Friday, March 8, 2013

ಪ್ರತಿವಾದಿಪ್ರತಿವಾದಿ

ಬಿ. ಎಂ. ಬಶೀರ್

ಪ್ರಾಥಮಿಕ ಶಾಲೆಯ ಬಾಗಿಲು ತೆರೆದುಕೊಳ್ಳುವುದೆಂದರೆ, ಮಕ್ಕಳಿಗೆ ಹೊರಗಿನ ಸಮಾಜದ ಮೊದಲ ಬಾಗಿಲು ತೆರೆದುಕೊಂಡಂತೆ. ಅದೊಂದು ಅದ್ಭುತವಾದ, ಸುಂದರವಾದ, ವಿಸ್ಮಯವಾದ ಲೋಕ. ಈವರೆಗೆ ಮನೆಯೊಳಗೆ ಇಲ್ಲದ ಹೊಸ ಭಾಷೆ, ಹೊಸ ಸಂಸ್ಕೃತಿ, ವೈವಿಧ್ಯಮಯ ವಾತಾವರಣವನ್ನು ನಾವು ಮೊದಲು ಕಂಡುಕೊಳ್ಳುವುದೇ ಶಾಲೆಯ ಮೆಟ್ಟಿಲು ತುಳಿದಾಗ. ಬಹುಶಃ ಮನುಷ್ಯ ಸಮಾಜಕ್ಕೆ ತೆರೆದುಕೊಳ್ಳುವುದು ಈ ಶಾಲೆಯ ಮೂಲಕವೇ. ಆವರೆಗೆ ನನಗೆ ಗೊತ್ತಿದ್ದುದು ಮನೆಭಾಷೆ ಮಾತ್ರ. ಶಾಲೆಯೊಳಗೆ ತುಳು ಭಾಷೆ, ಹವ್ಯಕ, ಕನ್ನಡ ಹೀಗೆ....ವೈವಿಧ್ಯಮಯ ಭಾಷೆಯ ಪರಿಚಯವಾಗುತ್ತದೆ. ನಮ್ಮ ಬಡತನ, ನಮ್ಮ ಶ್ರೀಮಂತಿಕೆ ತೆರೆದುಕೊಳ್ಳುವುದೂ ಇಲ್ಲಿಯೇ. ಕುಂಕುಮವಿಟ್ಟವರು, ಟೋಪಿ ಧರಿಸಿದವರು, ತಲೆವಸ್ತ್ರ ಸುತ್ತಿಕೊಂಡವರು, ಬಳೆತೊಟ್ಟವರು...ಹೀಗೆ ವಿವಿಧ ಮಕ್ಕಳನ್ನು ನಾವು ಯಾವ ಭೇದವೂ ಇಲ್ಲದೆ, ಯಾವ ಅಡ್ಡಿ ಆತಂಕಗಳೂ ಇಲ್ಲದೆ ಸ್ವೀಕರಿಸುವುದೂ ಇಲ್ಲಿಯೆ. ಒಟ್ಟಿಗೆ ಆಡುತ್ತಾ, ಜಗಳ ಮಾಡುತ್ತಾ, ಓದುತ್ತಾ, ಪರಸ್ಪರ ನೆರವಾಗುತ್ತಾ, ಠೂ ಬಿಡುತ್ತಾ ನಾವು ನಮಗೆ ತಿಳಿಯದ ಹಾಗೆಯೇ ಎಲ್ಲರಲ್ಲೂ ಒಂದಾಗಿ ಬಿಡುತ್ತೇವೆ. ಭಾರತದ ಆದರ್ಶ ಬೇರು ಬಿಟ್ಟು ನಿಲ್ಲುವುದು ಈ ಹಂತದಲ್ಲಿಯೇ. ಯಾವುದೂ ನಮಗೆ ಅನ್ಯವಲ್ಲ. ಎಲ್ಲವನ್ನೂ ಸ್ವೀಕರಿಸುತ್ತಾ ಹೋಗುವ ಮನಸ್ಥಿತಿಯನ್ನು ಹೊಂದಿರುತ್ತೇವೆ ಈ ಹಂತದಲ್ಲಿ. ಶಾಲೆಯಲ್ಲಿ ಹೀಗೆ ಒಂದಾಗಿ ಬೆಳೆಯುತ್ತಾ ಬೆಳೆಯುತ್ತಾ ಸಮಾಜದ ನಾಗರಿಕ ಎಂದು ಕರೆಸಿಕೊಳ್ಳುವ ಹೊತ್ತಿನಲ್ಲಿ ನಮಗೆ ಅಪರಿಚಿತವಾದುದು ಯಾವುದೂ ಇರುವುದಿಲ್ಲ. ಎಲ್ಲರನ್ನೂ ನಮ್ಮವರು ಎಂದು ಸ್ವೀಕರಿಸುವ ಮನಸ್ಥಿತಿಯನ್ನು ತಲುಪಿ ಬಿಟ್ಟಿರುತ್ತೇವೆ.
