್ಡು ಕೊಟ್ಟು ಬೇಡುವ ದುರವಸ್ಥೆ.
>
> ಭೂಮಿಯ ಶೇ. 70 ಭಾಗ ಜಲಾವೃತವಾಗಿದ್ದರೂ, ಅದರಲ್ಲಿ ಸಿಹಿ ನೀರು ಶೇ. 3 ಮಾತ್ರ. ಅದರಲ್ಲೂ
> ಹಿಮದೊಳಗೂ, ಆಳ ನೆಲದೊಳಗೂ ಹುದುಗಿರುವ ನೀರು ದೊರೆಯುವಂತಿಲ್ಲ. ಸಿಕ್ಕಿದ್ದರಲ್ಲಿ ಕೃಷಿ
> ಹಾಗೂ ಹೈನುಗಾರಿಕೆಗೆ ಶೇ. 70 ಹಾಗೂ ಉದ್ದಿಮೆಗಳಿಗೆ ಶೇ. 10 ರಷ್ಟು ಬಳಕೆಯಾಗಿ
> ನಮಗುಳಿಯುವುದು ತೀರಾ ಅಲ್ಪ. ಜಲಸಂಪನ್ಮೂಲಗಳು ವಿರಳವಾದಂತೆ ತಲಾವಾರು ನೀರಿನ ಪೂರೈಕೆಯೂ
> ಇಳಿಯುತ್ತಲಿದೆ: ನಮ್ಮ ದೇಶದಲ್ಲಿ 1955ರಲ್ಲಿ ಪ್ರತಿಯೋರ್ವನಿಗೂ ವರ್ಷಕ್ಕೆ 5300 ಘನ
> ಅಡಿಯಷ್ಟು ನೀರು ದೊರೆಯುತ್ತಿದ್ದರೆ, 1996ಕ್ಕೆ ಅದು 2200 ಘನ ಅಡಿಯಷ್ಟಾಗಿದೆ; 2020ಕ್ಕೆ
> 1600 ಕ್ಕಿಳಿದು ನೀರಿನ ಸಂಕಟ ಉತ್ಕಟವಾಗಲಿದೆ. ನಮ್ಮಲ್ಲಿ ಶೇ. 80ಕ್ಕೂ ಹೆಚ್ಚು ಜನ
> ಅಂತರ್ಜಲವನ್ನೇ ನೆಚ್ಚಿಕೊಂಡಿದ್ದು, ಅದೀಗ ಬರಿದಾಗುತ್ತಿರುವುದಷ್ಟೇ ಅಲ್ಲ, ಮಲಿನವೂ
> ಆಗುತ್ತಿದೆ. ಜೀವಜಲ ಬಾಯಿಗೆಟಕುತ್ತಿಲ್ಲ, ಸಿಕ್ಕರೂ ಕುಡಿಯುವಂತಿಲ್ಲ.
