Friday, March 15, 2013

ಇಟಲಿ ರಾಯಭಾರಿಗೆ ಸುಪ್ರೀಂ ನೋಟಿಸ್*ಭಾರತದಿಂದ ಹೊರಹೋಗದಂತೆ ತಾಕೀತು
ಹೊಸದಿಲ್ಲಿ: ಕೇರಳದ ಸಾಗರ ಪ್ರದೇಶದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಹತ್ಯೆಗೈದ ಆರೋಪವನ್ನುಎದುರಿಸುತ್ತಿರುವ ತನ್ನ ದೇಶದ ಇಬ್ಬರು ನಾವಿಕರನ್ನು ವಿಚಾರಣೆಗಾಗಿ ಭಾರತಕ್ಕೆ ವಾಪಸ್ ಕಳುಹಿಸದಿರಲು ಇಟಲಿ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗುರುವಾರ ಭಾರತದಲ್ಲಿನ ಇಟಲಿಯ ರಾಯಭಾರಿ ಡೇನಿಯಲ್ ಮ್ಯಾನ್ಸಿನಿಗೆ ದೇಶ ಬಿಟ್ಟು ಹೊರಹೋಗದಂತೆ ನೋಟಿಸ್ ಜಾರಿಗೊಳಿಸಿದೆ.
ಈ ನೋಟಿಸ್‌ಗೆ ಮಾರ್ಚ್ 18ರೊಳಗೆ ಉತ್ತರಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ಇಟಲಿಯ ರಾಯಭಾರಿಗೆ ತಾಕೀತು ಮಾಡಿದೆ. ಭಾರತದಿಂದ ಹೊರಹೋಗದಂತೆ ಇಟಲಿ ರಾಯಭಾರಿಗೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ಭಾರೀ ರಾಜತಾಂತ್ರಿಕ ಬಿಕ್ಕಟ್ಟು  ತಲೆದೋರುವ ಸಾಧ್ಯತೆಗಳು ದಟ್ಟವಾಗಿವೆ.
ಇಟಲಿಯ ಸಂಸತ್ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ  ಆರೋಪಿ ನಾವಿಕರು ಭಾರತಕ್ಕೆ ವಾಪಸಾಗಲಿದ್ದಾರೆಂದು ಭಾರತದಲ್ಲಿನ ಇಟಲಿ ರಾಯಭಾರಿ ಮ್ಯಾನ್ಸಿನಿ ಸರ್ವೋಚ್ಚ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು.ಇದೀಗ ಇಟಲಿ ರಾಯಭಾರಿ ತನ್ನ  ವಾಗ್ದಾನವನ್ನು ಉಲ್ಲಂಘಿಸಿರುವುದರಿಂದ  ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಮೊಕದ್ದಮೆ ಹೂಡಬೇಕೆಂದು ಆಗ್ರಹಿಸಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದರು.
ಸುಬ್ರಹ್ಮಣ್ಯನ್‌ಸ್ವಾಮಿಯವರ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಮ್ಯಾನ್ಸಿನಿಗೆ ಭಾರತವನ್ನು ತ್ಯಜಿಸದಂತೆ ತಾಕೀತು ಮಾಡಿದೆ. ಕೇರಳದ ಬೆಸ್ತರ  ಹತ್ಯೆ ಪ್ರಕರಣದಲ್ಲಿ   ವಿಚಾರಣೆಯನ್ನು ಎದುರಿಸಲು ನಾವಿಕರನ್ನು ಭಾರತಕ್ಕೆ ಕಳುಹಿಸುವುದಾಗಿ ತಾನು ನೀಡಿದ್ದ ವಾಗ್ದಾನದಿಂದ ಹಿಂದೆ ಸರಿದಿರುವ ಇಟಲಿ ಸರಕಾರದ ನಿರ್ಧಾರದ ಬಗ್ಗೆ  ಸುಪ್ರೀಂಕೋರ್ಟ್  ಇಟಲಿಯ ರಾಯಭಾರಿಯಿಂದ ವಿವರಣೆಯನ್ನು ಕೂಡಾ ಕೇಳಿದೆ.
ಇಟಲಿ ರಾಯಭಾರಿ ವಿರುದ್ಧ ಹೂಡಲಾಗಿರುವ ಮೊಕದ್ದಮೆಯ ಮುಂದಿನ ಆಲಿಕೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 19ಕ್ಕೆ ನಿಗದಿ ಪಡಿಸಿದೆ. ಮಾರ್ಚ್ 22ರೊಳಗೆ ಆರೋಪಿ ನಾವಿಕರು ಭಾರತಕ್ಕೆ ವಾಪಸಾಗುವಂತೆಯೂ ಅದು ಗಡುವು ವಿಧಿಸಿದೆ. ಒಂದು ವೇಳೆ ಅವರು ಮರಳಿ ಬಾರದಿದ್ದಲ್ಲಿ ಇಟಲಿಯ ರಾಯಭಾರಿಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಬಹುದಾಗಿದೆ. ಮಾರ್ಚ್ 22ವರೆಗೆ ಮಾತ್ರ ದೇಶದ ಹೊರಗಿರಲು ಸುಪ್ರೀಂಕೋರ್ಟ್ ಇಟಲಿಯ ಆರೋಪಿ ನಾವಿಕರಿಗೆ ಅನುಮತಿ ನೀಡಿತ್ತು.
2012ರ ಫೆಬ್ರವರಿಯಲ್ಲಿ ಕೇರಳದ ಕರಾವಳಿ ಪ್ರದೇಶದಲ್ಲಿ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರೆಂದು ಶಂಕಿಸಿ ಹತ್ಯೆಗೈದ ಆರೋಪದಲ್ಲಿ ಇಟಲಿಯ ಹಡಗೊಂದರ ನಾವಿಕರಾದ ಮ್ಯಾಸಿಮಿಲಿಯಾನೊ ಹಾಗೂ ಸಲ್ವಾದೊರ್ ಗಿರೊನ್  ಭಾರತದಲ್ಲಿ ವಿಚಾರಣೆಯನ್ನೆದುರಿಸುತ್ತಿದ್ದಾರೆ. 
 