ನಾನು ಶಾಲೆ ಕಲಿತದ್ದು, ಬೆಳೆದದ್ದು ಇಂತಹ ವಾತಾವರಣದಲ್ಲಿ. ಇಂದು ವೈವಿಧ್ಯಮಯ ಸಂಸ್ಕೃತಿ, ಆಚರಣೆಗಳುಳ್ಳ ಈ ಸಮಾಜವನ್ನು ನನಗೆ ಮುಕ್ತವಾಗಿ, ಹಾರ್ದಿಕವಾಗಿ ಸ್ವೀಕರಿಸಲು ಸಾಧ್ಯವಾದುದೂ ಇದೇ ಕಾರಣಕ್ಕೆ.

ಮೊನ್ನೆ ನನ್ನ ಸಂಬಂಧಿ ಹುಡುಗನೊಬ್ಬನಲ್ಲಿ ಕೇಳಿದೆ ‘‘ನಿಮ್ಮ ಶಾಲೆಯಲ್ಲಿ ಒಟ್ಟು ಎಷ್ಟು ಮಕ್ಕಳಿದ್ದಾರೆ?’’. ಆತ ಹೇಳಿದ. ಮುಂದೆ ವಿಚಾರಿಸಿದಾಗ ನನಗೆ ತಿಳಿದದ್ದೇನೆಂದರೆ, ಆ ಶಾಲೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮೇತರ ವಿದ್ಯಾರ್ಥಿಯಿಲ್ಲ. ಅದೊಂದು ಮುಸ್ಲಿಮ್ ಶಾಲೆ. ಮುಸ್ಲಿಮ್ ಧಾರ್ಮಿಕ ಹಿನ್ನೆಲೆಯೂ ಅದಕ್ಕಿದೆ. ಇಂಗ್ಲಿಷ್ ಮಾಧ್ಯಮವನ್ನು ಹೊಂದಿರುವ ಆ ಶಾಲೆಯಲ್ಲಿ ಹುಡುಗನಿಗೆ ಎಲ್ಲವನ್ನು ಚೆನ್ನಾಗಿಯೇ ಕಲಿಸಲಾಗುತ್ತದೆ. ಎಲ್‌ಕೆಜಿ ಯಿಂದ ಅವನು ಅಲ್ಲೇ ಓದುತ್ತಿದ್ದಾನೆ. ಸುಮಾರು ಹತ್ತನೆ ತರಗತಿಯವರೆಗೂ ಅವನು ಅಲ್ಲೇ ಓದುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಶಾಲೆಯೆಂದರೆ ಒಂದು ರೀತಿಯ ದಿಗ್ಬಂಧನ. ಮನೆಯಿಂದ ನೆರವಾಗಿ ಶಾಲೆಗೆ ಹೋದರೆ, ಶಾಲೆಯಿಂದ ಮರಳಿ ಮನೆಗೆ. ಮನೆಯಲ್ಲಿ ಹೋಮ್‌ವರ್ಕ್ ಗದ್ದಲ. ಮತ್ತೆ ಮರುದಿನ ಎದ್ದು ಶಾಲೆಗೆ. ಹೊರ ಸಮಾಜದ ಯಾವ ಸಂಪರ್ಕವೂ ವಿದ್ಯಾರ್ಥಿಗಳಿಗಿಲ್ಲ. ಶಾಲೆಯೇ ಅವರ ಸಮಾಜ. ಅವರ ವಿಶ್ವ. ಆದರೆ ದುರದೃಷ್ಟವಶಾತ್ ಈ ವಿಶ್ವದಲ್ಲಿ ಆತನಿಗೆ ಬೇರೆ ಬೇರೆ ಧರ್ಮ, ಆಚರಣೆ, ಸಂಸ್ಕೃತಿ ಇರುವುದರ ಪರಿಚಯವೇ ಇಲ್ಲ. ಒಂದು ವೇಳೆ ಅವರಿಗೆ ಅದರ ಕುರಿತಂತೆ ಅರಿವಿದ್ದರೂ ಅದು ಅನ್ಯ ವಾದುದು. ನಾಳೆ ಈ ಶಾಲೆಯ ಜಗತ್ತಿನಿಂದ ಸಮಾಜಕ್ಕೆ ಕಾಲಿಟ್ಟಾಗ ಅವನಿಗೆ ಎಲ್ಲವೂ ಅನ್ಯವಾಗಿ ಬಿಡುವುದರಲ್ಲಿ ಸಂಶಯವಿಲ್ಲ. ಸಮಾಜಕ್ಕೆ ಕಾಲಿಟ್ಟಾಗ ಕಣ್ಣಿಗೆ ಕಟ್ಟಿದ ಪಟ್ಟಿ ಬಿಚ್ಚಿದಂತೆ, ಹುಡುಗ ಗೊಂದಲಗೊಳ್ಳುತ್ತಾನೆ. ಅಪರಿಚಿತ ಜಗತ್ತನ್ನು ನೋಡುವಂತೆ ಎಲ್ಲವನ್ನು ನೋಡುತ್ತಾನೆ. ಆದರೆ ಅವು ಅವನದಾಗಿರುವುದಿಲ್ಲ.
ಕರಾವಳಿಯಲ್ಲಿ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ಟರ ನೇತೃತ್ವದ ಶಾಲೆಗಳಿವೆ. ಸಾಧಾರಣವಾಗಿ ಈ ಶಾಲೆಗಳಿಗೆ ಮುಸ್ಲಿಮರು, ಕ್ರಿಶ್ಚಿಯನ್ನರು, ಬಹುತೇಕ ದಲಿತರು ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ. ಪ್ರಭಾಕರ ಭಟ್ಟರ ಶಾಲೆಯೆಂದ ಮೇಲೆ ಅಲ್ಲಿ ವರ್ಷವಿಡೀ ಏನನ್ನು ಕಲಿಸಬಹುದು ಎನ್ನುವುದನ್ನು ಸುಲಭ ವಾಗಿ ಊಹಿಸಬಹುದು. ವರ್ಷಕ್ಕೊಮ್ಮೆ ಈ ಶಾಲೆಗಳ ಉತ್ಸವ ನಡೆಯುತ್ತದೆ. ಆಗ ಈ ಶಾಲೆಯಲ್ಲಿ ನಡೆಯುವ ಮಲ್ಲಕಂಬ, ಕುಸ್ತಿಗಳು ಪತ್ರಿಕೆಗಳಲ್ಲಿ ಆಹಾ ಓಹೋ ಎಂದು ಸುದ್ದಿಯಾಗುತ್ತವೆ. ಆದರೆ ಈ ಶಾಲೆಯಲ್ಲಿ ತನ್ನ ಬದುಕನ್ನು ಕಳೆದ ವಿದ್ಯಾರ್ಥಿ, ಸಮಾಜಕ್ಕೆ ಕಾಲಿಡುವಾಗ ಆತ ಉಳಿದ ಸಮುದಾಯ ವನ್ನು ನೋಡುವ ಬಗೆ ಹೇಗಿರಬಹುದು? ಎನ್ನುವುದನ್ನು ಕಲ್ಪಿಸಿದರೆ ಮೈ ಜುಮ್ಮೆನ್ನುತ್ತದೆ. ಸಂಸ್ಕೃತಿ, ಧರ್ಮದ ಹೆಸರಿನಲ್ಲಿ ವೈದಿಕತೆಯನ್ನು, ಕೋಮುದ್ವೇಷವನ್ನು ಬಿತ್ತಿ, ಅದಕ್ಕೆ ಗೊಬ್ಬರ ಸುರಿಯುವ ಈ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಜಗತ್ತು ತೀರಾ ಸಣ್ಣದು. ಅವರನ್ನು ಹೊರ ಸಮಾಜಕ್ಕೆ ತಂದು ಕಣ್ಣು ಪಟ್ಟಿ ಬಿಚ್ಚಿದಾಗ ಎದುರಿನಲ್ಲಿರುವ ಮುಸ್ಲಿಮ್ ಹುಡುಗನ ಕುರಿತಂತೆ, ದಲಿತ ಹುಡುಗನ ಕುರಿತಂತೆ ಯಾವ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಹುದು?