>
> ಮನುಷ್ಯನ ಚಟುವಟಿಕೆಗಳ ಹೊಲಸೆಲ್ಲವೂ ಕೆರೆ-ತೊರೆ-ನದಿಗಳಿಂದ ಸಾಗರಗಳವರೆಗೂ, ಭೂಮಿಯ
> ಮೇಲ್ಮೈಯಿಂದ ಆಗಸ-ಭೂತಳಗಳಿಗೂ ಸೋರಿ ಹೋಗುತ್ತಿವೆ, ಜೀವಜಲ ಕಲುಷಿತಗೊಂಡು
> ಮರಣಜಲವಾಗುತ್ತಿದೆ. ಮನುಷ್ಯರು ಹಾಗೂ ಸಾಕುಪ್ರಾಣಿಗಳ ಮಲಮೂತ್ರಗಳು ಹಾಗೂ ಬಚ್ಚಲ ಕೊಳೆಗಳು,
> ಕೈಗಾರಿಕೆಗಳಿಂದ ವಿಸರ್ಜಿಸಲ್ಪಡುವ ರಾಸಾಯನಿಕಗಳು, ಕೃಷಿಯಲ್ಲಿ ಬೇಕಾಬಿಟ್ಟಿ ಬಳಕೆಯಾಗುವ
> ರಸಗೊಬ್ಬರಗಳು ಹಾಗೂ ಕೀಟನಾಶಕಗಳು, ಭೂಮಿಯೊಳಕ್ಕೋ, ಸಾಗರದೊಳಕ್ಕೋ ಸುರಿಯುವ ಬಗೆಬಗೆಯ
> ತ್ಯಾಜ್ಯಗಳೆಲ್ಲವೂ ನಾವು ಕುಡಿಯುವ ನೀರಿನೊಂದಿಗೆ ಬೆರೆಯುತ್ತಿವೆ. ಹವಾಮಾನದ ವೈಪರೀತ್ಯಗಳು
> ಕೆರೆ-ನದಿ-ಸಾಗರಗಳ ನೀರಿನ ಮಟ್ಟದ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ, ನೀರಿನ ಉಷ್ಣತೆ,
> ಅದರಲ್ಲಿರುವ ರಾಸಾಯನಿಕಗಳು ಹಾಗೂ ಸೂಕ್ಷ್ಮಾಣುಗಳ ಪ್ರಮಾಣಗಳ ಮೇಲೂ ಪರಿಣಾಮ ಬೀರುತ್ತಿವೆ.
> ಒಟ್ಟಿನಲ್ಲಿ ಜೀವನದ ಪ್ರತಿ ಸ್ತರದಲ್ಲೂ ದುಡ್ಡನ್ನಷ್ಟೇ ಎಣಿಸುತ್ತಿರುವ ಮನುಕುಲಕ್ಕೆ ತನ್ನ
> ಅಸ್ತಿತ್ವದ ಲೆಕ್ಕಾಚಾರವೇ ತಪ್ಪಿ ಹೋಗುತ್ತಿದೆ.
>
> ಕುಡಿಯುವುದಕ್ಕೆ ಶುದ್ಧ ನೀರನ್ನೊದಗಿಸುವ 122 ದೇಶಗಳ ಪಟ್ಟಿಯಲ್ಲಿ ನಾವು 120
> ರಲ್ಲಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆಗಾಗಿ ಹನ್ನೊಂದು
> ಪಂಚವಾರ್ಷಿಕ ಯೋಜನೆಗಳಲ್ಲಿ 135000 ಕೋಟಿ ರೂಪಾಯಿ ವ್ಯಯಿಸಿದ್ದರೂ ಜಲಜನ್ಯ ರೋಗಗಳಿಂದಾಗಿ
> ಪ್ರತೀ ವರ್ಷ ಸುಮಾರು 36000 ಕೋಟಿ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದೇವೆ.
> ಮೂಲೆ-ಮೂಲೆಗಳಲ್ಲಿ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿರುವ ನಮ್ಮಲ್ಲಿ ಎಪ್ಪತ್ತು
> ಕೋಟಿ ಜನರಿಗೆ ಶೌಚಾಲಯಗಳಿಲ್ಲದೆ ಪ್ರತಿ ದಿನ 20000 ಟನ್ನುಗಳಷ್ಟು ಮಲವು ಬಯಲಲ್ಲೇ
> ವಿಸರ್ಜಿಸಲ್ಪಟ್ಟು ಕುಡಿಯುವ ನೀರಿನ ಮೂಲಗಳನ್ನೂ, ಪುಣ್ಯತೀರ್ಥಗಳನ್ನೂ ಸೇರುತ್ತಿವೆ.
