Tuesday, March 26, 2013

ದಿಲ್ಲಿ ಗ್ಯಾಂಗ್‌ರೇಪ್ ಪ್ರಕರಣ: ಆರೋಪಿ ಮುಖೇಶ್‌ಗೆ ಎದೆನೋವು; ಆಸ್ಪತ್ರೆಗೆ ದಾಖಲು; ವಿಚಾರಣೆಗೆ ಗೈರು


 ಮಾರ್ಚ್ -26-2013

 ಹೊಸದಿಲ್ಲಿ: ದಿಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮುಖೇಶ್‌ಗೆ ಸೋಮವಾರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ನಗರದ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖೇಶ್ ಅಸ್ವಸ್ಥಗೊಂಡಿದ್ದರಿಂದ ದಿಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ತ್ವರಿತ ನ್ಯಾಯಾಲಯಕ್ಕೆ ಆತನನ್ನು ಇಂದು ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇಂದು ನ್ಯಾಯಾಲಯದ ಕಲಾಪವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ಮುಖೇಶ್‌ನನ್ನು ಇಂದು ತಿಹಾರ್ ಜೈಲಿನಿಂದ ಸಾಕೇತ್ ತ್ವರಿತ ನ್ಯಾಯಾಲಯಕ್ಕೆ ಹಾಜರುಪಡಿಸಲು ಕೊಂಡೊಯ್ಯುತ್ತಿದ್ದಾಗ ಆತನಿಗೆ ಹೃದಯದಲ್ಲಿ ನೋವು ಕಾಣಿಸಿಕೊಂಡಿದ್ದು, ಆತನನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ದಯನ್ ಕೃಷ್ಣನ್, ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಯೋಗೇಶ್ ಖನ್ನಾಗೆ ತಿಳಿಸಿದರು.
ಮುಖೇಶ್ ತಿಹಾರ್ ಜೈಲಿನಲ್ಲಿ ಎರಡು ವಾರಗಳ ಹಿಂದೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ದಿಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ಇನ್ನೋರ್ವ ಆರೋಪಿ ರಾಮ್‌ಸಿಂಗ್‌ನ ಸೋದರನಾಗಿದ್ದಾನೆ.
ಮಧ್ಯಾಹ್ನ 2:00 ಗಂಟೆಯ ವೇಳೆಗೆ ನ್ಯಾಯಾಲಯವು ಕಲಾಪವನ್ನು ಆರಂಭಿಸಿತ್ತು. ಆದರೆ ಮುಖೇಶ್‌ನ ಆರೋಗ್ಯಕ್ಕೆ ಸಂಬಂಧಿಸಿ ಆಸ್ಪತ್ರೆಯ ವರದಿಗಾಗಿ ಅದು 3:00 ಗಂಟೆಯ ವೇಳೆಗೆ ಕಲಾಪವನ್ನು ಮುಂದೂಡಿತು.
ಎದೆನೋವಿನ ಕಾರಣದಿದಾಗಿ ಮುಖೇಶ್ ಆಸ್ಪತ್ರೆಗೆ ದಾಖಲಾಗಿ ರುವ ಬಗ್ಗೆ ಆತನ ಪರವಾಗಿ ವಾದಿಸುತ್ತಿರುವ ನ್ಯಾಯವಾದಿ ಎಂ.ಎಲ್.ಶರ್ಮಾ ಆತಂಕ ವ್ಯಕ್ತಪಡಿಸಿದರಲ್ಲದೆ, ಈ ಘಟನೆಯು ಕೆಲವೊಂದು ಸಂದೇಹಗಳಿಗೆ ಎಡೆಮಾಡಿಕೊಡುತ್ತಿದೆಯೆಂದು ಅವರು ಹೇಳಿದರು.
ತನ್ನ ಕಕ್ಷಿದಾರರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಅನುಮತಿ ನೀಡುವಂತೆಯೂ ಅವರು ನ್ಯಾಯಾಲಯವನ್ನು ಕೋರಿದರು.
ಸದ್ಯದ ಪರಿಸ್ಥಿತಿಯಲ್ಲಿ ತನಗೆ ಪೊಲೀಸರಲ್ಲಾಗಲಿ ಅಥವಾ ವೈದ್ಯರಲ್ಲಾಗಲಿ ನಂಬಿಕೆಯಿಲ್ಲವೆಂದು ಶರ್ಮಾ ಹೇಳಿದರು.
ಮುಕೇಶ್‌ನ ಸೋದರ ರಾಮ್‌ಸಿಂಗ್ ಜೈಲಿನಲ್ಲಿಯೇ ಸಾವನ್ನಪ್ಪಿದ್ದು, ಮುಖೇಶ್‌ಗೆ ಉತ್ತಮ ವೈದ್ಯಕೀಯ ಸೌಕರ್ಯಗಳು ದೊರೆಯುವುದೆಂಬುದನ್ನು ತಾನು ನಂಬಲಾರೆನೆಂದು ಅವರು ಹೇಳಿದರು.
ಮುಖೇಶ್‌ನ ಆರೋಗ್ಯದ ತಪಾಸಣೆಗಾಗಿ ವೈದ್ಯರೊಬ್ಬರನ್ನು ನೇಮಿಸುವಂತೆ ನ್ಯಾಯಾಲಯವು ಆದೇಶ ನೀಡಬೇಕೆಂದು ಶರ್ಮಾ ಮನವಿ ಮಾಡಿದರು.
 ಮುಖೇಶ್ ದೈಹಿಕವಾಗಿ ಶಕ್ತನಾಗಿದ್ದಲ್ಲಿ ಮಾತ್ರ ಆತನನ್ನು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಕಲಾಪಗಳಿಗೆ ಹಾಜರುಪಡಿಸಬೇಕೆಂದು ನ್ಯಾಯಾಧೀಶರು ತಿಳಿಸಿದರು.
 ಪ್ರಕರಣದ ಇತರ ಆರೋಪಿಗಳಾದ ಅಕ್ಷಯ್‌ಸಿಂಗ್ ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾರನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
2012ರ ಡಿಸೆಂಬರ್ 16ರಂದು ದಿಲ್ಲಿಯಲ್ಲಿ ಚಲಿಸುತ್ತಿರುವ ಬಸ್ಸೊಂದರಲ್ಲಿ 23 ವರ್ಷ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಗಂಭೀರವಾಗಿ ಗಾಯಗೊಳಿಸಿದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ. ಸುಮಾರು 13 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿದ ಈ ಯುವತಿಯು ಡಿಸೆಂಬರ್ 29ರಂದು ದಿಲ್ಲಿಯ ಆಸ್ಪತ್ರೆಯಲ್ಲಿ ಅಸುನೀಗಿದ್ದಳು.
ಪ್ರಕರಣದ ಇನ್ನೋರ್ವ ಆರೋಪಿ, ಅಪ್ರಾಪ್ತ ವಯಸ್ಕನಾಗಿದ್ದು, ಆತನ ವಿಚಾರಣೆಯು ಬಾಲಾಪರಾಧ ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ನಡೆಯುತ್ತಿದೆ.
ಕೃಪೆ:ವಾ.ಭಾರತಿ 

No comments:

Post a Comment