Thursday, March 7, 2013

ಚಾವೆಝ್ ವಿದಾಯ;ಸಮಾನತೆಯ ಕನಸುಗಳ ನಾಯಕ ಇನ್ನಿಲ್ಲ


ಚಾವೆಝ್ ವಿದಾಯ;ಸಮಾನತೆಯ ಕನಸುಗಳ ನಾಯಕ ಇನ್ನಿಲ್ಲ

ಕ್ಯಾರಕಸ್, ಮಾ.6: ಕ್ಯಾನ್ಸರ್ ವಿರುದ್ಧ ತನ್ನ ಎರಡು ವರ್ಷಗಳ ಹೋರಾಟವನ್ನು ವೆನೆಝುವೆಲದ ಅಧ್ಯಕ್ಷ ಹ್ಯೂಗೊ ಚಾವೆಝ್ ನಿಲ್ಲಿಸಿದ್ದಾರೆ. ಅಮೆರಿಕಕ್ಕೆ ಸಡ್ಡು ಹೊಡೆದು ದಕ್ಷಿಣ ಅಮೆರಿಕದ ದೇಶವನ್ನು 14 ವರ್ಷಗಳ ಕಾಲ ಆಳಿದ ಸಮಾಜವಾದಿ ನಾಯಕ ಇನ್ನಿಲ್ಲ.
ಈ ವಿಷಯವನ್ನು ದೇಶದ ಉಪಾಧ್ಯಕ್ಷ ನಿಕೊಲಸ್ ಮಡುರೊ ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಟೆಲಿವಿಶನ್ ಭಾಷಣದಲ್ಲಿ ಪ್ರಕಟಿಸಿದರು.

‘‘ನಮ್ಮ ತಾಯ್ನೆಲಕ್ಕೆ ಬರಸಿಡಿಲಿನಂತೆ ಬಂದಪ್ಪಳಿಸಿದ ಈ ಆಘಾತದ ಸಂದರ್ಭದಲ್ಲಿ ನಾವು ಎದೆಗುಂದಬಾರದು. ಶಾಂತಿ, ಪ್ರೀತಿ, ಗೌರವ ಮತ್ತು ನೆಮ್ಮದಿಯ ಕೊರತೆ ಉಂಟಾಗದಂತೆ ನಾವು ಇರಬೇಕಾಗಿದೆ ಎಂದು ನಾನು ನನ್ನ ದೇಶವಾಸಿಗಳಿಗೆ ಕರೆ ನೀಡುತ್ತೇನೆ’’ ಎಂದು ಮಡುರೊ ಹೇಳಿದರು. ‘‘ನಮ್ಮ ಜನರೊಂದಿಗಿದ್ದು ಅವರನ್ನು ರಕ್ಷಿಸಲು ಹಾಗೂ ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳು ಮತ್ತು ಪೊಲೀಸರನ್ನು ಸರಕಾರ ನಿಯೋಜಿಸಿದೆ’’ ಎಂದು ಅವರು ತಿಳಿಸಿದರು.
ಮಧ್ಯಾಂತರ ಅಧ್ಯಕ್ಷ: ಚಾವೆಝ್‌ರ ಆಯ್ಕೆಯ ಉತ್ತರಾಧಿಕಾರಿ ಮಡುರೊ ಮುಂದಿನ ಚುನಾವಣೆ ನಡೆಯುವವರೆಗೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಲಿಯಾಸ್ ಜಾವ ಹೇಳಿದರು. ‘‘ಕಮಾಂಡೆಂಟ್ ಅಧ್ಯಕ್ಷ ಹ್ಯೂಗೊ ಚಾವೆಝ್ ನಮಗೆ ನೀಡಿದ ಆದೇಶ ಇದು’’ ಎಂದು ಅವರು ಘೋಷಿಸಿದರು.


                                ಹೋರಾಟದ ಬದುಕು 
ತನ್ನ ಆಳ್ವಿಕೆಯ 14 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಚಾವೆಝ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ‘ಯಥಾಸ್ಥಿತಿ’ಯನ್ನು ವಿರೋಧಿಸುತ್ತಾ ಬಂದರು.
ಅವರ ಸಂಘರ್ಷಕಾರಿ ಹಾಗೂ ಆಕ್ರಮಣಕಾರಿ ನಿಲುವಿನಿಂದಾಗಿ ವೆನಜುವೆಲಾ ಹಲವು ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತಾದರೂ, ತನ್ನ ಸಾರ್ವಭೌಮತೆಯನ್ನು ಕೊನೆಯವರೆಗೂ ಉಳಿಸಿಕೊಂಡಿತು. ಚಾವೆಝ್ ಉತ್ತಮ ಸಂವಹನಕಾರ ಹಾಗೂ ತಂತ್ರಗಾರನಾಗಿದ್ದರು. ಹಾಗಾಗಿ, ವೆನೆಝುವೆಲದ ರಾಷ್ಟ್ರೀಯತೆಯ ವಿಚಾರವನ್ನು ಮುಂದೊತ್ತಿ ವ್ಯಾಪಕ ಬೆಂಬಲ ಅದರಲ್ಲೂ ಮುಖ್ಯವಾಗಿ ಬಡವರ ಬೆಂಬಲವನ್ನು ಗಳಿಸುವಲ್ಲಿ ಅವರು ಯಶಸ್ವಿಯಾಗಿದ್ದರು.
ಸೇನಾ ಪ್ಯಾರಾಟ್ರೂಪ್ ಕಮಾಂಡರ್ ಆಗಿದ್ದ ಚಾವೆಝ್, 1992ರಲ್ಲಿ ಕ್ಷಿಪ್ರಕ್ರಾಂತಿ ನಡೆಸಲು ಹೋಗಿ ವಿಫಲರಾದರು. ಬಳಿಕ ಅವರಿಗೆ ಕ್ಷಮಾದಾನ ನೀಡಲಾಯಿತು. 1998ರಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. 2002ರಲ್ಲಿ ತನ್ನ ವಿರುದ್ಧ ನಡೆದ ಕ್ಷಿಪ್ರಕ್ರಾಂತಿಯಿಂದ ಅವರು ಬಚಾವಾದರು. ಬಳಿಕ ಅವರು ಎರಡು ಬಾರಿ ಅಧ್ಯಕ್ಷರಾಗಿ ಮರು ಆಯ್ಕೆಯಾದರು.
ದೇಶದ ಅಗಾಧ ತೈಲ ಸಂಪತ್ತನ್ನು ಚಾವೆಝ್ ಸರಕಾರಿ ಸ್ವಾಮ್ಯದ ಆಹಾರ ಮಾರುಕಟ್ಟೆಗಳ ಸ್ಥಾಪನೆ, ಸಾರ್ವಜನಿಕ ಮನೆ ನಿರ್ಮಾಣ, ಉಚಿತ ಆರೋಗ್ಯ ತಪಾಸಣೆ ಮತ್ತು ಶಿಕ್ಷಣ ಕಾರ್ಯಕ್ರಮಗಳಿಗಾಗಿ ಬಳಸಿಕೊಂಡರು.
ಅವರ ಅವಧಿಯಲ್ಲಿ ಬಡತನ ಕಡಿಮೆಯಾಯಿತು. ಅವರು ಈ ವಲಯದಲ್ಲಿ ಅಮೆರಿಕದ ಪ್ರಧಾನ ವಿರೋಧಿಯಾಗಿದ್ದರು.
ಸೆಂಬ್ಲಿಯ ಸ್ಪೀಕರ್ ಮಧ್ಯಾಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಬೇಕು ಎಂಬುದಾಗಿ ವೆನೆಝುವೆಲದ ಸಂವಿಧಾನ ಹೇಳುತ್ತದೆ.
ಸೇನಾ ಕಮಾಂಡರ್‌ಗಳು ಕ್ಷಿಪ್ರವಾಗಿ ಮಡುರೊಗೆ ನಿಷ್ಠೆ ಘೋಷಿಸಿದ್ದಾರೆ.
ಸಶಸ್ತ್ರ ಪಡೆಗಳು ಸಂವಿಧಾನವನ್ನು ಪಾಲಿಸುವವು ಹಾಗೂ ಚಾವೆಝ್‌ರ ಇಚ್ಛೆಯನ್ನು ಗೌರವಿಸುವವು ಎಂದು ರಕ್ಷಣಾ ಸಚಿವ ಡೀಗೊ ಮೊಲೆರೊ ಹೇಳಿದರು. 30 ದಿನಗಳಲ್ಲಿ ಚುನಾವಣೆ ಏರ್ಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ದೇಹ ಸೇನಾ ಅಕಾಡಮಿಗೆ
ಚಾವೆಝ್‌ರ ಮೃತ ದೇಹವನ್ನು ಸೇನಾ ಅಕಾಡಮಿಯೊಂದಕ್ಕೆ ತರಲಾಗುವುದು. ವಿದೇಶಿ ನಾಯಕರು ಶುಕ್ರವಾರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಅಲ್ಲಿಯವರೆಗೆ ದೇಹವನ್ನು ಅಕಾಡಮಿಯಲ್ಲಿ ಸರಕಾರಿ ಗೌರವದೊಂದಿಗೆ ಇಡಲಾಗುವುದು. ಏಳು ದಿನಗಳ ಶೋಕಾಚರಣೆಯನ್ನು ಸರಕಾರ ಘೋಷಿಸಿದೆ.