> ಶೌಚಾಲಯಕ್ಕಿಂತ ಮೊಬೈಲ್ ಫೋನ್ ಆದ್ಯತೆಯಾಗಿ, ಬಯಲ ಕಡೆ ವಿಸರ್ಜಿಸುವಾಗಲೂ ಅದನ್ನು
> ಕಿವಿಗೊತ್ತಲಾಗುತ್ತಿದೆ. ಬಯಲು ವಿಸರ್ಜನೆಯಿಂದ ಕಲುಷಿತಗೊಳ್ಳುವ ನೀರಿನಿಂದ ವಾಂತಿ-ಬೇಧಿ,
> ಹೆಪಟೈಟಿಸ್ ಎ ಮತ್ತು ಇ (ಕಾಮಾಲೆ), ಟೈಫಾಯ್ಡ್ ಜ್ವರ, ಎಂಟಮೀಬಾ ಹಾಗೂ ಜಿಯಾರ್ಡಿಯಾ
> ಆಮಶಂಕೆ, ಜಂತುಬಾಧೆ ಮುಂತಾದ ರೋಗಗಳುಂಟಾಗಿ ಪ್ರತೀ ವರ್ಷ ನಾಲ್ಕು ಕೋಟಿ ಭಾರತೀಯರು
> ಬಳಲುತ್ತಾರೆ, ಹದಿನೈದು ಲಕ್ಷ (ದಿನವೊಂದಕ್ಕೆ 5000) ಮಕ್ಕಳು ಬೇಧಿಯಿಂದಾಗಿ
> ಸಾವನ್ನಪ್ಪುತ್ತಾರೆ. ಪದೇ ಪದೇ ಇಂತಹಾ ರೋಗಗಳು ತಗಲುವುದರಿಂದ ಮಕ್ಕಳಲ್ಲಿ ಕುಪೋಷಣೆಗೂ,
> ಕುಂಠಿತ ಬೌದ್ಧಿಕ-ದೈಹಿಕ ಬೆಳವಣಿಗೆಗಳಿಗೂ ಕಾರಣವಾಗುತ್ತಿದೆ. ದೇಶದ ಕೆಲ ಭಾಗಗಳಲ್ಲಿ
> ಅಂತರ್ಜಲದಲ್ಲಿ ಬೆರೆತಿರುವ ಫ್ಲೋರೈಡ್, ಆರ್ಸೆನಿಕ್, ಕಬ್ಬಿಣ ಇತ್ಯಾದಿ ಲೋಹಾಂಶಗಳೂ
> ಕಾಹಿಲೆಗಳಿಗೆ ಕಾರಣವಾಗುತ್ತಿವೆ.
>
> ನಾಗರಿಕರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರನ್ನೊದಗಿಸುವಲ್ಲಿಯೂ, ವಿಸರ್ಜಿತ
> ಕಶ್ಮಲಗಳನ್ನು ಸರಿಯಾಗಿ ನಿಭಾಯಿಸುವಲ್ಲಿಯೂ ಹೆಚ್ಚಿನ ಪೌರಾಡಳಿತಗಳು ವಿಫಲವಾಗಿರುವುದು
> ಖಾಸಗಿ ದಂಧೆಗೆ ಹೆದ್ದಾರಿಯನ್ನೇ ತೆರೆದಿದೆ. ನೀರಿನ ಬಾಟಲು-ಪೊಟ್ಟಣಗಳ ಭರ್ಜರಿ ಮಾರಾಟದ
> ಜೊತೆಗೆ, ನೀರನ್ನು ಶುದ್ಧೀಕರಿಸುವ ಸಾಧನಗಳ ವ್ಯಾಪಾರವೂ ಭರಾಟೆಯಿಂದ ನಡೆಯುತ್ತಿದೆ. ನಾಲ್ಕು
> ದಶಕಗಳ ಹಿಂದೆ ಯಾರೂ ಗಂಭೀರವಾಗಿ ಪರಿಗಣಿಸದಿದ್ದ ಬಾಟಲು ನೀರಿನ ಉದ್ದಿಮೆ ಇಂದು ಲಕ್ಷ
> ಕೋಟಿಗಟ್ಟಲೆಯ ವಹಿವಾಟಾಗಿ ಬೆಳೆದಿದೆ. ಈ ಬಾಟಲಿಯ ನೀರೊಳಗೆ ಇಂದಿನ ಅರ್ಥವ್ಯವಸ್ಥೆಯ