ಮುಸ್ಲಿಮ್ ಸಂಘಟನೆಯೊಂದು ನಡೆಸುವ ಶಾಲೆಯಲ್ಲಿ ವಿಚಾರಿಸಿದಾಗ ‘‘ಬೇರೆ ಸಮುದಾಯದ ಮಕ್ಕಳು ನಮ್ಮ ಶಾಲೆಗೆ ಬರುತ್ತಿಲ್ಲ. ನಾವೇನು ಮಾಡುವುದು?’’ ಎಂದು ಹೇಳಿದರು. ಆ ಶಾಲೆಯ ಪಕ್ಕದಲ್ಲೇ ಇರುವ ಕುಟುಂಬದ ಒಬ್ಬ ವಿದ್ಯಾರ್ಥಿ ದೂರದ ಇನ್ನೊಂದು ಶಾಲೆಯಲ್ಲಿ ಕಲಿಯುತ್ತಿದ್ದ. ‘‘ಇಷ್ಟು ಹತ್ತಿರ ಶಾಲೆ ಇರುವಾಗ ಅಷ್ಟು ದೂರ ಯಾಕೆ ಕಳುಹಿಸುತ್ತೀರಿ?’’ ಎಂದು ಕೇಳಿದೆ. ಅವನು ಥಟ್ಟನೆ ಹೇಳಿ ಬಿಟ್ಟ ‘‘ಅದು ಮುಸ್ಲಿಮರ ಶಾಲೆಯಲ್ವ?’’ ಹಿಂದೆ ಹೀಗಿರಲಿಲ್ಲ. ನನ್ನ ಶಾಲೆಯ ಬಹುಮುಖ್ಯ ಭಾಗವನ್ನು ನಾನು ಕಲಿತದ್ದು ಕ್ರಿಶ್ಚಿಯನ್ನರ ಶಾಲೆಯಲ್ಲಿ. ಚರ್ಚ್ ಶಾಲೆ ಎಂದೇ ಅದು ಆಸುಪಾಸಿನಲ್ಲಿ ಪ್ರಸಿದ್ಧವಾಗಿತ್ತು. ಆ ಶಾಲೆಯ ಪಕ್ಕದಲ್ಲೇ ಚರ್ಚ್ ಇತ್ತು. ಹಾಗೆಯೇ ಕ್ರಿಶ್ಚಿಯನ್ ವಿದ್ಯಾರ್ಥಿಗಳ ಅನಾಥಾಶ್ರಮವಿತ್ತು. ಅವೆಲ್ಲದರ ನಡುವೆಯೇ ನಾವು ನಮ್ಮ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದೆವು. ನನಗೆ ಪ್ರಾಥಮಿಕ ಶಿಕ್ಷಣವನ್ನು ನೀಡಿದ ಹೆಚ್ಚಿನ ಶಿಕ್ಷಕಿಯರು
ಕ್ರಿಶ್ಚಿಯನ್ನರಾಗಿದ್ದರು. ಮಗ್ಗಿ ಟೀಚರ್, ಲೂಸಿ ಟೀಚರ್, ಪ್ರೆಸ್ಸಿ ಟೀಚರ್, ರೂಫಿನಾ ಟೀಚರ್....ಅವರನ್ನೆಲ್ಲ ನೆನೆವಾಗ ನನ್ನ ಎದೆಯಲ್ಲಿ ಗೌರವ, ಪ್ರೀತಿ ಉಕ್ಕಿ ಬರುತ್ತದೆ. ಆದರೆ ಇಂದು ಅದೇ ಪರಿಸ್ಥಿತಿ ನಮ್ಮ ನಡುವೆ ಇಲ್ಲ. ನಗರ ಪ್ರದೇಶದಲ್ಲಿ ವಿದ್ಯಾರ್ಥಿಗಳನ್ನು ಈಗ ಕ್ರಿಶ್ಚಿಯನ್ ಶಾಲೆಗಳಿಗೆ ಕಳುಹಿಸುವಾಗ ಹಲವು ಲೆಕ್ಕಾಚಾರಗಳು ಎದುರಾಗುತ್ತವೆ. ಮುಸ್ಲಿಮರು ಮಾತ್ರವಲ್ಲ, ಬ್ರಾಹ್ಮಣರು, ಬಿಲ್ಲವರು, ಬಂಟರು ಹೀಗೆ ಎಲ್ಲರಿಗೂ ಒಂದು ರೀತಿಯ ಅನುಮಾನ ಕಾಡುತ್ತದೆ. ಮಕ್ಕಳಿಗೆ ಬೈಬಲ್ ಬೋಧಿಸುತ್ತಾರೆ, ಕ್ರಿಶ್ಚಿಯನ್ ಆಚರಣೆಗಳನ್ನು ಕಲಿಸುತ್ತಾರೆ ಎನ್ನುವುದೇ ಅವರ ಭಯ. ಆದುದರಿಂದಲೇ, ಇಂದು ಕ್ರಿಶ್ಚಿಯನ್ ಮಕ್ಕಳು ಕ್ರಿಶ್ಚಿಯನ್ ಶಾಲೆಗಳಿಗೆ, ಬ್ರಾಹ್ಮಣ ಮಕ್ಕಳು ಶಾರದಾ ವಿದ್ಯಾಲಯದಂತಹ ಶಾಲೆಗಳಿಗೆ, ಮುಸ್ಲಿಮ್ ಮಕ್ಕಳು ಮುಸ್ಲಿಮ್ ಸಂಘಟನೆ ನಡೆಸುವ ಶಾಲೆಗಳಿಗೆ ಹೋಗುವ ವಾತಾವರಣ ಸೃಷ್ಟಿಯಾಗಿದೆ.

ಹಾಗೆಂದು ಆಯಾ ಸಮುದಾಯದವರ ಶಾಲೆಗಳಲ್ಲಿ ಅವರಿಗೆ ರಿಯಾಯಿತಿ ಸಿಗುತ್ತದೆ ಯೆನ್ನುವ ಭರವಸೆಯೇನೂ ಇಲ್ಲ. ಒಂದು ಮುಸ್ಲಿಮ್ ಸಂಘಟನೆ ನಡೆಸುವ ಎಲ್‌ಕೆಜಿ, ಯುಕೆಜಿ ಶಾಲೆಯ ಶುಲ್ಕ ನೋಡಿಯೇ ತಲೆ ಧಿಂ ಎಂದಿತು. ಅಲ್ಪಸಂಖ್ಯಾತರಿಗೆ ಶಿಕ್ಷಣ ನೀಡಲು ನಾವು ಶಾಲೆಗಳನ್ನು ತೆರೆದಿದ್ದೇವೆ ಎಂಬ ಫೋಸು ನೀಡುವ ಸಂಘಟಕರು, ಶುಲ್ಕವನ್ನು ಮಾತ್ರ ಯಾವ ರಿಯಾಯಿತಿ, ಮುಲಾಜು ಇಲ್ಲದೆ ವಸೂಲಿ ಮಾಡುತ್ತಾರೆ. ಬಡ ಮುಸ್ಲಿಮ್ ಮಕ್ಕಳಿಗೆ ಈ ಶಾಲೆಯ ಬಾಗಿಲು ತೆರೆದುಕೊಳ್ಳುವುದೇ ಇಲ್ಲ. ನಮ್ಮ ನಮ್ಮ ಸಮುದಾಯಗಳಲ್ಲಿ ಶಿಕ್ಷಣವನ್ನು ಜಾಗೃ ತಿಗೊಳಿಸಲು ಶಾಲೆಗಳನ್ನು ತೆರೆಯುತ್ತಿದ್ದೇವೆ ಎನ್ನುವ ಹುಸಿ ಮಾತುಗಳಲ್ಲಿ ಮರುಳುಗೊಳಿ ಸುವ ಶಾಲೆಗಳು, ತಮ್ಮ ಸಮುದಾಯದ ಬಡವರನ್ನು ಹುಡುಕಿ ತಮ್ಮ ಶಾಲೆಗಳಿಗೆ ಸೇರಿಸಿದ ಉದಾಹರಣೆ ತೀರಾ ಕಡಿಮೆ. ಅದೇನೇ ಇರಲಿ. ಇಂದು ಶಾಲೆಗಳು ಎಲ್ಲ ಧರ್ಮ, ಜಾತಿ, ವರ್ಗಗಳು ಒಟ್ಟಾಗಿ ಓದುವ, ಉಣ್ಣುವ, ಆಡುವ ತೋಟಗಳಾಗಬೇಕು. ಅದಕ್ಕಾಗಿ ಎಲ್ಲ ಧರ್ಮ, ಸಮುದಾಯದ ಶಾಲೆಗಳೂ ಪ್ರಯತ್ನಿಸಬೇಕು. ಮುಸ್ಲಿ ಮರು ಕಟ್ಟಿದ ಶಾಲೆಗಳು ಕೇವಲ ಮುಸ್ಲಿಮರಿಗೇ ಸೀಮಿ ತವಾಗಬೇಕಾಗಿಲ್ಲ. ಕ್ರಿಶ್ಚಿಯನ್ನರ ಶಾಲೆಗಳು ಕ್ರಿಶ್ಚಿಯನ್ನರಿಗಷ್ಟೇ ಸೀಮಿತವಾಗಬೇಕಾಗಿಲ್ಲ. ಹಾಗೆಯೇ ಬ್ರಾಹ್ಮ ಣರ ಶಾಲೆಗಳು ಬ್ರಾಹ್ಮಣರಿಗಷ್ಟೇ ಅಲ್ಲದೆ, ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೂ ಆದ್ಯತೆಯ ಅವಕಾಶವನ್ನು ನೀಡಬೇಕು. ಪಾಠವೆಂದರೆ ಕೇವಲ ಪುಸ್ತಕದ ಬದನೆಕಾಯಿ ಮಾತ್ರವಲ್ಲ. ಪಾಠವೆಂದರೆ ನಮ್ಮ ಸಮಾಜವನ್ನು, ನಮ್ಮ ನಡುವಿನ ಜನರನ್ನು ಅರ್ಥ ಮಾಡಿಕೊಳ್ಳು ವುದು. ಎಲ್ಲರ ಮನೆ ಭಾಷೆಗಳು ಅಲ್ಲಿ ಪರಸ್ಪರ ವಿನಿಮಯವಾಗಬೇಕು. ಧರ್ಮ, ಸಂಸ್ಕೃತಿಗಳು ಪರಸ್ಪರ ಪರಿಚಯವಾಗಬೇಕು. ಧಾರ್ಮಿಕ ಸಂಘಟನೆಗಳು ನಡೆಸುವ ಶಾಲೆಗಳೆಂದು, ಅವರವರ ಧರ್ಮಗಳ ವಿದ್ಯಾರ್ಥಿಗಳಿಗೆ ಮಾತ್ರವೆಂದು ಗೋಡೆ ಕಟ್ಟಿದರೆ, ಅದು ಶಾಲೆಯಾಗುವುದಿಲ್ಲ. ಅದು ದ್ವೀಪವಾಗುತ್ತದೆ. ಅದರಿಂದ ಹೊರ ಬಂದ ಮಕ್ಕಳೇ ಮುಂದೆ, ಸಮಾಜದಲ್ಲಿ ಅನ್ಯತೆಯನ್ನು ಮೈಗೂಡಿಸಿಕೊಂಡು ಬದುಕತೊಡಗುತ್ತಾರೆ. ಕೋಮುವಾದಿ ನಾಯಕರು ಇಂತಹ ಮಕ್ಕಳನ್ನು ಬಹಳ ಸುಲಭವಾಗಿ ತಮ್ಮ ಬಲೆಗೆ ಬೀಳಿಸುತ್ತಾರೆ. ಸಮಾಜ ಒಡೆಯುವುದಕ್ಕೆ ಇದು ಕಾರಣವಾಗುತ್ತದೆ.
ಇದು ಕ್ರಿಶ್ಚಿಯನ್ನರ ಶಾಲೆ, ಇದು ಮುಸ್ಲಿಮರ ಶಾಲೆ, ಇದು ಬ್ರಾಹ್ಮಣರ ಶಾಲೆ ಎಂಬ ಭೇದ ಅಳಿಯಬೇಕಾಗಿದೆ. ಬರೇ ಶಾಲೆ ಎನ್ನುವ ಶಬ್ದವಷ್ಟೇ ಉಳಿಯಬೇಕಾಗಿದೆ. ಅಂತಹ ಶಾಲೆಯಲ್ಲಿ ಕಲಿತ ಮಕ್ಕಳು ಮಾತ್ರ ಭವಿಷ್ಯದ ನಿಜವಾದ ಭರವಸೆಯಾಗುತ್ತಾರೆ. ಆದುದರಿಂದ ಅಂತಹ ಶಾಲೆಗಳು ಹೆಚ್ಚಲಿ. ಅಂತಹ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಲಿ ಎನ್ನುವುದು ಹಾರೈಕೆ

No comments:

Post a Comment