‘‘ಇದು ಭಿನ್ನಾಭಿಪ್ರಾಯಗಳಿಗೆ ಸಮಯವಲ್ಲ. ಇದು ಒಗ್ಗಟ್ಟು ಮತ್ತು ಶಾಂತಿ ಕಾಪಾಡುವ ಸಮಯ’’ ಎಂದು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಚಾವೆಝ್ ವಿರುದ್ಧ ಪರಾಭವ ಅನುಭವಿಸಿದ ಪ್ರತಿಪಕ್ಷ ನಾಯಕ ಹೆನ್ರಿಕ್ ಕ್ಯಾಪ್ರಿಲ್ಸ್ ಹೇಳಿದರು.
‘‘ನಾನು ಮತ್ತು ಚಾವೆಝ್ ಪ್ರತಿಸ್ಪರ್ಧಿಗಳು ಹೌದು, ಆದರೆ ಶತ್ರುಗಳಲ್ಲ’’ ಎಂದವರು ನುಡಿದರು.
                             ಜಾಗತಿಕ ಸಂತಾಪ
ಚಾವೆಝ್‌ರ ಸಾವು ವೆನೆಝುವೆಲಕ್ಕೆ ‘‘ಸವಾಲಿನ ಸಮಯ’’ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬಣ್ಣಿಸಿದ್ದಾರೆ.
‘‘ವೆನೆಝುವೆಲದ ಜನತೆಗೆ ತಾನು ನೀಡುವ ಬೆಂಬಲ ಮತ್ತು ವೆನೆಝುವೆಲ ಸರಕಾರದೊಂದಿಗೆ ರಚನಾತ್ಮಕ ಬಾಂಧವ್ಯವನ್ನು ಬೆಸೆಯುವಲ್ಲಿ ತನಗಿರುವ ಆಸಕ್ತಿಯನ್ನು ಅಮೆರಿಕ ಮರು ದೃಢೀಕರಿಸುತ್ತದೆ’’ ಎಂದವರು ತಿಳಿಸಿದರು.
ವೆನೆಝುವೆಲ ತನ್ನ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಆರಂಭಿಸುವ ಈ ಹಂತದಲ್ಲಿ, ಪ್ರಜಾಸತ್ತಾತ್ಮಕ ತತ್ವಗಳು, ಕಾನೂನಿನ ಆಡಳಿತ ಮತ್ತು ಮಾನವಹಕ್ಕುಗಳನ್ನು ಗೌರವಿಸುವ ನೀತಿಗಳಿಗೆ ಅಮೆರಿಕ ಬದ್ಧವಾಗಿರುತ್ತದೆ’’ ಎಂದು ಒಬಾಮ ನುಡಿದರು.
ವೆನೆಝುವೆಲದ ಅಧ್ಯಕ್ಷರ ಕುಟುಂಬ ಮತ್ತು ದೇಶದ ಜನತೆಗೆ ಸಂತಾಪ ಸೂಚಿಸುತ್ತಿದ್ದೇನೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ.
ಚಾವೆಝ್‌ರ ಸಾವು ‘‘ದುರಂತ’’ವಾಗಿದೆ ಎಂದು ವಿಶ್ವಸಂಸ್ಥೆಗೆ ರಶ್ಯದ ರಾಯಭಾರಿ ವಿಟಲಿ ಚರ್ಕಿನ್ ವ್ಯಾಖ್ಯಾನಿಸಿದ್ದಾರೆ.
ಈ ನಡುವೆ, ‘‘ಚಾವೆಝ್ ಇಂದು ಹಿಂದೆಂದಿಗಿಂತಲೂ ಹೆಚ್ಚು ಜೀವಂತವಾಗಿದ್ದಾರೆ’’ ಎಂದು ಲ್ಯಾಟಿನ್ ಅಮೆರಿಕದಲ್ಲಿ ಚಾವೆಝ್‌ರ ಅತ್ಯಾಪ್ತ ಮಿತ್ರರ ಪೈಕಿ ಒಬ್ಬರಾಗಿರುವ ಬೊಲಿವಿಯದ ಅಧ್ಯಕ್ಷ ಎವೊ ಮೊರೇಲ್ಸ್ ಕಣ್ಣೀರು ತುಂಬಿಕೊಂಡು ಹೇಳಿದರು.
ಚಾವೆಝ್‌ರ ಅಂತ್ಯ ಸಂಸ್ಕಾರಕ್ಕೆ ಕೋಟ್ಯಂತರ ಜನರು ಬರುವ ನಿರೀಕ್ಷೆಯಿದೆ.
ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಚಾವೆಝ್ ಆರು ವರ್ಷಗಳ ಅವಧಿಗೆ ದೇಶದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದರು. ಅವರ ನಿಧನ ಕೋಟ್ಯಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ.

ವೆನೆಝುವೆಲದ ಅಧ್ಯಕ್ಷ ಹ್ಯೂಗೊ ಚಾವೆಝ್‌ರ ನಿಧನ ವಾರ್ತೆಯನ್ನು ಕೇಳಿ ಮಂಗಳವಾರ ಕ್ಯಾರಕಸ್‌ನಲ್ಲಿ ಕಣ್ಣೀರಿಡುತ್ತಿರುವ ಬೆಂಬಲಿಗರು.

No comments:

Post a Comment