> ಪ್ರತಿಬಿಂಬವಿದೆ: ಎಲ್ಲರಿಗೂ ಉಚಿತವಾಗಿ ಸಿಗಬೇಕಾದ ಅತ್ಯಮೂಲ್ಯ ಪ್ರಾಕೃತಿಕ ಸಂಪನ್ಮೂಲವಾದ
> ನೀರು, ಅದನ್ನು ಕಟ್ಟುವುದಕ್ಕೆ ಅಷ್ಟೇ ಅಮೂಲ್ಯವಾದ ನೈಸರ್ಗಿಕ ತೈಲದಿಂದ ತೆಗೆದ
> ಪಾಲಿಎಥಿಲೀನ್ ಟೆರಿಫ್ಥಾಲೇಟ್ (ಪಿಇಟಿ) ಬಾಟಲು, ಅದನ್ನು ಮಾರುವುದಕ್ಕೆ ದೊಡ್ಡ ತಾರೆಯರ
> ಜಾಹೀರಾತುಗಳು, ಇಡೀ ಬ್ರಹ್ಮಾಂಡದಲ್ಲಿ ಏಕರೂಪದಲ್ಲಿರುವ ನೀರು ಈ ಬಾಟಲುಗಳಲ್ಲಿ ಹತ್ತು ಹಲವು
> ರೂಪ ತಳೆಯುತ್ತದೆ! ಎಕ್ಸ್ ಟ್ರಾ ಆಕ್ಸಿಜನ್, ಮಿನರಲ್, ವಿಟಮಿನ್ ಎಂಬ ಸುಳ್ಳುಗಳು ಅದರಲ್ಲಿ
> ಸೇರುತ್ತವೆ! ‘ಸಾರ್, ಬರೇ ನೀರಾ, ಮಿನರಲ್ ವಾಟರಾ’ ಎಂಬ ಮಾಣಿಯೆದುರು ಪ್ರತಿಷ್ಠೆ
> ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯುಂಟಾಗುತ್ತದೆ! ಆಧುನಿಕ ಜೀವನಶೈಲಿಗೆ ನೀರಿನ ಕೋಡು!
>
> ಈ ಬಾಟಲು ನೀರು ಅತಿ ಶುದ್ಧವೇ? ಅದೂ ಖಂಡಿತವಿಲ್ಲ. ಈ ಬಾಟಲುಗಳಲ್ಲಿರುವ ನೀರು ಬೇರೊಂದು
> ಲೋಕದಿಂದಲೋ, ಅತಿ ವಿಶೇಷ ಮೂಲದಿಂದಲೋ ಬಂದದ್ದಲ್ಲ. ಸಾಮಾನ್ಯವಾಗಿ ದೊರೆಯುವ ಭೂಜಲವನ್ನೇ
> ಶುದ್ಧೀಕರಿಸಿ ಈ ಬಾಟಲುಗಳಲ್ಲಿ ತುಂಬಲಾಗುತ್ತದೆ. ಭೂಜಲವನ್ನು ಶುದ್ಧೀಕರಿಸುವುದು
> ದುಬಾರಿಯೆನಿಸುವೆಡೆಗಳಲ್ಲಿ ನಳ್ಳಿ ನೀರನ್ನೇ ಬಳಸಲಾಗುತ್ತದೆ. ಒಂದು ಬಾಟಲು ತುಂಬಲು ಮೂರು
> ಬಾಟಲಿನಷ್ಟು ನೀರು ಪೋಲಾಗುತ್ತದೆ. ಗುಟುಕು ನೀರಿಗೆ ಬಾಯಿ ಬಿಡುವಲ್ಲಿ ಈ ಡೌಲು! ಈ ಬಾಟಲು
> ನೀರು ಕುದಿಸಿ ತಣಿಸಿದ ನೀರಿಗಿಂತ ಶ್ರೇಷ್ಠವೂ ಅಲ್ಲ. ಒಮ್ಮೆ ಈ ಬಾಟಲನ್ನು ತೆರೆದರೆ ಕುಡಿದು
> ಮುಗಿಸಲೇಬೇಕು, ಹಾಗೇ ಬಿಟ್ಟರೆ ಸೂಕ್ಷ್ಮಾಣುಗಳು ಸೇರಿಕೊಳ್ಳುವ ಸಾಧ್ಯತೆಗಳಿರುತ್ತವೆ.
