Sunday, March 10, 2013

ಬಿಜೆಪಿಯಿಂದ ಜನತೆಗೆ ಭ್ರಮನಿರಸನ : ಅಡ್ವಾಣಿ ವ್ಯಥೆ



ಹೊಸದಿಲ್ಲಿ,ಮಾ.9: ಬಿಜೆಪಿಯ ಬಗ್ಗೆ ಜನರಿಗೆ ‘ಒಂಥರಾ ಭ್ರಮನಿರಸನವಾಗಿದೆ’ ಎಂದು ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ  ಬೇಸರ ವ್ಯಕ್ತಪಡಿಸಿದ್ದಾರೆ. 2010ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹೊರಿಸಲಾದ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಉದ್ಭವಿಸಿದ ಬಿಕ್ಕಟ್ಟನ್ನು ನಿಭಾಯಿಸುವಲ್ಲೂ ಪಕ್ಷವು ಎಡವಿದೆಯೆಂದು ಹೇಳುವ ಮೂಲಕ ಅವರು ಆಗಿನ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.‘ದಿ ವೀಕ್’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅಡ್ವಾಣಿ, “ಕೇಂದ್ರದ ಪ್ರಸಕ್ತ ಆಡಳಿತಾರೂಢ ಪಕ್ಷದ ವಿರುದ್ಧ ಜನರ  ಅಸಮಾಧಾನ ನನ್ನ ಅರಿವಿಗೆ ಬಂದಿದೆ.
ಆದರೆ, ಇದೇ ವೇಳೆ ಅವರು ಬಿಜೆಪಿಯ ಬಗ್ಗೆಯೂ ಭ್ರಮನಿರಸನಗೊಂಡಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ” ಎಂದು ಹೇಳಿದ್ದಾರೆ. “ಭ್ರಷ್ಟಾಚಾರದ ಬಗ್ಗೆ ಬಿಜೆಪಿಯು ಶೂನ್ಯ ಸಹಿಷ್ಣುತೆಯನ್ನು ಪ್ರದರ್ಶಿಸುವುದೆಂಬ ನಿರೀಕ್ಷೆಯಿತ್ತು. ಆದರೆ ಕರ್ನಾಟಕದ ಬಿಕ್ಕಟ್ಟನ್ನು ನಾವು ನಿಭಾಯಿಸಿದ ರೀತಿ ನನಗೆ ತೀರಾ ಹತಾಶೆಯನ್ನುಂಟು ಮಾಡಿದೆ” ಎಂದವರು ತಿಳಿಸಿದ್ದಾರೆ.
ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಬಳಿಕ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವಲ್ಲಿ  ಬಿಜೆಪಿ ಹೈಕಮಾಂಡ್ ವಿಳಂಬ ನೀತಿ ಅನುಸರಿಸಿದ್ದುದನ್ನು ಅವರು ಪರೋಕ್ಷವಾಗಿ ಪ್ರಸ್ತಾಪಿಸಿ ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಬಗ್ಗೆ ಜನರು ಭ್ರಮನಿರಸನಗೊಂಡಿರುವುದರಿಂದ ತಾನು ತೀವ್ರ ಭಾವೋದ್ವಿಗ್ನಗೊಂಡಿದ್ದೇನೆ ಹಾಗೂ ದುಃಖಿತನಾಗಿದ್ದೇನೆಂದು ಅಡ್ವಾಣಿ  ಸಂದರ್ಶನದಲ್ಲಿ ನೋವು ತೋಡಿಕೊಂಡಿದ್ದಾರೆ. ಆದರೆ  ಪಕ್ಷಕ್ಕೆ ಉತ್ತಮ ಭವಿಷ್ಯವಿರುವ ಬಗ್ಗೆ ತಾನಿನ್ನೂ ಆಶಾವಾದಿಯಾಗಿದ್ದೇನೆಂದು ಅವರು ತಿಳಿಸಿದ್ದಾರೆ.

No comments:

Post a Comment