Tuesday, March 19, 2013

ದಿನಕ್ಕೆ ಎರಡು ಹೊತ್ತು ಉಣ್ಣುವ ಕುಟುಂಬಗಳ ಸಂಖ್ಯೆ ಹೆಚ್ಚಳ: ಕೇಂದ್ರ



 ಮಾರ್ಚ್ -20-2013

ಹೊಸದಿಲ್ಲಿ: ದಿನಕ್ಕೆ ಎರಡು ಹೊತ್ತು ಊಟ ದೊರೆಯುವ ಕುಟುಂಬಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಏರುತ್ತಿದ್ದು 2009- 10ರಲ್ಲಿ ಗ್ರಾಮೀಣ ಭಾಗದಲ್ಲಿ ಅದು ಶೇ. 98.9ರಷ್ಟಿದ್ದರೆ, ನಗರಗಳಲ್ಲಿ ಶೇ. 99.6ರಷ್ಟಿದೆ ಯೆಂದು ಸಂಸತ್ತಿಗಿಂದು ಮಾಹಿತಿ ನೀಡ ಲಾಗಿದೆ.
ಇಡೀ ವರ್ಷ ಎರಡು ಹೊತ್ತು ಊಟ ದೊರೆಯುವ ಕುಟುಂಬಗಳ ಪ್ರಮಾಣ 1993-94ರಲ್ಲಿ ಗ್ರಾಮೀಣ ಭಾಗಗಳಲ್ಲಿ ಶೇ. 94.5ರಿಂದ 2009-10ಕ್ಕೆ ಶೇ. 98.9ಕ್ಕೆ ಹಾಗೂ ನಗರ ಪ್ರದೇಶಗಳಲ್ಲಿ ಇಡೀ ಅವಧಿಗೆ ಶೇ. 98.1ರಿಂದ 99.6ಕ್ಕೇರಿದೆಯೆಂದು ಆಹಾರ ಸಚಿವ ಕೆ.ವಿ.ಥಾಮಸ್ ಲಿಖಿತ ಉತ್ತರವೊಂದರಲ್ಲಿ ಲೋಕಸಭೆಗೆ ತಿಳಿಸಿದರು.
ಅವರು, 2013ರ ಫೆಬ್ರವರಿಯಲ್ಲಿ ಬಿಡುಗಡೆಗೊಂಡಿರುವ ‘ಭಾರತೀಯ ಕುಟುಂಬಗಳ ಆಹಾರ ಬಳಕೆ ಪರ್ಯಾಪ್ತತೆಯ ಸಾಧನೆ’ಯ ಕುರಿತ ಎನ್‌ಎಸ್‌ಎಸ್ ವರದಿ ಸಂಖ್ಯೆ 547ನ್ನುಲ್ಲೇಖಿಸಿ ಈ ಮಾಹಿತಿ ನೀಡಿದರು.
ಅಂಕಿ-ಅಂಶ ಹಾಗೂ ಕಚೇರಿ (ಎಸ್‌ಎಸ್‌ಎಸ್‌ಒ) ನಡೆಸಿದ ಬಳಕೆದಾರರ ವೆಚ್ಚ ಸಮೀಕ್ಷೆಯು ಕುಟುಂಬಗಳ ಬಳಕೆದಾರರ ವೆಚ್ಚ ಹಾಗೂ ರಾಷ್ಟ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಅದರ ಹಂಚಿಕೆಯ ಅಂದಾಜನ್ನು ನೀಡುತ್ತದೆಂದು ಥಾಮಸ್ ತಿಳಿಸಿದರು.
ದಿಲ್ಲಿ ಸಹಿತ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಇದುವರೆಗೆ ಹಸಿವಿನಿಂದಾದ ಮರಣದ ಘಟನೆಯ ಕುರಿತು ವರದಿ ಮಾಡಿಲ್ಲವೆಂದು ಅವರು ಹೇಳಿದರು.
ಕೇಂದ್ರ ಸರಕಾರವು ಜನರಿಗೆ ಸಾರ್ವಜನಿಕ ವಿತರಣ ವ್ಯವಸ್ಥೆಯ ಮೂಲಕ ಭಾರೀ ಸಬ್ಸಿಡಿಯಲ್ಲಿ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ. ಮಧ್ಯಾಹ್ನದ ಬಿಸಿಯೂಟ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳಂತಹ ಯೋಜನೆಗಳ ಮೂಲಕವು ಪೌಷ್ಟಿಕಾಹಾರ ಒದಗಿಸಲಾಗುತ್ತಿದೆಯೆಂದು ಥಾಮಸ್ ವಿವರಿಸಿದರು.
2012-13ರಲ್ಲಿ ಕೇಂದ್ರವು ಪಡಿತರ ಯೋಜನೆಯನ್ವಯ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 578.41 ಲಕ್ಷ ಟನ್ ಆಹಾರ ಧಾನ್ಯ ಮಂಜೂರು ಮಾಡಿದೆ. ಇತರ ಕಲ್ಯಾಣ ಕಾರ್ಯಕ್ರಮಗಳನ್ವಯ ಹೆಚ್ಚುವರಿ 49.26 ಲಕ್ಷ ಟನ್ ಆಹಾರ ಧಾನ್ಯ ನೀಡಲಾಗಿದೆಯೆಂದು ಅವರು ತಿಳಿಸಿದರು.
ಕೃಪೆ ವಾ.ಭಾರತಿ 

No comments:

Post a Comment