> ನಕಲಿಗಳ ಕಾಟ ಬೇರೆ. ಬಾಟಲು ಚಂದವೆಂದು ಮರುಬಳಕೆ ಮಾಡುವುದೂ ಸುರಕ್ಷಿತವಲ್ಲ. ಹಾಗೆಂದು
> ಎಸೆದರೆ ಅವುಗಳಿಂದ ಪರಿಸರಕ್ಕೂ ಕೇಡು. ಒಟ್ಟಿನಲ್ಲಿ ಬಾಟಲು ನೀರನ್ನು ಮಾರುವವನನ್ನುಳಿದು
> ಇನ್ನೆಲ್ಲರಿಗೆ ನಷ್ಟವೇ.
>
> ನೀರನ್ನು ಶುದ್ಧೀಕರಿಸುವುದಕ್ಕೆ ಬಗೆಬಗೆಯ ಸೋಸುಕಗಳು, ಅತಿನೇರಳೆ ಕಿರಣಗಳ ಸಾಧನಗಳು,
> ವಿಪರ್ಯಯ ಪರಾಸರಣ (ಆರ್ ಒ) ಸಾಧನಗಳು ಮುಂತಾದವು ಸಾವಿರಗಟ್ಟಲೆ ಬೆಲೆಗೆ ಭರದಿಂದ
> ಬಿಕರಿಯಾಗುತ್ತಿವೆ. ಆದರೆ ಇವುಗಳಲ್ಲಿ ನೀರು ಸಂಪೂರ್ಣವಾಗಿ ಶುದ್ಧವಾಗುತ್ತದೆಯೇ ಎನ್ನುವುದು
> ಯಕ್ಷಪ್ರಶ್ನೆಯೇ. ಪುಣೆಯ ರಾಷ್ಟ್ರೀಯ ವೈರಾಣು ಅಧ್ಯಯನ ಸಂಸ್ಥೆಯ ವರದಿಯಂತೆ, ಟೊಳ್ಳು
> ತಂತುಗಳ ಪೊರೆ (ಹಾಲೊ ಫೈಬರ್ ಮೆಂಬ್ರೇನ್) ಅಥವಾ ಸೂಕ್ಷ್ಮ ತಂತುಗಳ ಸೋಸುಕಗಳನ್ನುಳ್ಳ
> ಸಾಧನಗಳು ಮಾತ್ರವೇ ನೀರಿನಲ್ಲಿರುವ ವೈರಾಣುಗಳನ್ನೂ, ಇನ್ನಿತರ ರೋಗಕಾರಕಗಳನ್ನೂ
> ತಡೆಯುತ್ತವೆ. ಅತಿ ನೇರಳೆ ಕಿರಣಗಳಿಂದ ಶುದ್ಧೀಕರಿಸುವ ಸಾಧನಗಳು ಕೆಲವು
> ಬ್ಯಾಕ್ಟೀರಿಯಾಗಳನ್ನು ತಾತ್ಕಾಲಿಕವಾಗಿ ತಡೆಯುತ್ತವೆಯಾದರೂ, ಇತರ ಸೂಕ್ಷ್ಮಾಣುಗಳನ್ನು
> ನಿವಾರಿಸುವುದಿಲ್ಲ. ವಿಪರ್ಯಯ ಪರಾಸರಣ (ಆರ್ ಒ) ಸಾಧನಗಳಲ್ಲೂ ಎಲ್ಲಾ ರಾಸಾಯನಿಕಗಳು ಹಾಗೂ
> ಸೂಕ್ಷ್ಮಾಣುಗಳು ಪ್ರತ್ಯೇಕಿಸಲ್ಪಡುವುದಿಲ್ಲ. ಇಂತಹಾ ದುಬಾರಿ ಸಾಧನಗಳ ಬದಲಿಗೆ, ನೀರನ್ನು
> ಶುದ್ಧವಾದ ಬಟ್ಟೆಯಲ್ಲಿ ಅಥವಾ ಒಳ್ಳೆಯ ಸೋಸುಕದಲ್ಲಿ ಸೋಸಿ, ಒಂದು ನಿಮಿಷ ಕುದಿಸಿ