ಬಿಕ್ಕಟ್ಟು ಉಲ್ಬಣ
ಹೊಸದಿಲ್ಲಿ, ಮಾ.14: 1961ರ ರಾಜತಾಂತ್ರಿಕ ಸಂಬಂಧಗಳ ಕುರಿತ  ವಿಯೆನ್ನಾ ಒಡಂಬಡಿಕೆಯ ಪ್ರಕಾರ ಯಾವುದೇ ದೇಶದ ರಾಯಭಾರಿಯನ್ನು ಇನ್ನೊಂದು  ದೇಶದಲ್ಲಿ ಕಾನೂನುಕ್ರಮಕ್ಕೆ ಒಳಪಡಿಸಲು ಸಾಧ್ಯವಿಲ್ಲದಿರುವುದರಿಂದ ಭಾರತದಿಂದ ಹೊರಹೋಗದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ನಿರ್ಲಕ್ಷಿಸುವ ಅಧಿಕಾರವನ್ನು ಭಾರತದಲ್ಲಿನ ಇಟಲಿಯ ರಾಯಭಾರಿ ಮ್ಯಾನ್ಸಿನಿ  ಹೊಂದಿದ್ದಾರೆ. ಆದರೆ ಮ್ಯಾನ್ಸಿನಿ ಸ್ವಯಂಪ್ರೇರಿತವಾಗಿ ಸುಪ್ರೀಂಕೋರ್ಟ್‌ನ ಅಧಿಕಾರವ್ಯಾಪ್ತಿಗೆ ತನ್ನನ್ನು ಒಳಪಡಿಸಿಕೊಂಡು ಆರೋಪಿಗಳು ಮತ್ತೆ ಭಾರತಕ್ಕೆ ವಾಪಸಾಗುವ ವಾಗ್ದಾನ ನೀಡಿದ್ದರು.ಹೀಗಾಗಿ ಅವರಿಗೆ ರಾಜತಾಂತ್ರಿಕನೆಂಬ ನೆಲೆಯಲ್ಲಿ ಯಾವುದೇ ರಿಯಾಯಿತಿ ದೊರೆಯಲು ಸಾಧ್ಯವಿಲ್ಲವೆಂದು ಕೆಲವು ನ್ಯಾಯವಾದಿಗಳು ವಾದಿಸಿದ್ದಾರೆ.

No comments:

Post a Comment