Tuesday, March 5, 2013

ನಿಜಕ್ಕೂ ಆತ್ಮಹತ್ಯೆ ಯತ್ನ ಯಾರದ್ದು?ವಿವಾದಾತ್ಮಕ ಸೇನಾಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕಳೆದ 12 ವರ್ಷಗಳಿಂದ ಉಪವಾಸ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ಇರೋಮ್ ಶರ್ಮಿಳಾರ ವಿರುದ್ಧ ದಿಲ್ಲಿಯ ನ್ಯಾಯಾಲಯವೊಂದು ಆತ್ಮಹತ್ಯೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದೆ ಮಾತ್ರವಲ್ಲ, ಆಕೆಗೆ ನೋಟೀಸನ್ನೂ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ತನ್ನ ಹೃದಯವಿದ್ರಾವಕ ಸ್ಥಿತಿಯಲ್ಲೇ ಇರೋಮ್ ಶರ್ಮಿಳಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯ ಹಾಗೂ ಮಾಧ್ಯಮಗಳ ಮುಂದೆ ಆಕೆ ‘‘ನಾನು ಜೀವನವನ್ನು ಪ್ರೀತಿಸುತ್ತೇನೆ. ನಾನೆಂದೂ ನನ್ನ ಜೀವವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಬದುಕುವ ಹಕ್ಕನ್ನು ಕೊಡಿ ಎಂದು ನಾನು ಸತ್ಯಾಗ್ರಹಕ್ಕಿಳಿದಿದ್ದೇನೆ’’ ಎಂದು ಹೇಳಿಕೆ ನೀಡಿದ್ದಳು. ದೇಶಕ್ಕೆ ಕಿವಿಯೆನ್ನುವುದು ಇದ್ದರೆ ಇದನ್ನು ಆಲಿಸಿ, ಆಕೆಯ ಮಾತ್ರವಲ್ಲ, ಆಕೆಯಂತಹ ಲಕ್ಷಾಂತರ ಜನರ ಸಂವಿಧಾನ ಬದ್ಧ ಬದುಕುವ ಹಕ್ಕನ್ನು ಮರಳಿಸಬೇಕಾಗಿದೆ.
ಇರೋಮ್ ಶರ್ಮಿಳಾರ ಅಹಿಂಸಾತ್ಮಕ ಉಪವಾಸ ಸತ್ಯಾಗ್ರಹವನ್ನು ಆತ್ಮಹತ್ಯೆ ಯತ್ನ ಎಂದು ಕರೆಯುವ ಮೂಲಕ ಪರೋಕ್ಷವಾಗಿ ಗಾಂಧೀಜಿಯವರ ಉಪವಾಸ ಸತ್ಯಾಗ್ರಹವನ್ನು ಸರಕಾರ ಅವಮಾನಿಸಿದೆ. ಬ್ರಿಟಿಷರ ವಿರುದ್ಧ ಗಾಂಧೀಜಿ ಮಾಡಿದ್ದ ಹಲವು ಉಪವಾಸ ಸತ್ಯಾಗ್ರಹಗಳೆಲ್ಲವೂ ಗಾಂಧೀಜಿಯವರ ಆತ್ಮಹತ್ಯೆಯ ಪ್ರಯತ್ನವಾಗಿತ್ತು ಎಂದು ನ್ಯಾಯಾಲಯ ಭಾವಿಸುತ್ತಿದೆಯೇ? ಉಪವಾಸ ಸತ್ಯಾಗ್ರಹ ಈ ದೇಶಕ್ಕೆ ಗಾಂಧೀಜಿ ಕೊಟ್ಟ ಪ್ರತಿಭಟನೆಯ ಅಸ್ತ್ರ. ಇಂದು ಎಲ್ಲ ರೀತಿಯ ಪ್ರತಿಭಟನೆಗಳನ್ನೂ ಸರಕಾರ ದಮನಿಸುತ್ತಿದೆ. ಹಿಂಸೆಯ ರೂಪದ ಪ್ರತಿಭಟನೆಯಿರಲಿ, ಅಹಿಂಸೆಯ ರೂಪದ ಪ್ರತಿಭಟನೆಯಿರಲಿ.
ಸರಕಾರದ ಕಣ್ಣಿಗೆ ವ್ಯತ್ಯಾಸ ಕಾಣುತ್ತಿಲ್ಲ. ಇದರ ಭಾಗವಾಗಿಯೇ ಇರೋಮ್ ಶರ್ಮಿಳಾರ ಪ್ರತಿಭಟನೆಯನ್ನು ಆತ್ಮಹತ್ಯೆಯ ಪ್ರಯತ್ನ ಎಂದು ಕರೆದು, ಮಟ್ಟ ಹಾಕಲು ಯತ್ನಿಸುತ್ತಿದೆ. ಆದರೆ ಇರೋಮ್‌ರ ಮಾತಿನ ಪ್ರಕಾರ, ಇದು ತನ್ನ ಬದುಕುವ ಹಕ್ಕನ್ನು ಪಡೆದುಕೊಳ್ಳುವುದಕ್ಕಾಗಿ ಮಾಡುತ್ತಿರುವ ಅಹಿಂಸಾ ಹೋರಾಟ ಎಂದಿದ್ದಾರೆ. ಮಣಿಪುರದಲ್ಲಿ ಉಗ್ರವಾದ ದಮನದ ಹೆಸರಿನಲ್ಲಿ ಸೇನೆ ನಡೆಸುತ್ತಿರುವ ಹಿಂಸೆಯನ್ನು ಕಂಡವರಿಗೆ, ಶರ್ಮಿಳಾ ಏನು ಹೇಳುತ್ತಿದ್ದಾರೆ ಎನ್ನುವುದು ಮನವರಿಕೆಯಾಗ ಬಹುದು. ಇದು ಕೇವಲ ಈಶಾನ್ಯ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಾಶ್ಮೀರದ ಹೃದಯದ ಮಾತೂ ಇದೇ ಆಗಿದೆ. ಅಫ್ಝಲ್‌ಗುರು ಗಲ್ಲಿಗೇರುವ ಮೊದಲು ಆಶಿಸಿದ್ದೂ ಇದನ್ನೇ. ‘‘ಮೊದಲು ಕಾಶ್ಮೀರದಲ್ಲಿ ಮನುಷ್ಯರು ಬದುಕುವ ವಾತಾವರಣವನ್ನು ನಿರ್ಮಿಸಿ. ಸೇನೆಯನ್ನು ಹಿಂದೆಗೆದುಕೊಂಡು ಅಲ್ಲಿನ ಜನರಿಗೆ ಬದುಕುವ ವಾತಾವರಣವನ್ನು ಕಲ್ಪಿಸಿ’’ ಎಂಬ ಆಶಯ ಅಫ್ಝಲ್‌ಗುರು ವ್ಯಕ್ತಪಡಿಸಿದ್ದ. ಮಣಿಪುರದಲ್ಲಿ ಸೇನೆ ನಡೆಸುತ್ತಿರುವ ಹಿಂಸೆ ಸರಕಾರದ ಗಮನಕ್ಕೆ ಬಾರದೆ ಇಲ್ಲ. ಅಲ್ಲಿ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ, ನಕಲಿ ಎನ್‌ಕೌಂಟರ್‌ಗಳು ಸರಕಾರಕ್ಕೂ ಮುಜುಗರ ತಂದಿವೆ. ಈ ಕಾರಣದಿಂದಲೇ, ಅಲ್ಲಿ ಕೆಲವು ಮುಖ್ಯ ಅನುಮಾನಾಸ್ಪದ ಎನ್‌ಕೌಂಟರ್‌ಗಳನ್ನು ತನಿಖೆ ನಡೆಸಲು ತಂಡವನ್ನು ನೇಮಿಸಿದೆ. ಸರಕಾರದ ಈ ನಿರ್ಧಾರವೇ ಇರೋಮ್ ಶರ್ಮಿಳಾರ ಮಾತುಗಳಿಗೆ ಪುಷ್ಟಿ ನೀಡುತ್ತದೆ.