> ತಣಿಸುವುದರಿಂದ ಅತಿ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಶುದ್ಧೀಕರಿಸಬಹುದು. ಚಾರಣ ಯಾ
> ಇನ್ನಿತರ ಹೊರ ಪ್ರಯಾಣಗಳ ಸಂದರ್ಭದಲ್ಲಿ ಸೋಸಿದ ಲೀಟರ್ ನೀರಿಗೆ 5 ಬಿಂದು ಅಯೊಡಿನ್
> ಟಿಂಕ್ಚರ್ ಬೆರೆಸಿ ಅರ್ಧ ಗಂಟೆಯ ಬಳಿಕ ಬಳಸಬಹುದು. ಆಡಳಿತದ ನೆರವಿನಿಂದ ಕುಡಿಯುವ ನೀರಿನ
> ಭೌತಿಕ, ರಾಸಾಯನಿಕ ಹಾಗೂ ಜೈವಿಕ ಮಾಲಿನ್ಯವನ್ನು ಕಾಲಕಾಲಕ್ಕೆ ಪರೀಕ್ಷಿಸಬಹುದು.
>
> ಲೋಕಾಂತ್ಯವಾಗಬೇಕಾಗಿದ್ದ ಜಲಪ್ರಳಯವು ಹುಸಿಗುಲ್ಲಾಗಿತ್ತು; ಆದರೆ ಬಿಗಡಾಯಿಸುತ್ತಿರುವ
> ಜಲಕ್ಷಾಮವು ಕಟು ಸತ್ಯವಾಗಿದೆ. ಹೊರಗಿರುವ ನೀರು ಬತ್ತಿ ಹೋದರೆ ದೇಹದೊಳಗಿರುವ ನೀರೂ
> ಉಳಿಯಲಾರದು. ಆದ್ದರಿಂದಲೇ, ಜಲಸಂಪನ್ಮೂಲಗಳ ಪುನಶ್ಚೇತನಕ್ಕೂ, ಅವುಗಳ ಸ್ವಚ್ಛತೆಯನ್ನು
> ಕಾಯುವುದಕ್ಕೂ ಪ್ರತಿಯೋರ್ವರೂ ಕಂಕಣಬದ್ಧರಾಗಬೇಕು. ಶುದ್ಧ ನೀರನ್ನು ಪಡೆಯುವುದು ನಮ್ಮೆಲ್ಲರ
> ಪ್ರಕೃತಿದತ್ತವಾದ, ಸಂವಿಧಾನದತ್ತವಾದ ಹಕ್ಕಾಗಿದೆ. ಸಂಪೂರ್ಣ ಸ್ವಚ್ಛತೆಗಾಗಿ ನಿರ್ಮಲ ಭಾರತ
> ಅಭಿಯಾನ, ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ ಹಾಗೂ ನಗರಾಡಳಿತಗಳ
> ಉಸ್ತುವಾರಿಯಲ್ಲಿರುವ ಕುಡಿಯುವ ನೀರಿನ ಯೋಜನೆಗಳೆಲ್ಲವೂ ಫಲಪ್ರದವಾಗಬೇಕಾದರೆ, ಅವುಗಳಿಗಾಗಿ
> ವ್ಯಯಿಸುತ್ತಿರುವ ಕೋಟಿಗಟ್ಟಲೆ ಹಣವು ಸದ್ಬಳಕೆಯಾಗಬೇಕಾದರೆ, ಆಡಳಿತದ ಮೇಲೆ ಜನರ ಒತ್ತಡವು
> ಬಿಗಿಯಾಗಬೇಕು. ಹಾಗಾದಾಗ ಮಾರ್ಚ್ 22ರ ವಿಶ್ವ ಜಲ ದಿನಾಚರಣೆ ಸಾರ್ಥಕವಾದೀತು.

No comments:

Post a Comment