Tuesday, March 5, 2013

ವಿಕೇಂದ್ರೀಕರಣದ ಉದ್ದೇಶ ಗೆಲ್ಲಲಿನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇನ್ನೇನು ಒಂದು ದಿನವಷ್ಟೇ ಬಾಕಿ ಉಳಿದಿದೆ. ರಾಜಕಾರಣಿಗಳ ಓಡಾಟ, ಸ್ಥಳೀಯ ಪುಢಾರಿಗಳ ಒಳ ರಾಜಕೀಯ ಕೂಡ ಚುರುಕು ಪಡೆದಿದೆ. ಜನರ ಜೊತೆಗೆ ನೇರ ಸಂಬಂಧವಿರುವ ಸ್ಥಳೀಯ ಚುನಾವಣೆಯೆಂದರೆ, ಮುಂದಿನ ವಿಧಾನಸಭಾ ಚುನಾವಣೆಯ ಪೂರ್ವಪರೀಕ್ಷೆಯಿದ್ದಂತೆ.
ಈ ಪರೀಕ್ಷೆಯಲ್ಲಿ ರಾಜಕಾರಣಿಗಳು ಪಾಸಾದದ್ದೇ ಆದರೆ, ಮುಂದಿನ ಪರೀಕ್ಷೆ ಅವರಿಗೆ ಇನ್ನಷ್ಟು ಸುಲಭವಾಗಬಹುದು. ಇದು ಕೇವಲ ರಾಜಕಾರಣಿಗಳ ಪರೀಕ್ಷೆ ಮಾತ್ರವಲ್ಲ, ಜನರ ಪರೀಕ್ಷೆಯೂ ಹೌದು. ಇಲ್ಲಿ ಜನರು ರಾಜಕಾರಣಿಗಳಿಗೆ ಸರಿಯಾಗಿ ಉತ್ತರವನ್ನು ನೀಡಿದರೆ, ಅವರು ವಿಧಾನಸಭಾ ಚುನಾವಣೆಯ ಹೊತ್ತಿಗೆ ಒಂದಿಷ್ಟಾದರೂ ಸುಧಾರಿಸುವ ಸಾಧ್ಯತೆಯಿದೆ. ಆದುದರಿಂದ, ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ.
ಅಧಿಕಾರ ವಿಕೇಂದ್ರೀಕರಣದ ಮುಖ್ಯ ಗುರಿ, ಅಭಿವೃದ್ಧಿ ತಳ ಮಟ್ಟದವರೆಗೂ ತಲುಪಬೇಕು ಎನ್ನುವುದಾಗಿದೆ. ತಳ ಗಟ್ಟಿಯಾಗಿದ್ದರೆ, ತುದಿಯೂ ಅಷ್ಟೇ ಸುಭದ್ರವಾಗಿ ನಿಂತೀತು. ತಳ ದುರ್ಬಲವಾಗಿದ್ದರೆ, ಅದರ ತುತ್ತ ತುದಿಯಲ್ಲಿರುವ ವಿಧಾನಸೌಧವೂ ಅಷ್ಟೇ ದುರ್ಬಲವಾಗಿರುತ್ತದೆ. ರಾಜಧಾನಿಯಲ್ಲಿ ಅತ್ಯಂತ ದುರ್ಬಲ ಸರಕಾರ ಯಾಕೆ ಇರುತ್ತದೆಯೆಂದರೆ, ವಿಕೇಂದ್ರೀಕರಣದ ತಳ ತೀರಾ ದುರ್ಬಲವಾಗಿದೆ ಎನ್ನುವ ಕಾರಣಕ್ಕಾಗಿ. ಆದುದರಿಂದಲೇ ನಾವು ಚುನಾವಣಾ ಸುಧಾರಣೆಯನ್ನು ಮೊದಲು ಸ್ಥಳೀಯ ಮಟ್ಟದಲ್ಲಿ ಜಾರಿಗೊಳಿಸಬೇಕಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಕೇಂದ್ರೀಕರಣದ ವೌಲ್ಯಕ್ಕನುಗುಣವಾಗಿ ನಡೆದರೆ, ಅದರ ಪರಿಣಾಮವನ್ನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಕಾಣಬಹುದು. ಸ್ಥಳೀಯ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ನೇರ ಮುಖಾಮುಖಿಯಾಗುತ್ತಾರೆ. ಇಲ್ಲಿ ಪಕ್ಷಕ್ಕಿಂತಲೂ, ಜನರೇ ಮುಖ್ಯವಾಗುತ್ತಾರೆ. ಒಬ್ಬ ಒಳ್ಳೆಯ ಅಭ್ಯರ್ಥಿ ಯಾವ ಪಕ್ಷದಲ್ಲಿ ನಿಂತರೂ ಅವನು ಗೆಲ್ಲುತ್ತಾನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯಾವ ಪಕ್ಷದಿಂದ ನಿಂತಿದ್ದಾನೆ ಎನ್ನುವುದಕ್ಕಿಂತ, ಯಾವ ಪಕ್ಷದಿಂದ ಯಾರು ನಿಂತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಜನ ಮುಖ್ಯ. ಪಕ್ಷ ಆನಂತರ. ಅಭಿವೃದ್ಧಿ ಮುಖ್ಯ. ರಾಜಕೀಯ ಆನಂತರ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಆದರ್ಶವೇ ನಮಗೆ ಮುಂದಿನ ಮಹಾಚುನಾವಣೆಗೆ ಆದರ್ಶ ವಾಗಬೇಕು. ದುರದೃಷ್ಟವಶಾತ್ ಇಂದು ಸ್ಥಳೀಯ ಸಂಸ್ಥೆಗಳಿಗೂ ರಾಜಕೀಯ ವಕ್ಕರಿಸಿದೆ. ಕೋಮುಗಲಭೆ, ಜಾತೀಯತೆ ಇತ್ಯಾದಿಗಳನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲೂ ಬಳಕೆ ಮಾಡುತ್ತಾರೆ. ಗ್ರಾಮಪಂಚಾಯತ್ ಚುನಾವಣೆಗಳಲ್ಲೂ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಪರೋಕ್ಷವಾಗಿ ಕಣಕ್ಕಿಳಿಸುತ್ತವೆ ಎಂದ ಮೇಲೆ ಅದಕ್ಕಿಂತ ಮೇಲಿನ ಚುನಾವಣೆಗಳ ಸ್ಥಿತಿ ಇನ್ನೇನಾಗಬೇಕು? ರಾಜಕಾರಣಿಗಳಿಗೆ ಪಾಠ ಕಲಿಸಲು ಸ್ಥಳೀಯ ಚುನಾವಣೆ ಒಳ್ಳೆಯ ಅಸ್ತ್ರವಾಗಿದೆ. ನಮ್ಮ ಊರು, ವಾರ್ಡು, ಕ್ಷೇತ್ರ ಎಷ್ಟು ಅಭಿವೃದ್ಧಿಯಾಗಿದೆ ಎನ್ನುವುದನ್ನು ಸಮೀಕ್ಷೆ ನಡೆಸಲು ಸ್ಥಳೀಯ ಚುನಾವಣೆಗಳಲ್ಲಿ ಭಾರೀ ಸುಲಭ. ನಮ್ಮ ವಾರ್ಡಿನ ರಸ್ತೆ ಹೇಗಿದೆ? ಎಷ್ಟು ಮನೆಗಳಲ್ಲಿ ವಿದ್ಯುದ್ದೀಪ ಉರಿಯುತ್ತಿಲ್ಲ? ಶಾಲೆ ಹೇಗಿದೆ? ಸೊಸೈಟಿ ಎಷ್ಟು ಆಧುನಿಕಗೊಂಡಿದೆ? ಹೀಗೆ ಎಲ್ಲವನ್ನು ಆಧರಿಸಿ ನಾವು ನಮ್ಮ ಮತಗಳನ್ನು ಯಾರಿಗೆ ನೀಡಬೇಕು ಎನ್ನುವುದನ್ನು ನಿರ್ಧರಿಸಬೇಕಾಗಿದೆ. ಅಡ್ವಾಣಿ, ಯಡಿಯೂರಪ್ಪ, ಸೋನಿಯಾ ಗಾಂಧಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಯಾವ ಕಾರಣಕ್ಕೂ ಮಾನದಂಡವಾಗಬಾರದು. ಆಗ ಮಾತ್ರ ವಿಕೇಂದ್ರೀಕರಣದ ಉದ್ದೇಶ ಈಡೇರುತ್ತದೆ.