ಸರಕಾರ ಇರೋಮ್ ಶರ್ಮಿಳಾರ ಮಾತುಗಳಿಗೆ ಕಿವಿಯಾಗಲೇ ಬೇಕಾದ ದಿನಗಳಿವು. ಪ್ರಜಾಸತ್ತಾತ್ಮಕ ಅಹಿಂಸಾ ಪ್ರತಿಭಟನೆಯನ್ನು ದಮನಿಸುವುದರಿಂದ, ಉಗ್ರವಾದಕ್ಕೆ ಇನ್ನಷ್ಟು ಪ್ರೋತ್ಸಾಹವನ್ನು ನೀಡಿದಂತಾಗುತ್ತದೆ. ಅಹಿಂಸಾ ಪ್ರತಿಭಟನೆಯ ವೈಫಲ್ಯ ಪರೋಕ್ಷವಾಗಿ ಹಿಂಸಾ ಹೋರಾಟಕ್ಕೆ ಸಮರ್ಥನೆಯಾಗುತ್ತದೆ. ಆದುದರಿಂದ, ಶರ್ಮಿಳಾರ ಉಪವಾಸವನ್ನು ಸರಕಾರ ಗೌರವಿಸಬೇಕಾಗಿದೆ. ಅದಕ್ಕೆ ತಲೆಬಾಗಿ ತಕ್ಷಣ ಮಣಿಪುರ ಮಾತ್ರವಲ್ಲ, ಕಾಶ್ಮೀರದಿಂದಲೂ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ಈ ಮೂಲಕ ಒಂದು ಅಹಿಂಸಾ ಹೋರಾಟವನ್ನು ಗೌರವಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಅಹಿಂಸಾ ಹೋರಾಟಗಳು ಹೆಚ್ಚಬೇಕು. ಮಣಿಪುರದಂತಹ ನಾಡಿನಲ್ಲಿ ಅಭಿವೃದ್ಧಿ ಮತ್ತು ನ್ಯಾಯವಷ್ಟೇ ಉಗ್ರವಾದವನ್ನು ತಡೆದಾವು. ಹಿಂಸೆಯಿಂದ ಅಲ್ಲಿ ಶಾಂತಿಯನ್ನು ಸ್ಥಾಪಿಸುವುದು ಸಾಧ್ಯವಿಲ್ಲ.
ಇರೋಮ್ ಶರ್ಮಿಳಾರ ಹೋರಾಟ ವನ್ನು ಆತ್ಮಹತ್ಯೆ ಯತ್ನವೆಂದು ಕರೆದು, ಆಕೆಯ ಬೇಡಿಕೆಯನ್ನು ತಳ್ಳಿ ಹಾಕಿದರೆ, ಪರೋಕ್ಷವಾಗಿ ದೇಶವೇ ಆತ್ಮಹತ್ಯೆಗೆ ಯತ್ನಿಸಿದಂತಾದೀತು. ಇಂದು ಈಶಾನ್ಯ ಭಾರತದಲ್ಲಿ ಸೇನೆ ಮಾಡುತ್ತಿರುವ ಅನಾ ಹುತ ಪರೋಕ್ಷವಾಗಿ ದೇಶದ ಆತ್ಮಹತ್ಯಾ ಯತ್ನವೇ ಆಗಿದೆ. ಈ ಮೂಲಕ ಸ್ಥಳೀಯರ ಬೆಂಬಲವನ್ನು ಸರಕಾರ ಕಳೆದುಕೊಳ್ಳುತ್ತಿದೆ. ಸರಕಾರ ಅಲ್ಲಿನ ಜನರಿಗೆ ಅನ್ಯವಾಗುತ್ತಿದೆ. ಸೇನೆಯನ್ನು ಅಲ್ಲಿನ ಜನರು ತಮ್ಮ ಶತ್ರುಗಳೆಂದು ಭಾವಿಸುತ್ತಿದ್ದಾರೆ. ಈ ಮೂಲಕ ಅಲ್ಲಿನ ಹಿಡಿತವನ್ನು, ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ಅಲ್ಲಿನ ಜನರ ನಂಬಿಕೆಯನ್ನು ಕಳೆದುಕೊಂಡ ಮೇಲೆ ಉಳಿಯುವುದಾದರೂ ಏನು? ಆದ್ದರಿಂದ ಶರ್ಮಿಳಾಗೆ ಬದುಕುವ ಹಕ್ಕನ್ನು ನೀಡುವ ಮೂಲಕ, ಮಣಿಪುರದ ಜನರನ್ನು ನಮ್ಮವರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಪರಸ್ಪರ ನಂಬಿಕೆಯಿಂದಷ್ಟೇ ಸುಭದ್ರ ದೇಶವನ್ನು ಕಟ್ಟಲು ಸಾಧ್ಯ. ಸೇನೆಯ ಕೋವಿಯ ತುದಿಯಿಂದ ಶಾಂತಿಯುತ ನಾಡನ್ನು ಕಟ್ಟಲು ಸಾಧ್ಯವಿಲ್ಲ. ಇದನ್ನು ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಾಗಿ

No comments:

Post a Comment