ಸ್ಥಳೀಯ ಸಂಸ್ಥೆಗಳಲ್ಲಿ ನಾವು ಅತ್ಯುತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಮಾತ್ರ ನಮ್ಮ ಊರು ಅಭಿವೃದ್ಧಿಗೊಂಡೀತು. ಕೇಂದ್ರದಿಂದ ಅದೆಷ್ಟು ಅನುದಾನಗಳು ಬಂದರೂ ಅದನ್ನು ಸ್ಥಳೀಯವಾಗಿ ದಕ್ಕಿಸಿಕೊಳ್ಳಬೇಕಾದರೆ ಪ್ರಾಮಾಣಿಕನಾದ, ಸ್ಥಳೀಯ ಕ್ಷೇತ್ರದ ಕುರಿತು ಕಾಳಜಿಯುಳ್ಳ ಅಭ್ಯರ್ಥಿಯ ಆವಶ್ಯಕತೆಯಿದೆ.
ವಾರ್ಡ್‌ಗಳು ಉದ್ಧಾರವಾದರೆ ಊರು, ನಗರ, ಪಟ್ಟಣ, ಶಹರ ಉದ್ಧಾರವಾದಂತೆ. ಈ ನಾಡಿನ ಎಲ್ಲ ಗ್ರಾಮಪಂಚಾಯತ್‌ಗಳು ರಸ್ತೆ, ಶಾಲೆ, ವಿದ್ಯುದ್ದೀಪ, ನೀರು ಇತ್ಯಾದಿಗಳನ್ನು ಕಂಡರೆ, ಈ ನಾಡು ಸಂಪೂರ್ಣವಾಗಿ ಉದ್ಧಾರವಾದಂತೆಯೇ ಸರಿ. ಆದುದರಿಂದ ಯಾವ ಕಾರಣಕ್ಕೂ ಸ್ಥಳೀಯ ಚುನಾವಣೆಗಳನ್ನು ನಾವು ನಿರ್ಲಕ್ಷಿಸಬಾರದು. ಒಬ್ಬ ಶಾಸಕನ ಆಯ್ಕೆಗಿಂತ ಹೆಚ್ಚು ಮುತುವರ್ಜಿ ವಹಿಸಿ ಒಬ್ಬ ವಾರ್ಡ್‌ನ ಅಭ್ಯರ್ಥಿಯ ಆಯ್ಕೆಗಾಗಿ ಮತದಾನ ಮಾಡಬೇಕಾಗಿದೆ. ಸ್ಥಳೀಯ ಸಂಸ್ಥೆಗಳ ಉದ್ದೇಶ ಸಫಲವಾದರೆ, ಈ ನಾಡಿಗೆ ಒಳ್ಳೆಯ ಶಾಸಕ, ಒಳ್ಳೆಯ ಸಂಸದ, ಸಚಿವ, ಮುಖ್ಯಮಂತ್ರಿ ಸಿಗುತ್ತಾರೆ. ಆದ್ದರಿಂದ, ಎಲ್ಲರೂ ಮತದಾನಕ್ಕೆ ದೌಡಾಯಿಸ ಬೇಕಾಗಿದೆ. ವಿಕೇಂದ್ರೀಕರಣದ ಉದ್ದೇಶವನ್ನು ಗೆಲ್ಲಿಸಬೇಕಾಗಿದೆ.

No comments:

Post a Comment